ದ್ವಿತೀಯ ಪಿಯುಸಿ ಪರೀಕ್ಷೆ 3ರ ವೇಳಾಪಟ್ಟಿ ಪ್ರಕಟ; ನೋಂದಣಿ ದಿನಾಂಕ, ಶುಲ್ಕ ವಿನಾಯಿತಿ, ಶುಲ್ಕ ವಿವರ
ದ್ವಿತೀಯ ಪಿಯುಸಿ ಪರೀಕ್ಷೆ 3ರ ವೇಳಾಪಟ್ಟಿ: ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ ಪ್ರಕಟಿಸುವುದರ ಜತೆಗೆ ದ್ವಿತೀಯ ಪಿಯುಸಿ ಪರೀಕ್ಷೆ 3ರ ವೇಳಾಪಟ್ಟಿಯನ್ನೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಿಸಿದೆ. ಅದರ ವಿವರ ಇಲ್ಲಿದೆ

ದ್ವಿತೀಯ ಪಿಯುಸಿ ಪರೀಕ್ಷೆ 3ರ ವೇಳಾಪಟ್ಟಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ ಪ್ರಕಟಿಸುವುದರ ಜತೆಗೆ ದ್ವಿತೀಯ ಪಿಯುಸಿ ಪರೀಕ್ಷೆ 3ರ ವೇಳಾಪಟ್ಟಿಯನ್ನೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಇಂದು (ಮೇ 16) ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ ಸುಧಾರಣೆ ಬಯಸುವವರು ಮತ್ತು ಹೊಸದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವರು ದ್ವಿತೀಯ ಪಿಯುಸಿ ಪರೀಕ್ಷೆ 3ಕ್ಕೆ ನೋಂದಾಯಿಸಬಹುದು ಎಂದು ಮಂಡಲಿ ಹೇಳಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 3; ಯಾರು ಬರೆಯಬಹುದು, ಶುಲ್ಕ ಯಾರಿಗಿದೆ, ಯಾರಿಗಿಲ್ಲ
ಕರ್ನಾಟಕದಲ್ಲಿ 2025ರ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಫಲಿತಾಂಶ ಸುಧಾರಣೆ ಬಯಸಿದ ವಿದ್ಯಾರ್ಥಿಗಳನ್ನು ಮತ್ತು ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸ್ಪಷ್ಟಪಡಿಸಿದೆ.
ಪರೀಕ್ಷೆ-3ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಪುನರಾವರ್ತಿತ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಪರೀಕ್ಷಾ ತಂತ್ರಾಂಶದಲ್ಲಿ ಸೇರಿಸಲು ದಂಡ ರಹಿತವಾಗಿ ಮೇ 16 ರಿಂದ 23ರ ತನಕ ಅವಕಾಶ ನೀಡಲಾಗಿದೆ. ದಂಡ ಸಹಿತವಾಗಿ ಮೇ 24 ರಿಂದ ಮೇ 26ರ ತನಕ ಅವಕಾಶ ಇದೆ.
ಇದೇ ರೀತಿ, ಪ್ರಾಂಶುಪಾಲರು ದಂಡ ರಹಿತ ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಸಂದಾಯ ಮಾಡಬೇಕಾದ ದಿನಾಂಕ ಮೇ 26 ಮತ್ತು ದಂಡ ಸಹಿತ ಪರೀಕ್ಷಾ ಶುಲ್ಕವನ್ನು ಮೇ 27 ಸಂದಾಯ ಮಾಡಬೇಕು. ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಮೇ 28ಕ್ಕೆ ಸಲ್ಲಿಸಬೇಕು.
2025 ರ ಪರೀಕ್ಷೆ - 3ಕ್ಕೆ ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ನಿಗದಿಪಡಿಸಲಾದ ಶುಲ್ಕದ ವಿವರ ಹೀಗಿದೆ- ಒಂದು ವಿಷಯಕ್ಕೆ (ಪ್ರಥಮ ಬಾರಿಗೆ) 175 ರೂಪಾಯಿ ಮತ್ತು ಒಂದು ವಿಷಯಕ್ಕೆ (ಎರಡನೇ ಬಾರಿಗೆ) 350 ರೂಪಾಯಿ ಪಾವತಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಮೇ 16 ರಿಂದ ಮೇ 26ರ ಒಳಗೆ ತಮ್ಮ ಕಾಲೇಜಿನಲ್ಲೇ ನೊಂದಾಯಿಸಿಕೊಳ್ಳಬಹುದು.
ದ್ವಿತೀಯ ಪಿಯುಸಿ ಪರೀಕ್ಷೆ 3ರ ವೇಳಾಪಟ್ಟಿ ಹೀಗಿದೆ
ಜೂನ್ 9: ಕನ್ನಡ / ಅರೇಬಿಕ್
ಜೂನ್ 10: ಇತಿಹಾಸ / ಭೌತಶಾಸ್ತ್ರ
ಜೂನ್ 11: ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ / ಜೀವಶಾಸ್ತ್ರ
ಜೂನ್ 12: ರಸಾಯನಶಾಸ್ತ್ರ/ ಅರ್ಥಶಾಸ್ತ್ರ
ಜೂನ್ 13: ಇಂಗ್ಲಿಷ್
ಜೂನ್ 14: ತರ್ಕಶಾಸ್ತ್ರ / ವ್ಯವಹಾರ ಅಧ್ಯಯನ / ಗಣಿತ / ಶಿಕ್ಷಣ ಶಾಸ್ತ್ರ / ಗೃಹವಿಜ್ಞಾನ
ಜೂನ್ 15/ ಭಾನುವಾರ ರಜೆ
ಜೂನ್ 16: ಸಮಾಜಶಾಸ್ತ್ರ / ಭೂಗರ್ಭಶಾಸ್ತ್ರ / ವಿದ್ಯುನ್ಮಾನ ಶಾಸ್ತ್ರ /ಗಣಕ ವಿಜ್ಞಾನ
ಜೂನ್ 17: ಐಚ್ಛಿಕ ಕನ್ನಡ /ಲೆಕ್ಕಶಾಸ್ತ್ರ
ಜೂನ್ 18: ಹಿಂದಿ
ಜೂನ್ 19: ಮನಃಶಾಸ್ತ್ರ / ಮೂಲ ಗಣಿತ/ ಭೂಗೋಳಶಾಸ್ತ್ರ
ಜೂನ್ 20: ತಮಿಳು/ ತೆಲುಗು/ಮಲಯಾಳಂ/ ಮರಾಠಿ/ ಉರ್ದು/ಸಂಸ್ಕೃತ/ ಫ್ರೆಂಚ್
ಜೂನ್ 9 ರಿಂದ 20ರ ತನಕದ ಇವಿಷ್ಟೂ ಪರೀಕ್ಷೆಗಳು ನಿತ್ಯ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 01:00 (3-00 ಗಂಟೆಗಳು) ನಡೆಯಲಿವೆ.
ಜೂನ್ 20: ಅಪರಾಹ್ನ 02:15 ರಿಂದ ಸಂಜೆ 04:30(2 ಗಂಟೆ 15 ನಿಮಿಷಗಳು)
ಹಿಂದೂಸ್ತಾನಿ ಸಂಗೀತ/ ಮಾಹಿತಿ ತಂತ್ರಜ್ಞಾನ/ ರಿಟೇಲ್/ ಆಟೋಮೊಬೈಲ್/ ಹೆಲ್ತ್ ಕೇರ್/ ಬ್ಯೂಟಿ ಆಂಡ್ ವೆಲ್‌ನೆಸ್
2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, 2025 ರ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಮಂಡಲಿಯು ಒದಗಿಸಿದ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ನೋಂದಾಯಿಸಿಕೊಳ್ಳಬಹುದು. 2022ನೇ ಸಾಲಿನ ಅಥವಾ ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-3ಕ್ಕೆ 'MCA' ಆಧಾರದ ಮೇಲೆ ಮಾತ್ರ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಮತ್ತು ಸಂದೇಹ ನಿವಾರಣೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಸಹಾಯವಾಣಿ ಸಂಖ್ಯೆಗಳು 23310075 ಮತ್ತು 080-23310076 ಗೆ ಸಂಪರ್ಕಿಸಬಹುದು.