ನಿಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿಲ್ಲವೇ, ಇಂದಿನಿಂದ ಕರ್ನಾಟಕದಲ್ಲಿ ಅಭಿಯಾನ ಶುರು, ನೀವೇನು ಮಾಡಬೇಕು
ರಾಸುಗಳಿಗೆ ಸಾಂಕ್ರಾಮಿಕ ಜಗುಲಿ ಜೀವ ಹಾನಿಯಾಗುವುದನ್ನು ತಪ್ಪಿಸಲು ಕರ್ನಾಟಕದಲ್ಲಿ ಇಂದಿನಿಂದಲೇ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಒಂದು ತಿಂಗಳ ಕಾಲ ಉಚಿತವಾಗಿಯೇ ರಾಸುಗಳಿಗೆ ಲಸಿಕೆಯನ್ನು ಪಶುಪಾಲನಾ ಇಲಾಖೆ ನೀಡಲಿದೆ.
ಬೆಂಗಳೂರು: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ಇದೇ ಅಕ್ಟೋಬರ್, 21 ರಿಂದ ನವೆಂಬರ್, 20 ರವರೆಗೆ ಕರ್ನಾಟಕ ರಾಜ್ಯಾದ್ಯಂತ ನಡೆಯಲಿದ್ದು, ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಪಶುಪಾಲನಾ ಸೇವೆಗಳ ಇಲಾಖೆ ಸೂಚಿಸಿದೆ.ಕರ್ನಾಟಕದ ಎಲ್ಲಾ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯಲಿದ್ದು. ಕಡ್ಡಾಯವಾಗಿ ಎಲ್ಲಾ ಮಾಲೀಕರು ತಮ್ಮ ಹಸುಗಳು, ಎಮ್ಮೆಗಳಿಎ ಲಸಿಕೆಯನ್ನು ಹಾಕಿಸಬೇಕು. ಮುಂದೆ ಕಾಲು ಬಾರಿ ರೋಗಕ್ಕೆ ಸಿಲುಕಿ ಆಗುವ ಅನಾಹುತವನ್ನು ತಪ್ಪಿಸಲು ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ. ಬೆಂಗಳೂರು, ಕೊಡಗು, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಸಹಿತ ಬಹುತೇಕ ಜಿಲ್ಲೆಗಳಲ್ಲಿ ಅಭಿಯಾನ ಶುರುವಾಗಿದೆ. ಒಂದು ತಿಂಗಳ ಕಾಲ ಇದು ಇರಲಿದೆ.
ಕಾಲುಬಾಯಿ ರೋಗಒಂದು ಸಾಂಕ್ರಾಮಿಕ ಮತ್ತು ಕೆಲವೊಮ್ಮೆ ಮಾರಣಾಂತಿಕ ವೈರಲ್ ಕಾಯಿಲೆಯಾಗಿದ್ದು , ಇದು ದೇಶೀಯ ಹಸುಗಳು ಒಳಗೊಂಡಂತೆ ಸೀಳು-ಗೊರಸುಳ್ಳ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ . ವೈರಸ್ ಎರಡರಿಂದ ಆರು ದಿನಗಳ ಕಾಲ ತೀವ್ರವಾದ ಜ್ವರವನ್ನು ಉಂಟುಮಾಡುತ್ತದೆ. ನಂತರ ಬಾಯಿಯೊಳಗೆ ಮತ್ತು ಗೊರಸಿನ ಬಳಿ ಗುಳ್ಳೆಗಳು ಛಿದ್ರವಾಗಬಹುದು ಮತ್ತು ಕುಂಟತನವನ್ನು ಉಂಟುಮಾಡಬಹುದು. ಕೊನೆಗೆ ಜೀವವನ್ನೂ ಕಳೆಯಬಹುದು.
ಕೆಲ ವರ್ಷದ ಹಿಂದೆ ಕಾಲು ಬಾಯಿ ರೋಗಕ್ಕೆ ಸಹಸ್ರಾರು ಹಸುಗಳು ಕರ್ನಾಟಕದಲ್ಲಿ ಮೃತಪಟ್ಟಿದ್ದವು. ಭಾರತದ ಹಲವು ರಾಜ್ಯಗಳಲ್ಲೂ ಈ ಸಮಸ್ಯೆಯಿದೆ. ಈ ಕಾರಣದಿಂದ ಭಾರತ ಸರ್ಕಾರವು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ ನೀಡುತ್ತಿದೆ. ಆರು ತಿಂಗಳ ಹಿಂದೆ ಐದನೇ ಸುತ್ತಿನ ಲಸಿಕಾ ಕಾರ್ಯಕ್ರಮ ಆಗಿತ್ತು. ಈಗ ಆರನೇ ಹಂತದ ಚಟುವಟಿಕೆ ಸೋಮವಾರದಿಂದಲೇ ಶುರುವಾಗಿದೆ.
ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗೆ ಬಂದಾಗ ಸಹಕಾರ ನೀಡಿ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸಬೇಕು.ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದೆ. ಈ ರೋಗದ ವಿರುದ್ಧ ಪ್ರತೀ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬರದಂತೆ ತಡೆಯಬೇಕಿದೆ ಎನ್ನುವುದು ಅಧಿಕಾರಿಗಳ ಮನವಿ.
ಜಾನುವಾರುಗಳಿಗೆ ಲಸಿಕೆ ಹಾಕಲು ಒಂದು ಬ್ಲಾಕ್‍ಗೆ 100-120 ಜಾನುವಾರುಗಳಂತೆ 2800 ಬ್ಲಾಕ್ ಗಳನ್ನು ರಚಿಸಿದ್ದು 321 ಲಸಿಕಾದಾರರಿಗೆ ಬ್ಲಾಕ್‍ವಾರು ಲಸಿಕಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಹಾಗೂ ಲಸಿಕಾ ಸಂದರ್ಭದಲ್ಲಿ ಆಕಸ್ಮಿಕ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಅವಶ್ಯಕ ಔಷಧಿಗಳನ್ನು ಕೂಡಾ ಸಂಗ್ರಹಿಸಿಡಲಾಗಿದೆ. 4 ತಿಂಗಳ ಮೇಲಿನ ಎಲ್ಲಾ ಜಾನುವಾರುಗಳಿಗೆ ಮನೆಬಾಗಿಲಲ್ಲೆ ಲಸಿಕೆ ಹಾಕಲಾಗುತ್ತದೆ. ಮತ್ತು ಕರುಗಳಿಗೆ 28 ದಿನಗಳ ನಂತರ ಬೂಸ್ಟರ್ ಲಸಿಕೆ ಹಾಕಲಾಗುತ್ತದೆ. ಗರ್ಭ ಇರುವ, ರೋಗಗ್ರಸ್ತ ಮತ್ತು ಮಾಲೀಕರು ನಿರಾಕರಿಸಿದ ಜಾನುವಾರುಗಳಿಗೆ ಕೂಂಬಿಂಗ್ ಕಾರ್ಯಕ್ರಮದಲ್ಲಿ ಲಸಿಕೆ ಹಾಕಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ಕೊಡಗು ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದ ಅಭಿಯಾನದಲ್ಲಿ 6ನೇ ಸುತ್ತಿನಲ್ಲಿ ಲಸಿಕೆ ವಿತರಣೆಗಾಗಿ 57 ಸಾವಿರ ಲಸಿಕೆ ಪೂರೈಕೆಯಾಗಿದೆ. ಈಗಾಗಲೇ 5ನೇ ಸುತ್ತಿನಲ್ಲಿ 2,450 ಲಸಿಕೆ ಉಳಿದಿದ್ದು, ಒಟ್ಟು 59,450 ಲಸಿಕೆ ದಾಸ್ತಾನು ಇದೆ ಎನ್ನುವುದು ಕೊಡಗು ಜಿಲ್ಲೆಯ ಪಶುಪಾಲನಾ ಇಲಾಖೆ ಉಪ ನಿರ್ದೇಶಕರ ಡಾ.ಲಿಂಗರಾಜು ದೊಡ್ಡಮನಿ ನೀಡುವ ವಿವರಣೆ.