Coalition Government: ಕರ್ನಾಟಕದಲ್ಲಿ ಇದುವರೆಗೂ ಎಷ್ಟು ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ, ಪತನಕ್ಕೆ ಕಾರಣಗಳೇನು; ಇಲ್ಲಿದೆ ಮಾಹಿತಿ
ಮುಂಗಾರು ಅಧಿವೇಶನದಲ್ಲಿ ಹೆಚ್‌ಡಿಕೆ ವಿಶ್ವಾಸಮತ ಸಾಬೀತುಪಡಿಸದ ಕಾರಣ ಈ ಮೈತ್ರಿ ಸರ್ಕಾರ ಕೂಡಾ ಪತನವಾಯ್ತು. ನಂತರ ಯಡಿಯೂರಪ್ಪ ಅವರೇ ಮತ್ತೆ ಸಿಎಂ ಕುರ್ಚಿ ಏರಿದರು. ಆದರೆ 2 ವರ್ಷಗಳ ನಂತರ ಹೈಕಮಾಂಡ್ ಸೂಚನೆ ಮೇರೆಗೆ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಚುನಾವಣೆ ಮುಗಿದಿದೆ, ಎಲ್ಲರ ಚಿತ್ತ ಶನಿವಾರದತ್ತ ನೆಟ್ಟಿದೆ. ಮೇ 13 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿ ಯಾವ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಈ ನಡುವೆ ರಾಜ್ಯದಲ್ಲಿ ಬಾರಿ ಮತ್ತೆ ಸಮ್ಮಿಶ್ರ ಸರ್ಕಾರ ಬರಲಿದ್ಯಾ ಎಂಬ ಅನುಮಾನ ಕೂಡಾ ಕಾಡುತ್ತಿದೆ.
ಎಕ್ಸಿಟ್ ಪೋಲ್ ಹೇಳುವಂತೆ ಈ ಬಾರಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಸ್ವೀಕರಿಸಲಿದೆ. ಆದರೆ ಎಕ್ಸಿಟ್ ಪೋಲ್, ಫೈನಲ್ ಅಲ್ಲ , ಕಳೆದ ಬಾರಿಯಂತೆ ಈ ಬಾರಿ ಕೂಡಾ ಎಕ್ಸಿಟ್ ಪೋಲ್ ಉಲ್ಟಾ ಆಗಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಜಿ ಸಿಎಂ ಯಡಿಯೂಪ್ಪ ಕೂಡಾ ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಇದುವರೆಗೂ ಯಾವುದೇ ಸಮ್ಮಿಶ್ರ ಸರ್ಕಾರ ಸಂಪೂರ್ಣ 5 ವರ್ಷಗಳ ಆಡಳಿತಾವಧಿ ಪೂರ್ಣಗೊಳಿಸಿಲ್ಲ. ಇದುವರೆಗೂ ರಾಜ್ಯದಲ್ಲಿ ಎಷ್ಟು ಬಾರಿ ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣಗಳೇನು ಎನ್ನುವುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
1983 ರಲ್ಲಿ ಮೊದಲ ಸಮ್ಮಿಶ್ರ ಸರ್ಕಾರ
ರಾಜ್ಯದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚನೆ ಆಗಿದ್ದು 1983ರಲ್ಲಿ. ಈ ಚುನಾವಣೆಯಲ್ಲಿ ಜನತಾ ಪಕ್ಷವು 95 ಸ್ಥಾನಗಳನ್ನು ಗಳಿಸಿತ್ತು. 18 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ಜನತಾ ಪಕ್ಷಕ್ಕೆ ಬಾಹ್ಯ ಬೆಂಬಲ ಸೂಚಿಸಿತ್ತು. ಎಡಪಕ್ಷಗಳು ಹಾಗೂ 16 ಮಂದಿ ಪಕ್ಷೇತರರು ಬೆಂಬಲ ಸೂಚಿಸಿದ್ದರಿಂದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು.
- ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣ
1984ರ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಹೀನಾಯ ಸೋಲು ಅನುಭವಿಸಿದ್ದರಿಂದ ರಾಮಕೃಷ್ಣ ಹೆಗಡೆ ವಿಧಾನಸಭೆ ವಿಸರ್ಜಿಸಿದರು. ಇದರಿಂದ ಸಮ್ಮಿಶ್ರ ಸರ್ಕಾರ ಪತನವಾಯ್ತು.
2004ರಲ್ಲಿ ಎರಡನೇ ಸಮ್ಮಿಶ್ರ ಸರ್ಕಾರ
2004ರ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನ, ಕಾಂಗ್ರೆಸ್ 65 ಹಾಗೂ ಜೆಡಿಎಸ್ 58 ಸ್ಥಾನಗಳನ್ನು ಪಡೆಯಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಆಯ್ತು. ಧರ್ಮಸಿಂಗ್ ಮುಖ್ಯಮಂತ್ರಿ ಆದರು.
- ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣ
ಬಿಜೆಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ 2 ವರ್ಷಗಳನ್ನು ಪೂರೈಸುವ ಮುನ್ನವೇ ಜೆಡಿಎಸ್ ಶಾಸಕರು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಂಡಾಯವೆದ್ದಿದ್ದರಿಂದ ಸಮ್ಮಿಶ್ರ ಸರ್ಕಾರ ಅಂತ್ಯವಾಯ್ತು.
2006 ರಲ್ಲಿ ಮೂರನೇ ಸಮ್ಮಿಶ್ರ ಸರ್ಕಾರ (20-20 ಸರ್ಕಾರ)
ಧರ್ಮಸಿಂಗ್ ಸರ್ಕಾರ ಕೊನೆಯಾಗುತ್ತಿದ್ದಂತೆ ಬಿಜೆಪಿಯು ಜೆಡಿಎಸ್ ಜೊತೆಗೂಡಿ 20-20 ಸರ್ಕಾರ ರಚನೆ ಮಾಡಿತು. ಈ ಒಪ್ಪಂದದ ಪ್ರಕಾರ ಮೊದಲ 20 ತಿಂಗಳ ಅವಧಿಗೆ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ, ನಂತರ 20 ತಿಂಗಳ ಅವಧಿಗೆ ಬಿಜೆಪಿ ಪಕ್ಷದವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ನಿರ್ಧಾರ ಆಯ್ತು.
- 20-20 ಸರ್ಕಾರ ಪತನ
20 ತಿಂಗಳು ಮುಖ್ಯಮಂತ್ರಿ ಆಗಿ ಆಧಿಕಾರ ನಡೆಸಿದ ಹೆಚ್‌ಡಿ ಕುಮಾರಸ್ವಾಮಿ ಮುಂದಿನ 20 ತಿಂಗಳ ಅವಧಿಗೆ ಬಿಜೆಪಿಗೆ ಅಧಿಕಾರ ನೀಡದೆ ತಾವು ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರಿಂದ 20-20 ಸಮ್ಮಿಶ್ರ ಸರ್ಕಾರ ಕೊನೆಗೊಂಡಿತು.
2018ರಲ್ಲಿ ನಾಲ್ಕನೇ ಸಮ್ಮಿಶ್ರ ಸರ್ಕಾರ
2018 ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಯ್ತು. 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಅಧಿಕಾರ ಪಡೆದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆದರೆ ವಿಶ್ವಾಸ ಮತ ಯಾಚನೆ ಮಾಡದೆ 3 ದಿನಗಳ ಮುಖ್ಯಮತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ 78 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಹಾಗೂ 38 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಮೈತ್ರಿಯಲ್ಲಿ ಹೆಚ್‌ಡಿಕೆ ಮುಖ್ಯಮಂತ್ರಿ , ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿ ಆದರು.
- ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣ
ಮೈತ್ರಿ ಪಕ್ಷದಲ್ಲಿ ಭಿನ್ನಮತ ಸ್ಫೋಟಿಸಿದ ಪರಿಣಾಮ 16 ಅತೃಪ್ತ ಶಾಸಕರ ಗುಂಪು ಮುಂಬೈಗೆ ಹಾರಿದರು. ಇದರ ಲಾಭ ಪಡೆಯಲು ಬಿಜೆಪಿ ಆಪರೇಷನ್ ಕಮಲ ಆರಂಭಿಸಿತು. ಇದರ ಪರಿಣಾಮ ಬಹಳಷ್ಟು ಶಾಸಕರು ರಾಜೀನಾಮೆ ಸಲ್ಲಿಸಿದರು. ಮುಂಗಾರು ಅಧಿವೇಶನದಲ್ಲಿ ಹೆಚ್‌ಡಿಕೆ ವಿಶ್ವಾಸಮತ ಸಾಬೀತುಪಡಿಸದ ಕಾರಣ ಈ ಮೈತ್ರಿ ಸರ್ಕಾರ ಕೂಡಾ ಪತನವಾಯ್ತು. ನಂತರ ಯಡಿಯೂರಪ್ಪ ಅವರೇ ಮತ್ತೆ ಸಿಎಂ ಕುರ್ಚಿ ಏರಿದರು. ಆದರೆ 2 ವರ್ಷಗಳ ನಂತರ ಹೈಕಮಾಂಡ್ ಸೂಚನೆ ಮೇರೆಗೆ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಇದೀಗ ಎಕ್ಸಿಟ್ ಪೋಲ್ ಆಧಾರದ ಮೇರೆಗೆ ಫಲಿತಾಂಶದಲ್ಲಿ ಮತ್ತೆ ಅಂತಂತ್ರ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ. ಮೇ 13 ರಂದು ಎಲ್ಲಾ ಅನುಮಾನಗಳಿಗೂ ಉತ್ತರ ದೊರೆಯಲಿದೆ.