ಕನ್ನಡ ಸುದ್ದಿ  /  Karnataka  /  Karnataka Assembly Election Will Be Key For Congress Revival Ahead Of 2024 General Elections

Explainer: ಕಾಂಗ್ರೆಸ್‌ಗೆ ಪುನಶ್ಚೇತನದ ಹಾದಿ ತೋರಲಿದೆ ಕರ್ನಾಟಕ: ಸವಾಲುಗಳ ನಡುವೆ ಕೈ ಪಾಳೆಯಕ್ಕೆ ಮುಖ್ಯವಾದ ವಿಧಾನಸಭೆ ಚುನಾವಣೆ

ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಕಾಂಗ್ರೆಸ್‌ ಪುನಶ್ಚೇತನದ ಚರ್ಚೆಗಳು ಮುನ್ನೆಲೆಗೆ ಬಂದಿವೆ. 2024ರ ಲೋಕಸಭೆ ಚುನಾವಣೆಗೆ ಮೈಕೊಡವಿ ಏಳಲು, ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಅವಕಾಶ ಒದಗಿಸಿದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಈ ಕುರಿತ ವಿಶ್ಲೇಷಣಾ ವರದಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ANI)

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಸ್ವಯಂ ಮೌಲ್ಯಮಾಪನಕ್ಕೆ ಗುರಿಯಾಗಿರುವ ಯಾವುದಾದರೂ ರಾಜಕೀಯ ಪಕ್ಷವಿದ್ದರೆ ಅದು ಕಾಂಗ್ರೆಸ್‌ ಮಾತ್ರ. ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ತರವಾದ ಪಾತ್ರವಹಿಸಿದ ರಾಜಕೀಯ ಸಂಘಟನೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ ಪಕ್ಷ, ಈಗ ಕೇವಲ ಅಧಿಕಾರದಿಂದ ಮಾತ್ರ ದೂರವಿಲ್ಲ ಬದಲಿಗೆ ಜನರಿಂದಲೂ ಕ್ರಮೇಣ ದೂರವಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿದ್ದು, ಬಹುಮುಖ್ಯವಾಗಿ ನಾಯಕತ್ವದ ಕಾರ್ಯವೈಖರಿ ಪಕ್ಷ ಮತ್ತು ಜನರ ನಡುವಿನ ಸಂಬಂಧ ದೂರವಾಗುವಂತೆ ಮಾಡಿದೆ.

ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್‌ ಪಕ್ಷದ ಪುನಶ್ಚೇತನದ ಮಾತುಗಳು ಕೇಳಿಬರುತ್ತವೆ. ಕಳೆದ ಎರಡು ಅವಧಿಯ ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಪ್ರದರ್ಶನ ಆ ಪಕ್ಷದ ಬೆಂಬಲಿಗರನ್ನಷ್ಟೇ ಅಲ್ಲ, ಜಾತ್ಯಾತೀತ ನಿಲುವಿನ ಮತ್ತು ನೆಹರೂ ಪರಂಪರೆಯ ರಾಜಕೀಯ ವಿಶ್ಲೇಷಕರನ್ನೂ ನಿರಾಸೆಗೊಳಿಸಿದೆ.

ಆದರೆ ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಕಾಂಗ್ರೆಸ್‌ ಪುನಶ್ಚೇತನದ ಚರ್ಚೆಗಳು ಮುನ್ನೆಲೆಗೆ ಬಂದಿವೆ. 2024ರ ಲೋಕಸಭೆ ಚುನಾವಣೆಗೆ ಮೈಕೊಡವಿ ಏಳಲು, ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಅವಕಾಶ ಒದಗಿಸಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಹೀಗಾಗಿ 2024ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಟ್ಟಿಹಾಕಲು, ಕರ್ನಾಟಕವನ್ನು ಜಯಿಸುವುದು ಕಾಂಗ್ರೆಸ್‌ಗೆ ಅನಿವಾರ್ಯ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಕಾಂಗ್ರೆಸ್‌ ಪ್ರಬಲವಾಗಿರುವ ರಾಜ್ಯಗಳ ಪೈಕಿ ಕರ್ನಾಟಕ ಅತ್ಯಂತ ಮಹತ್ವದ್ದು. ದಕ್ಷಿಣದ ರಾಜ್ಯಗಳ ಪೈಕಿ ಕಾಂಗ್ರೆಸ್‌ ಗಟ್ಟಿಯಾಗಿ ಉಸಿರಾಡುತ್ತಿರುವ ರಾಜ್ಯವೆಂದರೆ ಅದು ಕರ್ನಾಟಕ ಮಾತ್ರ. ಹೀಗಾಗಿ ಕರ್ನಾಟಕವನ್ನು ಜಯಿಸುವ ಮೂಲಕ, 2024ರ ಲೋಕಸಭೆ ಚುನಾವಣೆಗೆ ಶಕ್ತಿಯನ್ನು ಒಟ್ಟುಗೂಡಿಸುವ ಇರಾದೆಯನ್ನು ಕಾಂಗ್ರೆಸ್‌ ಹೊಂದಿದೆ.

ಕರ್ನಾಟಕವನ್ನು ಜಯಿಸುವ ಮೂಲಕ ಇತ್ತೀಚಿನ ಈಶಾನ್ಯ ರಾಜ್ಯಗಳಲ್ಲಿ ಕಂಡ ಸೋಲಿನ ಕಹಿಯನ್ನು ಕಾಂಗ್ರೆಸ್‌ ಮರೆಯಲು ಬಯಸಿದೆ. ಅಷ್ಟೇ ಅಲ್ಲದೇ ಮುಂಬರುವ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಲು, ಕರ್ನಾಟಕವನ್ನು ಜಯಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಲು, ಕಾಂಗ್ರೆಸ್ ಸ್ಥಳೀಯ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದೆ. ಅಲ್ಲದೇ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದವರಾಗಿರುವುದರಿಂದ, ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್‌ಗೆ ಬಹುಮುಖ್ಯವಾಗಿದೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್‌, ಪ್ರಮುಖವಾಗಿ 40 ಪರ್ಸೆಂಟ್‌ ಕಮಿಷನ್‌ ವಿಚಾರವನ್ನು ತನ್ನ ಚುನಾವಣೆಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಬಿಜೆಪಿ ರಾಜ್ಯದ ಪ್ರಬಲ ಜಾತಿಗಳ ಓಲೈಕೆಗೆ ಮುಂದಾಗಿದ್ದು, ಹಿಂದುಳಿದ ವರ್ಗಗಳನ್ನು ತುಳಿಯುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಈ ಮೂಲಕ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದು ಕಾಂಗ್ರೆಸ್‌ ಇರಾದೆಯಾಗಿದೆ.

ಹಾಗಾದರೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್‌ ಹೂಡಿರುವ ರಣತಂತ್ರವೇನು? ಪಕ್ಷದ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು? ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎದುರಿಗಿರುವ ಬಹುದೊಡ್ಡ ಬೆದರಿಕೆಗಳೇನು ಎಂಬುದನ್ನು ನೋಡುವುದಾದರೆ..

ಸಾಮರ್ಥ್ಯ:

ಪ್ರಬಲ ಸ್ಥಳೀಯ ನಾಯಕತ್ವ ಕಾಂಗ್ರೆಸ್‌ನ ಸಾಮರ್ಥ್ಯಗಳಲ್ಲಿ ಒಂದು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿಕೆ ಶಿವಕುಮಾರ್‌ ಮತ್ತು ಕುರುಬ ಸಮುದಾಯಕ್ಕೆ ಸೇರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ಗೆ ಪ್ರಬಲ ಸ್ಥಳೀಯ ನಾಯಕತ್ವ ನೀಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಿದ್ದರಾಮಯ್ಯ ಅವರ ಅಹಿಂದ ಮತಬೇಟೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ದಲಿತ ಸಮುದಾಯಕ್ಕೆ ಸೇರಿದ ಮಲ್ಲಿಖಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಹೆಚ್ಚಿನ ಮತಗಳನ್ನು ತಂದುಕೊಡಲಿದೆ ಎಂಬ ಭರವಸೆಯಲ್ಲಿ ಹೈಕಮಾಂಡ್‌ ಇದೆ.

ಹಾಗೆಯೇ ವಿವಿಧ ವರ್ಗಗಳ ಓಲೈಕೆಗಾಗಿ ಕಾಂಗ್ರೆಸ್‌ ಗ್ಯಾರಂಟೀ ಯೋಜನೆಗಳನ್ನು ಘೋಷಿಸಿದ್ದು, ಮಹಿಳೆಯರು, ಯುವಕರು ಅದರಲ್ಲೂ ನಿರುದ್ಯೋಗಿ ಯುವಕರನ್ನು ಸೆಳೆಯಲು ಆಕರ್ಷಕ ಭರವಸೆಗಳನ್ನು ನೀಡಿದೆ. ಈ ಕಾರಣಕ್ಕೆ ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ತತ್ತರಿಸಿರುವ ಸಮಾಜದ ಬಹುತೇಕ ವರ್ಗಗಳು, ಕಾಂಗ್ರೆಸ್‌ ಕೈಹಿಡಿಯಬಹುದು ಎನ್ನಲಾಗುತ್ತಿದೆ.

ದೌರ್ಬಲ್ಯ:

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವಿನ ಆಂತರಿಕ ಕಚ್ಚಾಟ ಪಕ್ಷಕ್ಕೆ ಮುಳುವಾಗಲೂಬಹುದು. ಈ ನಾಯಕರ ಪ್ರತಿಷ್ಠೆ ಮತ್ತು ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ, ಕಾಂಗ್ರೆಸ್‌ ಎರಡು ಬಣಗಳಾಗಿ ವಿಭಜನೆಗೊಳ್ಳಬಹುದು ಎಂಬ ಆತಂಕ ಹೈಕಮಾಂಡ್‌ಗೆ ಇದ್ದೇ ಇದೆ.

ಮೇಲ್ನೋಟಕ್ಕೆ ಈ ಇಬ್ಬರೂ ನಾಯಕರು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳುತ್ತಿದ್ದಾರಾದರೂ, ಅಧಿಕಾರಕ್ಕಾಗಿ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳುವ ಪರೋಕ್ಷ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಇಷ್ಟೇ ಅಲ್ಲದೇ ಕಾಂಗ್ರೆಸ್‌ನ ಇತರ ಹಿರಿಯ ನಾಯಕರಾದ ಡಾ.ಜಿ. ಪರಮೇಶ್ವರ್‌, ಹೆಚ್‌ಕೆ ಪಾಟೀಲ್‌, ಕೆ.ಹೆಚ್.‌ ಮುನಿಯಪ್ಪ ಅವರಂತ ನಾಯಕರು ತೆರೆಯ ಹಿಂದೆ ಸರಿದಿರುವುದು, ಅವರ ಬೆಂಬಲಿಗರ ಆಕ್ರೋಶಕ್ಕೂ ಕಾರಣವಾಗಿದೆ.

ಸವಾಲುಗಳು:

ಪ್ರಧಾನಿ ಮೋದಿ ಅವರ ಜನಪ್ರಿಯತೆಯ ವಿರುದ್ಧ ಹೋರಾಡುವುದು ಕಾಂಗ್ರೆಸ್‌ಗೆ ಅಷ್ಟು ಸುಲಭದ ಮಾತಲ್ಲ. 'ಮೋದಿ ಹವಾ' ಮೀರಿ ಜನರನ್ನು ತಲುಪಲು ಕಾಂಗ್ರೆಸ್‌ ಹರಸಾಹಸಪಡಬೇಕಾಗುತ್ತದೆ. ಹಾಗೆಯೇ ಟಿಕೆಟ್‌ ಹಂಚಿಕೆಯಿಂದ ಅಸಮಾಧಾನಗೊಂಡಿರುವ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸವಾಲು ಕಾಂಗ್ರೆಸ್‌ಗೆ ಇದ್ದೇ ಇದೆ. ಜೊತೆಗೆ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಅನ್ಯ ಪಕ್ಷಗಳತ್ತ ಮುಖ ಮಾಡುವ ನಾಯಕರನ್ನು ತಡೆಹಿಡಿಯುವ ಸವಾಲನ್ನು ಕೂಡ ಕಾಂಗ್ರೆಸ್‌ ಎದುರಿಸಬೇಕಿದೆ.

IPL_Entry_Point