Chamarajanagar News: ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಮತದಾನ ಬಹಿಷ್ಕರಿಸಿದ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagar News: ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಮತದಾನ ಬಹಿಷ್ಕರಿಸಿದ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು

Chamarajanagar News: ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಮತದಾನ ಬಹಿಷ್ಕರಿಸಿದ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು

ಜಿಲ್ಲಾಧಿಕಾರಿ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರೂ, ಗ್ರಾಮಸ್ಥರು ಮಾತ್ರ ಇದಕ್ಕೆ ಜಗ್ಗಲಿಲ್ಲ. ಗ್ರಾಮಸ್ಥರು ಎಲ್ಲರ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಚಿಕ್ಕ ಎಲಚೆಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಚಿಕ್ಕ ಎಲಚೆಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಚಾಮರಾಜನಗರ: ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ 101 ಅರ್ಹ ಮತದಾರರಿದ್ದಾರೆ. ಆದರೆ, ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲವೆಂದು ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರ. ಹೀಗಾಗಿ ಇಂದು ನಡೆಯುತ್ತಿರುವ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನವನ್ನು ಬಹಿಷ್ಕಾರಿಸಿದ್ದಾರೆ.

ಈ ಕುರಿತು ಮಾಹಿತಿ ಪಡೆದ ತಹಶೀಲ್ದಾರ್ ಶ್ರೀಶೈಲ ಎಂ ತಳವಾರ್, ಚಿಕ್ಕ ಏಲಚೆಟ್ಟಿ ಗ್ರಾಮಕ್ಕೆ ಭೇಟಿ ನೀಡಿ‌ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಇದಕ್ಕೂ ಬಗ್ಗದ ಗ್ರಾಮಸ್ಥರು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು‌. ಈ ವೇಳೆ ದೂರವಾಣಿ ಮೂಲಕ ಗ್ರಾಮಸ್ಥರ ಜೊತೆ ಜಿಲ್ಲಾಧಿಕಾರಿ ರಮೇಶ್ ಮಾತನಾಡಿದರು. ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು. ಆದರೂ, ಗ್ರಾಮಸ್ಥರು ಮಾತ್ರ ಇದಕ್ಕೆ ಜಗ್ಗಲಿಲ್ಲ. ಗ್ರಾಮಸ್ಥರು ಎಲ್ಲರ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮಧ್ಯಾಹ್ನ ಒಂದೂವರೆ ಗಂಟೆಯವರೆಗೂ, ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಒಂದು ಮತದಾನವೂ ಕೂಡ ನಡೆದಿಲ್ಲ ಎಂದು ತಿಳಿದು ಬಂದಿದೆ.

ಮತದಾನ ಬಹಿಷ್ಕರಿಸಿದ ಮೈಸೂರಿನ ಏಳಿಗೆಹುಂಡಿ ಗ್ರಾಮಸ್ಥರು

ಅತ್ತ ಮೈಸೂರಿನ ಏಳಿಗೆಹುಂಡಿ ಗ್ರಾಮದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ಮತದಾನ ಮಾಡುವುದಿಲ್ಲ ಎಂದ ಪಟ್ಟು ಹಿಡಿದಿದ್ದಾರೆ. ಆ ಬಳಿಕ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ.

ವಿವಿಪ್ಯಾಟ್ ಒಡೆದು ಪುಡಿ ಮಾಡಿದ ಮಸಬಿನಾಳ ಗ್ರಾಮಸ್ಥರು

ಕಾಯ್ದಿರಿಸಿದ ಮತಯಂತ್ರಗಳನ್ನು ವಾಪಾಸ್ಸು ಒಯ್ಯುವ ಸಂದರ್ಭದಲ್ಲಿ ಇವಿಎಂ ಮಷಿನ್ ಸಾಗಾಟ ಮಾಡಲಾಗುತ್ತದೆ ಎಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಕಾಯ್ದಿಟ್ಟ ಮತಯಂತ್ರಗಳನ್ನು ಒಡೆದು ಪುಡಿ ಪುಡಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(ವರದಿ: ಧಾತ್ರಿ ಭಾರದ್ವಾಜ್, ಮೈಸೂರು)

Whats_app_banner