ಕನ್ನಡ ಸುದ್ದಿ  /  Karnataka  /  Karnataka Assembly Elections 2023 Political Life Of Bs Yediyurappa Siddaramaiah Hd Kumaraswamy Jagadish Shettar Dmg

Electoral History: ಸೋಲು ಗೆಲುವಿನ ಹದಪಾಕ; 2008ರಿಂದ 2023ರವರೆಗೆ ಸಿಎಂ ಹುದ್ದೆಗೇರಿದ ಈ ನಾಲ್ವರ ಅಧಿಕಾರದ ಹಾದಿ ಸುಗಮವಾಗಿರಲಿಲ್ಲ

Karnataka Assembly Elections: ಈಗ ಎಲ್ಲರೂ ಮತದಾನೋತ್ತರ ಸಮೀಕ್ಷೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 'ಹಾಗಾದರೆ, ಹೀಗಾದರೆ' ಎಂದು ಕೂಡಿ ಕಳೆಯುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ನಾವು ಏಕೆ ಸುಮ್ಮನಿರಬೇಕು? ನಾವೂ ಕೂಡಾ ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳ ಅಂಕಿಅಂಶಗಳೊಂದಿಗೆ ಆಟವಾಡೋಣ ಬನ್ನಿ ಎನ್ನುತ್ತಾರೆ ಹಿರಿಯ ಪತ್ರಕರ್ತ ಮಾರುತಿ ಎಚ್.

ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

ಚುನಾವಣೆಗಳು ಗಣತಂತ್ರದ ಹಬ್ಬಗಳಿದ್ದಂತೆ. ಸೊಗಸು ಕೂಡಾ. ಕರ್ನಾಟಕದಲ್ಲಿ ಇದೀಗ ಈ ಹಬ್ಬ ಮುಕ್ತಾಯಗೊಂಡಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀಸಾಮಾನ್ಯನಿಂದ ಹಿಡಿದು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯವರೆಗೂ ಎಲ್ಲರೂ ಮತದಾನೋತ್ತರ ಸಮೀಕ್ಷೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎಲ್ಲರೂ ರೇ…..ಬೆನ್ನ ಹಿಂದೆ ಬಿದ್ದಿದ್ದು 'ಹಾಗಾದರೆ, ಹೀಗಾದರೆ' ಎಂದು ಕೂಡಿ ಕಳೆಯುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅದು ಅವರಿಗೆ ಅನಿವಾರ್ಯ ಕೂಡಾ. ಹಾಗಾದರೆ ನಾವು ಏಕೆ ಸುಮ್ಮನಿರಬೇಕು? ನಾವೂ ಕೂಡಾ ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳ ಅಂಕಿಅಂಶಗಳೊಂದಿಗೆ ಆಟವಾಡೋಣ ಬನ್ನಿ.

ದಾಖಲೆಯ ಗೆಲುವು ಪಡೆದ ಯಡಿಯೂರಪ್ಪ

ಮೊದಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಚುನಾವಣಾ ಫಲಿತಾಂಶಗಳನ್ನು ನೋಡೋಣ. ವೀರಶೈವ-ಲಿಂಗಾಯತ ಸಮುದಾಯದ ಪ್ರಬಲ ನಾಯಕ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು ಕಳೆದ ನಾಲ್ಕು ಚುನಾವಣೆಗಳಲ್ಲಿ ಸಾಗಿ ಬಂದ ಹಾದಿ ಹೀಗಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಯಡಿಯೂರಪ್ಪ ಅವರ ತವರು ಕ್ಷೇತ್ರ. 2008ರಲ್ಲಿ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದರು. ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಚುನಾವಣೆಯಲ್ಲಿ ಯಡಿಯೂರಪ್ಪ 83,491 ಮತಗಳನ್ನು ಪಡೆಯುವ ಮೂಲಕ ಬಂಗಾರಪ್ಪ ಅವರನ್ನು ಭಾರಿ ಬಹುಮತದ ಅಂತರದಿಂದ ಪರಾಭವಗೊಳಿಸಿದ್ದರು. ಬಂಗಾರಪ್ಪ ಕೇವಲ 37,564 ಮತಗಳನ್ನು ಮಾತ್ರ ಗಳಿಸಿದ್ದರು. ಯಡಿಯೂಪ್ಪ ಅವರು ಶೇ 36.4 ರಷ್ಟು ಹೆಚ್ಚಿನ ಮತಗಳನ್ನು ಗಳಿಸಿದ್ದರು ಎಂದರೆ ಕ್ಷೇತ್ರದ ಮೇಲಿನ ಅವರ ಹಿಡಿತ ಅರ್ಥವಾದೀತು.

2013ರಲ್ಲಿ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪಿಸಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾಂತವೀರಪ್ಪಗೌಡ ಅವರನ್ನು 20,000 ಮತಗಳ ಅಂತರದಲ್ಲಿ ಸೋಲಿಸಿದ್ದರು. ಯಡಿಯೂರಪ್ಪ 69,126 ಮತ ಗಳಿಸಿದ್ದರೆ ಶಾಂತವೀರಪ್ಪ 44,701 ಮತಗಳಿಸಲಷ್ಟೇ ಸಾಧ್ಯವಾಗಿತ್ತು.

2018ರಲ್ಲಿ ಯಡಿಯೂರಪ್ಪ ಮತ್ತೆ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದರು. ಅವರು ಕಾಂಗ್ರೆಸ್‌ನ ಗೋಣಿ ಮಾಲತೇಶ ಅವರ ವಿರುದ್ಧ ಶೇ 23ರಷ್ಟು ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಯಡಿಯೂರಪ್ಪ 89,983 ಮತಗಳನ್ನು ಮತ್ತು ಮಾಲತೇಶ ಅವರು 51,589 ಮತಗಳನ್ನು ಗಳಿಸಿದ್ದರು.

ಸಿದ್ದರಾಮಯ್ಯ

ಯಡಿಯೂರಪ್ಪ ಅವರಂತೆಯೇ ಸಿದ್ದರಾಮಯ್ಯ ಅವರೂ ಸಹ ಮಾಸ್ ಲೀಡರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇವರಾಜ ಅರಸು ನಂತರ ಐದು ವರ್ಷದ ಪೂರ್ಣಾವಧಿ ಸರಕಾರ ನಡೆಸಿದ ಖ್ಯಾತಿ ಇವರದ್ದು.

2008ರಲ್ಲಿ ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಇವರ ವಿರುದ್ಧ ಬಿಜೆಪಿಯಿಂದ ನಿಂತಿದ್ದವರು ನಿವೃತ್ತ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ. ಚುನಾವಣೆಯಲ್ಲಿ ಸಿದ್ದರಾಮಯ್ಯ 71,908 ಮತಗಳಿಸಿದರೆ ರೇವಣಸಿದ್ದಯ್ಯ ಅವರು 53,081 ಮತ ಗಳಿಸಿದ್ದರು. ಸಿದ್ದರಾಮಯ್ಯ ಅವರು ರೇವಣಸಿದ್ದಯ್ಯ ಅವರನ್ನು ಶೇ 13.2 ಮತಗಳ ಅಂತರದಿಂದ ಸೋಲಿಸಿದ್ದರು.

2013ರಲ್ಲಿ ಮತ್ತೆ ಸಿದ್ದರಾಮಯ್ಯ ವರುಣಾದಲ್ಲಿ 84,385 ಮತಗಳನ್ನು ಗಳಿಸುವ ಮೂಲಕ ಕೆಜೆಪಿ ಅಭ್ಯರ್ಥಿ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ಶೇ 18.5 ಮತಗಳ ಅಂತರದಲ್ಲಿ ಪರಾಭವಗೊಳಿಸಿ ಮುಖ್ಯಮಂತ್ರಿಯಾಗಿದ್ದರು. ಇದು ಈಗ ಇತಿಹಾಸ.

2018ರಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಹುರಿಯಾಳು ಜಿ.ಟಿ.ದೇವೇಗೌಡ ಅವರು 1,12,325 ಮತ ಗಳಿಸಿದರೆ ಸಿದ್ದರಾಮಯ್ಯ 85,283 ಮತಗಳಿಸಿ ಪರಾಭವ ಹೊಂದಿದ್ದರು. ಜಿಟಿಡಿ ಶೇ 16ರಷ್ಟು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಬಾದಾಮಿಯಲ್ಲಿ ಸಿದ್ದರಾಮಯ್ಯ 77,566 ಮತ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಇಲ್ಲಿ ಶ್ರೀರಾಮುಲು 65,903 ಮತಗಳನ್ನು ಪಡೆದಿದ್ದರು.

ಎಚ್.ಡಿ.ಕುಮಾರಸ್ವಾಮಿ

ಎರಡು ಬಾರಿ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಜತೆ ಮೈತ್ರಿ ಸಾಧಿಸಿ ಅಧಿಕಾರ ಹಿಡಿದಿದ್ದರು. 2008ರಲ್ಲಿ ರಾಮನಗರ ಕ್ಷೇತ್ರದಲ್ಲಿ ಬಿಜೆಪಿಯ ಎಂ.ರುದ್ರೇಶ್ ಅವರನ್ನು ಶೇ 37ರ ಮತಗಳ ಅಂತರದಲ್ಲಿ ಸೋಲಿಸಿ ಮುಖ್ಯಮಂತ್ರಿಯಾಗಿದ್ದರು. ಎಚ್‌ಡಿಕೆ 71,700 ಮತ ಪಡೆದರೆ ರುದ್ರೇಶ್ ಅವರಿಗೆ ಕೇವಲ 24,440 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿತ್ತು.

2013ರಲ್ಲಿ ರಾಮನಗರದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಮರಿದೇವರು ಅವರನನ್ನು ಕುಮಾರಸ್ವಾಮಿ ಸೋಲಿಸಿದ್ದರು. ಕುಮಾರಸ್ವಾಮಿ 83,447 ಮತ ಮತ್ತು ಮರಿದೇವರು 58,049ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ ಶೇ 17.1ಕ್ಕೆ ಇಳಿದಿತ್ತು.

2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ ಕುಮಾರಸ್ವಾಮಿ ಎರಡೂ ಕಡೆ ಗೆಲುವು ದಾಖಲಿಸಿದ್ದರು. ಚನ್ನಪಟ್ಟಣದಲ್ಲಿ 87,995 ಮತ ಪಡೆದು 66,465 ಮತ ಪಡೆದಿದ್ದ ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರನ್ನು ಸೋಲಿಸಿದ್ದರು. ರಾಮನಗರದಲ್ಲಿ 92,626 ಮತ ಗಳಿಸಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಅವರನ್ನು ಶೇ 13.3 ಮತಗಳ ಅಂತರದಿಂದ ಸೋಲಿಸಿದ್ದರು. ಇಕ್ಬಾಲ್ 69,990 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಜತೆ ಮೈತ್ರಿ ಸಧಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜಗದೀಶ ಶೆಟ್ಟರ್

2008ರಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ 58,477 ಮತ ಗಳಿಸಿ ಕಾಂಗ್ರೆಸ್‌ನ ಶಂಕ್ರಣ್ಣ ಮುನವಳ್ಳಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಮುನವಳ್ಳಿ 32,738 ಮತ ಗಳಿಸಿದ್ದರು. ಗೆಲುವಿನ ಅಂತರ ಶೇ 24.2 ರಷ್ಟಿತ್ತು. 2013ರಲ್ಲಿ ಇದೇ ಕ್ಷೇತ್ರದಿಂದ ಶೆಟ್ಟರ್ 58,201 ಮತಗಳನ್ನು ಪಡೆದು ಕಾಂಗ್ರೆಸ್‌ನ ಮಹೇಶ್ ನಲ್ವಾಡ್ ಅವರನ್ನು ಪರಾಭವಗೊಳಿಸಿದ್ದರು. 2018ರಲ್ಲಿಯೂ ಶೆಟ್ಟರ್ ತಮ್ಮ ಸಾಂಪ್ರದಾಯಿಕ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ದಾಖಲಿಸಿದ್ದರು. ಶೆಟ್ಟರ್ 75,794 ಮತ ಮತ್ತು ನಲ್ವಾಡ್ 54,488 ಮತ ಗಳಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶೆಟ್ಟರ್ 2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಫಲಿತಾಂಶ ಏನು ಬರುತ್ತದೆಯೋ ಕಾದು ನೋಡಬೇಕಿದೆ.

ಬಸವರಾಜ ಬೊಮ್ಮಾಯಿ

2008ರಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶೇ 10.4ರಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇವರು 63,780 ಮತ ಮತ್ತು ಕಾಂಗ್ರೆಸ್‌ನ ಖಾದ್ರಿ ಸಯ್ಯದ್ ಅಝೀಂಪೀರ್ ಅವರು 50,918 ಮತ ಗಳಿಸಿದರು.

2013ರಲ್ಲಿ ಮತ್ತೆ ಬೊಮ್ಮಾಯಿ 73,007 ಮತ ಗಳಿಸಿ ತಮ್ಮ ಎದುರಾಳಿ ಖಾದ್ರಿ ಸಯ್ಯದ್ ಅಝೀಂಪೀರ್ (63,504 ಮತ) ವಿರುದ್ಧ ಶೇ 6.3ರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2018ರಲ್ಲಿ 83,868 ಮತಗಳಿಸಿ ಇದೇ ಎದುರಾಳಿಯ ವಿರುದ್ಧ ಶೇ 5.5 ರ ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಖಾದ್ರಿ ಸಯ್ಯದ್ ಅವರಿಗೆ 74,603 ಮತ ಗಳಿಸುವಲ್ಲಿ ಮಾತ್ರ ಸಾಧ್ಯವಾಗಿತ್ತು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 224 ಅಭ್ಯರ್ಥಿಗಳ ಹಣಬರಹ ಬಹಿರಂಗವಾಗಲು ಇನ್ನು ಕೇವಲ 1 ದಿನ ಬಾಕಿಯಿದೆ. ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂದು ಈಗಲೇ ಹೇಳುವುದು ಕಷ್ಟ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ದೇಶದ ಚುನಾವಣಾ ಇತಿಹಾಸವನ್ನು ಗಮನಿಸಿದರೆ ಸೋಲು ಕಾಣದ ರಾಷ್ಟ್ರೀಯ ನಾಯಕರೇ ಇಲ್ಲ ಎನ್ನುವಷ್ಟು ಕಡಿಮೆ. ರಾಜ್ಯದ ಮಟ್ಟಿಗೆ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಹೀಗೆ ಎಲ್ಲರೂ ಸೋತು ಗೆದ್ದವರು. ಸೋತ ಮಾತ್ರಕ್ಕೆ ಅವರ ರಾಜಕೀಯ ಜೀವನ ಮುಗಿದೇ ಹೋಯಿತು ಎಂದು ಅರ್ಥವಲ್ಲ. ಮತ್ತೆ ಪುಟಿದೇಳುವ ಎಲ್ಲ ಅವಕಾಶಗಳು ಇದ್ದೇ ಇರುತ್ತವೆ. ನಾಳೆಯ ಫಲಿತಾಂಶದ ಪಾಠವೂ ಇದೇ ಆಗಿರುತ್ತದೆ.

ಬರಹ: ಮಾರುತಿ ಎಚ್.

IPL_Entry_Point