Karnataka Election: ಕಾಂಗ್ರೆಸ್‌ಗೆ ಜೈ, ಬಿಜೆಪಿಗೆ ಸೈ; ನಾಯಕರಿಗೆ ಜನಸೇರಿಸುವ ತುರ್ತು, ಬಾವುಟ ಹಿಡಿದವರಿಗೆ ಸಿಕ್ಕಷ್ಟೇ ಲಾಭ
ಎಲ್ಲಾ ಪಕ್ಷಗಳ ಚುನಾವಣಾ ರಾಲಿ, ಸಮಾವೇಶ, ರೋಡ್ ಶೋಗಳಲ್ಲಿ ಭಾಗವಹಿಸುತ್ತಿರುವ ಕಾರ್ಯಕರ್ತರು ಅಂತಿಮವಾಗಿ ಯಾರಿಗೆ ತಮ್ಮ ಬೆಂಬಲ ನೀಡ್ತಾರೆ ಅನ್ನೋದು ಅಭ್ಯರ್ಥಿಗಳು ಕೂಡ ಊಹೆ ಮಾಡೋಕೆ ಆಗ್ತಿಲ್ಲ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ಕೆಲ ದಿನಗಳಷ್ಟೇ ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಸ್ಟಾರ್ ಕ್ಯಾಂಪೇನರ್‌ಗಳನ್ನು ಕರೆಸಿ ರೋಡ್ ಶೋ, ಸಾರ್ವಜನಿಕ ಸಭೆಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಚುನಾವಣೆ ಘೋಷಣೆಗೆ ಇನ್ನೂ ಕೆಲವು ದಿನಗಳು ಬಾಕಿ ಇದ್ದಾಗ ಆರಂಭವಾದ ಪ್ರಚಾರಗಳು ನಾಮಪತ್ರ ಸಲ್ಲಿಕೆಯಿಂದ ಹಿಡಿದು ಇವತ್ತಿನ ವಾರ್ಡ್, ಪಂಚಾಯ್ತಿ ಮಟ್ಟದಲ್ಲಿ, ಗ್ರಾಮಗಳು ಹಾಗೂ ಮನೆ ಮನೆಗಳಿಗೆ ತೆರಳಿ ಮತಯಾಚನೆ ವರೆಗೆ ಮುಂದುವರೆದಿದೆ.
ಕಾಂಗ್ರೆಸ್ (Congress), ಬಿಜೆಪಿ(BJP), ಜೆಡಿಎಸ್(JDS) ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ರೋಡ್ ಶೋ, ಸಾರ್ವಜನಿಕ ಸಭೆಗಳಿಗೆ ಭಾರಿ ಸಂಖ್ಯೆಯಲ್ಲಿ ಮತದಾರರನ್ನು ಸೇರಿಸಿ ಶಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ದೇಶದಲ್ಲಿ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಪ್ರಾದೇಶಿಕದಿಂದ ರಾಷ್ಟ್ರೀಯ ಪಕ್ಷಕ್ಕೆ ಬಡ್ತಿ ಪಡೆದು ಇದೇ ಮೊದಲ ಬಾರಿಗೆ ಕರ್ನಾಟಕದ ಚುನಾವಣೆಯ ಅಖಾಡಕ್ಕೆ ಇಳಿದಿರುವ ಆಮ್ ಆದ್ಮಿ ಪಕ್ಷದ (Aam Aadmi Party) ರಾಲಿಗಳಿಗೂ ಜನ ಸೇರುತ್ತಿದ್ದಾರೆ.
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಅಭ್ಯರ್ಥಿಗಳು ಇದ್ದರೆ, ಈ ಜನತಂತ್ರದ ಹಬ್ಬವನ್ನು ಮತದಾರರು ಮಾತ್ರ ಸಖತ್ ಎಂಜಾಯ್ ಮಾಡ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಂತೂ ಬಸ್ ಬಂತು ಬನ್ನಿ ಬನ್ನಿ ಅಂತೇಳಿ ಗ್ರಾಮದ ಸಣ್ಣ ಪುಟ್ಟ ಮುಖಂಡರು ಮನೆ ಮನೆ ಹತ್ರ ಹೋಗಿ ಜನರನ್ನು ಒಟ್ಟುಗೂಡಿಸಿಕೊಂಡು ಚುನಾವಣಾ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇಂದು ಒಂದು ಪಕ್ಷದ ಕಾರ್ಯಕ್ರಮವಾದರೆ ನಾಳೆ ಮತ್ತೊಂದು ಪಕ್ಷದ ಕ್ಯಾಂಪೇನ್‌ಗಳಿಗೆ ಮುಖಂಡರ ಬೇರೆ ಆದರೆ ಜನರು ಮಾತ್ರ ಇವರೇ ಇರ್ತಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ ಯಾವುದೇ ಪಕ್ಷದ ಕಾರ್ಯಕ್ರಮ ಇರಲಿ. ಒಂದಷ್ಟು ಕಾರ್ಯಕರ್ತರನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಮತದಾರರು ಎಲ್ಲಾ ಪಕ್ಷಗಳ ಕಾರ್ಯಕ್ರಮಗಳಿಗೂ ಇವರೇ ಶಕ್ತಿ ಪ್ರದರ್ಶನದ ಸರಕು. ಅಭ್ಯರ್ಥಿಗಳಿಗೆ ಆ ಕ್ಷಣಕ್ಕೆ ಜನರನ್ನು ಸೇರಿಸಿ ತಮ್ಮ ಬಲ ಏನು ಅಂತ ಪ್ರದರ್ಶಿಸಿದರೆ ಆಯ್ತು ಎಂಬ ಭಾವನೆ. ಇಲ್ಲಿ ಸೇರುವವರ ಪೈಕಿ ಎಷ್ಟು ಮಂದಿ ಆಯಾ ಪಕ್ಷಗಳಿಗೆ ಮತಗಳಾಗಿ ಪರಿವರ್ತನೆ ಆಗುತ್ತವೆ ಅನ್ನೋದು ಮಾತ್ರ ನಿಗೂಢ.
ನೋಡ್ರಿ ಚುನಾವಣೆಯ ಸಭೆ-ಸಮಾರಂಭಗಳಿಗೆ ಬರುವ ಮತದಾರರೆಲ್ಲಾ ಅದೇ ಪಕ್ಷಕ್ಕೆ ಮತ ಹಾಕ್ತಾರೆ ಅಂತ ಹೇಳೋಕೆ ಬರೋದಿಲ್ಲ. ಈ ಕಹಿ ಸತ್ಯ ಅಭ್ಯರ್ಥಿಗಳಿಗೂ ಗೊತ್ತು. ಅಭ್ಯರ್ಥಿಗಳು ತಮ್ಮ ಚೇಲಗಳಿಗೆ ದುಡ್ಡು ಕೊಟ್ಟು ಜನರನ್ನು ಸೇರಿಸುತ್ತಾರೆ. ವಾರ್ಡ್‌ಗೆ ಒಬ್ಬರು, ಇಬ್ಬರಿಗೆ ಇಂತಹ ಜವಾಬ್ದಾರಿಗಳನ್ನು ನೀಡುತ್ತಾರೆ. ಕಾರ್ಯಕರ್ತರನ್ನು ಒಟ್ಟುಗೂಡಿಸುವ ಕೆಲಸವನ್ನು ಕಾರ್ಪೋರೇಟರ್‌ಗಳಿಗೂ ವಹಿಸಲಾಗುತ್ತದೆ ಎಂದು ಹಿರಿಯ ಪತ್ರಕರ್ತರೊಬ್ಬರು ವಿವರಿಸಿದ್ದಾರೆ.
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿತಂ ಗೌಡ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನೀಡಿದ್ರು. ಇದಾದ ಬಳಿಕ ಭವಾನಿ ರೇವಣ್ಣ ಕೂಡ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ ಪರ ಸಾವಿರಾರು ಜನರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಮಾಡಿದ್ರು. ಆದರೆ ಇಲ್ಲಿ ಸೇರಿದ್ದವರೆಲ್ಲಾ ಅದೇ ಪಕ್ಷಕ್ಕೆ ಮತಗಳಾಗಿ ಎಷ್ಟು ಪರಿವರ್ತನೆಯಾಗ್ತಾವೆ ಅನ್ನೋದು ನೋಡಬೇಕು ಎಂದು ಹೇಳಿದ್ದಾರೆ.
ಇವತ್ತು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿ ಸುದ್ದಿಯಾಗುವ ಗ್ರಾಮ ಮಟ್ಟದ ಮುಖಂಡರು ನಾಳೆ ಬಿಜೆಪಿಗೆ ಜೈ ಎಂದು ಕೇಸರಿ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡು ಸುದ್ದಿಯಾಗುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಕೋಲಾರ ವಿಧಾನಸಭಾ ಕ್ಷೇತ್ರದ ಬೆಳ್ಳೂರು ಗ್ರಾಮದ ಯುವ ಮುಖಂಡ ಮರಳಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಸಮ್ಮುಖದಲ್ಲಿ ಬೆಳಗ್ಗೆ ಕಾಂಗ್ರೆಸ್ ಸೇರಿದ್ದು. ಮರು ದಿನವೇ ಬಿಜೆಪಿಯ ವರ್ತೂರು ಪ್ರಕಾಶ್ ಇದೇ ಮುಖಂಡನ್ನು ಪಕ್ಷಕ್ಕೆ ಸೇರಿಸಿಕೊಂಡು ಫೋಟೋಗೆ ಪೋಸ್ ಕೂಡ ಕೊಟ್ರು.
ಇಲ್ಲಿ ಆರ್ಥಿಕ ವ್ಯವಹಾರಗಳು ಸೇರಿದಂತೆ ಏನೇ ಆಫರ್‌ಗಳು ಇದ್ದರೂ ಅಭ್ಯರ್ಥಿಗಳಿಗೆ ಮಾತ್ರ ಮುಖಂಡರು ಮತ್ತು ಮತದಾರ ಅಂತಿಮವಾಗಿ ಯಾರಿಗೆ ಒಲವು ತೋರಿಸಿರುತ್ತಾನೆ ಅನ್ನೋದು ಮೇ 13 ರಂದು ಹೊರಬೀಳಲಿರುವ ಫಲಿತಾಂಶ ಬಳಿಕ ಸ್ಪಷ್ಟವಾಗುತ್ತದೆ.