Yellapura Constituency: ಅದಲು, ಬದಲು; ಪಕ್ಷಗಳ ಬದಲಾಯಿಸಿದವರ ಮಧ್ಯೆ ಯಲ್ಲಾಪುರದಲ್ಲಿ ಹೈವೋಲ್ಟೇಜ್ ಸ್ಪರ್ಧೆ
ಕನ್ನಡ ಸುದ್ದಿ  /  ಕರ್ನಾಟಕ  /  Yellapura Constituency: ಅದಲು, ಬದಲು; ಪಕ್ಷಗಳ ಬದಲಾಯಿಸಿದವರ ಮಧ್ಯೆ ಯಲ್ಲಾಪುರದಲ್ಲಿ ಹೈವೋಲ್ಟೇಜ್ ಸ್ಪರ್ಧೆ

Yellapura Constituency: ಅದಲು, ಬದಲು; ಪಕ್ಷಗಳ ಬದಲಾಯಿಸಿದವರ ಮಧ್ಯೆ ಯಲ್ಲಾಪುರದಲ್ಲಿ ಹೈವೋಲ್ಟೇಜ್ ಸ್ಪರ್ಧೆ

Yellapura Constituency: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರ ಈಗ ಸುದ್ದಿಯಲ್ಲಿದೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ವಿ.ಎಸ್. ಪಾಟೀಲ ಮತ್ತು ಶಿವರಾಮ ಹೆಬ್ಬಾರ್ ಪಕ್ಷಗಳನ್ನು ಬದಲಾಯಿಸಿಕೊಂಡಿರುವುದು ಇದಕ್ಕೆ ಕಾರಣ.

ಶಿವರಾಮ ಹೆಬ್ಬಾರ್ ಮತ್ತು ವಿ.ಎಸ್. ಪಾಟೀಲ
ಶಿವರಾಮ ಹೆಬ್ಬಾರ್ ಮತ್ತು ವಿ.ಎಸ್. ಪಾಟೀಲ

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರ (Yellapura Constituency) ಈಗ ಸುದ್ದಿಯಲ್ಲಿದೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ವಿ.ಎಸ್. ಪಾಟೀಲ (V S Patil) ಮತ್ತು ಶಿವರಾಮ ಹೆಬ್ಬಾರ್​ (Shivaram Hebbar) ಪಕ್ಷಗಳನ್ನು ಬದಲಾಯಿಸಿಕೊಂಡಿರುವುದು ಇದಕ್ಕೆ ಕಾರಣ. ಬಿ.ಎಸ್.ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಹದಿನೇಳು ಮಂದಿಯಲ್ಲಿ ಹೆಬ್ಬಾರರೂ ಒಬ್ಬರು. ಹೀಗಾಗಿ ಆ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೆಬ್ಬಾರ ಬಿಜೆಪಿ ಸೇರಿದ್ದರೆ, ಅಷ್ಟೂ ವರ್ಷಗಳ ಕಾಲ ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದ ವಿ.ಎಸ್.ಪಾಟೀಲ ಪಕ್ಷವನ್ನೇ ಬಿಡಬೇಕಾಯಿತು. ಈ ಬಾರಿ ಹೆಬ್ಬಾರ್ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದರೆ, ವಿ.ಎಸ್.ಪಾಟೀಲ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದಾರೆ. ಹೀಗಾಗಿ ಹೈವೋಲ್ಟೇಜ್ ಸ್ಪರ್ಧೆಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಜ್ಜಾಗುತ್ತಿದೆ.

2023ರ ಜಿಗಿತ ಪ್ರಕ್ರಿಯೆಗಳನ್ನು ಗಮನಿಸಿದರೆ ಇದೇನೂ ಹೊಸದಲ್ಲ. ಆದರೆ ಉತ್ತರ ಕನ್ನಡ ಸಹಿತ ಕರಾವಳಿ ರಾಜಕಾರಣಗಳಲ್ಲಿ ಈ ರೀತಿಯ ಸೈದ್ಧಾಂತಿಕವಾಗಿ ವಿರುದ್ಧ ಪಕ್ಷಗಳಿಗೆ ಸೇರ್ಪಡೆಯಾಗುವುದು ಹಾಗೂ ಪರಸ್ಪರ ವಿರೋಧವಾಗಿ ಪಕ್ಷ ಬದಲಾಯಿಸಿ ಸ್ಪರ್ಧೆಗಿಳಿಯುವುದು ವಿರಳ. ಸದ್ದಿಲ್ಲದ ರಾಜಕಾರಣ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಈ ರಾಜಕೀಯ ನಡೆಗಳು ಕುತೂಹಲಕ್ಕೆ ಕಾರಣವಾಗಿದೆ. ಹಾಗೆ ನೋಡಿದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷಾಂತರ ನಡೆದೇ ಇಲ್ಲವೆಂದೇನೂ ಇಲ್ಲ. ಕಾರವಾರದಲ್ಲಿ ಸಾಕಷ್ಟು ಬಾರಿ ನಿಷ್ಠೆ ಬದಲಾಯಿಸಿದ ಇತಿಹಾಸದವರೂ ಇದ್ದಾರೆ. ಆದರೆ ಯಲ್ಲಾಪುರ ಕ್ಷೇತ್ರವೀಗ ಎದುರಾಳಿಗಳು ಒಟ್ಟಿಗೇ ಇರಲು ಇರುಸುಮುರುಸಾಗಿ ಪಕ್ಷಾಂತರಕ್ಕೆ ನಿಷ್ಠರಾಗಿದ್ದಾರೆ. ಇದೊಂದು ಮೂಲನಿವಾಸಿಗಳು ವರ್ಸಸ್ ವಲಸಿಗರ ನಡುವಿನ ಕಾಳಗದ ಒಂದು ಭಾಗ.

ಬಾಂಬೆ ಟೀಮ್ ಮೆಂಬರ್ ಹೆಬ್ಬಾರ್:

ರಮೇಶ್ ಜಾರಕಿಹೊಳಿ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ಮುಂಬೈಗೆ ಹೋಗಿ ಕುಳಿತು ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಹದಿನೇಳು ಮಂದಿಯಲ್ಲಿ ಶಿವರಾಮ ಹೆಬ್ಬಾರರೂ ಒಬ್ಬರು. ವರ್ಷಗಟ್ಟಲೆ ಕಾಂಗ್ರೆಸ್ ಗೆ ನಿಷ್ಠರಾಗಿದ್ದ ಅವರು ಬಿಜೆಪಿಗೆ ಸೇರ್ಪಡೆಯಾದ ನಂತರ ಉಪಚುನಾವಣೆ ಅವರಿಂದಾಗಿಯೇ ಸೃಷ್ಟಿಯಾಯಿತು. ಉಪಚುನಾವಣೆಯನ್ನು ಭಾರೀ ಅಂತರದಲ್ಲೇ ಗೆದ್ದು, ತಾನು ಯಲ್ಲಾಪುರದಲ್ಲಿ ಜನಪ್ರಿಯ ಎಂದು ಪಕ್ಷದ ವರಿಷ್ಠರಿಗೆ ಮನದಟ್ಟು ಮಾಡುವಲ್ಲಿ ಹೆಬ್ಬಾರ್ ಯಶಸ್ವಿಯಾದರೇನೋ ಹೌದು. ಆದರೆ ಅದೇ ಹೊತ್ತಿನಲ್ಲಿ ಅಷ್ಟೂ ವರ್ಷಗಳ ಕಾಲ ಯಲ್ಲಾಪುರದಲ್ಲಿ ಬಿಜೆಪಿಯ ವರಿಷ್ಠ ನೇತಾರನಾಗಿದ್ದ ವಿ.ಎಸ್.ಪಾಟೀಲ ಬದಿಗೆ ಸರಿದಿದ್ದರು.

ವಾಯುವ್ಯ ಕೆಎಸ್​​ಆರ್​ಟಿಸಿ ಅಧ್ಯಕ್ಷ ಪಾಟೀಲ:

ಹೆಬ್ಬಾರರಂತೆ ವಿ.ಎಸ್. ಪಾಟೀಲರೂ ದೊಡ್ಡ ನಾಯಕರೇ. ವಾಯವ್ಯ ಕೆಎಸ್​​ಆರ್​ಟಿಸಿ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ ಸುದೀರ್ಘ ಕಾಲ ಬಿಜೆಪಿಯಲ್ಲಿ ಕೆಲಸ ಮಾಡಿದವರು. ಆದರೆ ಹೆಬ್ಬಾರರು ಬಿಜೆಪಿಗೆ ಬಂದಾಗ ಸತತವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದ ತನ್ನ ಕ್ಷೇತ್ರವನ್ನು ಉಪಚುನಾವಣೆ ಸಂದರ್ಭ ಅವರಿಗೆ ಬಿಟ್ಟುಕೊಟ್ಟರು. ಅದಾದ ಮೇಲೆ ಬೆಂಬಲಿಗರ ಹಾಗೂ ಅಭಿಮಾನಿಗಳ ಜೊತೆ ಪಕ್ಷ ಬಿಡುವ ದೊಡ್ಡ ತೀರ್ಮಾನ ಕೈಗೊಂಡರು.

ಚುನಾವಣಾ ಲೆಕ್ಕಾಚಾರಗಳು ಎಷ್ಟೇ ಜಾತ್ಯಾತೀತವಾದರೂ ಜಾತಿಗಣತಿ ಆಧಾರದಲ್ಲೇ ಮುನ್ನಡೆಯುತ್ತದೆ. ಇಲ್ಲೂ ಅದೇ ಆಗುತ್ತಿದೆ. ವಿ.ಎಸ್.ಪಾಟೀಲರು ಕಾಂಗ್ರೆಸ್ ಸೇರ್ಪಡೆಯಾದಾಗ ಹಿರಿಹಿರಿ ಹಿಗ್ಗಿದ ಕಾಂಗ್ರೆಸ್ ಪಾಟೀಲರ ಸಮುದಾಯದ ಮತಗಳತ್ತಲೂ ಕಣ್ಣಿಟ್ಟಿದೆ.

ಹಿಂದಿನ ಫಲಿತಾಂಶಗಳು:

2019ರಲ್ಲಿ ಪಕ್ಷಾಂತರ ಮಾಡಿದ ಬಳಿಕ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶಿವರಾಮ ಹೆಬ್ಬಾರರಿಂದಾಗಿ ಉಪಚುನಾವಣೆ ಸೃಷ್ಟಿಯಾಯಿತು. ಈ ಸಂದರ್ಭ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ್ ಸ್ಪರ್ಧಿಸಿ 49,034 ಮತ ಗಳಿಸಿ, 31,408 ಮತಗಳ ಅಂತರದಿಂದ ಸೋಲುಂಡರು. ಶಿವರಾಮ ಹೆಬ್ಬಾರ 80,442 ಮತ ಗಳಿಸಿ ಗೆಲುವಿನ ನಗೆ ಬೀರಿದರು. ಆ ಸಂದರ್ಭ ಮೂರನೇ ಸ್ಥಾನ ನೋಟಾಕ್ಕೆ ಬಿದ್ದದ್ದು ವಿಶೇಷ. 1444 ಮತಗಳು ನೋಟಾಕ್ಕೆ ಹೋದವು. ಜೆಡಿಎಸ್ ನ ಚೈತ್ರಾ ಗೌಡ 1235, ಉಳಿದವರು ಬೆರಳೆಣಿಕೆಯ ಮತ ಗಳಿಸುವಲ್ಲಿ ಶಕ್ತರಾದರು.

2018ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ ಹೆಬ್ಬಾರ ಬಿಜೆಪಿಯ ವಿ.ಎಸ್.ಪಾಟೀಲ ವಿರುದ್ಧ ಗೆದ್ದಿದ್ದರು. ಆ ಸಂದರ್ಭ ಸಮಬಲದ ಹೋರಾಟವೂ ನಡೆದಿತ್ತು. ಪಾಟೀಲರು 64,807 ಓಟು ಪಡೆದರೆ, ಹೆಬ್ಬಾರ 66,290 ಮತ ಗಳಿಸಿ ಕೇವಲ 1483 ಮತಗಳ ಅಂತರದಿಂದ ಗೆದ್ದಿದ್ದರು. 2013ರಲ್ಲಿ ಹೆಬ್ಬಾರರ ಗೆಲುವಿನ ಅಂತರ 24,492 ಆಗಿತ್ತು. ಆ ಸಂದರ್ಭ ಕಾಂಗ್ರೆಸ್ ನಿಂದ ಹೆಬ್ಬಾರರಾದರೆ, ಬಿಜೆಪಿಯಿಂದ ವಿ.ಎಸ್.ಪಾಟೀಲ. ಇದೇ ಮುಖಾಮುಖಿ 2008ರಲ್ಲೂ ಇತ್ತು. ಆ ಸಂದರ್ಭ ಪಾಟೀಲರು ಗೆದ್ದಿದ್ದರು.

ಕ್ಷೇತ್ರ ವಿಶೇಷ:

ಕ್ಷೇತ್ರ : ಯಲ್ಲಾಪುರ- ಮುಂಡಗೋಡ

ಅಭ್ಯರ್ಥಿಗಳು: ಬಿಜೆಪಿ -ಶಿವರಾಮ್ ಹೆಬ್ಬಾರ (3 ಬಾರಿ ಶಾಸಕರು), ಕಾಂಗ್ರೆಸ್​​ - ವಿ.ಎಸ್. ಪಾಟೀಲ (1 ಬಾರಿ ಶಾಸಕರು), ಜೆಡಿಎಸ್ - ನಾಗೇಶ ನಾಯ್ಕ

2008ರ ಪೂರ್ವದ ವರೆಗೂ ಅಂಕೋಲಾ ವಿಧಾನಸಭಾ ಕ್ಷೇತ್ರದ ಜೊತೆಗಿದ್ದ ಯಲ್ಲಾಪುರ ತಾಲೂಕು ಕ್ಷೇತ್ರ ಪುನರ್‌ ರಚನೆಯ ಬಳಿಕ ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಬನವಾಸಿ ಮಜಿರೆಯನ್ನು ಒಳಗೊಂಡಂತೆ ರಚನೆಯಾಯಿತು. 2008ವರೆಗೂ ಮುಂಡಗೋಡ ತಾಲೂಕು ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿತ್ತು. ಈ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಎಂಬುದು ಮತ್ತೊಂದು ವಿಶೇಷ.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

Whats_app_banner