PM Modi Road Show: ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಪಿಎಂ ಮೋದಿ ರೋಡ್ ಶೋ; ಈ ವರ್ಷ ಕರ್ನಾಟಕಕ್ಕೆ ಪ್ರಧಾನಿಯ 9ನೇ ಭೇಟಿಯಿದು
PM Modi Karnataka visit: "ಪ್ರಧಾನಿ ಅವರು ಏಪ್ರಿಲ್ 29 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅವರು ಶನಿವಾರ ಬೆಂಗಳೂರಿನಲ್ಲಿ 4.5 ಕಿಲೋ ಮೀಟರ್ ಉದ್ದಕ್ಕೂ ರೋಡ್ ಶೋ ನಡೆಸಲಿದ್ದಾರೆ" ಎಂದು ಕೇಂದ್ರ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ಬಿಜೆಪಿಯ ಸ್ಟಾರ್ ಪ್ರಚಾರಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎಪ್ರಿಲ್ 29 ರಂದು ರಾಜ್ಯಕ್ಕೆ ಆಗಮಿಸಲಿದ್ದು, ಅಂದು ಬೆಂಗಳೂರಿನಲ್ಲಿ ರೋಡ್ ಶೋ (road show in Bengaluru) ನಡೆಸಲಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ, "ಪ್ರಧಾನಿ ಅವರು ಏಪ್ರಿಲ್ 29 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅವರು ಶನಿವಾರ ಬೆಂಗಳೂರಿನಲ್ಲಿ 4.5 ಕಿಲೋ ಮೀಟರ್ ಉದ್ದಕ್ಕೂ ರೋಡ್ ಶೋ ನಡೆಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಈ ವರ್ಷ (ಕೇವಲ ನಾಲ್ಕು ತಿಂಗಳಲ್ಲಿ) ಕರ್ನಾಟಕಕ್ಕೆ ಪ್ರಧಾನಿಯವರ 9ನೇ ಭೇಟಿ ಇದಾಗಿದೆ. ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲೇ ರಾಜ್ಯಕ್ಕೆ ಹಲವು ಬಾರಿ ಆಗಮಿಸಿದ್ದ ಪಿಎಂ ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ, ಶಿವಮೊಗ್ಗ ಏರ್ಪೋರ್ಟ್ ಸೇರಿದಂತೆ ಮಹತ್ವದ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಏಪ್ರಿಲ್ 29 ರಿಂದ ಮೇ 7ರ ವರೆಗೆ ಪ್ರಧಾನಿ ಮೋದಿ ಸುಮಾರು 12 ರಿಂದ 15 ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ನಡೆಸಲಿದ್ದಾರೆ. ಏಪ್ರಿಲ್ 30ಕ್ಕೆ ಪ್ರಧಾನಿ ಕೋಲಾರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕವನ್ನು ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಎಂದು ಬಣ್ಣಿಸಿರುವ ಕೇಸರಿ ನಾಯಕರು, ಈ ಬಾರಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ತರಲು ಹರಸಾಹಸ ಪಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಜ್ಯದಾದ್ಯಂತ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಇಂದು ( ಏ 27) ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, “ಇನ್ನೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಇರುತ್ತೇನೆ. ರಾಜ್ಯದಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದನ್ನು ನಾವೆಲ್ಲರೂ ಖಚಿತಪಡಿಸಿಕೊಳ್ಳಬೇಕು. ನಾನು ನಿಮ್ಮ ರಾಜ್ಯದಿಂದಲೇ ನನ್ನ ‘ಮನ್ ಕಿ ಬಾತ್’ನ 100 ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡುತ್ತೇನೆ” ಎಂದು ತಿಳಿಸಿದರು.
“ಹಿಮಾಚಲ ಪ್ರದೇಶದ ಜನರು ಇನ್ನೂ ಕಾಂಗ್ರೆಸ್ ಚುನಾವಣಾ ಭರವಸೆಗಳನ್ನು ಈಡೇರಿಸಲು ಕಾಯುತ್ತಿದ್ದಾರೆ. ಇದೀಗ ರಾಜಸ್ಥಾನದ ಜನರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಂತಹ ಪಕ್ಷವು ಯಾವುದೇ ಅಭಿವೃದ್ಧಿಯನ್ನು ಖಾತರಿಪಡಿಸುವುದಿಲ್ಲ. ಪಕ್ಷವು ಸುಳ್ಳುಗಳಿಂದ ತುಂಬಿದೆ ಮತ್ತು ಅದು ಭ್ರಷ್ಟಾಚಾರವನ್ನು ಮಾತ್ರ ಖಾತರಿಪಡಿಸುತ್ತದೆ, ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸ್ಟಾರ್ ಪ್ರಚಾರಕರು ಇವರೇ ನೋಡಿ
1. ನರೇಂದ್ರ ಮೋದಿ
2. ಜೆಪಿ ನಡ್ಡಾ
3. ರಾಜನಾಥ್ ಸಿಂಗ್
4. ಅಮಿತ್ ಶಾ
5. ನಿತಿನ್ ಗಡ್ಕರಿ
6. ಬಿ ಎಸ್ ಯಡಿಯೂರಪ್ಪ
7. ನಳಿನ್ ಕುಮಾರ್ ಕಟೀಲ್
8. ಬಸವರಾಜ ಬೊಮ್ಮಾಯಿ
9. ಪ್ರಲ್ಹಾದ್ ಜೋಶಿ
10. ಡಿ ವಿ ಸದಾನಂದ ಗೌಡ
11. ಕೆ ಎಸ್ ಈಶ್ವರಪ್ಪ
12. ಗೋವಿಂದ ಕಾರಜೋಳ
13. ಆರ್ ಅಶೋಕ್
14. ನಿರ್ಮಲಾ ಸೀತಾರಾಮನ್
15. ಸ್ಮೃತಿ ಇರಾನಿ
16. ಧರ್ಮೇಂದ್ರ ಪ್ರಧಾನ್
17. ಮನ್ಸುಕ್ ಮಾಂಡವಿಯಾ
18. ಕೆ. ಅಣ್ಣಾಮಲೈ
19. ಅರುಣ್ ಸಿಂಗ್
20. ಡಿ ಕೆ ಅರುಣ
21. ಸಿ ಟಿ ರವಿ
22. ಯೋಗಿ ಆದಿತ್ಯನಾಥ್
23. ಶಿವರಾಜ್ ಸಿಂಗ್ ಚೌಹಾಣ್
24. ಹೇಮಂತ್ ಬಿಸ್ವಾ ಶರ್ಮಾ
25. ದೇವೇಂದ್ರ ಫಡ್ನವಿಸ್
26. ಪ್ರಭಾಕರ್ ಕೋರೆ
27. ಶೋಭ ಕರಂದ್ಲಾಜೆ
28. ಎ ನಾರಾಯಣಸ್ವಾಮಿ
29. ಭಗವಂತ್ ಖೂಬಾ
30. ಅರವಿಂದ್ ಲಿಂಬಾವಳಿ
31. ಶ್ರೀರಾಮುಲು
32. ಕೋಟ ಶ್ರೀನಿವಾಸ ಪೂಜಾರಿ
33. ಬಸನಗೌಡ ಪಾಟೀಲ್ ಯತ್ನಾಳ್
34. ಉಮೇಶ್ ಜಾದವ್
35. ಛಲವಾದಿ ನಾರಾಯಣಸ್ವಾಮಿ
36. ಎನ್ ರವಿಕುಮಾರ್
37. ಜಿ ವಿ ರಾಜೇಶ್
38. ಜಗ್ಗೇಶ್
39. ಶೃತಿ
40. ತಾರಾ ಅನುರಾಧ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.