ಕನ್ನಡ ಸುದ್ದಿ  /  ಕರ್ನಾಟಕ  /  Why Jds Lost: 24 ವರ್ಷದ ನಂತರ ಮತ್ತೊಮ್ಮೆ ಅಸ್ತಿತ್ವ ಉಳಿಸಿಕೊಳ್ಳುವ ಆತಂಕದಲ್ಲಿ ಜೆಡಿಎಸ್, ಎಡವಿದ್ದೆಲ್ಲಿ ನಾಯಕತ್ವ; ರಾಜಕೀಯ ವಿಶ್ಲೇಷಣೆ

Why JDS Lost: 24 ವರ್ಷದ ನಂತರ ಮತ್ತೊಮ್ಮೆ ಅಸ್ತಿತ್ವ ಉಳಿಸಿಕೊಳ್ಳುವ ಆತಂಕದಲ್ಲಿ ಜೆಡಿಎಸ್, ಎಡವಿದ್ದೆಲ್ಲಿ ನಾಯಕತ್ವ; ರಾಜಕೀಯ ವಿಶ್ಲೇಷಣೆ

Political Analysis: ಈಗಿನ ಜೆಡಿಎಸ್ ಸೋಲು ಕುಮಾರಸ್ವಾಮಿ ನಾಯಕತ್ವ ಹಾಗೂ ತಂತ್ರಗಾರಿಕೆಯ ಸೋಲು. ಅಷ್ಟೇ ಅಲ್ಲ, ಸಿದ್ಧಾಂತವನ್ನು ಮರೆತು, ನಿರ್ದಿಷ್ಟ ಪ್ರಾದೇಶಿಕ ಭಾಗಕ್ಕೆ ಹಾಗೂ ಜಾತಿಗೆ ಸೀಮಿತವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ನಿದರ್ಶನ ಕೂಡ ಹೌದು.

ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ತೀರಾ ದೊಡ್ಡ ಮಟ್ಟದ ಹಿನ್ನಡೆ ಆಗಿರುವುದು ಜೆಡಿಎಸ್‌ಗೆ ಹಾಗೂ ಕುಮಾರಸ್ವಾಮಿಗೆ. ಇಪ್ಪತ್ತು ಸ್ಥಾನಗಳಿಗಿಂತ ಕೆಳಗೆ ಕುಸಿಯುವುದರೊಂದಿಗೆ 1999ರ ನಂತರದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ಇದಾಗಿದೆ. ಯಾವ ಜಿಲ್ಲೆಗಳನ್ನು ಜೆಡಿಎಸ್ ನ ಭದ್ರಕೋಟೆ ಎನ್ನಲಾಗುತ್ತಿತ್ತೋ ಅಲ್ಲೆಲ್ಲ ಕಾಂಗ್ರೆಸ್ ರಾರಾಜಿಸುತ್ತಿದೆ. ರಾಮನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸಹ ಗೆಲ್ಲಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ. ಇಂಥ ದುರಿತ ಕಾಲದಲ್ಲೂ ಕುಮಾರಸ್ವಾಮಿ ಅವರ ಅದೃಷ್ಟ ಏನೆಂದರೆ, ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಸ್ವರೂಪ್ ಗೆದ್ದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಕನಿಷ್ಠ ಕುಟುಂಬದ ಒಳಗಾದರೂ ಮರ್ಯಾದೆ ಉಳಿದುಕೊಂಡಿದೆ.

ಈಗಿನ ಜೆಡಿಎಸ್ ಸೋಲು ಕುಮಾರಸ್ವಾಮಿ ನಾಯಕತ್ವ ಹಾಗೂ ತಂತ್ರಗಾರಿಕೆಯ ಸೋಲು. ಅಷ್ಟೇ ಅಲ್ಲ, ಸಿದ್ಧಾಂತವನ್ನು ಮರೆತು, ನಿರ್ದಿಷ್ಟ ಪ್ರಾದೇಶಿಕ ಭಾಗಕ್ಕೆ ಹಾಗೂ ಜಾತಿಗೆ ಸೀಮಿತವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ನಿದರ್ಶನ ಕೂಡ ಹೌದು.

ಮನಸೋ ಇಚ್ಛೆ ಹೇಳಿಕೆ ಕೊಡುವುದು ನಿಲ್ಲಿಸಬೇಕು

ಮತದಾನದ ನಂತರ ಸಹ ಅವರ ಹೇಳಿಕೆ ಅದೆಂಥ ಆಭಾಸದಿಂದ ಇತ್ತು ಅಂದರೆ, ನಮ್ಮ ಷರತ್ತುಗಳನ್ನು ಒಪ್ಪುವಂಥ ಪಕ್ಷಕ್ಕೆ ನಮ್ಮ ಬೆಂಬಲ ಅಂದರು. ಜನಾರ್ದನ ರೆಡ್ಡಿ ಹೇಳಿಕೆ ಸಹ ಹೂಬೇಹೂಬು ಇದೇ ಆಗಿತ್ತು. ರಾಜಕೀಯ ಪಕ್ಷವಾಗಿ ಕುಮಾರಸ್ವಾಮಿ ಅವರಿಗೆ ಯಾವ ಸಿದ್ಧಾಂತ ಇದೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲವಾ? ಬಿಜೆಪಿಯೋ ಕಾಂಗ್ರೆಸ್ಸೋ ಯಾವುದೇ ಪಕ್ಷದ ಜತೆಗಾದರೂ ಹೊಂದಾಣಿಕೆಗೆ ಸಿದ್ಧ ಎಂದರು.

ಟ್ರೆಂಡಿಂಗ್​ ಸುದ್ದಿ

ಚುನಾವಣೆಗೆ ಮುನ್ನ, ಈ ಬಾರಿ ಅಧಿಕಾರಕ್ಕೆ ಬರಲಿಲ್ಲ ಅಂದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುವುದಾಗಿ ಹೇಳಿದ ಕುಮಾರಸ್ವಾಮಿ, ಯಶವಂತಪುರದಲ್ಲಿ ಜೆಡಿಎಸ್‌ನ ಜವರಾಯಿ ಗೌಡ ಸೋತಲ್ಲಿ ರಾಜಕೀಯ ಬಿಟ್ಟುಬಿಡ್ತೀನಿ ಎಂದಿದ್ದರು. ಆದರೆ ಈಗ ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ, ಯಶವಂತಪುರದಲ್ಲಿ ಜವರಾಯಿ ಗೌಡ ಗೆದ್ದಿಲ್ಲ. ಕುಮಾರಸ್ವಾಮಿ ಈಗ ಏನು ಸಮರ್ಥನೆ ಕೊಡುತ್ತಾರೆ? ರಾಜಕಾರಣದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂಬ ಬಗ್ಗೆ ಕುಮಾರಸ್ವಾಮಿ ಮೂಲಕ ಇತರರಿಗೆ ಪಾಠ ಎಂಬಂತೆ ಆಗಿದೆ.

ಸೈದ್ಧಾಂತಿಕವಾಗಿ ಕುಮಾರಸ್ವಾಮಿಯನ್ನು ನಂಬಲು ಆಗಲ್ಲ

ದೇವೇಗೌಡರ ರಾಜಕಾರಣ ಬೇರೆ, ಕುಮಾರಸ್ವಾಮಿಯದು ಬೇರೆ ಎಂಬುದು ಆ ಪಕ್ಷದ ಒಳಗೇ ಕೇಳಿಬರುವ ಮಾತು. ಕುಮಾರಸ್ವಾಮಿ ಅವರನ್ನು ಸೈದ್ಧಾಂತಿಕ ಕಾರಣಗಳಿಗೆ ನಂಬುವುದಕ್ಕೆ ಸಾಧ್ಯವೇ ಇಲ್ಲ. ಯಾರ ಜತೆಗಾದರೂ ಹೊಂದಾಣಿಕೆಗೆ ಸಿದ್ಧ ಎಂಬ ಹೇಳಿಕೆ ನೀಡುವ ಮೂಲಕ ಈ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದರು ಎಚ್ ಡಿಕೆ. ಇನ್ನು ಪಕ್ಷದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಅವರು ಮಾತಿಗೆ ನಿಲ್ಲುವ ಮನುಷ್ಯ ಎಂದೆನಿಸುವುದಕ್ಕೆ ಹೇಗೆ ಸಾಧ್ಯ?

ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ, ಬಹುಮತ ಬರುವಷ್ಟು ಸ್ಥಾನಗಳಲ್ಲಿ ಗೆಲ್ಲುವಷ್ಟು ಸಮರ್ಥ ಅಭ್ಯರ್ಥಿಗಳು ಜೆಡಿಎಸ್‌ಗೆ ಇಲ್ಲ, ಒಕ್ಕಲಿಗ ಸಮುದಾಯವನ್ನು ಮಾತ್ರ ನೆಚ್ಚಿಕೊಂಡು ರಾಜಕಾರಣ ಮಾಡಲಾಗುತ್ತಿದೆ, ಕೆಲವೇ ಜಿಲ್ಲೆಗಳಿಗೆ ಮಾತ್ರ ಪಕ್ಷ ಸೀಮಿತವಾಗಿದೆ, ಜೆಡಿಎಸ್ ನಲ್ಲಿ ಎಲ್ಲ ಸಮುದಾಯಗಳಿಂದಲೂ ಮತ ಸೆಳೆಯುವಂಥ ಸಾಮೂಹಿಕ ನಾಯಕತ್ವ ಇಲ್ಲ, ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಬಹುತೇಕ ದೇವೇಗೌಡರ ಕುಟುಂಬ ಸದಸ್ಯರಿಗೇ ಪ್ರಮುಖ ಸ್ಥಾನಗಳು ದೊರೆಯುತ್ತವೆ. -ಇಷ್ಟೆಲ್ಲ ಮಿತಿ, ಆಕ್ಷೇಪಗಳು ಸೇರಿಕೊಂಡು ಜೆಡಿಎಸ್ ಗೆ ಅತಿ ದೊಡ್ಡ ತಡೆಗೋಡೆಗಳಾಗಿವೆ.

ಮಗನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ

ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದಿರುವ ಕುಮಾರಸ್ವಾಮಿಗೆ ಪಕ್ಕದ ರಾಮನಗರ ಕ್ಷೇತ್ರದಿಂದ ಮಗನನ್ನು ನೆಲ್ಲಿಸಿ, ಗೆಲ್ಲಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಈ ಬಾರಿ. ಜತೆಗೆ ಮಂಡ್ಯ ಜಿಲ್ಲೆಯಲ್ಲೂ ಜೆಡಿಎಸ್ ಪ್ರದರ್ಶನ ಚೆನ್ನಾಗಿಲ್ಲ. ಇದಕ್ಕೆ ಇನ್ನೂ ಒಂದು ಕಾರಣ ಏನೆಂದರೆ, ಪ್ರತಿ ಚುನಾವಣೆಯಲ್ಲೂ ಕುಮಾರಸ್ವಾಮಿ ತಮ್ಮ ಅನಾರೋಗ್ಯದ ವಿಚಾರವನ್ನು ಮುಂದೆ ಮಾಡುತ್ತಾರೆ. ಈ ಬಾರಿ ದೇವೇಗೌಡರ ವಯಸ್ಸು, ಅನಾರೋಗ್ಯವನ್ನು ಸಹ ಜತೆಯಾಯಿತು. ಈ ಸಂಗತಿಗಳ ಮಧ್ಯೆ ಆಡಳಿತ ವಿರೋಧಿ ವಾತಾವರಣದ ಚರ್ಚೆ ನೇಫಥ್ಯಕ್ಕೆ ಸರಿಯಿತು.

ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಅದಕ್ಕೆ ಜೆಡಿಎಸ್ ಆಹಾ ಓಹೋ ಎಂಬಂತೆ ಏನೋ ಸಿದ್ಧತೆ ಆದಂತೆ ಕಾಣುವುದಿಲ್ಲ. ಇನ್ನು ಐದು ವರ್ಷ ಕರ್ನಾಟಕದಲ್ಲಿ ಬಿಜೆಪಿಯೇ ಅಧಿಕೃತ ವಿರೋಧ ಪಕ್ಷವಾಗಿರುತ್ತದೆ. ಸಂಪನ್ಮೂಲ, ಸಶಕ್ತ ಅಭ್ಯರ್ಥಿಗಳು, ಭರವಸೆ ಹುಟ್ಟಿಸುವಂಥ ಬೆಳವಣಿಗೆಗಳು- ಉಹುಂ, ಇವ್ಯಾವೂ ಜೆಡಿಎಸ್ ಕಡೆಯಿಂದ ಕಾಣುತ್ತಿಲ್ಲ. ಪದ್ಮನಾಭ ನಗರದ ದೇವೇಗೌಡರ ಮನೆಯಿಂದ ಈಚೆಗೆ ಜೆಡಿಎಸ್ ನಾಯಕತ್ವ- ನಾಯಕರು ಬೆಳೆದರೆ ಪಕ್ಷಕ್ಕೆ ಉಳಿಗಾಲ. ಇಲ್ಲದಿದ್ದಲ್ಲಿ ವಿಸರ್ಜನೆಯೋ ವಿಲೀನವೋ ಹೀಗೆ ತಾವು ಹೇಳಿದ ಮಾತನ್ನೇ ಕುಮಾರಸ್ವಾಮಿ ನಿಜ ಮಾಡಬೇಕಾದೀತು.

ಬರಹ: ಎಂ.ಶ್ರೀನಿವಾಸ