Siddaramaiah in Varuna: ಯಾವನ್ ರೀ ಅವನು ಪ್ರತಾಪ್ ಸಿಂಹ; ವರುಣಾದಲ್ಲಿ ಸಿದ್ದರಾಮಯ್ಯ ಗುಡುಗು
Siddaramaiah in Varuna: ʻಯಾವನ್ ರೀ ಅವನು ಪ್ರತಾಪ್ ಸಿಂಹ? ಇಲ್ಲಿ ಯಾಕೆ ಬಂದು ಪ್ರಚಾರ ಮಾಡುತ್ತಿದ್ದಾರೆ? ಇದು ಚಾಮರಾಜನಗರ ಲೋಕಸಭಾ ಕ್ಷೇತ್ರʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಚಾಮರಾಜನಗರ: ʻಯಾವನ್ ರೀ ಅವನು ಪ್ರತಾಪ್ ಸಿಂಹ? ಇಲ್ಲಿ ಯಾಕೆ ಬಂದು ಪ್ರಚಾರ ಮಾಡುತ್ತಿದ್ದಾರೆ? ಇದು ಚಾಮರಾಜನಗರ ಲೋಕಸಭಾ ಕ್ಷೇತ್ರʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಚಾಮರಾಜನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಇಲ್ಲಿಗೆ ಬಂದು ಓಡಾಡುತ್ತಿದ್ದಾನೆ. ನನಗ್ಯಾಕೆ ಸೋಲಿನ ಭಯ? ಒಳ ಒಪ್ಪಂದ ಮಾಡಿಕೊಂಡವರು ಬಿಜೆಪಿ ಹಾಗೂ ಜೆಡಿಎಸ್‍ನವರು. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ವರುಣಾ ಕ್ಷೇತ್ರ ಮತದಾರರು ನನಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಆ ಕಾರಣ ಚುನಾವಣೆಯಲ್ಲಿ ಅಂತಹ ವ್ಯತ್ಯಾಸ ಕಾಣಿಸುತ್ತಿಲ್ಲ. 1978 ರಿಂದಲೂ ನಾನು ವರುಣಾ ಹೋಬಳಿ ಪ್ರತಿನಿಧಿಸುತ್ತಿದ್ದೇನೆ. ಇಲ್ಲಿನ ಜನ ನನ್ನ ಮೇಲೆ ಪ್ರೀತಿ ಇರಿಸಿಕೊಂಡಿದ್ದಾರೆ. ಬಿ.ಎಲ್. ಸಂತೋಷ್‍ಗೂ, ವರುಣಾಕ್ಕೂ ಏನು ಸಂಬಂಧ? ಅವರೇನು ಇಲ್ಲಿ ಶಾಸಕರಾಗಿದ್ರಾ? ಯಾವ ತಂತ್ರ ಕುತಂತ್ರನೂ ಕೆಲಸ ಮಾಡಲ್ಲ. ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ ನಾನು ಗೆದ್ದೇ ಗೆಲ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೆಚ್ಚು ದಿನ ಪ್ರಚಾರಕ್ಕೆ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಪ್ರಚಾರ ಮಾಡುವುದು ಅವರ ಕರ್ತವ್ಯ. ಅದನ್ನವರು ಮಾಡುತ್ತಿದ್ದಾರೆ. ನಾನು ಭೂತವೂ ಅಲ್ಲ ಪಿಶಾಚಿಯೂ ಅಲ್ಲ. ನಾನೊಬ್ಬ ಮನುಷ್ಯ. ಸಿದ್ದರಾಮಯ್ಯ ಹಾಗೂ ನಾನು ಜೊತೆಯಲ್ಲಿ ಕೆಲಸ ಮಾಡಿದವರು. ಅವರು ನನಗಿಂತ ದೊಡ್ಡ ನಾಯಕರು. ಅವರು ಪ್ರಚಾರಕ್ಕೆ ಎಷ್ಟು ಬಾರಿಬೇಕಾದರೂ ಬರುತ್ತಾರೆ, ನಾನ್ಯಾಕೆ ಪ್ರಶ್ನೆ ಮಾಡಲಿ. ಅವರು ಬರುವುದರಿಂದ ಮತದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ಲಿಂಗಾಯತ ಡ್ಯಾಂ ಒಡೆದಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರು (ಡಿಕೆಶಿ) ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿ ವೀರಶೈವ, ಲಿಂಗಾಯತರನ್ನು, ಅನ್ಯ ಪಕ್ಷದವರನ್ನು ಒಂದೇ ರೀತಿ ಕಾಣುತ್ತಿದೆ. ಇತಿಹಾಸ ಏನು ಎಂದು ಕಾಂಗ್ರೆಸ್ನವರು ಅರ್ಥ ಮಾಡಿಕೊಳ್ಳಬೇಕು. ಒಳಮೀಸಲಾತಿ ಆಯಿತು, ಲಿಂಗಾಯತರನ್ನು ವಿಭಜಿಸಲು ಮುಂದಾದಿರಿ, ಅದು ಪ್ರಯೋಜನ ನೀಡಲಿಲ್ಲ. ನೀವು ಯಾವುದರಲ್ಲಿ ಯಶಸ್ವಿಯಾದಿರಿ ಎಂದು ಪ್ರಶ್ನಿಸಿದರು.
ವರುಣಾ ಕ್ಷೇತ್ರದಲ್ಲಿ ಈ ಬಾರಿ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ವಿ.ಸೋಮಣ್ಣ ಕಣಕ್ಕಿಳಿದಿದ್ದಾರೆ. ಸೋಮಣ್ಣ ಪರ ಪ್ರಚಾರ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಗ್ರಾಮವೊಂದರ ಜನರು ನಿನ್ನೆ ( ಏ 21) ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಪರ ವಹಿಸಿಕೊಂಡು ಬಂದ ಗ್ರಾಮಸ್ಥರು ಪ್ರತಾಪ್ ಸಿಂಹ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಧು ವರದಿ ಆಗಿದೆ. ಇನ್ನು ಇಂದೂ ಕೂಡ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದ್ದಾರೆ.