ಕನ್ನಡ ಸುದ್ದಿ  /  Karnataka  /  Karnataka Assembly Polls,: Congress First List Release On March 17- Siddaramaiah

Karnataka Assembly Polls: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್‌ 17ರಂದು ಬಿಡುಗಡೆ ಸಾಧ್ಯತೆ: ಸಿದ್ದರಾಮಯ್ಯ

ಈ ಬಾರಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಲು ಬಯಸಿದೆ. ಅಭ್ಯರ್ಥಿಗಳ ಆಯ್ಕೆಯಲ್ಲೂ ಗೆಲುವಿನ ಮಾನದಂಡವನ್ನಷ್ಟೇ ಪರಿಗಣಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Karnataka Polls: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್‌ 17ರಂದು ಬಿಡುಗಡೆ
Karnataka Polls: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್‌ 17ರಂದು ಬಿಡುಗಡೆ

ದಾವಣಗೆರೆ: ಕಾಂಗ್ರೆಸ್‌ ಪಕ್ಷದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಯಾವಾಗ ಪ್ರಕಟಗೊಳ್ಳಲಿದೆ ಎಂದು ಕಾಂಗ್ರೆಸ್‌ನ ಹಲವು ಲೀಡರ್‌ಗಳು ಕಾಯುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಮಾರ್ಚ್‌ 20ರಂದು ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎನ್ನಲಾಗಿತ್ತು. ಇದೀಗ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಇದೇ ಮಾರ್ಚ್‌ 17ರಂದು ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುವ ಸೂಚನೆ ನೀಡಿದ್ದಾರೆ.

ಈ ಬಾರಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಲು ಬಯಸಿದೆ. ಅಭ್ಯರ್ಥಿಗಳ ಆಯ್ಕೆಯಲ್ಲೂ ಗೆಲುವಿನ ಮಾನದಂಡವನ್ನಷ್ಟೇ ಪರಿಗಣಿಸಲಾಗಿದೆ. "ಗೆಲುವಿನ ಸಾಧ್ಯತೆಯೇ ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಿದ ಮಾನದಂಡವಾಗಿದೆ. ಮಾರ್ಚ್‌ 17ರಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯಲಿದೆ. ಅಂದೇ, ಮೊದಲ ಹಂತದ ಪಟ್ಟಿ ಪ್ರಕಟವಾಗಬಹುದು" ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಈಗಾಗಲೇ ರಾಜ್ಯ ಕಾಂಗ್ರೆಸ್‌ನ ಪರಿಶೀಲನಾ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲನೆ ನಡೆಸಿದೆ.ಇದನ್ನು ಕೇಂದ್ರ ಚುನಾವಣಾ ಸಮಿತಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

‘ಮಾ.16 ರಂದು ಇಲ್ಲಿ ಒಂದು ಸಭೆ ಕರೆದಿದ್ದು, ಮಾ.17ರಂದು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಅಂತಿಮ ತೀರ್ಮಾನವಾಗಲಿದೆ’ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿಯ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್‌ ಹೇಳಿದ್ದರು.

ಟಿಕೆಟ್‌ಗಾಗಿ 1230 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ತಯಾರಿಸಿದೆ. ಇದರಲ್ಲಿ ಇನ್ನೊಂದಿಷ್ಟು ಜನರನ್ನು ತೆಗೆಯುವ ಅಥವಾ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಕಾಂಗ್ರೆಸ್‌ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ರಾಜ್ಯದ ವಿವಿಧೆಡೆ ಅಸಮಾಧನ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಸಾಕಷ್ಟು ಮುಖಂಡರು ಈ ಬಾರಿಯಾದರೂ ಟಿಕೆಟ್‌ ದೊರಕಲೆಂದು ಕಾಯುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಹಲವು ವರ್ಷದಿಂದ, ದಶಕಗಳಿಂದ ಟಿಕೆಟ್‌ಗಾಗಿ ಕಾಯುವವರು ಇದ್ದಾರೆ.

ಮಾರ್ಚ್‌ 16 ಮತ್ತು ಮಾರ್ಚ್‌ 17ರಂದು ನಡೆಯುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಾ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮುಂತಾದವರು ಭಾಗವಹಿಸಲಿದ್ದಾರೆ.

ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಮೋಹನ್‌ ಪ್ರಕಾಶ್‌ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ಪರಿಶೀಲಿಸಿದೆ. ಈ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ತನ್ನದಾಗಿಸಿಕೊಂಡಿತ್ತು. ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷವು 78 ಸೀಟು ಗೆದ್ದಿತ್ತು. ಜೆಡಿಎಸ್‌ 37 ಸೀಟು ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಈ ಬಾರಿ ರಾಜ್ಯದಲ್ಲಿ ಕನಿಷ್ಠ 150 ಸೀಟು ಗೆಲ್ಲಬೇಕು ಎಂದು ಕಾಂಗ್ರೆಸ್‌ ಬಯಸಿದೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಜೆಡಿಎಸ್‌ ಕೂಡ ಈಗಾಗಲೇ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

IPL_Entry_Point