ಕನ್ನಡ ಸುದ್ದಿ  /  Karnataka  /  Karnataka Assembly Result Analysis Why Jds Lost In Karnataka Future Of Hd Kumaraswamy Political News In Kannada Dmg

Why JDS Lost: ನುಚ್ಚುನೂರಾದ ಎಚ್‌ಡಿ ಕುಮಾರಸ್ವಾಮಿ ಕನಸು; ಜೆಡಿಎಸ್‌ ಸೋಲಿಗಿದೆ ಹತ್ತಾರು ಕಾರಣ- ರಾಜಕೀಯ ವಿಶ್ಲೇಷಣೆ

Political Analysis: ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ಆಡಳಿತ ವಿರೋಧ ಅಲೆ ಎಂಬುದೇನೂ ಇರುವುದಿಲ್ಲ. ಕಾರಣ ಅವರು ರೈತರನ್ನು ಮುಖ್ಯವಾಗಿಟ್ಟುಕೊಂಡು ಮಾಡುವ ಪ್ರಮುಖ ಕೆಲಸಗಳು ನೆನಪಿನಲ್ಲೇನೋ ಉಳಿಯುತ್ತವೆ.

ಜೆಡಿಎಸ್ ನಾಯಕರಾದ ಎಚ್‌ಡಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಎಚ್‌ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕರಾದ ಎಚ್‌ಡಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ವಿಧಾನಸೌಧದ ಮೂರನೇ ಮಹಡಿಯ ಕನಸು ಕಾಣುತ್ತಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಕನಸು ನುಚ್ಚು ನೂರಾಗಿದೆ. ಜೆಡಿಎಸ್ (JDS) ಎಂದರೆ ಅದು ಕನ್ನಡಿಗರ ಪ್ರಾದೇಶಿಕ ಪಕ್ಷವಾಗುವ ಅವಕಾಶಗಳನ್ನು ಬದಿಗೊತ್ತಿ, ಕುಟುಂಬದ ಪಕ್ಷವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪಗಳಿಗೆ ಈ ಚುನಾವಣೆ ಮತ್ತಷ್ಟು ನೀರು, ಗೊಬ್ಬರ ಹಾಕಿ ಸಾಬೀತುಪಡಿಸಿದಂತೆ ಕಾಣುತ್ತಿದೆ. ಹೌದು, ಜೆಡಿಎಸ್ ಎಂದರೆ ಹಾಗೆ. ಪಕ್ಷಕ್ಕಾಗಿ ಎಲ್ಲವನ್ನೂ ಅರ್ಪಿಸಿಕೊಂಡು ಕೆಲಸ ಮಾಡುವ ಪಡೆ ಇಲ್ಲಿ ಕಡಿಮೆಯೇ. ಅದಕ್ಕೆ ಕಾರಣ ಹೊಸತೇನೂ ಇಲ್ಲ. ಯಾರು ಎಷ್ಟೇ ಕೆಲಸ ಮಾಡಿದರೂ ಅಂತಿಮ ನಿರ್ಧಾರ ಮಾತ್ರ ಪದ್ಮನಾಭನಗರದಿಂದಲೇ ಹೊರಡುವುದು. ಹೀಗಾಗಿ ಪಕ್ಷವೇ ಮನೆಯೆಂದು ಕೆಲಸ ಮಾಡಿದ ಅನೇಕರು ಪಕ್ಷ ಬಿಟ್ಟು ಹೊರನಡೆದಿದ್ದಾರೆ. ಬೇರೆ ಕಡೆ ನೆಲೆ ಇಲ್ಲದೆ ಇಲ್ಲಿ ಬಂದು ಆಶ್ರಯ ಪಡೆದವರಿಗೆ ಅದು ಎಂದೂ ಸ್ವಂತ ಮನೆಯಾಗಿ ಕಂಡಿದ್ದಿಲ್ಲ.

ಅಧಿಕಾರದಲ್ಲಿ ಇರುವ ಪಕ್ಷ ತನ್ನ ದುರಾಡಳಿತದಿಂದಲೋ ಅಥವಾ ಆಡಳಿತ ವಿರೋಧಿ ಅಲೆಯಿಂದಲೋ ಅಧಿಕಾರ ಕಳೆದುಕೊಳ್ಳುವುದು, ಕಡಿಮೆ ಸ್ಥಾನಗಳನ್ನು ಪಡೆಯುವುದು ಸಹಜ. ಆದರೆ, ಜೆಡಿಎಸ್‌ ಪರಿಸ್ಥಿತಿ ಹಾಗಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ ಸಹ, ಕಾಂಗ್ರೆಸ್ ಬಾಹ್ಯ ಬೆಂಬಲದಿಂದಾಗಿ ಕೇವಲ 38 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ಆಡಳಿತ ವಿರೋಧ ಅಲೆ ಎಂಬುದೇನೂ ಇರುವುದಿಲ್ಲ. ಕಾರಣ ಅವರು ರೈತರನ್ನು ಮುಖ್ಯವಾಗಿಟ್ಟುಕೊಂಡು ಮಾಡುವ ಪ್ರಮುಖ ಕೆಲಸಗಳು ನೆನಪಿನಲ್ಲೇನೋ ಉಳಿಯುತ್ತವೆ. ಅದೇ ರೀತಿ ಕಳೆದ ಬಾರಿ ರೈತರ ಸಾಲ ಮನ್ನಾ ಮಾಡಿದ್ದರೂ ಅನ್ನದಾತ ಇನ್ನೂ ಮರೆತಿಲ್ಲ. ಆದರೆ, ಕೆಲವೇ ದಿನಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಕೆಲವು ಶಾಸಕರು ಆಪರೇಷನ್ ಕಮಲಕ್ಕೆ ಸಿಲುಕಿ ಬಿಜೆಪಿ ತೆಕ್ಕೆಗೆ ಜಾರಿದ್ದರಿಂದ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಆ ಬಳಿಕ ಕುಮಾರಸ್ವಾಮಿಯವರ ರಾಜಕೀಯ ನಡೆ ಮತ್ತೆ ಪಕ್ಷವನ್ನು ಕಟ್ಟುವುದರ ಕಡೆ ಇರಲಿಲ್ಲ ಎಂಬುದು ಅಷ್ಟೇ ನಿಚ್ಚಳ. ತಮ್ಮನ್ನು ಅಧಿಕಾರದಿಂದ ಕಿತ್ತಿದ್ದೇ ಸಿದ್ದರಾಮಯ್ಯ ಎಂದು ನೇರ ವಾಗ್ವಾದಕ್ಕೆ ಇಳಿದರು. ಹೋದಲ್ಲಿ, ಬಂದಲ್ಲಿ ಸಿದ್ದರಾಮಯ್ಯ ವಿರುದ್ಧ ಧಾರಾಕಾರ ಆರೋಪಗಳನ್ನು ಮಾಡಿದರು. ಇದು ಜೆಡಿಎಸ್‌ ಬಗ್ಗೆ ಒಂದಷ್ಟು ಜನ ಹಿಮ್ಮುಖವಾಗುವುದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಪಂಚರತ್ನ ರಥಯಾತ್ರೆ

ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಆರೆಂಟು ತಿಂಗಳು ಬಾಕಿ ಇರುವಾಗಲೇ ಮೈಕೊಡವಿಕೊಂಡು ಎದ್ದವರು ಕುಮಾರಣ್ಣ. ಪಂಚರತ್ನ ರಥಯಾತ್ರೆ ಆರಂಭಿಸುವ ಮೂಲಕ ರಾಜ್ಯದಲ್ಲಿ ಸುತ್ತಾಟ ಆರಂಭಿಸಿದರು. ಪಕ್ಷವನ್ನು ಮತ್ತೆ ಸಂಘಟನೆ ಮಾಡಲು ಮುಂದಾದರು. ಕಾಂಗ್ರೆಸ್‌ನಲ್ಲಿದ್ದ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ಗೆ ಕರೆತಂದು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಅಲ್ಪಸಂಖ್ಯಾತರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು.

ಸುಮಾರು ಮೂರ್ನಾಲ್ಕು ತಿಂಗಳ ಕಾಲ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಿದರು. ಕುಮಾರಸ್ವಾಮಿ ಅವರು ಪ್ರವಾಸ ಮಾಡಿದ ಕಡೆಗಳಲ್ಲಾ ಕಣ್ಣುಕುಕ್ಕುವ ರೀತಿಯಲ್ಲಿ ಜನ ನರೆಯುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಇದು ಜೆಡಿಎಸ್‌ಗೆ ಬಲ ತುಂಬುವ ಕೆಲಸವೇ ಆಗಿತ್ತು ಎಂಬುದರಲ್ಲಿ ಅನುಮಾನವಿಲ್ಲ.

ಕಳೆದ ಡಿಸೆಂಬರ್‌ನಲ್ಲಿಯೇ ಜೆಡಿಎಸ್‌ನಿಂದ ಸುಮಾರು 90ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಚುನಾವಣೆಗೆ ಅಣಿಗೊಳಿಸಿದರು. ಆಗ ಇದ್ದ ಜೆಡಿಎಸ್ ಅಲೆಯನ್ನು ನೋಡಿದರೆ ಈ ಬಾರಿ ಜೆಡಿಎಸ್‌ ಸುಮಾರು 50 ಸೀಟುಗಳನ್ನು ದಾಟುವುದು ನಿಚ್ಚಳ ಎಂಬ ಮಾತುಗಳು ಕೇವಲ ಜೆಡಿಎಸ್ ಮಾತ್ರವಲ್ಲ, ಇತರೆ ಪಕ್ಷಗಳ ಪಡಸಾಲೆಗಳಲ್ಲೂ ಚರ್ಚೆಯಾಗುತ್ತಿತ್ತು.

ಕುಟುಂಬ ರಾಜಕಾರಣವೇ ಪೆಟ್ಟು

ಕಳೆದ ಚುನಾವಣೆಯಲ್ಲಿ 38 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ 19ಕ್ಕೆ ಇಳಿಕೆಯಾಗುವ ಮೂಲಕ ಅರ್ಧಕ್ಕರ್ಧ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದರೆ ಅದಕ್ಕೆ ರಾಜ್ಯದ ಜನ ಹೊಣೆಗಾರರು ಅಲ್ಲ. ಬದಲಿಗೆ ಅವರ ಕುಟುಂಬ ರಾಜಕಾರಣವೇ ಎಂಬುದರಲ್ಲಿ ಪಕ್ಷದ ಕಾರ್ಯಕರ್ತನಿಂದ ಹಿಡಿದು ಎಲ್ಲರೂ ಆಡಿಕೊಳ್ಳುವ ಮಾತಾಗಿದೆ. ಮುಖ್ಯವಾಗಿ ಹಾಸನ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಹಗ್ಗ ಜಗ್ಗಾಟ ಕಾರ್ಯಕರ್ತನ ಹುಮ್ಮಸ್ಸನ್ನು ಘಾಸಿಗೊಳಿಸಿತು. ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಹಾಸನ ಟಿಕೆಟ್‌ಗೆ ಪಟ್ಟು ಹಿಡಿದರು. ಇದು ಕುಟುಂಬದಲ್ಲಿ ಇನ್ನಿಲ್ಲದಂತೆ ಅಸಮಾಧಾನ ಉಂಟು ಮಾಡಿತು.

ಒಂದೇ ಕುಟುಂದಬ ಮೂರು ಮನೆಗಳು ಅಂದರೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ನಿವಾಸ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಿವಾಸ ಮತ್ತು ಹಾಸನದಲ್ಲಿ ರೇವಣ್ಣನವರ ನಿವಾಸ ಹೀಗೆ ಮೂರು ಕಡೆ ಕೇಳಿಬರುತ್ತಿದ್ದ ಭಿನ್ನ ಮಾತುಗಳು ಕಾರ್ಯಕರ್ತನನ್ನು ಗೊಂದಲಕ್ಕೆ ಈಡು ಮಾಡಿತು. ಇಲ್ಲಿ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ನೀಡುವುದು ಕುಮಾರಸ್ವಾಮಿ ಬಯಕೆ ಆಗಿದ್ದರೆ, ಭವಾನಿ ರೇವಣ್ಣ ತಮಗೇ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದರು.

ಕೊನೆಗೆ ದೇವೇಗೌಡರು ಇದೇ ಚಿಂತೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಕೆಲ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಬಳಿಕ ಗುಣಮುಖರಾಗಿ ಮನೆಗೆ ಬಂದರು. ಆ ವೇಳೆಗಾಗಲೇ ಪಕ್ಷಕ್ಕೆ ಹಿನ್ನಡೆ ಆಗುತ್ತಿರುವುದನ್ನು ಅರಿತ ದೇವೇಗೌಡರು ಭವಾನಿ ರೇವಣ್ಣ ಅವರನ್ನು ಸಮಾಧಾನಪಡಿಸಿ, ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡುವ ಸೂಚನೆ ನೀಡಿದರು. ಅದರಂತೆ ಮತ್ತೆ ಎಲ್ಲರೂ ಒಗ್ಗಟ್ಟಾಗಿ ಹಾಸನದಲ್ಲಿ ಸ್ವರೂಪ್ ಪ್ರಕಾಶ್ ಗೆಲುವಿಗೆ ಶ್ರಮಿಸಿದರಾದರೂ ಆ ವೇಳೆಗಾಗಲೇ ಪಕ್ಷಕ್ಕೆ ಎಷ್ಟು ಹಾನಿಯಾಗಬೇಕಿತ್ತೋ ಅಷ್ಟು ಹಾನಿಯಾಗಿತ್ತು.

ಹಳೆಯ ಮೈಸೂರು ಭಾಗವೇ ಜೆಡಿಎಸ್‌ಗೆ ಭದ್ರ ನೆಲೆ. ಆದರೆ, ಈ ಚುನಾವಣೆಯಲ್ಲಿ ಇಲ್ಲಿಯೇ ತನ್ನ ಅಸ್ತಿತ್ವವನ್ನು ಅರ್ಧದಷ್ಟು ಕಳೆದುಕೊಂಡಿದೆ. ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ವಲ್ಪ ಮಟ್ಟಿನ ಪ್ರಯಾಸದಿಂದಲೇ ಗೆದ್ದು ಬಂದಿದ್ದಾರೆ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಲ್ಲಿನ ಮತದಾರ ಸೋಲಿನ ರುಚಿ ತೋರಿಸಿದ್ದಾನೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಗೆಲುವು ದಕ್ಕಿಲ್ಲ.

ಇನ್ನು ಉತ್ತರ ಕರ್ನಾಟಕ ಜೆಡಿಎಸ್‌ನ ಮತ್ತೊಂದು ನೆಲೆ. ಅಲ್ಲಿ, ಮತ್ತೆ ಗೆಲ್ಲುವುದು ಒಂದು ಕಡೆಯಾದರೆ ಕೆಲವೆಡೆ ಇದ್ದ ಸೀಟುಗಳೇ ಕೈತಪ್ಪಿ ಹೋಗಿವೆ. ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ಮತ್ತು ಮಾನ್ವಿ ಕ್ಷೇತ್ರಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರೆ, ದೇವದುರ್ಗದಲ್ಲಿ ಮಾತ್ರ ಹೊಸದಾಗಿ ಜಯಗಳಿಸಿದೆ. ಯಾದಗಿರಿಯಲ್ಲಿ ಒಂದು ಸ್ಥಾನ ಮಾತ್ರ ಪಡೆದುಕೊಂಡಿದೆ. ಪಕ್ಷಾಂತರದಿಂದ ಮತ್ತೆ ಜೆಡಿಎಸ್‌ಗೆ ಬಂದಿದ್ದ ಕಡೂರಿನ ವೈ.ಎಸ್‌.ವಿ. ದತ್ತಾ (ಮೊದಲು ಜೆಡಿಎಸ್‌ನಲ್ಲೇ ಇದ್ದವರು), ಚಿತ್ರದುರ್ಗದ ರಘು ಆಚಾರ್, ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಸಹಿತ ಹಲವರು ಸೋಲು ಕಂಡಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹೀಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಪಕ್ಷಗಳಾಗಿ ಆಡಳಿತ ನಡೆಸುತ್ತಿವೆ. ಕರ್ನಾಟಕದಲ್ಲಿಯೂ ಸಹ ಜೆಡಿಎಸ್‌ಗೆ ಅಂತಹ ಅವಕಾಶಗಳು ಇದ್ದರೂ ಸಹ ಕುಟುಂಬ ರಾಜಕಾರಣ, ನಾಯಕರ ಮೆಲಿನ ಅಪನಂಬಿಕೆಗಳು ಹೀಗೆ ಮುಂತಾದ ಕಾರಣಗಳಿಂದ ಜೆಡಿಎಸ್‌ ತನ್ನ ಅವಕಾಶವನ್ನು ತಾನೇ ಕೈಚೆಲ್ಲಿಕೊಂಡಿದೆ.