ಶಂಕರ್‌ನಾಗ್ ಜಯಂತಿ ಚಾಲಕರ ದಿನವಾಗಲಿ; ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ ಆಟೋ ಚಾಲಕರ ಸಂಘಗಳು
ರಿಕ್ಷಾ ಚಾಲಕರಿಗೂ ಮೇರುನಟ ದಿವಂಗತ ಶಂಕರ್‌ನಾಗ್ ಅವರಿಗೂ ಭಾವನಾತ್ಮಕ ನಂಟು. ಹೀಗಾಗಿ ಅವರ ಜಯಂತಿಯನ್ನು ಚಾಲಕರ ದಿನ ಎಂದು ಅಧಿಕೃತವಾಗಿ ಘೋಷಿಸಬೇಕು. ಸರ್ಕಾರಿ ಕಾರ್ಯಕ್ರಮ ನಡೆಸಬೇಕು ಎಂದು ಆಟೋ ಚಾಲಕರ ಸಂಘಗಳು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿವೆ.
ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ ದಿವಂಗತ ಶಂಕರ್ ನಾಗ್ ಜಯಂತಿಯನ್ನು “ಚಾಲಕರ ದಿನ” ಎಂದು ಅಧಿಕೃತವಾಗಿ ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿ ಪೀಸ್‌ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ ನೊಂದ ಚಾಲಕರ ವೇದಿಕೆ ಸದಸ್ಯರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಚಾಲಕರ ಸ್ಪೂರ್ತಿಯ ಚಿಲುಮೆ ಶಂಕರ್‌ನಾಗ್ ಅವರ ಜನ್ಮದಿನವನ್ನು "ಚಾಲಕರ ದಿನ"ವನ್ನಾಗಿ ಸರ್ಕಾರ ಅಧಿಕೃತವಾಗಿ ಘೋಷಿಸಿ ಆಚರಿಸಬೇಕು. ಶಂಕರ್‌ನಾಗ್ ಅವರೊಂದಿಗೆ ಎಲ್ಲಾ ಚಾಲಕರು ಅವಿನಾಭಾವ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಶಂಕರ್‌ನಾಗ್ ಅವರ ಜನ್ಮದಿನವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಆಚರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
11ನೇ ವರ್ಷದ ಚಾಲಕರ ದಿನ ಆಚರಣೆ
ಮೇರುನಟ, ದಿವಂಗತ ಶಂಕರ್‌ನಾಗ್ ಅವರ ಜಯಂತಿ ನಿಮಿತ್ತವಾಗಿ ಪೀಸ್‌ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ ನೊಂದ ಚಾಲಕರ ವೇದಿಕೆ ಶನಿವಾರ (ನವೆಂಬರ್ 9) ಜಯನಗರದ ಶಾಲಿನಿ ಮೈದಾನದಲ್ಲಿ 11ನೇ ವರ್ಷದ ಚಾಲಕರ ದಿನ ಆಯೋಜಿಸಲಾಗಿತ್ತು. ಇದನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಚಿತ್ರನಟ ಮುರುಳಿ, ನಟ ಗರುಡ ರಾಮ್ ಕೂಡ ಜೊತೆಯಾಗಿದ್ದರು.
ಬೆಂಗಳೂರಿನಲ್ಲೇ ೩ ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿವೆ. ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ. ಆಟೋ ಚಾಲಕರ ಸೇವೆ ಶ್ಲಾಘನೀಯ. ಶಂಕರ್‌ನಾಗ್ ಇಂದಿಗೂ ಆಟೋ ಚಾಲಕರ ಅತ್ಯಂತ ಪ್ರಿಯ, ಸ್ಪೂರ್ತಿದಾಯಕ ವ್ಯಕ್ತಿ. ಇವರ ಜೀವನಾದರ್ಶದಂತೆ ಇನ್ನಷ್ಟು ಉತ್ತಮ ಸೇವೆಯನ್ನು ಚಾಲಕರು ನೀಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸ್ವಂತ ಆಟೋ ಖರೀದಿಗೆ ಮಹಿಳೆಯರಿಗೆ ನೆರವು
ಪೀಸ್ ಆಟೋ ಪ್ರತಿವರ್ಷ ಶಂಕರ್‌ನಾಗ್ ಜನ್ಮದಿನದಂದು ಚಾಲಕರ ದಿನ ಆಚರಿಸುತ್ತ, ಆಟೋಚಾಲಕರಿಗೆ ಹಲವು ನೆರವು ನೀಡುತ್ತ ಬಂದಿದೆ. ಇದುವರೆಗೆ ಒಬ್ಬರಿಗೆ ಉಚಿತ ಆಟೋ ನೀಡುತ್ತಿದ್ದವರು ಈ ವರ್ಷ ಇಬ್ಬರಿಗೆ ಉಚಿತ ಆಟೋ ನೀಡಿದ್ದಾರೆ. ಈ ಬಾರಿ ೩೦೦ ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿದ್ದು, ಈ ಮಹಿಳೆಯರು ಸ್ವತಃ ಆಟೋ ಖರೀದಿಗೆ ಹಣಕಾಸಿನ ನೆರವು ಸಹ ಇದೇ ವೇಳೆ ನೀಡಲಾಯಿತು. ಚಾಲನಾ ವೃತ್ತಿಯಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಆಯ್ದ ಚಾಲಕರಿಗೆ ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು. ಇನ್ನು, ಬಡ ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಪೀಸ್-ಆಟೋ ಅಧ್ಯಕ್ಷ ರಘು ನಾರಾಯಣ ಗೌಡ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್ ಅಧ್ಯಕ್ಷ ಮಂಜುನಾಥ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್ ಅಧ್ಯಕ್ಷ ಜಿ. ರವಿ ಕುಮಾರ್ , ಜೈ ಭಾರತ ವಾಹನ ಚಾಲಕರ ಸಂಘದ ಅಧ್ಯಕ್ಷ ಚಂದ್ರ ಕುಮಾರ್, ನೊಂದ ಚಾಲಕರ ವೇದಿಕೆ ರಾಜು, ಜೈ ಕರ್ನಾಟಕ ಅಧ್ಯಕ್ಷ ಆನಂದ್, ಬೆಂಗಳೂರು ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಪೂಜಾರಿ ಸೇರಿ ಹಲವರು ಪಾಲ್ಗೊಂಡಿದ್ದರು.