ಅಕ್ರಮ ಆಸ್ತಿಗಳಿಗೆ ಬಿ ಖಾತಾ, ಇಂದಿನಿಂದ 3 ತಿಂಗಳು ಅಭಿಯಾನ, ಈ ಅವಕಾಶ ಮುಂದೆ ಇರಲ್ಲ ಎಂದ ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಅಕ್ರಮ ಆಸ್ತಿಗಳಿಗೆ ಬಿ ಖಾತಾ ವಿತರಿಸುವ ಅಭಿಯಾನ ಇಂದಿನಿಂದ ಮೂರು ತಿಂಗಳು ನಡೆಯಲಿದೆ. ಈ ಅಭಿಯಾನ ಮುಂದೆ ಇರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಏನಿದು ಅಭಿಯಾನ- ಯಾರಿಗೆ ಲಾಭ ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ನಿಯಮ ಬಾಹಿರವಾಗಿ ಕಂದಾಯ ಭೂಮಿಯಲ್ಲೇ ನಿರ್ಮಿಸಿದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡ ಬಡ, ಮಧ್ಯಮ ವರ್ಗದವರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಇಂದಿನಿಂದ (ಫೆ 19) ಮೂರು ತಿಂಗಳ ಒಳಗೆ ಅಂತಹ ಆಸ್ತಿಗಳಿಗೆ ಬಿ ಖಾತಾ ಪಡೆಯವುದಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಅವಕಾಶ ಮುಂದೆ ಇರಲ್ಲ, ಕೇವಲ ಮೂರು ತಿಂಗಳಿಗೆ ಮಾತ್ರ ಸೀಮಿತ ಎಂದು ಅವರು ನಿನ್ನೆ (ಫೆ 18) ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು, ಯೋಜನಾ ನಿರ್ದೇಶಕರು ಹಾಗೂ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಜತೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ವೇಳೆ ಸ್ಪಷ್ಟಪಡಿಸಿದರು.
ಅನಧಿಕೃತ ಬಡಾವಣೆಗಳಿಗೆ ಕಡಿವಾಣ; ಇಂದಿನಿಂದ 3 ತಿಂಗಳು ಬಿ ಖಾತಾ ಅಭಿಯಾನ
ಕಂದಾಯ ಜಾಗವೂ ಸೇರಿ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿದ ನಿವೇಶನ, ಮನೆಗಳಿಗೆ ಬಿ– ಖಾತಾ ನೀಡುವ ಅಭಿಯಾನಕ್ಕೆ ತಕ್ಷಣವೇ ಚಾಲನೆ ನೀಡಬೇಕು (ಫೆ.19ರಿಂದ) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸೂಚಿಸಿದರು.
ಅರಣ್ಯ ಸಚಿವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯ ವರದಿ ಆಧರಿಸಿ ಕಾನೂನು ರೂಪಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅನಧಿಕೃತ, ರೆವಿನ್ಯೂ ಬಡಾವಣೆಗಳು ಹಾಗೂ ಆಸ್ತಿಗಳಿಗೆ ನಾಗರೀಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದ್ದರಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ಸಂದಾಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ದಿಸೆಯಲ್ಲಿ ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ಇನ್ನು 3 ತಿಂಗಳಲ್ಲಿ ಬಿ ಖಾತಾ ನೀಡುವಂತೆ ಸೂಚನೆ ನೀಡಲಾಗಿದೆ. ರಾಜ್ಯದ ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಅನಧಿಕೃತ ಬಡಾವಣೆಗಳಿದ್ದು, ಇವೆಲ್ಲಕ್ಕೂ ನಾವು ಅಂತ್ಯ ಹಾಡುತ್ತಿದ್ದೇವೆ. ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಹಾಗೂ ಹಳ್ಳಿಗಳಲ್ಲೂ ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ. ಇಂತಹ ಬಡಾವಣೆಗಳಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲು ಕಾಯ್ದೆಯ ಮೂಲಕ ‘ಬಿ’ ಖಾತಾ ಅಭಿಯಾನ ಆರಂಭಿಸಲಾಗಿದೆ. ಅಭಿಯಾನ ಪೂರ್ಣಗೊಂಡ ನಂತರ ಅನಧಿಕೃತ ಬಡಾವಣೆಗಳಿಗೆ ಅವಕಾಶ ಇಲ್ಲ ಎಂದು ತಾಕೀತು ಮಾಡಿದರು.
ಬಿ ಖಾತಾ ಅಭಿಯಾನ ನಡೆಸುವಾಗ ಮಧ್ಯವರ್ತಿಗಳಿಗೆ ಅವಕಾಶ ಬೇಡ
ಕರ್ನಾಟಕದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು. ಈ ಕಾಯ್ದೆಯ ದೂರದೃಷ್ಟಿಯನ್ನು ಅಧಿಕಾರಿಗಳೆಲ್ಲರೂ ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯ ಅನಧಿಕೃತ , ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಬೋಕರ್‌ಗಳು, ಮಧ್ಯವರ್ತಿಗಳಿಗೆ ತಕ್ಷಣ ಗೇಟ್ ಪಾಸ್ ನೀಡಬೇಕು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ, ಭೂಪರಿವರ್ತನೆ ಮಾಡಿಕೊಳ್ಳದೆ ಕಂದಾಯ ಭೂಮಿಯಲ್ಲೇ ನಿವೇಶನ ರಚಿಸಿ, ಮಾರಾಟ ಮಾಡುವ ‘ಭೂ ದಂಧೆ’ಗೂ ಇನ್ನು ಕಡಿವಾಣ ಬೀಳಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಗರ, ಪಟ್ಟಣ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಆಯಾ ವಿಭಾಗದ ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮವಾಗಿ ಇಂತಹ ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಭೂ ಪರಿವರ್ತನಾ ಶುಲ್ಕ, ನೋಂದಣಿ, ಮುದ್ರಾಂಕ ಶುಲ್ಕವನ್ನೂ ವಂಚಿಸಿದ್ದು, ವಾರ್ಷಿಕ ಮನೆ ಕಂದಾಯ, ನಿವೇಶನ ಕಂದಾಯವೂ ನಷ್ಟವಾಗುವಂತೆ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಈ ನಿರ್ಧಾರದಿಂದಾಗಿ ಇದುವರೆಗೂ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹೊಂದಿದವರಿಗೆ ಸರ್ಕಾರದ ದಾಖಲೆಯೊಂದು ಲಭ್ಯವಾಗಲಿದೆ.