ಮಾ 22 ಕರ್ನಾಟಕ ಬಂದ್ ಎನ್ನುತ್ತಿವೆ ಕನ್ನಡ ಪರ ಸಂಘಟನೆಗಳು, ಬಂದ್‌ಗೆ ಅವಕಾಶ ಇಲ್ಲ ಎಂದಿದೆ ಸರ್ಕಾರ, ಪರೀಕ್ಷೆ ನಡೆಯುತ್ತ, ಏನಾಗಬಹುದು
Karnataka Bandh: ಮರಾಠಿಗರ ಪುಂಡಾಟಿಕೆ ಖಂಡಿಸಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಾಳೆ (ಮಾರ್ಚ್ 22) ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಸರ್ಕಾರ ಬಂದ್‌ಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ಶಾಲೆ ಇರುತ್ತಾ, ಇಲ್ವಾ, ಏನಾಗಬಹುದು ಎಂಬ ಗೊಂದಲ ಸೃಷ್ಟಿಯಾಗಿದೆ. ಇಲ್ಲಿದೆ ಕರ್ನಾಟಕ ಬಂದ್ ಕುರಿತ ಇನ್ನಷ್ಟು ವಿವರ.

ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ, ಕನ್ನಡಿಗರಿಗೆ ಉದ್ಯೋಗ ಕಾಯ್ದೆ, ನೀರಾವರಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಕನ್ನಡ ಒಕ್ಕೂಟ ಮಾರ್ಚ್ 22 ರಂದು (ನಾಳೆ) ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಬಂದ್‌ಗೆ ಕರೆ ನೀಡಿದ ಕನ್ನಡ ಪರ ಸಂಘಟನೆ ನಾಯಕ ವಾಟಾಳ್ ನಾಗರಾಜ್ ಅವರಿಗೂ ಸರ್ಕಾರದ ಸಂದೇಶ ರವಾನೆಯಾಗಿದೆ. ಈ ಕರ್ನಾಟಕ ಬಂದ್ ಅನ್ನು ಎಲ್ಲ ಕನ್ನಡ ಪರ ಸಂಘಟನೆಗಳು ಬೆಂಬಲಿಸಿಲ್ಲ. ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣಗಳು ಈ ಒಕ್ಕೂಟದ ಜತೆಗೆ ನಿಂತಿಲ್ಲ. ಈ ನಡುವೆ, ಬಂದ್ ಮಾಡಿಯೇ ಮಾಡುತ್ತೇವೆ. ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಕರ್ನಾಟಕ ಬಂದ್ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದು, ಸರ್ಕಾರ ಅವಕಾಶ ಇಲ್ಲ ಎಂದಿರುವ ಕಾರಣ ಏನಾಗಬಹುದು ಎಂಬ ಕುತೂಹಲ, ಗೊಂದಲ ಜನರಲ್ಲಿದೆ.
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಷ್ಟೇ ಪ್ರತಿಭಟನೆಗ ಅವಕಾಶ
ಕರ್ನಾಟಕ ಬಂದ್ ಕಾರಣ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಮಾತ್ರವೇ ಪ್ರತಿಭಟನೆ ನಡೆಸಬೇಕು. ಬೇರೆಡೆ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ. ಇದಲ್ಲದೆ, ಬೆಂಗಳೂರಿನ ಆಯಕಟ್ಟು ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಇರಲಿದೆ. ಕರ್ನಾಟಕದ ಇತರೆಡೆಯೂ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ಇರಲಿದೆ. ಬೆಂಗಳೂರಿನ ಮೆಜೆಸ್ಟಿಕ್, ಟೌನ್‌ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಫ್ರೀಡಂ ಪಾರ್ಕ್‌ಗಳಲ್ಲಿ ಪ್ರತಿಭಟನೆಗಳು ನಡೆಯಬಹುದಾದ ಕಾರಣ ಅಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕ ಬಂದ್ ಅನ್ನು ಯಾವುದೇ ಕಾರಣಕ್ಕೂ ಸರ್ಕಾರ ಬೆಂಬಲಿಸುವುದಿಲ್ಲ. ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸರ್ಕಾರ ಅಥವಾ ನ್ಯಾಯಾಲಯ ಈ ರೀತಿ ಬಂದ್ ಮಾಡುವುದನ್ನು ಉತ್ತೇಜಿಸುವುದಿಲ್ಲ. ಪ್ರತಿಭಟನೆ ವ್ಯಕ್ತಪಡಿಸುವುದಕ್ಕೆ ಬಂದ್ ಸರಿಯಾದ ವಿಧಾನವಲ್ಲ ಎಂದು ನಾವು ಪ್ರತಿಭಟನಾಕಾರರಿಗೆ ತಿಳಿಸುತ್ತೇವೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುರುವಾರ ಸ್ಪಷ್ಟಪಡಿಸಿದರು.
ಕರ್ನಾಟಕ ಬಂದ್‌ಗೆ ಎಲ್ಲ ಸಂಘಟನೆಗಳೂ ಬೆಂಬಲ ನೀಡಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕ ಸಿಬ್ಬಂದಿ ಯೂನಿಯನ್‌ಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದರೆ ಬಸ್‌ಗಳು ರಸ್ತೆ ಇಳಿಯಲ್ಲ. ಇಲ್ಲದೇ ಇದ್ದರೆ ಎಂದಿನಂತೆ ಓಡಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ್ದಾರೆ.
ಮಾ 22 ಕರ್ನಾಟಕ ಬಂದ್ ಎನ್ನುತ್ತಿವೆ ಕನ್ನಡ ಪರ ಸಂಘಟನೆಗಳು- ಏನಿರುತ್ತೆ, ಏನಿರಲ್ಲ
ಓಲಾ, ಉಬರ್, ಟ್ಯಾಕ್ಸಿ, ರಿಕ್ಷಾ ಇರಲ್ಲ: ಕರ್ನಾಟಕ ಬಂದ್‌ಗೆ ಪೂರ್ಣ ಬೆಂಬಲ ನೀಡಲು ಓಲಾ ಉಬರ್ ಡ್ರೈವರ್ಸ್ ಆ್ಯಂಡ್ ಓನರ್ಸ್ ಅಸೋಸಿ ಯೇಷನ್ ಉಪಾಧ್ಯಕ್ಷ ಅಶೋಕ್, ಸಾರಥಿ ಆಟೊ ಚಾಲಕರ ಸಂಘದ ಅಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ. ಇದೇ ರೀತಿ ಅನೇಕ ರಿಕ್ಷಾ ಚಾಲಕರ ಸಂಘಟನೆ, ಟ್ಯಾಕ್ಸಿ ಚಾಲಕರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಸಾರಿಗೆ ವ್ಯವಸ್ಥೆ: ಬಸ್ ಸಂಚಾರ ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ನೈತಿಕ ಬೆಂಬಲವಿದೆ ಎಂದು ಎಂದು ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ ಶರ್ಮ ತಿಳಿಸಿದ್ದಾರೆ. ಇನ್ನುಳಿದಂತೆ, ಮಾರ್ಚ್ 22ರ ಬೆಳಗ್ಗಿನ ಸನ್ನಿವೇಶ ನೋಡಿಕೊಂಡು ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯತ್ಯಯವಾಗಬಹುದು.
ಇನ್ನೊಂದೆಡೆ, ಶಾಲೆಗಳಲ್ಲಿ ಅಂತಿಮ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಶಾಲಾ ವಾಹನ ಬಂದ್ ಮಾಡಲ್ಲ. ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡಲಾಗುವುದು ಎಂದು ಖಾಸಗಿ ಶಾಲಾ ವಾಹನಗಳ ಚಾಲಕರ ಯೂನಿಯನ್ ಅಧ್ಯಕ್ಷ ಜಿ. ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಾಲಾ, ಕಾಲೇಜುಗಳು: ಬೆಂಗಳೂರಿನಲ್ಲಿ ಬಹುತೇಕ ಖಾಸಗಿ ಶಾಲಾ, ಕಾಲೇಜುಗಳು ಕರ್ನಾಟಕ ಬಂದ್ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ರಜೆ ಘೋಷಿಸಿವೆ. ಪಾಲಕರು ಮತ್ತು ವಿದ್ಯಾರ್ಥಿಗಳು ತಮ್ಮ ಶಾಲಾ, ಕಾಲೇಜು ಆಡಳಿತ ಮಂಡಳಿಗಳು ನೀಡಿರುವ ಸೂಚನೆಗಳನ್ನು ಪರಿಶೀಲಿಸಬಹುದು.
ಹೋಟೆಲ್‌ಗಳು ಬಂದ್ ಮಾಡಲ್ಲ: ಬೆಂಗಳೂರಿನಲ್ಲಿ ಹೋಟೆಲ್ ಬಂದ್ ಆಗಲ್ಲ. ಎಂದಿನಂತೆಯೇ ವ್ಯವಹಾರ ನಡೆಯಲಿದೆ. ಆದರೆ ಕಾರ್ಮಿಕರು, ಮಾಲೀಕರು ಎಲ್ಲರೂ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವರು ಎಂದು ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಬೆಳಿಗ್ಗಿನ ಸಿನಿಮಾ ಪ್ರದರ್ಶನ ಇರಲ್ಲ: ಮಾ.22ರ ಕರ್ನಾಟಕ ಬಂದ್‌ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ಸೂಚಿಸಿದೆ. ಅಂದು ಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ಸ್ಥಗಿತವಾಗಲಿದ್ದು, ಮಧ್ಯಾಹ್ನದ ನಂತರ ಚಿತ್ರಪ್ರದರ್ಶನ ಆರಂಭವಾಗಲಿದೆ. ಆದರೆ, ಚಿತ್ರೀಕರಣ ಮಾತ್ರ ಎಂದಿನಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೆಟ್ರೋ, ರೈಲು, ವಿಮಾನ: ನಮ್ಮ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಬಂದ್ ಸಂಬಂಧಿಸಿ ಬಿಎಂಆರ್‌ಸಿಎಲ್ ಇದುವರೆಗೂ ಪ್ರಕಟಣೆ ನೀಡಿಲ್ಲ. ಇದೇ ರೀತಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿಮಾನ ಸಂಚಾರ ಎಂದಿನಂತೆಯೇ ಇರಲಿದೆ. ಆದರೆ ಕ್ಯಾಬ್ ಸೇವೆ ಸಿಗುವುದು ಸಂದೇಹ. ಭಾರತೀಯ ರೈಲ್ವೆಯ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಕಚೇರಿ, ಆಸ್ಪತ್ರೆ, ಮೆಡಿಕಲ್: ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದೇ ಹೋದರೆ ಹಾಜರಾತಿ ಕಡಿಮೆ ಇರಲಿದೆ. ಕೆಲಸ ಕಾರ್ಯಗಳು ಕುಂಟಿತವಾಗಲಿವೆ. ಇನ್ನು ಆಸ್ಪತ್ರೆ, ಮೆಡಿಕಲ್‌ಗಳು ತುರ್ತು ಆರೋಗ್ಯ ಸೇವೆಗಳಾದ ಕಾರಣ ಅವುಗಳ ಕೆಲಸಗಳಿಗೆ ಅಡ್ಡಿ ಇರಲ್ಲ.
