Karnataka Bandh: ಮಾರ್ಚ್ 22 ರಂದು ಕರ್ನಾಟಕ ಬಂದ್, ಏನಿರಬಹುದು, ಏನಿರಲ್ಲ; ಪ್ರಯಾಣಕ್ಕೆ ಮೊದಲು ಇತ್ತ ಗಮನಿಸಿ
Karnataka Bandh On March 22: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಮರಾಠಿಗರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಹಂತ ಹಂತವಾಗಿ ಪ್ರತಿಭಟನೆ ನಡೆಸಿವೆ. ಸಂಘಟನೆಗಳು ನೀಡಿರುವ ಮಾ 22 ರ ಕರ್ನಾಟಕ ಬಂದ್ ಕರೆಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಆ ದಿನ ಬೆಂಗಳೂರಲ್ಲಿ ಪ್ರಯಾಣಕ್ಕೆ ಮೊದಲು ಇತ್ತ ಗಮನಿಸಿ. ಏನಿರಬಹುದು, ಏನಿರಲ್ಲ ಎಂಬ ವಿವರ.

Karnataka Bandh On March 22: ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿ ಮೇಲೆ ಮರಾಠಿಗರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಆರಂಭವಾದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22ರಂದು ಶನಿವಾರ ಕರ್ನಾಟಕ ಬಂದ್ ನಡೆಸುವಂತೆ ಕರೆ ನೀಡಿವೆ. ಬಹುತೇಕ ಕನ್ನಡ ಪರ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿವೆ. ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿರುವ ಕಾರಣ ಶನಿವಾರ ಕರ್ನಾಟಕ ಬಂದ್‌ಗೆ ಬಹುತೇಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಕೆಲವು ಕಡೆ ವಾಹನ ಸಂಚಾರ, ಅಂಗಡಿ ಮುಂಗಟ್ಟು ಬಂದ್ ಆಗಬಹುದು. ಇನ್ನು ಕೆಲವೆಡೆ ಜನಜೀವನ ಎಂದಿನಂತೆಯೇ ಸಾಗಬಹುದು. ಆದಾಗ್ಯೂ, ಶನಿವಾರ ಪ್ರಯಾಣ, ಪ್ರವಾಸ ಕೈಗೊಳ್ಳುವವರು ಕರ್ನಾಟಕ ಬಂದ್ ನಡೆಯುವಾಗ ಏನಿರಬಹುದು, ಏನಿರಲ್ಲ ಎಂಬ ಮಾಹಿತಿ ಪಡೆದುಕೊಂಡಿರುವುದು ಒಳಿತು.
ಮಾರ್ಚ್ 22 ರಂದು ಕರ್ನಾಟಕ ಬಂದ್; ಏನಿರಬಹುದು, ಏನಿರಲ್ಲ
ಸಾರ್ವಜನಿಕ ಸಾರಿಗೆ: ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯತ್ಯಯವಾಗಬಹುದು. ಮಾರ್ಚ್ 22ರ ಬೆಳಗ್ಗಿನ ಸನ್ನಿವೇಶ ನೋಡಿಕೊಂಡು ಬಸ್‌ಗಳ ಸಂಚಾರ ನಡೆಯಬಹುದು. ಆದಾಗ್ಯೂ, ಇದುವರೆಗೆ ಈ ಬಂದ್‌ಗೆ ಸಂಬಂಧಿಸಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿಗಳಿಂದ ಅಧಿಕೃತ ಪ್ರಕಟಣೆಗಳು ಹೊರಬಿದ್ದಿಲ್ಲ. ಖಾಸಗಿ ಕ್ಯಾಬ್, ಆಟೋ ರಿಕ್ಷಾಗಳು ರಸ್ತೆಗಿಳಿಯುವುದು ಡೌಟ್. ಬಹುತೇಕ ಎಲ್ಲ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ.
ಮೆಟ್ರೋ, ರೈಲು, ವಿಮಾನ: ನಮ್ಮ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಬಂದ್ ವಿಚಾರವಾಗಿ ಇದುವರೆಗೂ ಬಿಎಂಆರ್‌ಸಿಎಲ್ ಪ್ರಕಟಣೆ ನೀಡಿಲ್ಲ. ಇದೇ ರೀತಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿಮಾನ ಸಂಚಾರ ಎಂದಿನಂತೆಯೇ ಇರಲಿದೆ. ಆದರೆ ಕ್ಯಾಬ್ ಸೇವೆ ಸಿಗುವುದು ಸಂದೇಹ. ಭಾರತೀಯ ರೈಲ್ವೆಯ ರೈಲು ಸಂಚಾರ ಎಂದಿನಂತೆ ಇರಲಿದೆ. ಆಟೋ, ಕ್ಯಾಬ್ ಸೇವೆ ಅಡ್ಡಿಯಾದರೆ ಪ್ರಯಾಣಿಕರಿಗೆ ತೊಂದರೆ ಆಗಲಿದೆ.
ಶಾಲಾ, ಕಾಲೇಜುಗಳು: ಬಹುತೇಕ ಖಾಸಗಿ ಶಾಲಾ, ಕಾಲೇಜುಗಳು ಕರ್ನಾಟಕ ಬಂದ್ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ರಜೆ ಘೋಷಿಸಿವೆ. ಪಾಲಕರು ಮತ್ತು ವಿದ್ಯಾರ್ಥಿಗಳು ತಮ್ಮ ಶಾಲಾ, ಕಾಲೇಜು ಆಡಳಿತ ಮಂಡಳಿಗಳು ನೀಡಿರುವ ಸೂಚನೆಗಳನ್ನು ಪರಿಶೀಲಿಸಬಹುದು.
ಅಂಗಡಿ- ಮುಂಗಟ್ಟು, ಮಾಲ್, ಚಿತ್ರಮಂದಿರ: ಬೆಂಗಳೂರಿನಲ್ಲಿ ಬಹುತೇಕ ಅಂಗಡಿ ಮುಂಟ್ಟು, ಮಾಲ್‌ಗಳು, ಚಿತ್ರ ಮಂದಿರಗಳು ಶನಿವಾರ (ಮಾರ್ಚ್ 22) ಬಂದ್ ಇರಲಿವೆ. ಚಿಕ್ಕಪೇಟೆ, ಕೆಆರ್ ಮಾರ್ಕೆಟ್, ಗಾಂಧಿ ಬಜಾರ್‌ಗಳು ಕೂಡ ಬಂದ್ ಇರಲಿವೆ. ಕೆಲವು ಮಾಲ್‌ಗಳು, ಮಲ್ಟಿಪ್ಲೆಕ್ಸ್ ಹಾಗೂ ಮನರಂಜನಾ ತಾಣಗಳು ಆ ದಿನದ ಸನ್ನಿವೇಶ ಗಮನಿಸಿಕೊಂಡು ವ್ಯವಹರಿಸಲಿವೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಕಚೇರಿ, ಆಸ್ಪತ್ರೆ, ಮೆಡಿಕಲ್: ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದೇ ಹೋದರೆ ಹಾಜರಾತಿ ಕಡಿಮೆ ಇರಲಿದೆ. ಕೆಲಸ ಕಾರ್ಯಗಳು ಕುಂಟಿತವಾಗಲಿವೆ. ಇನ್ನು ಆಸ್ಪತ್ರೆ, ಮೆಡಿಕಲ್‌ಗಳು ತುರ್ತು ಆರೋಗ್ಯ ಸೇವೆಗಳಾದ ಕಾರಣ ಅವುಗಳ ಕೆಲಸಗಳಿಗೆ ಅಡ್ಡಿ ಇರಲ್ಲ.
ಅಗತ್ಯ ಸೇವೆಗಳಿಗೆ ಇಲ್ಲ ಅಡ್ಡಿ: ಪೆಟ್ರೋಲ್ ಡೀಸೆಲ್ ಬಂಕ್, ಹಾಲಿನ ಬೂತ್, ಕೆಲವು ಸೂಪರ್ ಮಾರ್ಕೆಟ್‌ಗಳು ಎಂದಿನಂತೆ ಕೆಲಸ ಮಾಡಲಿವೆ. ಅಗತ್ಯ ಸೇವೆಗಳ ಪಟ್ಟಿಯಲ್ಲಿರುವಂಥವು ವಹಿವಾಟು ನಡೆಸಲಿವೆ. ಸಣ್ಣಪುಟ್ಟ ಕಿರಾಣಿ ಅಂಗಡಿಯವರು ಅಂಗಡಿ- ಮುಂಗಟ್ಟು ತೆರೆಯುವುದು ಸಂದೇಹ.
ಬೆಂಗಳೂರಲ್ಲಿ ಬಿಗಿ ಬಂದೋಬಸ್ತ್
ಕರ್ನಾಟಕ ಬಂದ್ ಕಾರಣ ಬೆಂಗಳೂರಿನ ಆಯಕಟ್ಟು ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಇರಲಿದೆ. ಕರ್ನಾಟಕದ ಇತರೆಡೆಯೂ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ಇರಲಿದೆ. ಬೆಂಗಳೂರಿನ ಮೆಜೆಸ್ಟಿಕ್, ಟೌನ್‌ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಫ್ರೀಡಂ ಪಾರ್ಕ್‌ಗಳಲ್ಲಿ ಪ್ರತಿಭಟನೆಗಳು ನಡೆಯಬಹುದಾದ ಕಾರಣ ಅಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ. ಸಂಚಾರ ವ್ಯತ್ಯಯ ಇರಲಿದ್ದು, ಅಂದಿಗೆ ತಕ್ಕಂತೆ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವುದು ಉತ್ತಮ.
