Karnataka Bandh: ಕರ್ನಾಟಕದಲ್ಲಿ ಬಂದ್‌ ಭಾಗಶಃ ಸಂಪೂರ್ಣ, ಬೆಂಗಳೂರು, ಮಂಡ್ಯ ಸಹಿತ ಹಲವು ಕಡೆ ಬೆಂಬಲ, ಬಸ್‌ ಸೇವೆಯೂ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bandh: ಕರ್ನಾಟಕದಲ್ಲಿ ಬಂದ್‌ ಭಾಗಶಃ ಸಂಪೂರ್ಣ, ಬೆಂಗಳೂರು, ಮಂಡ್ಯ ಸಹಿತ ಹಲವು ಕಡೆ ಬೆಂಬಲ, ಬಸ್‌ ಸೇವೆಯೂ ವ್ಯತ್ಯಯ

Karnataka Bandh: ಕರ್ನಾಟಕದಲ್ಲಿ ಬಂದ್‌ ಭಾಗಶಃ ಸಂಪೂರ್ಣ, ಬೆಂಗಳೂರು, ಮಂಡ್ಯ ಸಹಿತ ಹಲವು ಕಡೆ ಬೆಂಬಲ, ಬಸ್‌ ಸೇವೆಯೂ ವ್ಯತ್ಯಯ

Karnataka Bandh: ಕನ್ನಡ ಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್‌ಗೆ ನಿರೀಕ್ಷೆಯಷ್ಟು ಬೆಂಬಲ ಸಿಗದೇ ಬಂದ್‌ ಭಾಗಶಃ ಯಶಸ್ವಿಯಾಗಿದೆ. ವಿವಿಧ ಭಾಗಗಳಲ್ಲಿನ ಹೋರಾಟದ ಸ್ಥಿತಿಗತಿ ಹೀಗಿತ್ತು.

ಬೆಳಗಾವಿಯಲ್ಲಿ ಪ್ರತಿಭಟನೆಗೆ ಮುಂದಾದವರನ್ನು ಬಂಧಿಸಲಾಗಿದೆ.
ಬೆಳಗಾವಿಯಲ್ಲಿ ಪ್ರತಿಭಟನೆಗೆ ಮುಂದಾದವರನ್ನು ಬಂಧಿಸಲಾಗಿದೆ.

Karnataka Bandh: : ಮರಾಠಿಗರ ನಡವಳಿಕೆ, ಕರ್ನಾಟಕದಲ್ಲಿನ ನೀರಾವರಿ ಯೋಜನೆಗಳ ಜಾರಿಯೂ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಭಾಗದಲ್ಲಿ ಬಂದ್‌ಗೆ ಬೆಂಬಲ ನೀಡಿದರೆ ಇನ್ನು ಕೆಲವು ಕಡೆಗಳಲ್ಲಿ ಹೋರಾಟಕ್ಕೆ ಬಂದ್‌ ಸೀಮಿತವಾಯಿತು. ಭಾಗಶಃ ಬಂದ್‌ ಯಶಸ್ವಿಯಾಯಿತು. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದವು. ಬಸ್‌ಗಳ ಸೇವೆಯನ್ನು ಚಿಕ್ಕಮಗಳೂರು ಸಹಿತ ಕೆಲವು ಕಡೆ ಸ್ಥಗಿತಗೊಳಿಸಿದ್ದರೆ, ಬೆಂಗಳೂರಿನಲ್ಲಿ ಯಥಾ ರೀತಿಯಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆಯೇ ಕಡಿಮೆಯಿತ್ತು. ಮೈಸೂರು ಸಹಿತ ಹಲವು ಭಾಗ ಸಂಚಾರಕ್ಕೆ ಅಡ್ಡಿಪಡಿಸಿದವರನ್ನು ಪೊಲೀಸರು ಬಂಧಿಸಿದರು. ಬೆಂಗಳೂರಿನಲ್ಲೂ ಮೆಟ್ರೋಗೆ ಅಡ್ಡಿಪಡಿಸಲು ಮುಂದಾದವರನ್ನು ವಶಕ್ಕೆ ಪಡೆಯಲಾಯಿತು. ಮಧ್ಯಾಹ್ನ 12ರ ಹೊತ್ತಿಗೆ ಅಲ್ಲಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದವು.

ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಪ್ರತಿಭಟನೆಗಳು ನಡೆದವು. ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಹೋರಾಟಗಳನ್ನು ರೂಪಿಸಲಾಗಿತ್ತು. ಸ್ವಾತಂತ್ರವನದ ಬಳಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದ್ದರು. ಆದರೆ ವಿವಿಧ ಭಾಗಗಳಲ್ಲಿ ಕನ್ನಡಪರ ಹೋರಾಟಗಾರರು ಬೀದಿಗೆ ಇಳಿದರು. ಟೌನ್‌ ಬಳಿ ಹೋರಾಟಕ್ಕೆ ಬಂದ ಕನ್ನಡಪರ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು. ಮೆಟ್ರೋ ನಿಲ್ದಾಣಕೆ ನುಗ್ಗಲು ಯತ್ನಿಸಿದವರನ್ನೂ ವಶಕ್ಕೆ ಪಡೆಯಲಾಯಿತು.

ಬಸ್‌ ಸಂಚಾರ ಎಂದಿನಂತೆ ಇತ್ತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆಯೇ ವಿರಳವಾಗಿತ್ತು. ಪ್ರಯಾಣಿಕರು ಇಲ್ಲದೇ ಬಸ್‌ ಗಳು ನಿಲ್ದಾಣದಲ್ಲೇ ನಿಂತಿದ್ದವು. ಶಾಲಾ ಕಾಲೇಜಿಗೆ ರಜೆ ಇರಲಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾದರು. ಉಬರ್‌ ಸಹಿತ ಕೆಲ ವಾಹನ ಬೆಂಬಲ ಸೂಚಿಸಿದವು. ಚಿತ್ರಗಳ ಪ್ರದರ್ಶನ ಬೆಳಗಿನ ಹೊತ್ತಿಗೆ ಇರಲಿಲ್ಲ.

ಕರ್ನಾಟಕ ಬಂದ್‌ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಮೂರು ಸಾವಿರಕ್ಕೂ ಅಧಿಕ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ನೊಟೀಸ್‌ ನೀಡಿದ್ದಾರೆ. ಪೊಲೀಸರು ಅಡ್ಡಿಪಡಿಸಿದ ನಡುವೆಯೇ ನಮ್ಮ ಹೋರಾಟ ನಿಂತಿಲ್ಲ. ಬಸ್‌ ನಿಲ್ದಾಣ, ಹೊಟೇಲ್‌ಗಳಲ್ಲಿ ಜನರಿಲ್ಲ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

ಇದೇ ವೇಳೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾತನಾಡಿ, ಬೆಂಗಳೂರಿನ ಎಲ್ಲೆಡೆ ಶಾಂತಿಯುತ ಹೋರಾಟ ನಡೆದಿದೆ. ಬಸ್‌ಗಳ ಸೇವೆಯೂ ಇದೆ. ರಸ್ತೆಗಳಲ್ಲಿ ವಾಹನ ಸಂಚಾರ ಇದೆ. ಹೋರಾಟಕ್ಕೆ ಸ್ವಾತಂತ್ರ ಉದ್ಯಾನದಲ್ಲಿ ಅವಕಾಶ ನೀಡಲಾಗಿತ್ತು. ಬೇರೆಡೆ ಪ್ರತಿಭಟಿಸುವವರನ್ನು ನಮ್ಮ ಪೊಲೀಸರು ವಶಕ್ಕೆ ಪಡೆದು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನಕ್ಕೆ ಕಳುಹಿಸಿದ್ದಾರೆ. ಎಲ್ಲಿಯೂ ಅಹಿತಕರ ಘಟನೆ ಆಗಿಲ್ಲ. ಪೊಲೀಸ್‌ ಭದ್ರತೆ ಬಿಗಿಯಾಗಿ ಕೈಗೊಂಡಿದ್ದೇವೆ ಎಂದರು.

ಮೈಸೂರಲ್ಲಿ ಬಂಧನ

ಇಂದು ಅಖಂಡ ಕರ್ನಾಟಕ ಬಂದ್ ಹಿನ್ನೆಲೆ. ಮೈಸೂರಿನಲ್ಲಿ ಬಸ್ ನಿಲ್ಲಿಸುವಂತೆ ಮನವಿ ಮಾಡಿದ ಪ್ರತಿಭಟನಾಕಾರರು ನಂತರ ಕೆ.ಎಸ್.ಆರ್.ಟಿ.ಸಿ ಬಸ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗ ಧರಣಿ ನಡೆಸಿದ ಪ್ರತಿಭಟನಾಕಾರರು, ಕನ್ನಡಿಗರಿಗೆ ಮಸಿ ಬಳಿಯುತ್ತಿದ್ದಾರೆ. ನಿಮಗಾಗಿ ನಾವು ಬಂದ್ ಮಾಡುತ್ತಿದ್ದೇವೆ. ನೀವು ನೋಡಿದ್ರೇ ಅವರಿಗೆ ಬೆಂಬಲ ನೀಡಿ ಬಸ್ ಓಡಿಸುತ್ತಿದ್ದೀರಿ. ದಯವಿಟ್ಟು ಬಸ್ ಓಡಿಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

ಕನ್ನಡ ಧ್ವಜಗಳನ್ನು ಹಿಡಿದು ಧರಣಿ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಪ್ರತಿಭಟನಕಾರರ ಬಂಧನ ಬಳಿಕ ಬಸ್ ಸಂಚಾರ ಆರಂಭವಾಯಿತು.

ಮಂಡ್ಯ, ತುಮಕೂರಲ್ಲಿ ಹುಲ್ಲಿನ ಮೆರವಣಿಗೆ

ಮಂಡ್ಯ ಹಾಗೂ ತುಮಕೂರಿನಲ್ಲಿ ಕನ್ನಡ ಪರ ಹೋರಾಟಗಾರರು. ರೈತ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು. ಹಸಿ ಹುಲ್ಲನ್ನು ಹೊತ್ತು ಮೆರವಣಿಗೆಯನ್ನು ನಡೆಸಿದರು. ಮಂಡ್ಯದ ಪ್ರಮುಖ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಚಿಕ್ಕಮಗಳೂರಿನಲ್ಲಿ ಬಸ್‌ ಸಂಚಾರ ನಿಲ್ಲಿಸಲಾಗಿತ್ತು. ಇದರಿಂದ ಹೋರಾಟಗಾರರು ಚಾಲಕರು ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು. ರಾಮನಗರದಲ್ಲೂ ಹೋರಾಟ ಜೋರಾಗಿತ್ತು. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರೊಂದಿಗೆ ವಾಗ್ದಾಳಿಗಳೂ ನಡೆದವು.

ಬೆಳಗಾವಿಯಲ್ಲಿ ಬಂಧನ

ಉತ್ತರ ಕರ್ನಾಟಕದ ನಗರಗಳಲ್ಲೂ ಹೋರಾಟಗಳು ನಡೆದವು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದವರನ್ನು ಬಂಧಿಸಿದರು. ಹುಬ್ಬಳ್ಳಿ, ಧಾರವಾಡದಲ್ಲೂ ಪ್ರತಿಭಟನೆಗಳು ನಡೆದವು. ರಾಯಚೂರಿನಲ್ಲೂ ವ್ಯಾಪಾರ ವಹಿವಾಟುಗಳು ನೀರಸವಾಗಿದ್ದವು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner