Karnataka Bandh: ಕರ್ನಾಟಕ ಬಂದ್‌ಗೆ ಇಲ್ಲ ಪೊಲೀಸರ ಅನುಮತಿ; ಬಲವಂತದ ಬಂದ್‌ ಮಾಡಿದರೆ ಕಾನೂನು ಕ್ರಮ, ಬೆಂಗಳೂರು ಪೊಲೀಸ್‌ ಆಯುಕ್ತರ ಎಚ್ಚರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bandh: ಕರ್ನಾಟಕ ಬಂದ್‌ಗೆ ಇಲ್ಲ ಪೊಲೀಸರ ಅನುಮತಿ; ಬಲವಂತದ ಬಂದ್‌ ಮಾಡಿದರೆ ಕಾನೂನು ಕ್ರಮ, ಬೆಂಗಳೂರು ಪೊಲೀಸ್‌ ಆಯುಕ್ತರ ಎಚ್ಚರಿಕೆ

Karnataka Bandh: ಕರ್ನಾಟಕ ಬಂದ್‌ಗೆ ಇಲ್ಲ ಪೊಲೀಸರ ಅನುಮತಿ; ಬಲವಂತದ ಬಂದ್‌ ಮಾಡಿದರೆ ಕಾನೂನು ಕ್ರಮ, ಬೆಂಗಳೂರು ಪೊಲೀಸ್‌ ಆಯುಕ್ತರ ಎಚ್ಚರಿಕೆ

Karnataka Bandh: ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲಿಯೂ ಅನುಮತಿ ನೀಡಿಲ್ಲ.ಬದಲಿಗೆ ನಿಗದಿತ ಸ್ಥಳದಲ್ಲಿ ಹೋರಾಟ ನಡೆಸಿ ಮನವಿ ಸಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕರ್ನಾಟಕ ಬಂದ್‌ ಕುರಿತು ವಾಟಾಳ್‌ ನಾಗರಾಜ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾತನಾಡಿದ್ದಾರೆ.
ಕರ್ನಾಟಕ ಬಂದ್‌ ಕುರಿತು ವಾಟಾಳ್‌ ನಾಗರಾಜ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾತನಾಡಿದ್ದಾರೆ.

Karnataka Bandh: ಶನಿವಾರ ನಡೆಯಲಿರುವ ಬಂದ್‌ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು ಬಿಗಿ ಬಂದೋಬಸ್ತ್ ಮಾಡಲಾಗಿದೆ.‌ ಒಂದು ವೇಳೆ ಬಲವಂತವಾಗಿ ಬಂದ್‌ ಮಾಡಿಸಲು ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.‌ದಯಾನಂದ್‌ ಅವರು ಎಚ್ಚರಿಕೆ ನೀಡಿದ್ದಾರೆ. ಬಂದ್‌ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಗಾವಹಿಸಲಾಗುವುದು. ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳ ಸಭೆ ನಡೆಸಿ, ನ್ಯಾಯಾಲಯದ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಗಳಾದರೆ ಸಂಘಟನೆಗಳೇ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ನಗರದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಭದ್ರತೆ ಸಂಬಂಧ ಸಲಹೆ, ಸೂಚನೆ ನೀಡಲಾಗಿದೆ. ಬಂದ್ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಾಟಾಳ್‌ ಮನವಿ

ಈ ಮಧ್ಯೆ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್,ಕರ್ನಾಟಕ ಹಾಗೂ ಕನ್ನಡಿಗರ ಹಿತಕ್ಕಾಗಿ ಶನಿವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ನಡೆಸಲಾಗುವುದು. ರಾಜ್ಯದಲ್ಲಿ ಎಂಇಎಸ್ ನಿಷೇಧ, ಹಿಂದಿ ಹೇರಿಕೆ, ಕೆಎಸ್‌ಆರ್‌ಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ರಕ್ಷಣೆ, ಉದ್ಯೋಗದಲ್ಲಿ ಕನ್ನಡಿಗರ ಕಡೆಗಣನೆ, ಪರಭಾಷಿಕರ ದಬ್ಬಾಳಿಕೆ, ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್‌ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಬೆಳಗಾವಿ ನಮ್ಮದು. ಮರಾಠ ಪುಂಡರ, ಎಂಇಎಸ್ ಗೂಂಡಾಗಳ ವಿರುದ್ಧ ನಮ್ಮ ಹೋರಾಟ. ಕೂಡಲೇ ಸರಕಾರ ಎಂಇಎಸ್ ಅನ್ನು ನಿಷೇಧಿಸಬೇಕು.ಕರ್ನಾಟಕ ಬಂದ್ ಅನ್ನು ರಾಜ್ಯದ ಎಲ್ಲ ಜನತೆಯೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಾರಿಗೆ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕವನ್ನು ಸಮಗ್ರ ಅಭಿವೃದ್ಧಿ ಮಾಡಬೇಕು. ರಾಜ್ಯದ ಗಡಿನಾಡುಗಳ ಬೆಳವಣಿಗೆ ಮಾಡಬೇಕು. ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧ ಮಾಡಬೇಕು. ಶಿವಸೇನೆ ಹಾಗೂ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು. ಬೆಳಗಾವಿ ಭಾಗದಲ್ಲಿ ನಿರ್ಮಿಸಿರುವ ಸಾಂಬಾಜಿ ಪ್ರತಿಮೆ ತೆಗೆಯಬೇಕು ಎಂಬುದು ವಾಟಾಳ್ ನಾಗರಾಜ್ ಆಗ್ರಹ.

ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಕಂಪೆನಿಗಳು ಬಂದು ಬೈಕ್ ಆಟೋಗಳಿಗೆ, ಕಾರ್‌ ಗಳಿಗೆ ಹೊರ ರಾಜ್ಯದ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ಕರೆ ತಂದಿರುವುದರಿಂದ ನಮ್ಮವರಿಗೆ ಅನ್ಯಾಯವಾಗುತ್ತಿದೆ. ಮೆಟ್ರೋ ದರ ಇಳಿಕೆ ಮಾಡಬೇಕು. ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಮೇಕೆದಾಟು ಯೋಜನೆ ಜಾರಿ ಆಗಲೇಬೇಕು. ಕೊಪ್ಪಳ ಸುತ್ತ ಯಾವ ಕಾರ್ಖಾನೆಗಳ ನಿರ್ಮಾಣವೂ ಬೇಡ. ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು ಮತ್ತು ಪರಭಾಷಾ ಚಿತ್ರಗಳ ಬಹಿಷ್ಕಾರ ಮಾಡಬೇಕು. ಮಹಾರಾಷ್ಟ್ರದಲ್ಲಿ ಕನ್ನಡ ಮಹಾಮಹಿಮರ ಪ್ರತಿಮೆಗಳು ಸ್ಥಾಪನೆಯಾಗಬೇಕು. ಮಂಗಳೂರು-ಕಾರವಾರ ಬಂದರು ಅಭಿವೃದ್ಧಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಬಂದ್‌ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಂದ್‌ಗೆ ಕರವೇ ಬೆಂಬಲವಿಲ್ಲ

ಬಸ್‌ ನಿರ್ವಾಹಕನ ಮೇಲೆ ಹಲ್ಲೆ ನಡೆದಾಗ ಬೆಳಗಾವಿಗೆ ಹೋಗಿ ದೊಡ್ಡ ಸ್ವರೂಪದ ಚಳವಳಿ ನಡೆಸಲಾಗಿತ್ತು. ಸುಳ್ಳು ಪೋಕ್ಸೊ ಪ್ರಕರಣ ಹಿಂಡೆಯುವಂತೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿದ್ದ ಇನ್‍ಸ್ಪೆಕ್ಟರ್‌ ನ್ನು ವರ್ಗಾವಣೆ ಮಾಡಿದ್ದು, ಕನ್ನಡಿಗರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದಾಗಿ ಪೊಲೀಸ್ ಕಮಿಷನರ್ ಭರವಸೆ ನೀಡಿದ್ದಾರೆ. ಹೀಗಿರುವಾಗ ಬಂದ್‌ ಅಗತ್ಯವಿಲ್ಲ. ಇದಕ್ಕೆ ನಮ್ಮ ಬೆಂಬಲವಿಲ್ಲ ಎನ್ನುವುದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ನೀಡಿರುವ ಸ್ಪಷ್ಟನೆ.

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner