Karnataka Bandh: ಕರ್ನಾಟಕ ಬಂದ್ ಯಶಸ್ವಿ ಎಂದ ವಾಟಾಳ್ ನಾಗರಾಜ್, ಪ್ರತಿಭಟನೆಗೆ ಸೀಮಿತವಾಗಿದ್ದ ಬಂದ್, ಜನಜೀವನಕ್ಕೆ ಅಡ್ಡಿಯಾಗಿರಲಿಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bandh: ಕರ್ನಾಟಕ ಬಂದ್ ಯಶಸ್ವಿ ಎಂದ ವಾಟಾಳ್ ನಾಗರಾಜ್, ಪ್ರತಿಭಟನೆಗೆ ಸೀಮಿತವಾಗಿದ್ದ ಬಂದ್, ಜನಜೀವನಕ್ಕೆ ಅಡ್ಡಿಯಾಗಿರಲಿಲ್ಲ

Karnataka Bandh: ಕರ್ನಾಟಕ ಬಂದ್ ಯಶಸ್ವಿ ಎಂದ ವಾಟಾಳ್ ನಾಗರಾಜ್, ಪ್ರತಿಭಟನೆಗೆ ಸೀಮಿತವಾಗಿದ್ದ ಬಂದ್, ಜನಜೀವನಕ್ಕೆ ಅಡ್ಡಿಯಾಗಿರಲಿಲ್ಲ

Karnataka Bandh: ಕರ್ನಾಟಕ ಬಂದ್ ಯಶಸ್ವಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೊಂಡಿದ್ಧಾರೆ. ಪ್ರತಿಭಟನೆಗೆ ಸೀಮಿತವಾಗಿದ್ದ ಕರ್ನಾಟಕ ಬಂದ್, ಜನಜೀವನಕ್ಕೆ ಅಡ್ಡಿಯಾಗಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕ ಬಂದ್ ವೇಳೆ ಬೆಂಗಳೂರಿನ ಟೌನ್‌ಹಾಲ್‌ ಬಳಿ ಪ್ರತಿಭಟನೆ ನಡೆಸಿದ್ದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಿಸಿದರು.
ಕರ್ನಾಟಕ ಬಂದ್ ವೇಳೆ ಬೆಂಗಳೂರಿನ ಟೌನ್‌ಹಾಲ್‌ ಬಳಿ ಪ್ರತಿಭಟನೆ ನಡೆಸಿದ್ದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಿಸಿದರು. (X)

Karnataka Bandh: ಕರ್ನಾಟಕದಲ್ಲಿ ಮರಾಠಿಗರ ಕನ್ನಡ ವಿರೋಧಿ ನೀತಿ, ಎಂಇಎಸ್ ಪುಂಡಾಟಿಕೆ, ಮಹದಾಯಿ, ಮೇಕೆದಾಟು ಜಲ ಯೋಜನೆ, ಕನ್ನಡಿಗರಿಗೆ ಉದ್ಯೋಗ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕರ್ನಾಟಕ ಬಂದ್ ಶನಿವಾರ (ಮಾರ್ಚ್ 22) ಪ್ರತಿಭಟನೆಗೆ ಸೀಮಿತವಾಯಿತು. ಕರ್ನಾಟಕ ಸರ್ಕಾರ ಕರ್ನಾಟಕ ಬಂದ್ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ ಕಾರಣ, ಕರ್ನಾಟಕ ಬಂದ್ ನಡೆಯಲಿಲ್ಲ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಇತ್ತು. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಬೆಂಗಳೂರು ಬಂದ್: ಸಂಚಾರ ದಟ್ಟಣೆ ಕಡಿಮೆ ಇತ್ತಾದರೂ ಜನಜೀವನ ಸಹಜ

ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಕಾರಣ, ಬೆಂಗಳೂರಿನಲ್ಲಿ ಶನಿವಾರ ಸಂಚಾರ ದಟ್ಟಣೆ ಕಡಿಮೆ ಇತ್ತು. ಬೆಳಿಗ್ಗೆಯಿಂದಲೂ ಆಟೊ, ವಾಹನ ಗಳ ಸಂಚಾರ ಹಾಗೂ ಹೋಟೆಲ್‌, ಅಂಗಡಿ ವ್ಯಾಪಾರ, ತರಕಾರಿ, ಹಣ್ಣು– ಹೂವಿನ ಮಾರುಕಟ್ಟೆಗಳಲ್ಲಿ ವಹಿವಾಟು ಎಂದಿನಂತೆ ನಡೆಯಿತು. ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಸಹ ಎಂದಿ ನಂತೆಯೇ ಕಾರ್ಯನಿರ್ವಹಿಸಿದವು. ಎಲ್ಲ ಮಾಲ್‌ಗಳು ತೆರೆದಿದ್ದವು. ಮಲ್ಟಿಪ್ಲೆಕ್ಸ್‌ ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ, ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಬಂದ್‌ಗೆ ಬೆಂಬಲ ಘೋಷಿಸಿದ್ದ ಕಾರಣ ಆಟೊ, ಕ್ಯಾಬ್‌ಗಳ ಸಂಖ್ಯೆ ಕಡಿಮೆ ಇತ್ತು. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆಯೇ ಇತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಬಿಎಂಟಿಸಿ ಬಸ್‌ಗಳನ್ನು ತಡೆದ ಕೆಲ ಪ್ರತಿಭಟನಕಾರರು, ಬಸ್‌ಗಳ ಗಾಜಿನ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಬರೆದಿರುವುದು ಕಂಡುಬಂತು.

ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ನಿಂದ ಉತ್ತರಹಳ್ಳಿಗೆ ತೆರಳುತ್ತಿದ್ದ, ಬಿಎಂಟಿಸಿ ಬಸ್‌ ಗಾಜಿಗೆ ಮಸಿ ಬಳಿದ ಆರೋಪದ ಮೇಲೆ ಕನ್ನಡಪರ ಸಂಘಟನೆಗಳ ಮೂವರು ಕಾರ್ಯಕರ್ತರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಸಂಚಾರ ಅಧೀಕ್ಷಕ ಎನ್‌.ನಟರಾಜು ಅವರು ನೀಡಿದ್ದ ದೂರಿನ ಮೇರೆಗೆ ಆರೋಪಿಗಳಾದ ಶ್ರೀನಿವಾಸ, ಮಂಜುನಾಥ್‌ ಮತ್ತು ಡಿ. ಮಂಜುನಾಥ್‌ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೋರ್ಟ್‌ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕರ್ನಾಟಕ ಬಂದ್ ಯಶಸ್ವಿ ಎಂದ ವಾಟಾಳ್ ನಾಗರಾಜ್‌

ಕರ್ನಾಟಕ ಬಂದ್‌ಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದೇ ಇದ್ದರೂ, ಕನ್ನಡ ಪರ ಸಂಘಟನೆ ನಾಯಕ ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಕೆಲವು ಸಂಘಟನೆಗಳವು ನೈತಿಕ ಬೆಂಬಲ ಘೋಷಿಸಿದ್ದಾರೆ. ಯಾರಿಗೆ ಬೇಕು ನಿಮ್ಮ ನೈತಿಕ ಬೆಂಬಲ. ಹೋಟೆಲ್ ಉದ್ಯಮಿಗಳು ಬೆಂಬಲ ನೀಡಲಿಲ್ಲ, ಪೊಲೀಸರು ಕೂಡ ಬೆಂಬಲ ನೀಡಲಿಲ್ಲ ಎಂದು ನಾಗರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ವಾಟಾಳ್ ನಾಗರಾಜ್ ಅವರು ಶನಿವಾರ ಮಧ್ಯಾಹ್ನ 12 ಗಂಟೆಗೆ ಟೌನ್‌ಹಾಲ್ ಬಳಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು. ಟೌನ್ ಹಾಲ್ ಬಳಿ ಸೇರಿದ್ದ 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಕರ್ನಾಟಕ ರಾಜ್ಯ ಮೀಸಲು ಪಡೆ ಪೊಲೀಸರು ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಿಸಿದರು. ಈ ಸಂದರ್ಭದಲ್ಲಿ ಟೌನ್‌ಹಾಲ್ ಬಳಿ ಹೈಡ್ರಾಮಾ ಉಂಟಾಗಿತ್ತು. ಇದೇ ವೇಳೆ, ಸ್ವಾತಂತ್ರ್ಯ ಉದ್ಯಾನದಲ್ಲಿ ಕನ್ನಡ ಪರ ಹೋರಾಟಗಾರರು ‘ಎಂಇಎಸ್‌’ ಸಂಘಟನೆಯ ತಿಥಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ‘ಬೆಳಗಾವಿ ನಮಗೆ, ತಿಥಿ ವಡೆ ನಿಮಗೆ’ ಎಂದು ಘೋಷಣೆಗಳನ್ನು ಕೂಗಿದರು. ಇನ್ನೊಂದಡೆ, ರಾಜಾಜಿನಗರ ನಮ್ಮ ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಪೂಲೀಸರು ವಶಕ್ಕೆ ಪಡೆದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner