Karnataka Bundh: ವಿದ್ಯುತ್ ದರ ಏರಿಕೆ ವಿರೋಧಿಸಿ ಇಂದು ಕರ್ನಾಟಕ ಬಂದ್; ಸಿಪಿಎಂ ಬೆಂಬಲ, ಅಗತ್ಯ ಸೇವೆಗಳಿಗೆ ತೊಂದರೆ ಇಲ್ಲ
ವಿದ್ಯುತ್ ದರ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಬೆಂಗಳೂರು: ವಿದ್ಯುತ್ ದರ ಏರಿಕೆ (Power Tariff Hike) ಖಂಡಿಸಿ ಕೆಸಿಸಿಐ (KCCI) ಇಂದು (ಜೂನ್ 22, ಗುರುವಾರ) ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದು, ರಾಜ್ಯಾದ್ಯಂತ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಜಿಲ್ಲಾ ಘಟಕಗಳು ಹಾಗೂ ಇತರೆ ಉದ್ಯಮ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಬೇಕೆಂದು ಸೂಚಿಸಿದೆ.
ಬಂದ್‌ಗೆ ಕರೆ ನೀಡಿರುವುದರಿಂದ ಅಗತ್ಯ ಸೇವೆಗಳು ಹಾಗೂ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಈ ನಡುವೆ ಸಿಪಿಎಂ ಬಂದ್‌ಗೆ ಬೆಂಬಲ ಘೋಷಿಸಿದೆ.
ನಾಳೆ (ಜೂನ್ 23, ಶುಕ್ರವಾರ) ಕೈಗಾರಿಕೋದ್ಯಮ ಸಂಘಗಳ ನಾಯಕರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಎಫ್‌ಕೆಸಿಸಿಐ ಕರೆ ನೀಡಿರುವ ಬಂದ್‌ನಿಂದ ಬೆಂಗಳೂರು ಉದ್ಯಮ ಸಂಸ್ಥೆಗಳು ದೂರ ಉಳಿದಿವೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿವೆ.
ಮೈಸೂರಿನಲ್ಲೂ ಬಂದ್‌ಗೆ ಬೆಂಬಲ ಇಲ್ಲ
ಮೈಸೂರಿನಲ್ಲೂ ಹೋಟೆಲ್ ಮಾಲೀಕರ ಸಂಘ ಇಂದು ಕೆಸಿಸಿಐ ಕರೆ ನೀಡಿರುವ ಕರ್ನಟಾಕ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗುವ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಅಂಗಡಿ ಮುಂಗಟ್ಟು ಬಂದ್
ಹುಬ್ಬಳ್ಳಿ-ಧಾರವಾಡದಲ್ಲಿ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಕೆಲವೇ ನಿಮಿಷಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾರವಾರದಲ್ಲಿ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ.
ಬಳ್ಳಾರಿ, ಬೆಳಗಾವಿಯಲ್ಲೂ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ವ್ಯಾಪಾರ ವಹಿವಾಟುಗಳು ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ ಇಲ್ಲೂ ಕೂಡ ಕೆಸಿಸಿಐ ಘಟಕ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದು, ಜನರು ಜಮಾವಣೆಯಾಗುತ್ತಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ 12 ರಂದು ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 70 ಪೈಸೆ ಹೆಚ್ಚಿಸಿತ್ತು. ರಾಜ್ಯದಲ್ಲಿ ಹೊಸ ಸರ್ಕಾರ ಆಯ್ಕೆಯಾದ ನಂತರ 'ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ' (ಎಫ್‌ಪಿಪಿಸಿಎ) ನೆಪದಲ್ಲಿ ಪ್ರತಿ ಯೂನಿಟ್‌ಗೆ 51 ಪೈಸೆಯ ಮತ್ತೊಂದು ಹೆಚ್ಚಳವನ್ನು ಘೋಷಿಸಿತು.
ವಿಭಾಗ