ಕನ್ನಡ ಸುದ್ದಿ  /  Karnataka  /  Karnataka Bank Launches Kbl Utsav To Avail Offers On Loans

Karnataka Bank: ಆಕರ್ಷಕ ಬಡ್ಡಿದರದಲ್ಲಿ ಸಾಲ ತಗೋಬೇಕಾ? ಕರ್ನಾಟಕ ಬ್ಯಾಂಕ್‌ನ 'ಕೆಬಿಎಲ್ ಉತ್ಸವ'ದಲ್ಲಿ ಪಾಲ್ಗೊಳ್ಳಿ

ಕೆಬಿಎಲ್ ಉತ್ಸವ ಅಭಿಯಾನದಡಿ ಗ್ರಾಹಕರಿಗೆ ವಿಶೇಷ ಹಾಗೂ ಆಕರ್ಷಕ ಬಡ್ಡಿದರಗಳೊಂದಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಗೃಹಸಾಲ, ಕಾರು ಸಾಲ ಮತ್ತು ಚಿನ್ನದ ಮೇಲೆ ಆಕರ್ಷಕ ಬಡ್ಡಿದರದಲ್ಲಿ ಗ್ರಾಹಕರು ಸಾಲಗಳನ್ನು ಪಡೆಯಬಹುದು.

ಕೆಬಿಎಲ್ ಉತ್ಸವ ಲಾಂಚ್‌
ಕೆಬಿಎಲ್ ಉತ್ಸವ ಲಾಂಚ್‌ (Karnataka Bank Twitter)

ಮಂಗಳೂರು: ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ ಆಗಿರುವ ಕರ್ನಾಟಕ ಬ್ಯಾಂಕ್, ನವರಾತ್ರಿ ಸೇರಿ ದೀಪಾವಳಿ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ಶುಭಸುದ್ದಿಯೊಂದನ್ನು ನೀಡಿದೆ. ತನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಈ ತಿಂಗಳ ಕೊನೆಯವರೆಗೆ, ಅಂದರೆ ಅಕ್ಟೋಬರ್‌ 31ರವರೆಗೆ ಗೃಹ ಸಾಲ, ಕಾರು ಸಾಲ ಮತ್ತು ಚಿನ್ನದ ಸಾಲಗಳಿಗಾಗಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ.

ಹೌದು, ಈ ವಿಶೇಷ ಅಭಿಯಾನದ ಹೆಸರು ‘ಕೆಬಿಎಲ್ ಉತ್ಸವ 2022-23(KBL Utsav 2022-23)’. ರಾಜ್ಯದ ಕರಾವಳಿ ನಗರಿ ಮಂಗಳೂರಿನಲ್ಲಿ ಕನಾಟಕ ಬ್ಯಾಂಕ್‌ನ ಪ್ರಧಾನ ಕಚೇರಿ ಇದೆ. ರಾಜ್ಯದಲ್ಲಿರುವ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ ಇದಾಗಿದ್ದು, ದೇಶಾದ್ಯಂತ ಬರೋಬ್ಬರಿ 880 ಶಾಖೆಗಳನ್ನು ಹೊಂದಿದೆ. ನವರಾತ್ರಿ ಸೇರಿ ಹಬ್ಬದ ಸೀಸನ್‌ ಇದಾಗಿದ್ದು, ಈ ವೇಳೆ ಬ್ಯಾಂಕ್‌ ವಿಶೇಷ ಅಭಿಯಾನ ಘೋಷಿಸಿದೆ. ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್‌ ಮತ್ತು ದೇಶದ ಯಾವುದೇ ಬ್ರಾಂಚ್‌ ಮೂಲಕ ಈ ಅಭಿಯಾನದ ಪ್ರಯೋಜನ ಮತ್ತು ಅದರ ಕೊಡುಗೆಗಳನ್ನು ಪಡೆಯಬಹುದು.

ಈ ಕೆಬಿಎಲ್ ಉತ್ಸವ ಅಭಿಯಾನದಡಿಯಲ್ಲಿ ಗ್ರಾಹಕರಿಗೆ ವಿಶೇಷ ಹಾಗೂ ಆಕರ್ಷಕ ಬಡ್ಡಿದರಗಳೊಂದಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಗೃಹಸಾಲ, ಕಾರು ಸಾಲ ಮತ್ತು ಚಿನ್ನದ ಮೇಲೆ ಆಕರ್ಷಕ ಬಡ್ಡಿದರದಲ್ಲಿ ಗ್ರಾಹಕರು ಸಾಲಗಳನ್ನು ಪಡೆಯಬಹುದು. ಅದರಲ್ಲೂ ಕಾರು ಮತ್ತು ಚಿನ್ನದ ಮೇಲಿನ ಸಾಲಗಳಿಗೆ ಸಂಸ್ಕರಣಾ ಶುಲ್ಕದಲ್ಲಿ ಕಡಿತವಿರಲಿದೆ. ಇದರೊಂದಿಗೆ ಗೃಹ ಸಾಲಕ್ಕೆ ಆಗುವ ಪ್ರಕ್ರಿಯೆ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ಪಡೆಯಬಹುದು ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ಕರ್ನಾಟಕ ಬ್ಯಾಂಕ್ ಗೃಹ ಮತ್ತು ಕಾರು ಸಾಲಗಳಿಗಾಗಿ ಡಿಜಿಟಲ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಗ್ರಾಹಕರು ಅವರಿಗೆ ಸೂಕ್ತವೆನಿಸಿದ ಸಮಯದಲ್ಲಿ ತಡೆರಹಿತ ಡಿಜಿಟಲ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅಲ್ಲದೆ ತಕ್ಷಣದ ತಾತ್ವಿಕ ಅನುಮೋದನೆಗಳನ್ನು ಪಡೆಯಲು ಈ ಡಿಜಿಟಲ್‌ ಸೌಲಭ್ಯ ಅನುವು ಮಾಡಿಕೊಡುತ್ತದೆ. ಇದು ಗ್ರಾಹಕರ ಅಮೂಲ್ಯ ಸಮಯವನ್ನು ಉಳಿಸುತ್ತದೆ. ಪ್ರತಿ ಬಾರಿ ಬ್ಯಾಂಕ್‌ಗೆ ಹೋಗಬೇಕಾದ ಅನಿವಾರ್ಯತೆಯನ್ನು ತಪ್ಪಿಸುತ್ತದೆ.

ಇನ್ನು ಈ ವಿಶೇಷ ಅಭಿಯಾನದ ಬಗ್ಗೆ ಮಾತನಾಡಿರುವ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ ಎಸ್ ಮಹಾಬಲೇಶ್ವರ, ಸೂಕ್ತ ಸಮಯದಲ್ಲಿ ಗ್ರಾಹಕರ ದೃಢೀಕರಣ, ತೊಂದರೆ ಮುಕ್ತ ಮತ್ತು ಸರಳೀಕೃತ ಡಿಜಿಟಲ್ ಪ್ರಕ್ರಿಯೆಯ ಮೂಲಕ, ಮನೆ ಮತ್ತು ಕಾರು ಹೊಂದುವ ಗ್ರಾಹಕರ ಕನಸುಗಳನ್ನು ನನಸಾಗಿಸಲು ಈ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಬ್ಯಾಂಕ್‌ ಬಗ್ಗೆ ಒಂದಿಷ್ಟು ಮಾಹಿತಿ

ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಭಾರತದ ಪ್ರಮುಖ 'ಎ' ವರ್ಗದ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್. ಇದು ರಾಷ್ಟ್ರೀಕೃತ ಬ್ಯಾಂಕ್‌ ಎಂಬ ಗೊಂದಲ ಎಲ್ಲರಲ್ಲೂ ಇದೆ. ಆದರೆ ಇದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ ಅಲ್ಲ. ಇದು ಖಾಸಗಿ ರಂಗದ ಬ್ಯಾಂಕ್. 1924ರ ಫೆಬ್ರವರಿ 18 ರಂದು ಮಂಗಳೂರಿನಲ್ಲಿ ಈ ಬ್ಯಾಂಕನ್ನು ಸ್ಥಾಪಿಸಲಾಯಿತು. ಈಗಲೂ ಈ ಬ್ಯಾಂಕ್‌ನ ಕೇಂದ್ರ ಕಚೇರಿ ಮಂಗಳೂರು ನಗರದ ಪಂಪ್‌ವೆಲ್‌ ಬಳಿ ಇದೆ.

20ನೇ ಶತಮಾನದಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ರಾಷ್ಟ್ರವನ್ನು ಆವರಿಸಿದ ದೇಶಭಕ್ತಿಯ ಉತ್ಸಾಹದ ಬಳಿಕ ಬ್ಯಾಂಕ್ ರೂಪುಗೊಂಡಿತು. ನಂತರದ ದಿನಗಳಲ್ಲಿ ಶೃಂಗೇರಿ ಶಾರದಾ ಬ್ಯಾಂಕ್ ಲಿಮಿಟೆಡ್, ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಕರ್ನಾಟಕ ಇದರೊಂದಿಗೆ ವಿಲೀನವಾಯಿತು.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುದೀರ್ಘ 9 ದಶಕಗಳ ಅನುಭವದೊಂದಿಗೆ, ಗುಣಮಟ್ಟದ ಗ್ರಾಹಕ ಸೇವೆಯನ್ನು ಒದಗಿಸುವಲ್ಲಿ ಈ ಬ್ಯಾಂಕ್ ಮುಂಚೂಣಿಯಲ್ಲಿದೆ. ಸದ್ಯ ದೇಶದ 22 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 879 ಶಾಖೆಗಳಿವೆ. ದೇಶಾದ್ಯಂತ ಸುಮಾರು 10.21 ಮಿಲಿಯನ್ ಗ್ರಾಹಕರಿದ್ದಾರೆ.

IPL_Entry_Point

ವಿಭಾಗ