Ballari News: ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿದೆ ರಾಜ್ಯದ ಬೃಹತ್ ಕಲ್ಯಾಣ ಮಂಟಪ, 4 ಕೋಟಿ ವೆಚ್ಚದಲ್ಲಿ 1 ಎಕರೆ ಪ್ರದೇಶದಲ್ಲಿ ನಿರ್ಮಾಣ
ಸಾರಿಗೆ ಇಲಾಖೆಯಿಂದ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಕಲ್ಯಾಣ ಕೇಂದ್ರವು ರಾಜ್ಯದಲ್ಲೇ ಅತಿ ದೊಡ್ಡ ಕಲ್ಯಾಣ ಮಂಟಪವಾಗಲಿದೆ
ಬಳ್ಳಾರಿ: ಸುಮಾರು ಒಂದು ಎಕರೆ ಪ್ರದೇಶದಲ್ಲಿ, ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪವೊಂದು ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ಕಾರ್ಮಿಕ ಕಲ್ಯಾಣ ಕೇಂದ್ರ ಎಂದು ಕರೆಯಲಾಗುತ್ತದೆ. ಈ ಕುರಿತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಮಾಹಿತಿ ನೀಡಿದ್ದಾರೆ.
ಸಾರಿಗೆ ಇಲಾಖೆಯಿಂದ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಕಲ್ಯಾಣ ಕೇಂದ್ರವು ರಾಜ್ಯದಲ್ಲೇ ಅತಿ ದೊಡ್ಡ ಕಲ್ಯಾಣ ಮಂಟಪವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 1 ಎಕರೆ ಪ್ರದೇಶದಲ್ಲಿ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಕೇಂದ್ರ ನಿರ್ಮಾಣವಾಗಲಿದೆ. ನೆಲ ಮಹಡಿ 1306 ಚ. ಮೀ., ಮೊದಲ ಮಹಡಿ 1246 ಚ. ಮೀ. ಸೇರಿ ಒಟ್ಟು ವಿಸ್ತೀರ್ಣ 2553 ಚ. ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೇಗಿರಲಿದೆ ಕಲ್ಯಾಣ ಕೇಂದ್ರ?
ಸಚಿವ ಶ್ರೀರಾಮುಲು ಮಾಹಿತಿ ನೀಡಿದ ಪ್ರಕಾರ ನೂತನ ಕಲ್ಯಾಣ ಕೇಂದ್ರವು ಸುಮಾರು ಒಂದು ಸಾವಿರ ಜನರಿಗೆ ಕುಳಿತುಕೊಳ್ಳಲು ಸಾಧ್ಯವಾಗುವಂತಹ ಒಂದು ಪ್ರಾಂಗಣವನ್ನು ಮೊದಲ ಅಂತಸ್ತಿನಲ್ಲಿ ಹೊಂದಿರಲಿದೆ. ವರ ಮತ್ತು ವಧುವಿಗೆ ಎರಡು ಕೋಣೆಗಳು ಇರಲಿವೆ. ನೆಲ ಅಂತಸ್ತಿನಲ್ಲಿ 04 ಸುಸಜ್ಜಿತ ಕೊಠಡಿ, ಊಟದ ಪ್ರಾಂಗಣ, ಅಡುಗೆ ಕೋಣೆ, ಶೌಚಾಲಯ ಇರಲಿದೆ.
ಮೊದಲನ ಅಂತಸ್ತಿಗೆ ನೇರವಾಗಿ ಹೋಗಲು ಮುಂಭಾಗ ಹಾಗೂ ಹಿಂಭಾಗದಿಂದ ಹೋಗಲು ಮೆಟ್ಟಲು ಇರಲಿವೆ ಎಂದು ಅವರು ತಿಳಿಸಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಇನ್ನೇನು ಇರಲಿವೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಪಾರ್ಕಿಂಗ್, ಪಾರ್ಕ್ ಸೇರಿದಂತೆ ಇನ್ನಷ್ಟು ಮೂಲಸೌಕರ್ಯಗಳು ಇರಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬಳ್ಳಾರಿ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಹಿಂಭಾಗದ 2 ನೇ ಹಳೇ ಬಸ್ ಘಟಕದಲ್ಲಿ ನೂತನ ಕಾರ್ಮಿಕ ಕಲ್ಯಾಣ ಕೇಂದ್ರದ ನಿರ್ಮಾಣಕ್ಕೆ ಶನಿವಾರ ಶಂಕು ಸ್ಥಾಪನೆ ಹಾಗೂ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಶ್ರೀರಾಮುಲು ಅವರು ಈ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸರಕಾರಿ ನೌಕರರಿಗೆ 7ನೇ ವೇತನ ಆಯೋಗವು ರಚನೆಯಾಗಿದ್ದು, ಸಾರಿಗೆ ನಿಗಮವು 6ನೇ ವೇತನದಲ್ಲಿದ್ದು, ನಿಗಮದ ನೌಕರರಿಗೆ 7 ನೇ ವೇತನಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಚಾಲನಾ ಸಿಬ್ಬಂದಿ ಹಾಗೂ ನಿಗಮದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಬಳ್ಳಾರಿ ನಗರ ಶಾಸಕ ಜಿ. ಸೋಮ ಶೇಖರ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷ ಗೌಡ, ಮಹಾ ನಗರ ಪಾಲಿಕೆ ಸದಸ್ಯರಾದ ಇಬ್ರಾಹಿಂ ಬಾಬು, ಕಲ್ಪನ, ಕಲಬುರಗಿಯ ಕಕರಸಾ ನಿಗಮ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ, ಮುಖ್ಯ ಕಾಮಗಾರಿ ಎಂಜಿನಿಯರ್ ಮೆಹಬೂಬ ಸಾಹೇಬ ಎ. ದೇವೂರು, ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ಎಂ. ದೇವರಾಜ ಇದ್ದರು.