ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸರ ವಶಕ್ಕೆ; ಠಾಣೆಯೆದುರು ಬೆಂಬಲಿಗರು ಹೈಡ್ರಾಮಾ, FSL ಪರೀಕ್ಷೆಗೆ ಆಡಿಯೋ ತುಣುಕು-karnataka bjp mla munirathna sent to police custody in harassment bribery case audio sent to fsl test mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸರ ವಶಕ್ಕೆ; ಠಾಣೆಯೆದುರು ಬೆಂಬಲಿಗರು ಹೈಡ್ರಾಮಾ, Fsl ಪರೀಕ್ಷೆಗೆ ಆಡಿಯೋ ತುಣುಕು

ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸರ ವಶಕ್ಕೆ; ಠಾಣೆಯೆದುರು ಬೆಂಬಲಿಗರು ಹೈಡ್ರಾಮಾ, FSL ಪರೀಕ್ಷೆಗೆ ಆಡಿಯೋ ತುಣುಕು

BJP MLA Munirathna: ಬಿಜೆಪಿ ಶಾಸಕ ಮುನಿರತ್ನ ಅವರನ್ನು ಎರಡು ದಿನ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅವರ ಬೆಂಬಲಿಗರು ಪೊಲೀಸ್‌ ಠಾಣೆಯ ಮುಂದೆ ಹೈಡ್ರಾಮಾ ನಡೆಸಿದ್ದಾರೆ. ಮತ್ತೊಂದೆಡೆ ಪೊಲೀಸರು ಎಫ್​ಎಸ್​ಎಲ್‌ ಪರೀಕ್ಷೆಗೆ ಧ್ವನಿ ಮಾದರಿ ಕಳುಹಿಸಿದ್ದಾರೆ. (ವರದಿ-ಎಚ್.ಮಾರುತಿ)

ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸರ ವಶಕ್ಕೆ; ಠಾಣೆಯೆದುರು ಬೆಂಬಲಿಗರು ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸರ ವಶಕ್ಕೆ; ಠಾಣೆಯೆದುರು ಬೆಂಬಲಿಗರು ಹೈಡ್ರಾಮಾ

ಬೆಂಗಳೂರು: ಜಾತಿ ನಿಂದನೆ ಮತ್ತು ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಅವರನ್ನು ಎರಡು ದಿನಗಳ ಅವದಿಗೆ ಪೊಲೀಸರಿಗೆ ಒಪ್ಪಿಸಿ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಗುತ್ತಿಗೆದಾರರಾದ ಚೆಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್‌ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ದೂರುಗಳನ್ವಯ 2 ಪ್ರತ್ಯೇಕ ಎಫ್​​ಐಆರ್​​​ಗಳನ್ನು ದಾಖಲಿಸಲಾಗಿತ್ತು. ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ಶನಿವಾರ ರಾತ್ರಿ ವೈಯಾಲಿಕಾವಲ್‌ ಠಾಣೆ ಪೊಲೀಸರು ಮತ್ತು ಕೋಲಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.

ಶನಿವಾರ ರಾತ್ರಿಯೇ ಬೌರಿಂಗ್‌ ಆಸ್ಪತ್ರೆಯಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ನಂತರ ಪೊಲೀಸರು ವಿಚಾರಣೆ ನಡೆಸಿದ್ದರು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ  ವಿಶೇಷ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಎದುರು ಆರೋಪಿಯನ್ನು ಭಾನುವಾರ ಬೆಳಗಿನ ಜಾವ ಪೊಲೀಸರು ಹಾಜರುಪಡಿಸಿದ್ದರು. ಇವರನ್ನು ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ವಶಕ್ಕೆ ನೀಡುವಂತೆ ಪೊಲೀಸರು ಕೋರಿದ್ದರು. ಆದರೆ ನ್ಯಾಯಾಧೀಶರು ಎರಡು ದಿನ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದರು.

ಠಾಣೆ ಮುಂಭಾಗ ಬೆಂಬಲಿಗರಿಂದ ಹೈಡ್ರಾಮಾ

ಈ ಸಂದರ್ಭದಲ್ಲಿ ಮುನಿರತ್ನ ನನ್ನ ಮನೆಯ ಹತ್ತಿರವೇ ಪೊಲೀಸ್‌ ಠಾಣೆ ಇದೆ. ವಿಚಾರಣೆಗೆ ಕರೆದಿದ್ದರೆ ಹೋಗುತ್ತಿದ್ದೆ. ಆದರೆ ರಾಜಕೀಯ ಪ್ರಭಾವದಿಂದಾಗಿ ನನ್ನನ್ನು ಬಂಧಿಸಲಾಗಿದೆ. ನನಗೆ ಹೃದಯ ಸಂಬಂಧಿ ಮತ್ತು ಹರ್ನಿಯಾ ಸಮಸ್ಯೆ ಇದೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾರೆ. ಮುನಿರತ್ನ ಅವರನ್ನು ಬಂಧಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ವೈಯಾಲಿಕಾವಲ್‌ ಪೊಲೀಸ್‌ ಠಾಣೆ ಎದುರು ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಸೇರಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ನಂತರ ಭದ್ರತಾ ದೃಷ್ಟಿಯಿಂದ ಮುನಿರತ್ನ ಅವರನ್ನು ಅಶೋಕನಗರ ಪೊಲೀಸ್‌ ಠಾಣೆಗೆ ಕರೆ ತರಲಾಗಿತ್ತು. ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಪ್ರಕಾಶ್‌ ನೇತೃತ್ವದ ತಂಡ ಸುಮಾರು ಒಂದೂವರೆ ಗಂಟೆ ಕಾಲ ವಿಚಾರಣೆ ನಡೆಸಿತ್ತು. ತಮ್ಮ ಶಾಸಕರನ್ನು ಅಶೋಕ ನಗರ ಪೊಲೀಸ್‌ ಠಾಣೆಗೆ ಸ್ಥಳಾಂತರಿಸಿರುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗೂ ಮುನಿರತ್ನ ಬೆಂಬಲಿಗರು ದೌಡಾಯಿಸಿ ಪ್ರತಿಭಟನೆ ನಡೆಸಿದ್ದರು. ಪೊಲೀಸ್‌ ಠಾಣೆಗೆ ನುಗ್ಗುವ ಪ್ರಯತ್ನವನ್ನೂ ಮಾಡಿದ್ದರು. ಅದರೆ ಪೊಲೀಸರು ಕಬ್ಬಿಣದ ಗೇಟ್‌ ಅನ್ನು ಮುಚ್ಚಿ ವಿಚಾರಣೆಯನ್ನು ನಡೆಸಿದ್ದರು.

ಈ ಮಧ್ಯೆ ಮುನಿರತ್ನ ಪೊಲೀಸರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರ ಬಹುತೇಕ ಪ್ರಶ್ನೆಗಳಿಗೆ ನಾನು ಯಾವುದೇ ತಪ್ಪು ಮಾಡಿಲ್ಲ. ಕೆಲವರು ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಗುತ್ತಿಗೆದಾರ ಚೆಲುವರಾಜು ಜೊತೆ ಮಾತನಾಡುವಾಗ ಶಾಸಕ ಮುನಿರತ್ನ ಅವರು ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರನ್ನು ಜಾತಿ ಆಧಾರದಲ್ಲಿ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ತುಣುಕನ್ನು ವೇಲು ನಾಯ್ಕರ್‌ ಪೊಲೀಸರಿಗೆ ಸಲ್ಲಿಸಿದ್ದರು. ತಮ್ಮನ್ನೇ ಉದ್ದೇಶಿಸಿ ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ವೇಲು ದೂರು ಸಲ್ಲಿಸಿದ್ದರು.

FSL ಪರೀಕ್ಷೆಗೆ ಧ್ವನಿ ಮಾದರಿ

ಆಡಿಯೋ ತುಣುಕು, ಮುನಿರತ್ನ ಮತ್ತು ಚೆಲುವರಾಜು ಅವರ ಧ್ವನಿ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ಅವರ ಗನ್‌ ಮ್ಯಾನ್‌ ವಿಜಯ್‌ ಕುಮಾರ್‌, ಆಪ್ತ ಸಹಾಯಕರಾದ ವಸಂತ್‌ ಕುಮಾರ್‌ ಮತ್ತು ಆಭಿಷೇಕ್‌ ಅವರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ. ಶಾಸಕರ ಬೆಂಬಲಿಗರು ಚೆಲುವರಾಜು ಮತ್ತು ವೇಲು ನಾಯ್ಕರ್‌ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

mysore-dasara_Entry_Point