Karnataka BJP: ಜಿಲ್ಲಾಧ್ಯಕ್ಷರ ನೇಮಕಕ್ಕೆ ಉಸ್ತುವಾರಿಗಳಿದ್ದಾರೆ, ನನ್ನ ಪಾತ್ರ ಇಲ್ಲ, ಸುಧಾಕರ್ ಜತೆಗೆ ಯುದ್ದ ಏಕೆ ಮಾಡಲಿ; ವಿಜಯೇಂದ್ರ
ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಮಾಡಿದ ಟೀಕೆಗೆ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉತ್ತರ ನೀಡಿದ್ದಾರೆ.

ಮೈಸೂರು: ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಕರ್ನಾಟಕದಲ್ಲಿ ನಡೆದಿದೆ. ಜಿಲ್ಲಾಧ್ಯಕ್ಷರ ಆಯ್ಕೆಗೆ ಪ್ರತ್ಯೇಕ ಚುನಾವಣೆ ಸಮಿತಿ ಇದೆ. ಉಸ್ತುವಾರಿಗಳೂ ಇದ್ದಾರೆ. ಅವರು ಆಯಾ ಜಿಲ್ಲೆಗಳಿಗೆ ಹೋಗಿ ಅಲ್ಲಿನ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಆಲಿಸಿ ಅಧ್ಯಕ್ಷರನ್ನು ನೇಮಕ ಮಾಡುತ್ತಾರೆ. ಇದರಲ್ಲಿ ನನ್ನ ಪಾತ್ರವೇನೂ ಇರುವುದಿಲ್ಲ. ಹೀಗಿದ್ದರೂ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಲ್ಲಿನ ಸಂಸದ ಡಾ.ಕೆ.ಸುಧಾಕರ್ ಅವರು ನನ್ನನ್ನು ಉಲ್ಲೇಖಿಸಿ ಟೀಕೆ ಮಾಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಆದರೆ ಅವರು ಕರೆ ಮಾಡಿಲ್ಲ. ಅವರ ಕರೆ ಸ್ವೀಕರಿಸದಷ್ಟು ದೊಡ್ಡವನು ನಾನಲ್ಲ. ನನ್ನ ತಂದೆಯವರ ಹೆಸರು ತಳುಕು ಹಾಕಿ ಟೀಕಿಸುವುದು ಸರಿಯಲ್ಲ
ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಟೀಕೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೀಡಿದ ಉತ್ತರವಿದು. ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಭಾಗಿಯಾದ ವೇಳೆ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಹುತೇಕ ಸುಧಾಕರ್ ಟೀಕೆಗಳಿಗೆ ಉತ್ತರ ನೀಡಿದರು.
ನನಗೆ ಸುಧಾಕರ್ ಯಾವುದೇ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೇಸೆಜ್ ಮಾಡಿದ್ದರು. ನಾನು ಅನಿವಾರ್ಯವಾಗಿ ದೆಹಲಿಗೆ ಹೋಗಬೇಕಿತ್ತು. ಹಾಗಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕರೆ ಮಾಡಿಲ್ಲ. ಅಂತಹ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನು ನಾನಲ್ಲ. ಯಾವ ಅರ್ಥದಲ್ಲಿ ಸುಧಾಕರ್ ಟೀಕೆ ಮಾಡಿದ್ದಾರೋ ಗೊತ್ತಿಲ್ಲ. ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮಾತ್ರ ಮುಖ್ಯ ಎಂದರು ವಿಜಯೇಂದ್ರ.
ನಾನು ಯಡಿಯೂರಪ್ಪನವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ನಾನು ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷ ಆಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷ ಅಗಿದ್ದೇನೆ ಅಷ್ಟೇ. ಸುಧಾಕರ್ ಬಾಯಲ್ಲಿ ಯುದ್ಧದ ಮಾತು ಯಾಕೆ ಬಂತೋ ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನೇಮಕ ವಿಚಾರದಲ್ಲಿ ಅವರು ಬೇಸರ ಹೊರ ಹಾಕಿದ್ದಾರೆ. ಆದರೆ ನೇಮಕದಲ್ಲಿ ನನ್ನ ಯಾವ ಪಾತ್ರವೂ ಇಲ್ಲ.ನನ್ನ ಯಾವ ಪಾತ್ರವೂ ಬರುವುದಿಲ್ಲ. ಅಧ್ಯಕ್ಷರ ನೇಮಕದಲ್ಲಿ ಸುಧಾಕರ್ ಅವರನ್ನು ನಾನು ವಿಶ್ವಾಸಕ್ಕೆ ತೆಗದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಏಕಂದರೆ ಅದರ ಚುನಾವಣೆ ಉಸ್ತುವಾರಿ ಹೊತ್ತವರೇ ಬೇರೆ. ಉಸ್ತುವಾರಿಗಳು ಹೈಕಮಾಂಡ್ ಗೆ ಹೆಸರು ಕಳುಹಿಸಿದ್ದಾರೆ. ಹೈಕಮಾಂಡ್ ನವರು ಒಂದು ತೀರ್ಮಾನ ಮಾಡಿದ್ದಾರೆ. ಇದರಲ್ಲಿ ಯಾವ ಹಂತದಲ್ಲೂ ನನ್ನ ಪಾತ್ರ ಬರುವುದಿಲ್ಲ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ. ಹೀಗಾಗಿ ಈ ರೀತಿ ಮಾತನಾಡಿದ್ದಾರೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.
ಇದರಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ, ಯಡಿಯೂರಪ್ಪ ಮಗ ಅನ್ನುವ ಕಾರಣಕ್ಕೆ ಟಾರ್ಗೆಟ್ ಆಗಿದ್ದೇನೆ ಎಂಬುವುದನ್ನೆಲ್ಲಾ ನಾನು ಹೇಳುವುದಿಲ್ಲ. ನನಗೆ ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಹೀಗಾಗಿ ಎಲ್ಲಾ ಟೀಕೆಗಳಿಂದ ಪಾಠ ಕಲಿತಿದ್ದೇನೆ ಎನ್ನುವುದು ಅವರ ನೇರ ಉತ್ತರ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಎಲ್ಲಾ ಹಂತಕ್ಕೂ ಚುನಾವಣೆ ನಡೆಯುತ್ತಿದೆ. ರಾಜ್ಯಾಧ್ಯಕ್ಷ, ರಾಷ್ಟ್ರಧ್ಯಕ್ಷ ಎಲ್ಲದಕ್ಕೂ ನಮ್ಮಲ್ಲಿ ಆಂತರಿಕ ಚುನಾವಣೆಗಳು ನಡೆಯುತ್ತವೆ. ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಾಗಿದೆ. ಏನಾಗುತ್ತೋ ನೋಡೊಣ ಎಂದಷ್ಟೇ ಹೇಳಿದರು.
