ಬಿಜೆಪಿ ಹಿರಿಯ ನಾಯಕ, ಉತ್ತರಹಳ್ಳಿ ಮಾಜಿ ಶಾಸಕ, ಕನಕಪುರ ಸಂಸದರೂ ಆಗಿದ್ದ ಎಂ.ಶ್ರೀನಿವಾಸ್‌ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಹಿರಿಯ ನಾಯಕ, ಉತ್ತರಹಳ್ಳಿ ಮಾಜಿ ಶಾಸಕ, ಕನಕಪುರ ಸಂಸದರೂ ಆಗಿದ್ದ ಎಂ.ಶ್ರೀನಿವಾಸ್‌ ನಿಧನ

ಬಿಜೆಪಿ ಹಿರಿಯ ನಾಯಕ, ಉತ್ತರಹಳ್ಳಿ ಮಾಜಿ ಶಾಸಕ, ಕನಕಪುರ ಸಂಸದರೂ ಆಗಿದ್ದ ಎಂ.ಶ್ರೀನಿವಾಸ್‌ ನಿಧನ

ಬೆಂಗಳೂರಿನ ಉತ್ತರಹಳ್ಳಿ ಕ್ಷೇತ್ರದಿಂದ ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಹಿರಿಯ ಬಿಜೆಪಿ ನಾಯಕ ಎಂ.ಶ್ರೀನಿವಾಸ್‌ ಗುರುವಾರ ನಿಧನರಾದರು.

ಬೆಂಗಳೂರಿನ ಉತ್ತರಹಳ್ಳಿ ಮಾಜಿ ಶಾಸಕ ಎಂ,ಶ್ರೀನಿವಾಸ್‌ ನಿಧನರಾದರು.
ಬೆಂಗಳೂರಿನ ಉತ್ತರಹಳ್ಳಿ ಮಾಜಿ ಶಾಸಕ ಎಂ,ಶ್ರೀನಿವಾಸ್‌ ನಿಧನರಾದರು.

ಬೆಂಗಳೂರು: ಬಿಜೆಪಿಯಲ್ಲಿ ಉತ್ತರಹಳ್ಳಿ ಶ್ರೀನಿವಾಸ್‌ ಎಂದೇ ಹೆಸರಾಗಿದ್ದ ನಾಲ್ಕು ಬಾರಿ ಶಾಸಕ ಹಾಗೂ ಸಂಸದರೂ ಆಗಿದ್ದ ಹಿರಿಯ ನಾಯಕ ಎಂ.ಶ್ರೀನಿವಾಸ್‌ ಗುರುವಾರ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಯನ್ನುಅವರು ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಅವರಿಗೆ 83 ವರ್ಷ ವಯಸ್ಸಾಗಿತ್ತು.ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. ಅವರಿಗೆ ಪತ್ನಿ, ಪುತ್ರ ವೆಂಕಟೇಶ್, ಪುತ್ರಿಯರು, ಸಹೋದರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಇದ್ದಾರೆ. ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಜಯನಗರದ 7ನೇ ಬ್ಲಾಕ್ನಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಯೇ ಹಲವು ನಾಯಕರು ಅಂತಿಮ ದರ್ಶನ ಪಡೆದರು.ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಉತ್ತರಹಳ್ಳಿ ಸರ್ಕಲ್‌ನಲ್ಲಿರುವ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಬಳಿ ಇರುವ ಆರ್‌ಎಂಎಸ್ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅನಂತರ ಅಂತ್ಯಕ್ರಿಯೆ ನಡೆಯಲಿದೆ.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ 1983 ಹಾಗೂ 1985ರಲ್ಲಿ ಜನತಾಪಕ್ಷದಿಂದ ಗೆದ್ದಿದ್ದ ಅವರು ಆನಂತರ ಜನತಾದಳ ಸೇರಿದ್ದರು. 1989ರಲ್ಲಿ ಎಸ್.ರಮೇಶ್‌ ವಿರುದ್ದ ಸೋತಿದ್ದರು. 1994ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು.1998ರಲ್ಲಿ ಕನಕಪುರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನ ತೊರೆದಿದ್ದರು. ಆಗ ಆರ್‌. ಅಶೋಕ್‌ ಅವರಿಗೆ ಉತ್ತರಹಳ್ಳಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದರಿಂದ ಉಪಚುನಾವಣೆಯಲ್ಲಿ ಗೆದ್ದಿದ್ದರು. ನಂತರ ಸೋತಿದ್ದರಿಂದ ಅವರಿಗೆ ರಾಜರಾಜೇಶ್ವರಿ ಕ್ಷೇತ್ರದಿಂದ 2008ರಲ್ಲಿ ಮತ್ತೆ ವಿಧಾನಸಭೆಗೆ ಟಿಕೆಟ್‌ ನೀಡಲಾಗಿತ್ತು. ಈ ಕ್ಷೇತ್ರದಿಂದ ಅವರು ಗೆದ್ದಿದ್ದರು. ಆನಂತರ ಇಲ್ಲಿ ಮುನಿರತ್ನ ಗೆದ್ದಿದ್ದರು. ಇದಾದ ನಂತರ ಶ್ರೀನಿವಾಸ್‌ ಅವರು ಕಾಂಗ್ರೆಸ್‌ ಸೇರಿದ್ದರು.

ಬಿಜೆಪಿಯಿಂದ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರಿಗೂ ಸಚಿವ ಸ್ಥಾನ ಒಮ್ಮೆಯೂ ಸಿಗಲಿಲ್ಲ. ಆದರೂ ಬಿಜೆಪಿಯಲ್ಲಿಯೇ ಇದ್ದ ಅವರು ನಾಲ್ಕು ಬಾರಿ ಶಾಸಕರಾಗಿ, ಸಂಸದರಾಗಿ ದುಡಿದಿದ್ದರು. ಅವರ ಸಹೋದರ ಕೃಷ್ಣಪ್ಪ ಕೂಡ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ.

ಬಿಜೆಪಿಯಿಂದ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರಿಗೂ ಸಚಿವ ಸ್ಥಾನ ಒಮ್ಮೆಯೂ ಸಿಗಲಿಲ್ಲ. ಆದರೂ ಬಿಜೆಪಿಯಲ್ಲಿಯೇ ಇದ್ದ ಅವರು ನಾಲ್ಕು ಬಾರಿ ಶಾಸಕರಾಗಿ, ಸಂಸದರಾಗಿ ದುಡಿದಿದ್ದರು. ಅವರ ಸಹೋದರ ಕೃಷ್ಣಪ್ಪ ಕೂಡ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ.

ಅಶೋಕ ಸಂತಾಪ

ಮಾಜಿ ಸಂಸದರು, ಮಾಜಿ ಶಾಸಕರು ಮತ್ತು ಮಾರ್ಗದರ್ಶಕರಾಗಿದ್ದ ಶ್ರೀಯುತ ಎಂ ಶ್ರೀನಿವಾಸ್ ರವರ ನಿಧನ ಅತೀವ ದುಃಖದ ಸಂಗತಿ.ಜನಾನುರಾಗಿ ನಾಯಕರಾಗಿ, ಕಾರ್ಯಕರ್ತರಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಶಿಕ್ಷಣ ಪ್ರೇಮಿ, ಅಪ್ರತಿಮ ಸಂಘಟಕರಾಗಿ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಿರಿಯ ಮುತ್ಸದ್ದಿ ರಾಜಕಾರಣಿಯೂ ಆಗಿದ್ದರು. ಅವರ ಆತ್ಮಕ್ಕೆ ಭಗವಂತ ಸಾಯಜ್ಯ ನೀಡಲಿ. ಶ್ರೀಯುತರ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿಳಿಸಿದ್ದಾರೆ.

ವಿಜಯೇಂದ್ರ ಸಂತಾಪ

ಮಾಜಿ ಸಂಸದರು ಹಾಗೂ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮುತ್ಸದ್ದಿಗಳಾದ ಎಂ.ಶ್ರೀನಿವಾಸ್ ಅವರ ನಿಧನಕ್ಕೆ ಸಂತಾಪ ಕೋರುವೆ. ಜನಾನುರಾಗಿಯಾಗಿ ಬೆಂಗಳೂರಿನ ಅಭಿವೃದ್ಧಿಗೆ ತಮ್ಮದೇ ಆದ ಅನನ್ಯ ಕೊಡುಗೆ ನೀಡಿರುವ ಮಾನ್ಯ ಉತ್ತರಹಳ್ಳಿ ಶ್ರೀನಿವಾಸ್ ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.

Whats_app_banner