ಕರ್ನಾಟಕದ ಪ್ರಕಾಶಕರ ಅಳಲು: ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರನ್ನು ಹುಡುಕಿಕೊಡಿ
ಕರ್ನಾಟಕದಲ್ಲಿ ನಾಲ್ಕೈದು ವರ್ಷಗಳಿಂದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸುವ ವ್ಯವಸ್ಥೆಯಲ್ಲಿ ಆಗಿರುವ ವ್ಯತ್ಯಯ, ಪ್ರಕಾಶಕರಿಗೆ ಇದರಿಂದ ಆಗುತ್ತಿರುವ ಅಡೆತಡೆಗಳ ಕುರಿತು ಪ್ರಕಾಶಕ ಸೃಷ್ಟಿ ನಾಗೇಶ್ ಪೋಸ್ಟ್ ಚರ್ಚೆ ಹುಟ್ಟು ಹಾಕಿದೆ.
ಕರ್ನಾಟಕದಲ್ಲಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯ ಗ್ರಂಥಾಲಯಗಳಿಗೆ ಪುಸ್ತಕ ಆಯ್ಕೆ ಮಾಡುವ ಪ್ರಕ್ರಿಯೆ ನಾಲ್ಕು ವರ್ಷದಿಂದ ಸಮರ್ಪಕವಾಗಿ ನಡೆಯುತ್ತಲೇ ಇಲ್ಲ. ಐದು ವರ್ಷದ ಹಿಂದೆ ಗ್ರಂಥಾಲಯಗಳಿಗೆ ಪ್ರಕಾಶಕರು ನೀಡಿದ ಪುಸ್ತಕಗಳ ಬಾಕಿಯೇ ಬಂದಿಲ್ಲ. ಸತತ ಮೂರು ವರ್ಷಗಳ ಪಟ್ಟಿಯನ್ನೇ ಆಯ್ಕೆ ಮಾಡಿಲ್ಲ. ನಾಲ್ಕು ವರ್ಷದ ಪಟ್ಟಿಗೆ ಅಂತಿಮಗೊಳಿಸುವ ಸಭೆಯೂ ಆಗಿಲ್ಲ. ಇದರಿಂದ ರೋಸಿ ಹೋಗಿರುವ ಕರ್ನಾಟಕದ ಪ್ರಕಾಶಕರು, ಎರಡು ವರ್ಷದ ಹಿಂದೆ ನೇಮಿಸಿರುವ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರ ಮೇಲೆಯೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ಪ್ರಕಾಶಕ ಸೃಷ್ಟಿ ನಾಗೇಶ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಆಯ್ಕೆ ಸಮಿತಿ ಅಧ್ಯಕ್ಷರನ್ನು ಹುಡುಕಿಕೊಡಿ ಎನ್ನುವ ಪೋಸ್ಟ್ ಚರ್ಚೆ ಹುಟ್ಟು ಹಾಕಿದೆ.
ನಾಗೇಶ್ ಪೋಸ್ಟ್
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡಲು ಸರ್ಕಾರವು ಒಂದು ಉನ್ನತನ ಮಟ್ಟದ ಆಯ್ಕೆ ಸಮಿತಿಯನ್ನು ರಚಿಸುತ್ತದೆ. ಅದು ಎರಡು ವರ್ಷಗಳ ಅವಧಿಯ ಈ ಸಮಿತಿ ಆ ಕಾಲದಲ್ಲಿ ಬಂದ ಪುಸ್ತಕಗಳನ್ನು ಆಯ್ಕೆಮಾಡಿ ಪಟ್ಟಿಯನ್ನು ರಾಜ್ಯದ ಜಿಲ್ಲಾ/ ನಗರ ಗ್ರಂಥಾಲಯಗಳಿಗೆ ಕಳಿಸಿಕೊಡುವುದು ರೂಢಿ. ಆದರೆ ಈಚೀಚೆಗೆ ಅದೂ ಕೂಡ ಸರ್ಕಾರಿ ಆಡಳಿತ ಯಂತ್ರದ ಭಾಗವಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ.
ಈ ಹಿಂದೆ ಸಿದ್ದಲಿಂಗಯ್ಯ, ಚನ್ನಣ್ಣ ವಾಲೀಕರ್, ಗುರುಲಿಂಗ ಕಾಪಸೆ, ಷ. ಶೆಟ್ಟರ್, ಬಿ ವಿ ವಸಂತಕುಮಾರ್ ದೊಡ್ಡರಂಗೇಗೌಡರು ಮುಂತಾದವರೆಲ್ಲ ಈ ಸಮಿತಿಯ ಅಧ್ಯಕ್ಷರಾಗಿ ಸಮರ್ಪಕ ಕೆಲಸ ಮಾಡಿದರು.
ಕರೀಗೌಡ ಬೀಚನಹಳ್ಳಿ ನೇಮಕ
ಆದರೆ ಈಗ ಈ ಸಮಿತಿಯ ಅಧ್ಯಕ್ಷರಾಗಿರುವ ಕರೀಗೌಡ ಬೀಚನಹಳ್ಳಿ ಅವರು ಅಧ್ಯಕ್ಷರಾದ (ಆಕ್ಟೋಬರ್ 2023 ರಿಂದ) ಮೇಲೆ ಬದಲಾವಣೆಯ ಗಾಳಿ ಬೀಸಬಹುದೆಂಬ ನಿರೀಕ್ಷೆ ಲೇಖಕ/ಪ್ರಕಾಶಕವಲಯದಲ್ಲಿತ್ತು ಕಳೆದ ತಿಂಗಳು ಇಲಾಖೆಯ ಸಚಿವರೇ ಖುದ್ದು 2021ರ ಪಟ್ಟಿಯನ್ನು ಮರುಪರಿಶೀಲಿಸಿ ಅಂತಿಮಗೊಳಿಸಿ ಎಂದಿದ್ದರೂ ಇನ್ನೂ 2021 ರ ಪುಸ್ತಕಗಳ ಆಯ್ಕೆ ಪಟ್ಟಿ ಹೊರ ಬಂದಿಲ್ಲ. ಹೋಗಲಿ ಗ್ರಂಥಾಲಯ ಇಲಾಖೆಯ ಸರ್ಕಾರದ ಆದೇಶದಲ್ಲಿ ಪುಸ್ತಕಗಳಿಗೆ ಅವುಗಳ ಆಳತೆಗಳಿಗೆ ತಕ್ಕಂತೆ ಬೆಲೆ ನಿಗದಿ ಮಾಡಲು ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಅಧಿಕಾರವಿದೆ ಎಂದು ಆಯುಕ್ತರೇ ಖುದ್ದು ಹೇಳಿದರೂ ಸಹ ಅ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದ್ದಾರಂತೆ.(ಅಂದರೆ ಸರ್ಕಾರಕ್ಕೆ ಹೋದ ಮೇಲೆ ಅದು ಮುಗಿದ ಕಥೆ) ನಾವು ಈಗಾಗಲೇ ಬೆಲೆ ಪರಿಷ್ಕರಣೆಗೆ ಮನವಿಗಳನ್ನು ಕೊಟ್ಟು ಮೂರು ವರ್ಷವಾದರೂ ಇಬ್ಬರು ಮುಖ್ಯಮಂತ್ರಿಗಳ ಇಬ್ಬರ ಇಲಾಖಾ ಮಂತ್ರಿಗಳ ಪತ್ರವನ್ನೆ ಪರಿಗಣಿಸದ ಅಧಿಕಾರಿಗಳು ಇವರ ಪತ್ರಕ್ಕೆ ಬೆಲೆ ಕೊಡುತ್ತಾರೆಯೇ? ಅವರನ್ನೆ ಕೇಳೋಣವೆಂದರೆ ಅವರು ವಿದೇಶಕ್ಕೆ ಹೋಗಿರುವರಂತೆ ಯಾವಾಗ ಬರುತ್ತಾರೆಂಬ ಬಗ್ಗೆ ಮಾಹಿತಿ ಇಲ್ಲ. ಅವರು ಬಂದು 2021ರಪಟ್ಟಿ ಮಾಡುವುದು ಯಾವಾಗ? ಅದರ ಪ್ರಕಾರ ಪುಸ್ತಕ ಖರೀದಿ ಯಾವಾಗ ಮಾಡುತ್ತಾರೆ? ಹಣ ಯಾವಾಗ ಪಾವತಿಸುತ್ತಾರೆ? ಇನ್ನು 2021ರ ಪಟ್ಟಿಯೇ ಅಂತಿಮಗೊಂಡಿಲ್ಲವೆಂದಾದರೆ 2022, 2023 ಮತ್ತು 2024ರ ಪಟ್ಟಿ ಬರುವುದು ಯಾವಾಗ? ಅಷ್ಟರೊಳಗೆ ಯಾವ್ಯಾಯ ಪ್ರಕಾಶಕರು ಲೇಖಕರು ಈ ಲೋಕವನ್ನೇ ತ್ಯಜಿಸುತ್ತಾರೋ (ಈಗಾಗಲೇ ಒಂದಿಬ್ಬರು ಪ್ರಕಾಶಕರು ಈ ಲೋಕವನ್ನೇ ಬಿಟ್ಟಿದ್ದಾರೆ) ಅ ದೇವರೇ ಬಲ್ಲ.
ಬಾಕಿಯೂ ಬಂದಿಲ್ಲ
ಇಷ್ಟು ವರ್ಷ ಪಟ್ಟಿ ಬೇಗ ಬರುತ್ತಿತ್ತು. ಹಣ ಇರುತ್ತಿರಲಿಲ್ಲ. ಆದರೆ, ಈಗ ಬೆಂಗಳೂರಿನ ಐದೂ ವಲಯಗಳಲ್ಲಿ ಪುಸ್ತಕ ಖರೀದಿಗೆ ಹಣವಿದೆ. ರಾಜ್ಯದ ಅಷ್ಟು ಜಿಲ್ಲೆಗಳ ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲೂ ಸಹ ಪುಸ್ತಕಗಳ ಆಯ್ಕೆ ಪಟ್ಟಿಯೇ ಇಲ್ಲ.
ಹೋಗಲಿ ಬಜೆಟ್ ಆದರೂ ಆಯ್ತಾ ಎಂದರೆ ಅದೂ ಇಲ್ಲ. ಈಗಾಗಲೇ 2025 ಜನವರಿ ಕೂಡ ದಾಟುತ್ತಿದೆ. ಯಾರಿಗೆ ಹೇಳೋಣ ನಮ್ಮ ಪ್ರಬ್ಲಾಮ್ ಹೇಳಿದರೂ, ಕೇಳುವವರು ಯಾರು? ಎನ್ನುವುದು ಸೃಷ್ಟಿ ನಾಗೇಶ್ ಅವರ ಪ್ರಶ್ನೆ.
ಹಲವರ ಆಕ್ರೋಶ
ಇದಕ್ಕೆ ಪ್ರತಿಕ್ರಿಯಿಸಿರುವ ಗಿರಿಜಾಪತಿ ನೇರಂಕಿಮಠದ, ಪ್ರಾಯಶಃ ಈ ಬಗೆಯ ಪುಸ್ತಕಗಳ ಖರೀದಿ ಉಪೇಕ್ಷೆಯ ಹಿಂದೆ ಸರಕಾರದ ಕೈವಾಡವು ಇದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತದೆ, ಕರಿಗೌಡ ಬಿಚೇನಹಳ್ಳಿ ಅವರು ಸಹ ಇಲ್ಲಿ ಒಂದು ರೀತಿಯ ದಾಳವಾಗಿರಬಹುದು, ಸಹಜವಾಗಿಯೇ ಇದು ನೀನು ಅತ್ತ ನಾನು ಇತ್ತ ನಡುವೆ ಲೇಖಕ ಮತ್ತು ಪ್ರಕಾಶಕ ಇದ್ದರೂ ನಿಷ್ಪ್ರಯೋಜಕನಾಗಿ ಸತ್ತ ಎನ್ನುವ ಸ್ಥಿತಿಯಂತೆ ತೋರುತ್ತದೆ. ಇನ್ನೂ 2021ರ ಕೃತಿಗಳ ಆಯ್ಕೆ ಮಾಡಿರುವುದು ತೀರಾ ಅಸಮಪ೯ಕವಾಗಿದೆ, ದೊಡ್ಡ ಮಟ್ಟದ ಪ್ರಕಾಶಕರಿಗೆ ಮಣೆ ಹಾಕಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಈ ನಿಟ್ಟಿನಲ್ಲಿ ಪ್ರಕಾಶಕರು ಲೇಖಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕಿದೆ, ಕಾರಣ ಅವರ ಅತಿರೇಕ ವಂಚನೆಗೆ ಒಳಗಾದವರೇ ಬಹಳಷ್ಟು ಜನರಿದ್ದಾರೆ. ಒಟ್ಟಿನಲ್ಲಿ ಸಾಂಘಿಕ ಯತ್ನಗಳು ಅಗತ್ಯ ಎಂದು ಹೇಳಿದ್ದಾರೆ.
ಮೈಸೂರಿನ ಪ್ರಕಾಶಕರಾದ ನಿಂಗರಾಜು ಚಿತ್ತಣ್ಣನವರ್, ಪುಸ್ತಕವನ್ನೇ ನಂಬಿ ಬಂದವ. ಹೀಗಾದರೆ ಬದುಕುವುದಾದರೂ ಹೇಗೆ ಎಂದು ಬೇಸರದಿಂದಲೇ ಪ್ರಶ್ನಿಸಿದ್ದಾರೆ.
ಸದನದಲ್ಲಿ ಸಚಿವರು ಬಹಿರಂಗವಾಗಿ ಈ ಇಲಾಖೆಯನ್ನು ಸರಿಪಡಿಸುವೆ ಎಂದಿದ್ದನ್ನು ನೋಡಿದ್ದೆ.ಈ ಇಲಾಖೆಗೆ ಯಾವ ಸಚಿವರೂ, ಅಧಿಕಾರಿಗಳು ಬಂದರು ಇದೆ ಗೋಳು. ಅಂದ ಹಾಗೆ ಮೊನ್ನೆ ಪ್ರಕಾಶಕರೊಬ್ಬರು ಆರ್ಥಿಕ ಬಿಕ್ಕಟ್ಟಿನಿಂದ ತೀರಿ ಹೋದ ಸುದ್ದಿ ನೋಡಿದೆ. ಸರ್ಕಾರಕ್ಕೆ ಗುತ್ತಿಗೆದಾರರು ಸತ್ತರೆ ಅವರಿಗೆ ಪರಿಹಾರ ಸಂತಾಪ ಸೂಚಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇ. ಒಂದು ಲೆಕ್ಕದಲ್ಲಿ ಪ್ರಕಾಶಕರು ಗುತ್ತಿಗೆದಾರರೇ ಇದರ ಬಗ್ಗೆ ಯಾಕೆ ಮೌನವಾಗಿದೆ ಅನ್ನೋದೆ ಪ್ರೆಶ್ನೆ. ಇಲ್ಲಿ ಲೇಖಕ /ಪ್ರಕಾಶಕರ ಸಂಘಟನಾ ಕೊರತೆಯೂ ಇದೆ.ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿದ್ರೆ ಸರಿ ದಾರಿಗೆ ಬರಬಹುದು ಎನ್ನುವ ರಾಜೇಶ್ ಬಿಹೊನ್ನೇನಹಳ್ಳಿ ಪ್ರಶ್ನಿಸುತ್ತಾರೆ.