Karnataka Budget: ಕರ್ನಾಟಕ ಬಜೆಟ್‌ಗೆ ಗೃಹಜ್ಯೋತಿ ಬೆಳಕು, ಉಚಿತ ಯೋಜನೆಯ ಜಾರಿ ರಾಜ್ಯಕ್ಕೆ ದುಬಾರಿಯಾಗುವುದೇ, ಇಲ್ಲಿದೆ ವಿಶ್ಲೇಷಣೆ
Gruha Jyoti Scheme Karnataka: ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳು ಪ್ರಮುಖ ಆಕರ್ಷಣೆಯಾಗಲಿದೆ. ಉಚಿತ ವಿದ್ಯುತ್, ಉಚಿತ ಬಸ್ ಇತ್ಯಾದಿಗಳು ಜನರಿಗೆ ಸಾಕಷ್ಟು ಉಪಯುಕ್ತವಾಗಿದ್ದರೂ ಸರಕಾರದ ಬೊಕ್ಕಸಕ್ಕೆ ಹೊರೆಯಾಗಬಹುದು.
ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳು ಪ್ರಮುಖ ಆಕರ್ಷಣೆಯಾಗಲಿದೆ. ಉಚಿತ ವಿದ್ಯುತ್, ಉಚಿತ ಬಸ್ ಇತ್ಯಾದಿಗಳು ಜನರಿಗೆ ಸಾಕಷ್ಟು ಉಪಯುಕ್ತವಾಗಿದ್ದರೂ ಸರಕಾರದ ಬೊಕ್ಕಸಕ್ಕೆ ಹೊರೆಯಾಗಬಹುದು. ರಾಜ್ಯ ಸರಕಾರವು ಒಂದಿಷ್ಟು ಬುದ್ಧಿವಂತಿಕೆಯಿಂದ ಬೇರೆ ವೆಚ್ಚಗಳನ್ನು ತಗ್ಗಿಸಿ ಅಥವಾ ಬೇರೆ ಆದಾಯದ ಮೂಲಗಳನ್ನು ಗುರುತಿಸಿ/ ಹೊಂದಾಣಿಕೆ ಮಾಡಿ ಈ ಯೋಜನೆಗಳಿಗೆ ಹಣ ಹೊಂದಿಸಬಹುದು.
ಗ್ಯಾರಂಟಿ ಜಾರಿಗೆ 62 ಸಾವಿರ ಕೋಟಿ ರೂ.
ಒಂದು ಅಂದಾಜಿನ ಪ್ರಕಾರ ಕಾಂಗ್ರೆಸ್ ಸರಕಾರವು ಜಾರಿಗೊಳಿಸಲು ಮುಂದಾಗಿರುವ ಉಚಿತ ಯೋಜನೆಗಳಿಗೆ ವರ್ಷಕ್ಕೆ 62 ಸಾವಿರ ಕೋಟಿ ರೂಪಾಯಿ ಬೇಕು. ಅಂದರೆ, ಬಜೆಟ್‌ನ ಶೇಕಡ 20ರಷ್ಟು ಭಾಗ ಈ ಉಚಿತ ಯೋಜನೆಗಳಿಗಾಗಿಯೇ ನೀಡಬೇಕು. ಉಳಿದ ಶೇಕಡ 80 ಭಾಗದಲ್ಲಿ ಉಳಿದ ವಿಷಯಗಳನ್ನು ನೋಡಬೇಕು. ಉಚಿತ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಗಾತ್ರ ಹೆಚ್ಚಿರುವ ಸೂಚನೆಯನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಈ ಹಿಂದಿನ ಸರಕಾರವು 2,51,541 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿತ್ತು. ಆದರೆ, ಈ ಬಾರಿ 3.35 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುವ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅಂದರೆ, ಹಿಂದಿನ ಸರಕಾರಕ್ಕಿಂತ ಸುಮಾರು 83,459 ಕೋಟಿ ಗಾತ್ರ ಹೆಚ್ಚಿಸಬಹುದು. ಬಜೆಟ್ ಗಾತ್ರ ಹೆಚ್ಚಿಸುವ ಮೂಲಕ ಬೇರೆ ಯೋಜನೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಆದರೆ, ಈ ಹೆಚ್ಚುವರಿ ಹೊರೆಯು ರಾಜ್ಯದ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಈ ಹೆಚ್ಚುವರಿ ಹೊರೆ ಮತ್ತು ಬಜೆಟ್‌ನ ಇತರೆ ವಿಷಯಗಳ ಆಧಾರದಲ್ಲಿ ಈ ಬಾರಿ ವಿತ್ತೀಯ ಕೊರತೆ ಎಷ್ಟಾಗಬಹುದು ಎಂಬ ಸಂದೇಹವೂ ಇದೆ. ಕೆಲವು ವರದಿಗಳ ಪ್ರಕಾರ ವಿತ್ತೀಯ ಕೊರತೆಯು 60,581 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ.
ಗೃಹಜ್ಯೋತಿ ಖರ್ಚುವೆಚ್ಚ
ಇಂಧನ ಸಚಿವರಾದ ಕೆಜೆ ಜಾರ್ಜ್ ಈ ಹಿಂದೆ ನೀಡಿದ ಮಾಹಿತಿ ಪ್ರಕಾರ ಗೃಹಜ್ಯೋತಿ ಯೋಜನೆಗೆ ಸರಕಾರ ಸುಮಾರು 13 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಬೇಕಿದೆ. ವಿದ್ಯುತ್ ಸರಕಾರದ ಪ್ರಮುಖ ಆದಾಯದ ಮೂಲವಲ್ಲ. ವಿವಿಧ ವಿದ್ಯುತ್ ಸಬ್ಸಿಡಿ ಹೊರೆಯೇ ಸರಕಾರದ ಮೇಲೆ ಸಾಕಷ್ಟಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ (ಚೆಸ್ಕಾಂ), ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ) ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ)ನಡಿ ಇರುವ ಉಚಿತ ವಿದ್ಯುತ್ ವ್ಯಾಪ್ತಿಗೆ ಬರುವ ಮನೆಗಳಿಗೆ ವಿದ್ಯುತ್ ಒದಗಿಸುವುದು ಸರಕಾರಕ್ಕೆ ದೊಡ್ಡ ಹೊರೆಯಾಗಲಿದೆ. ಈ ರೀತಿ ಉಚಿತವಾಗಿ ವಿದ್ಯುತ್ ಪಡೆಯುವ 1.70 ಕೋಟಿ ಮನೆಗಳಿದ್ದರೆ, ಸರಕಾರವು ಪ್ರತಿತಿಂಗಳು 1,955 ಕೋಟಿ ರೂಪಾಯಿಯನ್ನು ಗೃಹಜ್ಯೋತಿಗೆ ಮೀಸಲಿರಿಸಬೇಕಾಗುತ್ತದೆ.
ಮುಂದಿನ ದಿನಗಳಲ್ಲಿ ಎಸ್ಕಾಂಗಳ ಮೇಲೆ ಇದು ಹೆಚ್ಚಿನ ಹೊರೆಯನ್ನು ಹೊರೆಸಬಹುದು. ಇತ್ತೀಚೆಗೆ ಬಿಜೆಪಿಯ ಸುನಿಲ್ ಕುಮಾರ್ ಕಾರ್ಕಳ ಅವರು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ "ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಎಲ್ ಮೇಲಿನ 10,203 ಕೋಟಿ ರೂ.ಸಾಲವೂ ಸೇರಿದಂತೆ 2013ರಿಂದ 2018ರ ಅವಧಿಯಲ್ಲಿ 33,414.20 ಕೋಟಿ ರೂ.ಸಾಲದ ಗಂಟನ್ನು ಎಸ್ಕಾಂಗಳ ಮೇಲೆ ಹೊರಿಸಿದ್ದಿರಿ. ನೀವೇ ಸ್ಟೇರಿಂಗ್ ಹಿಡಿದು ‘ಸಮನ್ವಯ’ ಸಾಧಿಸಿದ ಮೈತ್ರಿ ಸರಕಾರದ ಕಾಲದಲ್ಲಿ 27,178 ಕೋಟಿ ರೂ.ಸಾಲದ ಹೊರೆ ಎಸ್ಕಾಂಗಳ ಮೇಲೆ ಬಿತ್ತು" ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
ಬೇರೆರಾಜ್ಯಗಳ ಉಚಿತ ಯೋಜನೆಗಳು
ಈಗಾಗಲೇ ಪಂಜಾಬ್, ದೆಹಲಿ ಆಪ್ ಸರಕಾರಗಳು ಅರ್ಹರಿಗೆ ಉಚಿತ ವಿದ್ಯುತ್ ನೀಡುತ್ತಿವೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಬಂದ ಬಳಿಕ 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಯೋಜನೆ ಆರಂಭಿಸಿತ್ತು. ಈ ಯೋಜನೆ ಆರಂಭವಾಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಪಿಎಸ್‌ಪಿಸಿಎಲ್ ಡೇಟಾ ಪ್ರಕಾರ ಈ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬಂದ ಬಳಿಕ ಒಂಬತ್ತು ತಿಂಗಳಲ್ಲಿ ಸರಕಾರಕ್ಕೆ 12, 485 ಕೋಟಿ ರೂ. ವೆಚ್ಚವಾಗಿದೆ. ಅಂದರೆ, ಸರಕಾರ ಪ್ರತಿದಿನ 46 ಕೋಟಿ ರೂಪಾಯಿಯನ್ನು ಉಚಿತ ವಿದ್ಯುತ್‌ಗಾಗಿ ಖರ್ಚು ಮಾಡುತ್ತದೆ. ಇದು ರಾಜ್ಯದ ಶೇಕಡ 70ರಷ್ಟು ಜನರಿಗೆ ಉಚಿತ ವಿದ್ಯುತ್ ನೀಡಿದರೆ ಉಂಟಾಗುವ ವೆಚ್ಚ. ಆದರೆ, ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಹೇಳಿದ ಪ್ರಕಾರ ರಾಜ್ಯದ ಶೇಕಡ 90ರಷ್ಟು ಜನರು ಉಚಿತ ವಿದ್ಯುತ್ / ಸಬ್ಸಿಡಿ ವಿದ್ಯುತ್ ಬಳಸುತ್ತಿದ್ದಾರೆ. ಹೀಗಾಗಿ, ಸರಕಾರದ ಮೇಲಿನ ಹೊರೆಯೂ ಹೆಚ್ಚಾಗಿರಲಿದೆ. ಪಂಜಾಬ್‌ನ ಸಬ್ಸಿಡಿ ಬಿಲ್ ಕೂಡ 24,865 ಕೋಟಿ ರೂಪಾಯಿಗೆ ತಲುಪಿದೆ. ಸರಕಾರ ಪಾವತಿಸಲು ದೊಡ್ಡ ಮೊತ್ತ ಬಾಕಿ ಉಳಿದಿದೆ.
ದೆಹಲಿ ಸರಕಾರ ಪರಿಚಯಿಸಿದ ಉಚಿತ ವಿದ್ಯುತ್ ಯೋಜನೆ ಕೂಡ ಬೊಕ್ಕಸಕ್ಕೆ ಹೊಡೆತ ನೀಡಿದೆ. ಪ್ರತಿತಿಂಗಳು 400 ಯೂನಿಟ್ ಉಚಿತ ವಿದ್ಯುತ್‌ಗೆ 2022-23ರ ವರ್ಷದಲ್ಲಿ 3250 ಕೋಟಿ ರೂಪಾಯಿ ಖರ್ಚು ಮಾಡಿದೆ ಎನ್ನಲಾಗಿದೆ. ಅಲ್ಲಿನ 54.5 ಲಕ್ಷ ಜನರಲ್ಲಿ 27.7 ಲಕ್ಷ ಜನರು 200 ಯೂನಿಟ್‌ಗಿಂತ ಕಡಿಮೆ ಯೋಜನೆಯ ಲಾಭವನ್ನು, ಸುಮಾರು 15.5 ಲಕ್ಷ ಗ್ರಾಹಕರು 201-400 ಯೂನಿಟ್ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ದೆಹಲಿ ಸರಕಾರವು 2015-16ರಲ್ಲಿ 1,200 ಕೋಟಿ ರೂ.ನ ಪವರ್ ಸಬ್ಸಿಡಿ ನೀಡಿತ್ತು. 2016-17ರಲ್ಲಿ ಇದು 1,577 ಕೋಟಿ ರೂಗೆ ತಲುಪಿತ್ತು. 2017-18ರಲ್ಲಿ ಇದು 1,676 ಕೋಟಿ ರೂ.ಗೆ ತಲುಪಿತ್ತು. 2018-19ರಲ್ಲಿ ಇದು 1,699 ಕೋಟಿ ರೂ.ಗೆ ತಲುಪಿತ್ತು.
ಯೋಜನೆ ಕಾರ್ಯಸಾಧ್ಯತೆ ಕಷ್ಟವಲ್ಲ
ಮೇಲಿನ ಎರಡು ಸರಕಾರಗಳು ಉಚಿತ ವಿದ್ಯುತ್ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿವೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾದರೂ ಅದನ್ನು ಸರಿದೂಗಿಸಿಕೊಂಡು ಸರಕಾರ ನಡೆಸುತ್ತಿವೆ. ಆದರೆ, ಈ ರೀತಿ ಸರಕಾರಗಳು ಇಂತಹ ಯೋಜನೆಗೆ ಹಣ ಹೊಂದಿಸುವ ರೀತಿ, ಪಡೆಯುವ ಸಾಲವು ರಾಜ್ಯವೊಂದರ ಮೇಲೆ ಪರಿಣಾಮ ಬೀರಿಯೇಬೀರುತ್ತದೆ. ಇಂತಹ ವೆಚ್ಚಗಳನ್ನು ಸರಿದೂಗಿಸಲು ಬೇರೆ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ಬಿಲ್ ಹೆಚ್ಚು ಮಾಡುವುದು ಇತ್ಯಾದಿ ಕ್ರಮಗಳು ಹೊಸ ಆಕ್ರೋಶವೊಂದರ ಜನನಕ್ಕೂ ಕಾರಣವಾಗಬಹುದು ಎನ್ನುವವರಿದ್ದಾರೆ. ಇದೇ ಸಮಯದಲ್ಲಿ ಉಚಿತ ಬಸ್, ಉಚಿತ ವಿದ್ಯುತ್, ಉಚಿತ ಹಣ ಇತ್ಯಾದಿ ಖರ್ಚುಗಳನ್ನು ಸರಿದೂಗಿಸಲು ಬೇರೆ ವಿಷಯಗಳಿಗೆ ತೆರಿಗೆ ಹೆಚ್ಚಿಸುವ ಕ್ರಮವೂ ಆರ್ಥಿಕತೆಗೆ ಸೂಕ್ತವಲ್ಲ.
ಗೃಹಜ್ಯೋತಿ- ಬಡವರ ಮುಖದಲ್ಲಿ ಬೆಳಕು
ಬಡಕುಟುಂಬಗಳಿಗೆ ಕರೆಂಟ್ ಬಿಲ್ ಇತ್ಯಾದಿಗಳು ಹೊರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಧ್ಯಮ ವರ್ಗದವರಿಗೂ ವಿದ್ಯುತ್ ಬಿಲ್ ಹೊರೆಯೇ. ವಿಶೇಷವಾಗಿ ನಗರಗಳಲ್ಲಿ ಪುಟ್ಟ ಬಾಡಿಗೆ ಮನೆಗಳಲ್ಲಿ ವಾಸಿಸುವವರೂ ಐನೂರು ಸಾವಿರ ರೂಪಾಯಿಯನ್ನು ಪ್ರತಿತಿಂಗಳು ಕರೆಂಟ್ ಬಿಲ್‌ಗೆ ಮೀಸಲಿರಿಸಬೇಕಾಗುತ್ತದೆ. ಸರಕಾರವು ಉಚಿತವಾಗಿ ನೀಡುವುದು ಖಂಡಿತವಾಗಿಯೂ ಬಡವರ ಮುಖದಲ್ಲಿ ಹೊಸ ಬೆಳಕು ಮೂಡಿಸಲಿದೆ. ಆದರೆ, ಇದು ಚುನಾವಣಾ ರಾಜಕೀಯವಾಗಿರುವುದರಿಂದ ಅಗತ್ಯ ಇರುವವರಿಗೆ ಮಾತ್ರವಲ್ಲದೆ ಅಗತ್ಯ ಇಲ್ಲದವರೂ ಇಂತಹ ಉಚಿತ ಪ್ರಯೋಜನ ಪಡೆಯುತ್ತಾರೆ, ಸರಕಾರಿ ಬಸ್‌ನಲ್ಲಿ ಎಲ್ಲರೂ ಉಚಿತವಾಗಿ ಪ್ರಯಾಣಿಸಿದಂತೆ.
ಅಧಿಕಾರ ಪಡೆಯಲು ನೀಡಿದ ಅಶ್ವಾಸನೆ, ಅಧಿಕಾರ ಪಡೆದ ಬಳಿಕ ಅದನ್ನು ಜಾರಿಗೊಳಿಸಬೇಕಾದ ತುರ್ತು ಸದ್ಯ ರಾಜ್ಯಸರಕಾರದ ಮುಂದಿದೆ. ಆದರೆ, ಗೃಹಜ್ಯೋತಿ ಯೋಜನೆಯು ಎಸ್ಕಾಂಗಳಿಗೆ ಇನ್ನಷ್ಟು ನಷ್ಟ ತರುವುದೇ, ಒಂದು ದಶಕದಿಂದ ಬಾಕಿ ಉಳಿದಿರುವ 4,229 ಕೋಟಿ ರೂ. ಮೊತ್ತಕ್ಕೆ ಇನ್ನಷ್ಟು ಸೇರ್ಪಡೆಯಾಗುವ ಸೂಚನೆಯೇ? ಇತ್ಯಾದಿ ಪ್ರಶ್ನೆಗಳೂ ಇವೆ. ಈಗಾಗಲೇ ಹಲವು ಬಜೆಟ್‌ಗಳನ್ನು ಯಶಸ್ವಿಯಾಗಿ ಮಂಡಿಸಿರುವ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಹೇಗಿದೆಯೋ "ಜುಲೈ 7ರ ಬಜೆಟ್‌ನಲ್ಲಿ ಉತ್ತರ ದೊರಕಬಹುದು" ಕಾದುನೋಡೋಣ.