Gruha Jyoti Scheme: ಗೃಹಜ್ಯೋತಿ ಯೋಜನೆಗೆ 13,910 ಕೋಟಿ ರೂಪಾಯಿ ಘೋಷಣೆ; ಇಂಧನ ಇಲಾಖೆ ಮೇಲೆ ಸಾಲದ ಹೊರೆ
KPCL Financial Condition: ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ತಿಳಿಸಿರುವಂತೆ, 2023ರ ಮಾರ್ಚ್ ಅಂತ್ಯದ ವೇಳೆಗೆ ವಿವಿಧ ವಿದ್ಯುತ್ ಉತ್ಪಾದನಾ ಹಾಗೂ ವಿತರಣಾ ಸಂಸ್ಥೆಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ಪಾವತಿ ಮಾಡಬೇಕಿರುವ ಮೊತ್ತ 16,132 ಕೋಟಿ ರೂಪಾಯಿ.
ಬೆಂಗಳೂರು: ಬಜೆಟ್ ಪ್ರಸ್ತಾವದಲ್ಲಿ ಇಂಧನ ಇಲಾಖೆಯ ಸ್ಥಿತಿ- ಗತಿ ನೋಡಿದರೆ ‘ಗೃಹ ಜ್ಯೋತಿ’ ಯೋಜನೆ ಜಾರಿಯು ಅದಿನ್ನೆಂಥ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಮೂಡಿಸುವಂತಿದೆ. ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ತಿಳಿಸಿರುವಂತೆ, 2023ರ ಮಾರ್ಚ್ ಅಂತ್ಯದ ವೇಳೆಗೆ ವಿವಿಧ ವಿದ್ಯುತ್ ಉತ್ಪಾದನಾ ಹಾಗೂ ವಿತರಣಾ ಸಂಸ್ಥೆಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ಪಾವತಿ ಮಾಡಬೇಕಿರುವ ಮೊತ್ತ 16,132 ಕೋಟಿ ರೂಪಾಯಿ. “ವಿದ್ಯುತ್ ಸರಬರಾಜು ಕಂಪನಿಗಳು ಸಕಾಲದಲ್ಲಿ ಪಾವತಿ ಮಾಡದೇ ಇರುವುದರಿಂದ ಕರ್ನಾಟಕ ವಿದ್ಯುತ್ ನಿಗಮದ ಆರ್ಥಿಕ ಸ್ಥಿತಿಯು ಸಾಕಷ್ಟು ಕುಸಿದಿದೆ” ಎಂದು ಬಜೆಟ್ ನಲ್ಲಿ ಹೇಳಲಾಗಿದೆ.
ಕೆಪಿಸಿಎಲ್ ಸಾಲದ ಪ್ರಮಾಣ 2023ರ ಮಾರ್ಚ್ ಅಂತ್ಯಕ್ಕೆ 31,145 ಕೋಟಿ ರೂಪಾಯಿ ಇದೆ. ಒಟ್ಟಾರೆಯಾಗಿ ಇಂಧನ ಇಲಾಖೆಯಡಿ ಬರುವಂಥ ವಿವಿಧ ಕಂಪನಿಗಳ ಸಾಲದ ಪ್ರಮಾಣವು 91,911 ಕೋಟಿ ರೂಪಾಯಿ ಆಗಿದೆ. ಈ ಅಂಕಿ- ಅಂಶಗಳೇ ಇಂಧನ ಇಲಾಖೆಯ ಆರ್ಥಿಕ ಸ್ಥಿತಿ ಅದೆಷ್ಟು ಗಂಭೀರವಾಗಿದೆ ಎಂಬುದನ್ನು ತಿಳಿಸುತ್ತದೆ.
ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ, ಗುಣಮಟ್ಟದ ವಿದ್ಯುತ್ ಉತ್ಪಾದನೆಗೆ, ಪ್ರಸರಣ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ 2035ನೇ ಇಸವಿ ತನಕದ ಮುನ್ನೋಡ ಸಿದ್ಧಪಡಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇನ್ನು ಚುನಾವಣೆ ಪೂರ್ವದಲ್ಲಿ ನೀಡಿದ್ದ ಹಾಗೂ ಈಗ ಜಾರಿ ಮಾಡುವುದಕ್ಕೆ ಹೊರಟಿರುವ ಗೃಹಜ್ಯೋತಿ ಯೋಜನೆಗೆ 13,910 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ತಿಳಿಸಲಾಗಿದೆ.