ಕರ್ನಾಟಕ ಬಜೆಟ್ 2024: ಕೃಷ್ಣಾ ತೀರದ ಜಿಲ್ಲೆಗಳಿಗೆ ಬೇಕಿದೆ ನೀರಾವರಿ ಗ್ಯಾರಂಟಿ, ಅವಳಿ ಜಿಲ್ಲೆಯ ಬೇಡಿಕೆ ಏನು
ದಶಕದ ಹಿಂದೆ ಕೃಷ್ಣೆಗಾಗಿ ಸಿದ್ದರಾಮಯ್ಯ ಅವರು ಪಾದಯಾತ್ರೆ ಕೈಗೊಂಡು ಈ ಭಾಗದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ನೀಡಿದ್ದರು. ಈ ಬಾರಿಯೂ ಕರ್ನಾಟಕ ಬಜೆಟ್ 2024ರಲ್ಲಿ ಕೃಷ್ಣಾ ಯೋಜನೆಗೆ ಅನುದಾನ ಒದಗಿಸುವ ವಿಶ್ವಾಸ ಜನರಲ್ಲಿದೆ.ವರದಿ: ಸಮೀವುಲ್ಲಾ ಉಸ್ತಾದ್, ವಿಜಯಪುರ

ವಿಜಯಪುರ: ಗ್ಯಾರಂಟಿ ಯೋಜನೆಗಳ ಜಾರಿ ಮಾಡುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕೃಷ್ಣಾ ನದಿ ಹಂಚಿಕೊಂಡಿರುವ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಯಾವ ಯೋಜನೆ ಗ್ಯಾರಂಟಿಯನ್ನು ಕರ್ನಾಟಕ ಬಜೆಟ್ 2024ರ ಮೂಲಕ ನೀಡಲಿದೆಯೇ ಎನ್ನುವುದು ಕುತೂಹಲವಿದೆ. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ದೊಡ್ಡ ಅನುದಾನ, ಸರ್ಕಾರಿ ವೈದ್ಯಕೀಯ ಕಾಲೇಜು ಹೀಗೆ ಅನೇಕ ಬೇಡಿಕೆಗಳು ಈಡೇರಿಕೆಯಾಗಿಲ್ಲ. ಒಂದು ರೀತಿ ಇವುಗಳು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನತೆಯ ಖಾಯಂ ಬೇಡಿಕೆಗಳಾಗಿಬಿಟ್ಟಿವೆ.
ಪಾದಯಾತ್ರೆ ನೆನಪು
ದಶಕದ ಹಿಂದೆ ನೀರಾವರಿ ಯೋಜನೆಗಳಿಗಾಗಿ ಕೂಡಲಸಂಗಮದವರೆಗೆ ಪಾದಯಾತ್ರೆ ನಡೆಸುವ ಮೂಲಕ ಜನರ ಮನಗೆದ್ದು ಮೊದಲ ಬಾರಿಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ನೆನೆಗುದಿಗೆ ಬಿದ್ದರುವ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಅನುದಾನ ನೀಡುವ ಮೂಲಕ ಈ ಬಾರಿಯಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಕೃಷ್ಣೆಯ ಮಕ್ಕಳ ಋಣ ತೀರಿಸುವವರೇ? ಎನ್ನುವ ಪ್ರಶ್ನೆ ಈ ಭಾಗದ ರೈತರ ಮನಸಿನಲ್ಲಿದೆ.
ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೀಸಲಿಡುವ ಅನುದಾನ ಎಷ್ಟಿರಬಹುದು, ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಕೆಲಸ ಈಗಲಾದರೂ ಆಗುತ್ತಾ, ಕರ್ನಾಟಕ ತನ್ನ ಪಾಲಿನ 711 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರದ ಈ ಅವಧಿಯಲ್ಲಾದರೂ ಸಾಧ್ಯವಾಗುತ್ತಾ ಎಂದು ಜನತೆ ಆಶಾಗೋಪುರವನ್ನೆ ನಿರ್ಮಿಸಿಕೊಂಡಿದೆ.
2013 ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲರು ಜಿಲ್ಲೆಯಲ್ಲಿ ಮಾಡಿರುವ ನೀರಾವರಿ ಕೆಲಸಗಳಿಂದ ಈ ಬಾರಿ ಜನತೆ ಸಿದ್ಧರಾಮಯ್ಯ ನವರ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಬೇಕಿದೆ ಅನುದಾನ
ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಈ ಹಿಂದೆ ಕೃಷ್ಣೆಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿಯೇ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಒಂದು ಲಕ್ಷ ಕೋಟಿ ರೂ. ಬೇಕು ಎಂದು ಹೇಳಿದ್ದರು. ಮತ್ತು ಈ ಹಿಂದೆ ಕೃಷ್ಣೆಗೆ ಪಾದಯಾತ್ರೆ ಮಾಡಿ ಪ್ರತಿ ವರ್ಷ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವ ಮೂಲಕ ಈ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು ಆದರೆ ಇದು ವರೆಗೂ ಆ ಕೆಲಸ ಆಗಿಲ್ಲಾ, ಹೀಗಾಗಿ ಈ ಬಾರಿಯ ಬಜೆಟ್ ನಲ್ಲಾದರು ಕೃಷ್ಣಾ ಕೊಳ್ಳದ ಯೋಜನೆಗಳ ಪೂರ್ಣಗೊಳಿಸಲು ವಿಶೇಷ ಅನುದಾನ ನೀಡುವವರೆ ಎಂಬುದು ಬಜೆಟ್ ಮಂಡನೆಯ ನಂತರವಷ್ಟೆ ತಿಳಿಯಲಿದೆ.
ಕೃಷ್ಣಾ ನ್ಯಾಯಾಧೀಕರಣದ ತೀರ್ಪುಬಂದು ಹದಿನಾಲ್ಕು ವರ್ಷಗಳಾದವು. ಆದರೆ ನಮಗಿನ್ನೂ ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸದೇ ಅದು ಸಾಧ್ಯವಾಗದು. ಜಲಾಶಯದ ಎತ್ತರ ಹೆಚ್ಚಿಸಲು ಭೂಸ್ವಾಧೀನ, ಪುನರ್ವಸತಿ, ಪುನರ್‌ನಿರ್ಮಾಣ ಕಾರ್ಯ ಚುರುಕಾಗಬೇಕು. ಅದಕ್ಕೆಲ್ಲ ದೊಡ್ಡ ಪ್ರಮಾಣದ ಅನುದಾನ ಬೇಕು. ಒಂದೊಮ್ಮೆ ಹತ್ತು ವರ್ಷಗಳ ಮೊದಲೇ ಯೋಜನೆ ಪೂರ್ಣಗೊಂಡಿದ್ದರೆ ಮುಂಗಾರು ವಿಳಂಬವಾದಾಗ ಕುಡಿಯುವ ನೀರಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡುವುದು ತಪ್ಪುತ್ತಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಬೇಡಿಕೆ ಹಲವು
ವಿಶೇಷವಾಗಿ ಬಹುನಿರೀಕ್ಷಿತ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಹೊರ್ತಿ ರೇವಣಸಿದ್ದೇಶ್ವರ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ದೊಡ್ಡಮೊತ್ತದ ಅನುದಾನ, ಪುನರ್‌ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಅನುದಾನ ಮೀಸಲು, ವಿಜಯಪುರ ಮಹಾನಗರ ಪ್ರಗತಿಗೆ ವಿಶೇಷ ಅನುದಾನ ಹೀಗೆ ಅನೇಕ ನಿರೀಕ್ಷೆಗಳನ್ನು ಜನತೆ ಇರಿಸಿಕೊಂಡಿದ್ದಾರೆ.
ಪ್ರವಾಸೋದ್ಯಮ ಸಚಿವರು ಸಹ ಉತ್ತರ ಕರ್ನಾಟಕ ಭಾಗದವರೇ ಇರುವುದರಿಂದ ಈ ಭಾಗದ ಪ್ರವಾಸಿ ತಾಣಗಳ ಪ್ರಗತಿಗೂ ಸಹ ದೊಡ್ಡಮೊತ್ತದ ಯೋಜನೆಗಳು ವಿಜಯಪುರಕ್ಕೆ ಒಲಿದು ಬರಲಿವೆಯೇ ಎಂಬುದು ಕಾದು ನೋಡಬೇಕಿದೆ.
ಈ ಎಲ್ಲವೂಗಳ ಜೊತೆಗೆ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಉತ್ತೇಜನ ಹಾಗೂ ಅನುದಾನ, ವಿಮಾನ ನಿಲ್ದಾಣ ಲೋಕಾರ್ಪಣೆ ಅಂತಿಮ ಕಾಮಗಾರಿಗೆ ಅನುದಾನ, ಮಹಾನಗರ ಪಾಲಿಕೆಗೆ ವಿಶೇಷ ಅನುದಾನ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಅನುದಾನ ಹೀಗೆ ನೂರೆಂಟು ನಿರೀಕ್ಷೆಗಳ ಅರಮನೆ ಜನತೆ ನಿರ್ಮಿಸಿಕೊಂಡಿದ್ದಾರೆ.
ವರದಿ: ಸಮೀವುಲ್ಲಾ ಉಸ್ತಾದ
