ಕರ್ನಾಟಕ ಬಜೆಟ್‌ 2025: ಮಾರ್ಚ್‌ 14 ರಂದು ಮಂಡನೆಗೆ ಸಿದ್ದತೆ ಶುರು; ಬಜೆಟ್‌ ಗಾತ್ರ 4.1 ಲಕ್ಷ ಕೋಟಿ ರೂಪಾಯಿಗೆ ಏರಿಕೆ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್‌ 2025: ಮಾರ್ಚ್‌ 14 ರಂದು ಮಂಡನೆಗೆ ಸಿದ್ದತೆ ಶುರು; ಬಜೆಟ್‌ ಗಾತ್ರ 4.1 ಲಕ್ಷ ಕೋಟಿ ರೂಪಾಯಿಗೆ ಏರಿಕೆ ನಿರೀಕ್ಷೆ

ಕರ್ನಾಟಕ ಬಜೆಟ್‌ 2025: ಮಾರ್ಚ್‌ 14 ರಂದು ಮಂಡನೆಗೆ ಸಿದ್ದತೆ ಶುರು; ಬಜೆಟ್‌ ಗಾತ್ರ 4.1 ಲಕ್ಷ ಕೋಟಿ ರೂಪಾಯಿಗೆ ಏರಿಕೆ ನಿರೀಕ್ಷೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ದತೆಯನ್ನು ಆರಂಭಿಸಿದ್ದಾರೆ. ಸದ್ಯದಲ್ಲೇ ಇಲಾಖಾವಾರು ಬೇಡಿಕೆಗಳ ಸಭೆ ನಡೆಸಿ ಬಜೆಟ್‌ ದಿನಾಂಕ ಹಾಗೂ ಮೊತ್ತವನ್ನು ಅಂತಿಮಗೊಳಿಸುವರು (ವರದಿ: ಎಚ್‌.ಮಾರುತಿ, ಬೆಂಗಳೂರು)

ಕರ್ನಾಟಕ ಬಜೆಟ್‌ ಮಂಡನೆಗೆ ಸಿದ್ದರಾಮಯ್ಯ ಪೂರ್ವಭಾವಿ ತಯಾರಿ ಆರಂಭಿಸಿದ್ದಾರೆ.
ಕರ್ನಾಟಕ ಬಜೆಟ್‌ ಮಂಡನೆಗೆ ಸಿದ್ದರಾಮಯ್ಯ ಪೂರ್ವಭಾವಿ ತಯಾರಿ ಆರಂಭಿಸಿದ್ದಾರೆ.

ಬೆಂಗಳೂರು: 2025-26 ನೇ ಸಾಲಿನ ಬಜೆಟ್‌ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 16 ರಂದು ಮಂಡಿಸಲಿದ್ದಾರೆ.

ಇದು ಅವರ 16ನೆಯ ದಾಖಲೆಯ ಬಜೆಟ್‌ ಮಂಡನೆಯಾಗಿರುತ್ತದೆ, ರಾಜ್ಯದಲ್ಲಿ ಜುಲೈ 2023ರಲ್ಲಿ 14 ನೇ ಬಜೆಟ್‌ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್‌ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15 ನೇ ಬಜೆಟ್‌ ಆಗಿತ್ತು. ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಗುಜರಾತ್‌ ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ ಅವರು 18 ಬಜೆಟ್‌ ಮಂಡಿಸುವ ಮೂಲಕ ದೇಶದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಬೇಕೆಂದರೆ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್‌ ಗಳನ್ನು ಮಂಡಿಸಬೇಕಾಗುತ್ತದೆ.

ಸಿದ್ದರಾಮಯ್ಯ ಅವರ 16 ನೇ ಬಜೆಟ್‌ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟುತ್ತದೆ. ಬಲ್ಲ ಮೂಲಗಳ ಪ್ರಕಾರ ಮುಖ್ಯಮಂತ್ರಿಗಳು 4.1 ಲಕ್ಷ ಕೋಟಿ ರೂ.ಗಳ ಬಜೆಟ್‌ ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ. 2024-25ನೇ ಸಾಲಿನ ಬಜೆಟ್‌ ಗಾತ್ರ 3.7 ಲಕ್ಷ ಕೋಟಿಗಳಷ್ಟಿದ್ದು ಈ ವರ್ಷ ಶೇ. 10ರಷ್ಟು ಹೆಚ್ಚಳವಾಗಲಿದೆ.

ತಜ್ಞರ ಅಭಿಪ್ರಾಯ ಹೇಗಿದೆ

ಬಜೆಟ್‌ ಗಾತ್ರ 4 ಲಕ್ಷ ಕೋಟಿ ರೂ ದಾಟುತ್ತಿರುವುದು ರಾಜ್ಯದ ಆರ್ಥಿಕತೆ ಬೆಳೆಯುತ್ತಿರುವುದರ ಲಕ್ಷಣ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. ರಾಜ್ಯದ ತೆರಿಗೆ ವ್ಯವಸ್ಥೆ ಮತ್ತು ಸಂಗ್ರಹವೂ ಏರುಮುಖಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 1.9 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹದ ಗುರಿ ದಾಟಿದೆ. ಕೇಂದ್ರದಿಂದ ಬರುವ ಆದಾಯವೂ ಹೆಚ್ಚಳವಾಗುವ ಸಂಭವವಿದೆ. ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ 44,489 ಕೋಟಿ ರೂ.ಗಳಿಂದ ಅಂದಾಜು 50,000 ಕೋಟಿ ರೂ.ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಇನ್ನು ಕೇಂದ್ರ ಸರ್ಕಾರದಿಂದ ಬರುವ ಅನುದಾನ 13,500 ಕೋಟಿ ರೂ.ಗಳಿಂದ 16,000 ರೂ.ಗಳಿಗೆ ಹೆಚ್ಚಳವಾಗಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಹಜವಾಗಿಯೇ ಬಜೆಟ್‌ ಗಾತ್ರ ಹೆಚ್ಚಳವಾಗಲಿದೆ.

ಬಜೆಟ್‌ ಹೆಚ್ಚಳ ಮಾಡುವುದನ್ನು ಸ್ವಾಗತಿಸುತ್ತೇವೆ. ರಾಜ್ಯದ ಜನರ ಮೇಲೆ ಹೆಚ್ಚಿನ ತೆರಿಗೆಯನ್ನೂ ಹೇರಲಾಗುತ್ತಿದೆ ಎನ್ನುವುದನ್ನು ಮರೆಯುವಂತಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ಶೀಘ್ರದಲ್ಲೇ ಮುಖ್ಯಮಂತ್ರಿಗಳು ಆದಾಯ ತರುವ ಇಲಾಖೆಗಳ ಪರಿಶೀಲನಾ ಸಭೆಗಳನ್ನು ನಡೆಸಲಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ ಸಾಮಾನ್ಯವಾಗಿ ಜನವರಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನವನ್ನು ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ಬಜೆಟ್‌ ಅಧಿವೇಶನದೊಂದಿಗೆ ವಿಲೀನಗೊಳಿಸಲು ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಕಾರ ಮಾರ್ಚ್‌ 10 ರಿಂದ ಅಧಿವೇಶನ ಆರಂಭವಾಗಲಿದೆ. ಮೊದಲ ನಾಲ್ಕು ದಿನಗಳನ್ನು ರಾಜ್ಯಪಾಲರ ಭಾಷಣ ಮತ್ತು ಅದರ ಮೇಲಿನ ಚರ್ಚೆಗೆ ಮೀಸಲಿಡಲಾಗುತ್ತದೆ. ನಂತರ ಬಜೆಟ್‌ ಮಂಡನೆ ಮಾಡುವುದು ಸರ್ಕಾರದ ಚಿಂತನೆಯಾಗಿದೆ.

ಬೇಗನೇ ಮಂಡಿಸಲೂ ಬಹುದು

ಮಾರ್ಚ್‌ ತಿಂಗಳಲ್ಲೇ ಬಜೆಟ್‌ ಮಂಡನೆ ಮಾಡಲಾಗುತ್ತದೆ ಎನ್ನುವುದು ಅಂತಿಮ ನಿರ್ಧಾರ ಅಲ್ಲ. ಕೇಂದ್ರ ಸರ್ಕಾರ ಎಂದಿನಂತೆ ಫೆಬ್ರವರಿ 1ರಂದು ಬಜೆಟ್‌ ಮಂಡನೆಯಾಗುತ್ತದೆ. ಇದೇ ಮಾದರಿಯಲ್ಲಿ ಫೆಬ್ರವರಿ ತಿಂಗಳಲ್ಲೇ ಬಜೆಟ್‌ ಮಂಡನೆಯಾದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಪ್ರಸಕ್ತ ಸಾಲಿನ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2024ರ ಫೆಬ್ರವರಿ 16 ರಂದು ಮಂಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ವರದಿ: ಎಚ್‌.ಮಾರುತಿ, ಬೆಂಗಳೂರು

Whats_app_banner