Karnataka Budget 2025: ಕರಾವಳಿಯ ಮೊದಲ ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ: ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2025: ಕರಾವಳಿಯ ಮೊದಲ ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ: ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ

Karnataka Budget 2025: ಕರಾವಳಿಯ ಮೊದಲ ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ: ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ

Karnataka Budget 2025: ಕರಾವಳಿ ಭಾಗಕ್ಕೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎನ್ನುವುದು ಹಳೆಯ ಬೇಡಿಕೆ. ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಪುತ್ತೂರಿಗೆ ವೈದ್ಯಕೀಯ ಕಾಲೇಜು ಮಂಜೂರಾಗುವ ನಿರೀಕ್ಷೆ ಗರಿಗೆದರಿವೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡದ ಪುತ್ತೂರಿಗೆ ಈ ಬಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡದ ಪುತ್ತೂರಿಗೆ ಈ ಬಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗುವ ನಿರೀಕ್ಷೆಯಿದೆ.

Karnataka Budget 2025: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೇ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗಬೇಕು ಎಂಬುದು ಹಳೆಯ ಕನಸು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಇದ್ದರೆ ಒಳ್ಳೆಯದು ಎಂಬುದು ಕಳೆದ ಏಳೆಂಟು ವರ್ಷಗಳಿಂದ ಕೇಳಿಬರುತ್ತಿರುವ ಮಾತು. ಇದೀಗ ಆ ಹೋರಾಟಕ್ಕೆ ಬಲ ಬಂದಿದ್ದು, ತಾರ್ಕಿಕ ಅಂತ್ಯ ದೊರಕುವ ಭರವಸೆಯೂ ಸಿಕ್ಕಿದೆ. ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡುವ ಕುರಿತ ಆಶಾಭಾವನೆಯನ್ನು ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೊಂದಿದ್ದಾರೆ. ಇದಕ್ಕೆ ನಡೆಸಿದ ಪ್ರಯತ್ನಗಳಿಗೆ ಪೂರಕ ಸ್ಪಂದನೆಯೂ ದೊರಕಿರುವುದಾಗಿ ಅವರು ತಿಳಿಸಿದ್ದಾರೆ.

ಸರಕಾರಿ ಮೆಡಿಕಲ್ ಕಾಲೇಜು ಯಾಕೆ ಬೇಕು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎಂಟು ಮೆಡಿಕಲ್ ಕಾಲೇಜುಗಳಿವೆ, ಆದರೆ ಸರಕಾರಿ ಮೆಡಿಕಲ್ ಕಾಲೇಜು ಇದ್ದರೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೆರಿಟ್ ಸೀಟು ದೊರಕಿದರೂ ಇತರ ಶುಲ್ಕಗಳನ್ನು ಭರಿಸುವ ಶಕ್ತಿ ಸಾಮಾನ್ಯ ಜನರಿಗೆ ಇರುವುದಿಲ್ಲ. ಇಷ್ಟೆಲ್ಲ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬುದು ಸ್ಥಳೀಯರ ಒತ್ತಾಯ.

ಇನ್ನು ಉಡುಪಿ ಜಿಲ್ಲೆಯಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಹಕ್ಕೊತ್ತಾಯ ಬಹಳ ಹಿಂದಿನಿಂದಲೇ ಇದೆ. ಈಗಾಗಲೇ ತಜ್ಞರು, ವೈದ್ಯರು, ವೈದ್ಯಕೀಯ ವ್ಯಾಸಂಗ ಕಲಿಕೆಯ ಆಸಕ್ತರು ಈ ಕುರಿತು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಿಂದ ತೊಡಗಿ, ಮನವಿಪತ್ರ ನೀಡುವಲ್ಲಿಯವರೆಗೆ ಇದನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ ಆದರೆ ಇನ್ನೂ ಮೆಡಿಕಲ್ ಕಾಲೇಜು ಸರಕಾರದ್ದೇ ಆಗುವುದು ಕನಸಾಗಿಯೇ ಉಳಿದಿದೆ.

ಸರಕಾರ ಗಮನ ಯಾಕೆ ಕೊಡ್ತಿಲ್ಲ?

ಸಾಮಾನ್ಯವಾಗಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ವೇಳೆ ಆ ಜಿಲ್ಲೆಗಳಲ್ಲಿ ಇತರ ಖಾಸಗಿ ಕಾಲೇಜುಗಳು ಇವೆಯೇ ಮೆಡಿಕಲ್ ಕಾಲೇಜುಗಳು ಬೇರೆ ಇವೆಯೇ ಎಂಬುದನ್ನು ಗಮನದಲ್ಲಿಟ್ಟು ಸರಕಾರ ಮಂಜೂರು ಮಾಡುತ್ತದೆ. ಇಂಥ ಸೂತ್ರವನ್ನು ಅನುಸರಿಸಿದರೆ, ಈ ಬಾರಿಯೂ ಮೆಡಿಕಲ್ ಕಾಲೇಜು ದೊರಕುವುದು ಗಗನಕುಸುಮ. ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳು ಇರುವ ಕಾರಣ , ಹೇಗೂ ಇದೆಯಲ್ಲ, ಇನ್ನೆಷ್ಟು ಎಂಬ ಧೋರಣೆ ತಳೆದರೆ, ಈ ಬಾರಿಯೂ ಆಸೆಗೆ ತಣ್ಣೀರೆರಚಿದಂತಾಗುತ್ತದೆ.

ಪುತ್ತೂರಿನಲ್ಲೇ ಯಾಕೆ?

ಮೆಡಿಕಲ್ ಕಾಲೇಜು ಪುತ್ತೂರಿನಲ್ಲೇ ಯಾಕೆ ಸ್ಥಾಪಿಸಬೇಕು? ಇತರ ಭಾಗಗಳಲ್ಲಿ ಮಾಡಿದರೆ ಆಗುವುದಿಲ್ಲವಾ ಎಂಬ ಪ್ರಶ್ನೆಗೆ ಅಶೋಕ್ ಕುಮಾರ್ ರೈ ಅವರು ತಮ್ಮದೇ ಲೆಕ್ಕಾಚಾರವನ್ನು ಮಂಡಿಸುತ್ತಾರೆ.

ಪುತ್ತೂರಿನಲ್ಲಿ ಪ್ರಸ್ತುತ 100 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆ ಇದೆ. 300 ಹಾಸಿಗೆಗಳ ಆಸ್ಪತ್ರೆಗೆ ಬೇಡಿಕೆ ಸಲ್ಲಿಸಲಾಗಿದೆ. ಮಂಜೂರಾದಲ್ಲಿ ಅದನ್ನು ಮೆಡಿಕಲ್ ಕಾಲೇಜಿಗೆ ಮಂಜೂರಾದ ಸೇಡಿಯಾಪು ಜಾಗದಲ್ಲಿ ನಿರ್ಮಿಸಬಹುದು. 300 ಹಾಸಿಗೆಗಳ ಆಸ್ಪತ್ರೆ ಬಂದರೆ, ಮೆಡಿಕಲ್ ಕಾಲೇಜು ತರುವ ಹಾದಿಯಲ್ಲಿ ಅರ್ಧ ಯಶಸ್ಸು ದೊರಕಿದಂತಾಗುತ್ತದೆ.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿರುವ ನಿಧಿಯಿಂದ ಸರಕಾರ ವರ್ಷಕ್ಕೆ 200 ಕೋಟಿ ರೂಗಳಂತೆ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜಿಗೆ ನಿರಂತರ ನಾಲ್ಕು ವರ್ಷ ಕೊಟ್ಟರೆ ಸುಸಜ್ಜಿತ ಮೆಡಿಕಲ್ ಕಾಲೇಜು ತಲೆಎತ್ತಲಿದೆ.

ಮಂಗಳೂರು ಹೊರತುಪಡಿಸಿದರೆ, ಪುತ್ತೂರು ಪ್ರಮುಖ ಕೇಂದ್ರ. ಹೀಗಾಗಿ 10 ವರ್ಷಗಳ ಹಿಂದೆಯೇ ಈ ಭಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂಬ ಕನಸು ಮೊಳಕೆಯೊಡೆಯಿತು. ಶಕುಂತಳಾ ಶೆಟ್ಟಿ ಅವರು ಶಾಸಕರಾಗಿದ್ದ ಸಂದರ್ಭ 40 ಎಕರೆ ಸರಕಾರಿ ಜಾಗವನ್ನು ಸರಕಾರಿ ಮೆಡಿಕಲ್ ಕಾಲೇಜು ಹೆಸರಿಗೆ ಮೀಸಲಿಡಲಾಯಿತು. ಸದ್ಯಕ್ಕೆ ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟೊಂದು ಪ್ರಮಾಣದ ಜಾಗ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟಿಲ್ಲ ಎನ್ನುತ್ತಾರೆ ಹೋರಾಟಗಾರರು.

ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅನೇಕ ಹಂತದ ಅಭಿಯಾನ ನಡೆಸಿದೆ. ವಿಚಾರ ಸಂಕಿರಣ, ಸಭೆ, ಸಹಿ ಸಂಗ್ರಹ, ಕರಪತ್ರ ಹಂಚಿಕೆ, ಮೆರವಣಿಗೆ ಇತ್ಯಾದಿ ನಡೆಸಲಾಗಿದೆ.

ಅಶೋಕ್ ರೈ ಶಾಸಕರಾದ ಮೇಲೆ ಈ ನಿಟ್ಟಿನಲ್ಲಿ ಅನೇಕ ಬಾರಿ ಸಿಎಂ, ಡಿಸಿಎಂ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿಯನ್ನೂ ಮಾಡಲಾಗಿದೆ. ಕಳೆದ ವರ್ಷ ಬಜೆಟ್ ವೇಳೆಯೇ ಒತ್ತಡ ಹಾಕಲಾಗಿತ್ತು. ಇತ್ತೀಚೆಗೆ ಮಂಗಳೂರಿಗೆ ಸಿಎಂ ಬಂದಿದ್ದಾಗ ಪ್ರಸ್ತಾಪವನ್ನೂ ಮಾಡಿದ್ದರು. ಆಗ ಸಿಎಂ ನೋಡೋಣ ಎಂದಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಅವರು ನೋಡೋಣ ಎಂದಿದ್ದು ಕಾರ್ಯರೂಪಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner