Karnataka Budget 2023: ಟೀಕೆಗಳಿಗೆ ಆಸ್ಪದ ಇಲ್ಲದ ಸರ್ವಸ್ಪರ್ಶಿ ಬಜೆಟ್; ಮುಂಬರುವ 7 ವಿಧಾನಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಟೀಕೆಗಳಿಗೆ ಆಸ್ಪದ ಇಲ್ಲದ ಸರ್ವಸ್ಪರ್ಶಿ ಬಜೆಟ್; ಮುಂಬರುವ 7 ವಿಧಾನಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

Karnataka Budget 2023: ಟೀಕೆಗಳಿಗೆ ಆಸ್ಪದ ಇಲ್ಲದ ಸರ್ವಸ್ಪರ್ಶಿ ಬಜೆಟ್; ಮುಂಬರುವ 7 ವಿಧಾನಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

Karnataka Budget Analysis: ವಿಧಾನಸಭಾ ಚುನಾವಣೆ ಎದುರಿಸಲಿರುವ ಏಳು ರಾಜ್ಯಗಳ ಕಣ್ಣು ಕರ್ನಾಟಕ ಬಜೆಟ್‌ ಮೇಲೆ ನೆಟ್ಟಿತ್ತು. 5 ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ, ಇದನ್ನು ಹೇಗೆ ಜಾರಿಗೊಳಿಸುವುದೆಂಬ ಕುತೂಹಲ ಇದಕ್ಕೆ ಕಾರಣ. ಈ ಕುರಿತ ವಿಶ್ಲೇಷಣೆ ಇಲ್ಲಿದೆ.

ಕರ್ನಾಟಕ ಬಜೆಟ್‌ 2023-24 ಅನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕರ್ನಾಟಕ ಬಜೆಟ್‌ 2023-24 ಅನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ವಿಧಾನಸಭೆ ಚನಾವಣೆ ಸಂದರ್ಭದಲ್ಲೇ ಘೋಷಿಸಿದ ಐದು ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಮೆಟ್ಟಿಲು ಗಳಾಗಿರುವುದು ಸಾಬೀತಾಗಿದೆ. ಅಧಿಕಾರ ಹಿಡಿಯಲು ಈ ಗ್ಯಾರಂಟಿಗಳೇ ಕಾರಣ ಎಂದು ಪ್ರತಿಪಕ್ಷಗಳು, ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಪಕ್ಷಭೇದ ಇಲ್ಲದೇ ಬಿಜೆಪಿ ಸೇರಿ ಅನೇಕ ಪಕ್ಷಗಳು ಅನಿವಾರ್ಯವಾಗಿ ಅನುಕರಿಸುತ್ತಿವೆ.

ಇನ್ನು ಸಹಜವಾಗಿಯೇ ರಾಜ್ಯ ಸರ್ಕಾರದ ಬಜೆಟ್ ಪರಿಣಾಮ ಬೀರದೆ ಇರುತ್ತದೆಯೇ? ಖಂಡಿತಾ, ಇತರ ರಾಜ್ಯಗಳ ಚುನಾವಣೆ ಮೇಲೆ ಗ್ಯಾರಂಟಿಗಳ ಹಾಗೆ ಆಯವ್ಯಯವೂ ಪ್ರಭಾವ ಬೀರುವುದು ನಿಸ್ಸಂಶಯ.

2023 ರ ಅಂತ್ಯ ಮತ್ತು 2024 ರಲ್ಲಿ ಏಳೆಂಟು ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಪ್ರಮುಖವಾಗಿ ಈ ವರ್ಷದಲ್ಲಿ ಛತ್ತೀಸಗಡ ವಿಧಾನಸಭೆಗೆ ಚುನಾವಣೆ ನಡೆದರೆ ಮುಂದಿನ ವರ್ಷ ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಹರಿಯಾಣ ಮಹಾರಾಷ್ಟ್ರ, ಒಡಿಶಾ ಮೊದಲಾದ ರಾಜ್ಯಗಳಲ್ಲಿ ಚುನಾವಣೆ ಎದುರಾಗಲಿದೆ.

ಅಳೆದೂ ತೂಗಿ ಸಿದ್ಧಪಡಿಸಿದ ಬಜೆಟ್‌

ಈ ದೃಷ್ಟಿಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಳೆದೂ ತೂಗಿ ಬಜೆಟ್ ಸಿದ್ಧಪಡಿಸಿದ್ದಾರೆ.

ಗ್ಯಾರಂಟಿ ವಿಫಲಗೊಳಿಸುವ ಹಾಗಿಲ್ಲ, ಹೆಚ್ಚಿನ ತೆರಿಗೆ ವಿಧಿಸುವಂತಿಲ್ಲ. ಎರಡನ್ನೂ ಬ್ಯಾಲನ್ಸ್ ಮಾಡಿ ಚುನಾವಣೆ ನಡೆಯುವ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಪ್ಪು ಚುಕ್ಕೆ ಮೂಡದ ಹಾಗೆ ನೋಡಿ ಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ ಎಂದೇ ಹೇಳಬಹುದು.

ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಕೈಗಾರಿಕೆ , ನಗರಾಭಿವೃದ್ದಿ ಸೇರಿದಂತೆ ಎಲ್ಲಿಯೂ ಬೊಟ್ಟು ಮಾಡಲು ತೋರಿಸಲು ಸಾಧ್ಯವಾಗದ ರೀತಿಯಲ್ಲಿ ಬಜೆಟ್ ಸಿದ್ಧಪಡಿಸಿದ್ದಾರೆ.

ಇದುವರೆಗೂ ಬಂದ ವಿಪಕ್ಷಗಳ ಟೀಕೆಗಳು ಟೀಕೆಗಾಗಿ ಬಂದ ಹಾಗಿವೆಯೆ ಹೊರತು ನಿರ್ಧಿಷ್ಟ ಯೋಜನೆ ಇಟ್ಟುಕೊಂಡು ಸರ್ಕಾರವನ್ನು ಟೀಕಿಸಲು ಆಗುತ್ತಿಲ್ಲ. ಬೊಮ್ಮಾಯಿ, ಕುಮಾರಸ್ವಾಮಿ ಡಾಕ್ಟರ್ ಸುಧಾಕರ್ ಎಲ್ಲರ ಹೇಳಿಕೆಗಳಲ್ಲಿ ಇದು ವ್ಯಕ್ತವಾಗಿದೆ.

ಪ್ರತಿಪಕ್ಷ ನಾಯಕರ ದೃಷ್ಟಿಯಲ್ಲಿ ಸಿದ್ದರಾಮಯ್ಯ ಬಜೆಟ್‌

ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಇದು ಪ್ರತೀಕಾರದ ಬಜೆಟ್ ಎಂದು ಹೇಳಿದ್ದರೆ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಕಟ್ ಆಂಡ್ ಪೇಸ್ಟ್ ಬಜೆಟ್ ಎಂದು ಲೇವಡಿ ಮಾಡಿದ್ದಾರೆ. ಯಾರೊಬ್ಬರೂ ಅಂಕಿ ಅಂಶಗಳನ್ನು ಹಿಡಿದು ವಿಶ್ಲೇಷಣೆ ಮಾಡುವ ಗೋಜಿಗೆ ಹೋಗಿಲ್ಲ ಎಂದರೆ ಮತ್ತೇನು ಅರ್ಥ ?

ಮುಂಬರುವ ಚುನಾವಣೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸಿದೆ. ಆಂಧ್ರ ಪ್ರದೇಶವನ್ನು ವಿಭಜಿಸಿ ದ ನಂತರ ಕಾಂಗ್ರೆಸ್ ಉಭಯ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ

ಮಧ್ಯಪ್ರದೇಶ ಪ್ರಮುಖ ರಾಜ್ಯ. ಇಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಆದರೂ ಈ ಬಾರಿ ಅದರ ಬೇರುಗಳು ಅಲ್ಲಾಡುತ್ತಿವೆ ಎಂಬ ವರದಿಗಳಿವೆ. ಹರಿಯಾಣವನ್ನು ವಶಪಡಿಸಿಕೊಳ್ಳಲು ಕಾಂಗ್ರೇಸ್ ಕಂಕಣ ತೊಟ್ಟಿದೆ. ಅಲ್ಲಿ ಮನೋಹರ್ ಲಾಲ್ ಖಟ್ಟರ್ ಗೆ ಟಕ್ಕರ್ ಕೊಡಲು ಹವಣಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ನಡೆದ ಚುನಾವಣೆಗಳನ್ನೂ ನೋಡಿದಾಗ ಬಿಜೆಪಿ ಜನಪ್ರಿಯತೆ ಕುಸಿಯುತ್ತಿದೆ. ಆದರೆ ಪರ್ಯಾಯ ನಾಯಕತ್ವ ಇಲ್ಲದ ಕಾರಣ ಜನರಿಗೆ ಬಿಜೆಪಿ ಅನಿವಾರ್ಯ ಅನ್ನಿಸಿತ್ತು. ಈಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕಾಂಗ್ರೇಸ್ ಹುಮ್ಮಸ್ಸಿನಲ್ಲಿದೆ.

ಯಾರು ಏನೇ ಹೇಳಿದರೂ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಲವಲವಿಕೆ ಇಂದ ಇರುವುದು ಎದ್ದು ಕಾಣುತ್ತಿದೆ.

ಅದರಲ್ಲೂ ಕರ್ನಾಟಕದ ಗೆಲುವು ಬೂಸ್ಟರ್ ಡೋಸ್ ನಂತೆ ಕೆಲಸ ಮಾಡುತ್ತಿದೆ.

ಎಷ್ಟೇ ಕಷ್ಟವಾದರೂ ಬಜೆಟ್ ನಲ್ಲಿ ಹೊಸ ತೆರಿಗೆ ವಿಧಿಸದಂತೆ, ಶ್ರೀ ಸಾಮಾನ್ಯರಿಗೆ ಹೊರೆಯಾಗದಂತೆ ಎಚ್ಚರ ವಹಿಸಬೇಕು ಎಂಬ ಸೂಚನೆ ಹೈ ಕಮಾಂಡ್ ನಿಂದ ಬಂದಿತ್ತು ಎಂಬ ವದಂತಿಗಳಿವೆ. ಇದ್ದರೂ ಇರಬಹುದು.

ಬಜೆಟ್‌ ವಿಶ್ಲೇಷಣೆ - ಎಚ್. ಮಾರುತಿ

Whats_app_banner