Mandya Agriculture Varsity: ಕರ್ನಾಟಕ ಬಜೆಟ್‌ ಘೋಷಣೆ, ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ವಿಶೇಷಾಧಿಕಾರಿ ಸದ್ಯವೇ ನೇಮಕ
ಕನ್ನಡ ಸುದ್ದಿ  /  ಕರ್ನಾಟಕ  /  Mandya Agriculture Varsity: ಕರ್ನಾಟಕ ಬಜೆಟ್‌ ಘೋಷಣೆ, ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ವಿಶೇಷಾಧಿಕಾರಿ ಸದ್ಯವೇ ನೇಮಕ

Mandya Agriculture Varsity: ಕರ್ನಾಟಕ ಬಜೆಟ್‌ ಘೋಷಣೆ, ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ವಿಶೇಷಾಧಿಕಾರಿ ಸದ್ಯವೇ ನೇಮಕ

ಕಳೆದ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಮಂಡ್ಯದ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯ ಈ ವರ್ಷದಿಂದಲೇ ಆರಂಭವಾಗುತ್ತಿದೆ. ಅದರ ವಿವರ ಇಲ್ಲಿದೆ.

ಮಂಡ್ಯದ ವಿಸಿ ಫಾರಂನಲ್ಲಿ ಈ ವರ್ಷ ಆರಂಭವಾಗಲಿರುವ ಕೃಷಿ, ತೋಟಗಾರಿಕೆ ವಿಶ್ವವಿದ್ಯಾನಿಲಯ
ಮಂಡ್ಯದ ವಿಸಿ ಫಾರಂನಲ್ಲಿ ಈ ವರ್ಷ ಆರಂಭವಾಗಲಿರುವ ಕೃಷಿ, ತೋಟಗಾರಿಕೆ ವಿಶ್ವವಿದ್ಯಾನಿಲಯ

ಬೆಂಗಳೂರು: ಕಳೆದ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಮಂಡ್ಯದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಅಧಿಕೃತವಾಗಿ ಅನುಮತಿ ನೀಡಲಾಗಿದ್ದು, ಸರ್ಕಾರಿ ಆದೇಶ ಹೊರ ಬಿದ್ದಿದೆ. ಮಂಡ್ಯ ಜಿಲ್ಲೆ, ವಿ.ಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಸಹಿತ ಈ ಭಾಗದ ಕೆಲವು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಕೃಷಿ ಹಾಗೂ ತೋಟಗಾರಿಕೆ ಸಂಸ್ಥೆಗಳು ಮಂಡ್ಯ ಕೃಷಿ ವಿವಿ ವ್ಯಾಪ್ತಿಗೆ ಬರಲಿವೆ.

2024-25ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ-42ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದ ಒಂದು ವರ್ಷದೊಳಗೆ ವಿವಿ ಪ್ರಾರಂಭಕ್ಕೆ ಆದೇಶ ಹೊರಬಿದ್ದಿದೆ. ಕೃಷಿ ಸಚಿವರ ವಿಶೇಷ ಕಾಳಜಿ, ನಿರಂತರ ಪರಿಶ್ರಮದಿಂದಾಗಿ ಶೀಘ್ರವೇ ಫಲ ನೀಡಿದ್ದು, ಒಂದೇ ವರ್ಷದಲ್ಲಿ ಜಾರಿಯಾಗುವ ಹಂತಕ್ಕೆ ಬಂದಿದೆ. ಮುಂದಿನ ಜೂನ್‌ನಿಂದ ಹೊಸ ವಿಶ್ವವಿದ್ಯಾನಿಲಯ ಜಾರಿಗೆ ಬರಲಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ.

ನೂತನ ಬಜೆಟ್ ಘೋಷಣೆಯಂತೆ ಬೆಂಗಳೂರು ಕೃಷಿ ವಿ.ವಿಯ ವಿಶ್ರಾಂತಿ ಕುಲಪತಿ ಡಾರಾಜೇಂದ್ರಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ತಂಡವು ಹಲವು ಭಾರಿ ಸ್ಥಳ ಪರಿಶೀಲಿಸಿ, ಸಭೆಗಳನ್ನು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಈ ಸಮಿತಿಯು ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮೈಸೂರು ಜಿಲ್ಲೆಯ ಸಂಸ್ಥೆಗಳಾದ : ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗೇನಹಳ್ಳಿ, ಮೈಸೂರು, ವಿಸ್ತರಣಾ ಶಿಕ್ಷಣ ಘಟಕ, ನಾಗೇನಹಳ್ಳಿ, ಮೈಸೂರು, ಹಾಸನ ಜಿಲ್ಲೆಯ ಸಂಸ್ಥೆಗಳಾದ; ಕಾರೆಕೆರೆಯ ಕೃಷಿ ಮಹಾವಿದ್ಯಾಲಯ, ಕಂದಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಗುಂಜೇವು, ಹೊಳೆನರಸೀಪುರ ತಾಲ್ಲೂಕು, ಕೃಷಿ ಸಂಶೋಧನಾ ಕೇಂದ್ರ, ಮಡೆನೂರು (ಹಾಸನ), ಜೈವಿಕ ಇಂಧನ ಸಂಶೋಧನಾ ಕೇಂದ್ರ, ಹಾಸನ ಚಾಮರಾಜನಗರ ಜಿಲ್ಲೆಯ ಸಂಸ್ಥೆಗಳು: ಕೃಷಿ ಮಹಾವಿದ್ಯಾಲಯ, ಚಾಮರಾಜನಗರ (ಹರದನಹಳ್ಳಿ), ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ),, ಚಾಮರಾಜನಗರ ಜೈವಿಕ ಇಂಧನ ಮಾಹಿತಿ ಕೇಂದ್ರವೂ ಹೊಸ ವಿವಿ ವ್ಯಾಪ್ತಿಗೆ ಬರಲಿವೆ.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ: ತೋಟಗಾರಿಕೆ ಕಾಲೇಜು, ಮೈಸೂರು, ಅರಸೀಕೆರೆ, ತೋಟಗಾರಿಕೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಅರಸೀಕೆರೆ,, ಸೋಮನಹಳ್ಳಿ ಕಾವಲ್ ಹಾಸನ ಕೇಂದ್ರಗಳೂ ಕೂಡ ಸೇರಲಿವೆ.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೊಡಗು ಜಿಲ್ಲೆಯ ಸಂಸ್ಥೆಗಳಾದ: ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಪೊನ್ನಂಪೇಟೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮಡಿಕೇರಿ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಕೇಂದ್ರಗಳನ್ನು ಮಂಡ್ಯ ವಿ.ಸಿ ಫಾರಂ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು.

ಸಮಿತಿಯ ಅಭಿಪ್ರಾಯವನ್ನು ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಂದಿಟ್ಟು ಅನುಮೋದನೆ ಪಡೆದ ನಂತರ ಸರ್ಕಾರ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದೆ. ಆರ್ಥಿಕ ಇಲಾಖೆ ಕೂಡ ಮಂಡ್ಯದ ವಿಸಿ ಫಾರಂನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲು ತಾತ್ವಿಕ ಅನುಮತಿ ನೀಡಿ ವಿಶ್ವವಿದ್ಯಾಲಯಕ್ಕೆ ಹಂತ ಹಂತವಾಗಿ ಅವಶ್ಯಕವಿರುವ ಮೂಲಭೂತ ಸೌಕರ್ಯಗಳಿಗೆ ಮಾತ್ರ ವಿಸ್ತೃತ ಅಂದಾಜು ಹಾಗೂ ಆವರ್ತಕ ವೆಚ್ಚದ ಅಂದಾಜನ್ನು ಸಲ್ಲಿಸಲು ತಿಳಿಸಿದೆ.

ಈ ಎಲ್ಲಾ ಅಂಶಗಳ ಆಧಾರದ ಮೇರೆಗೆ ಸರ್ಕಾರವು ಮಂಡ್ಯ ಜಿಲ್ಲೆಯ ವಿಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ಅನುಮೋದನೆ ನೀಡಿದೆ. ಷರತ್ತು ನಿಬಂಧನೆಗಳು ಹಾಗೂ ಆಡಳಿತಾತ್ಮಕ ಅನುಮೋದನೆಗಳನ್ನು ಮುಂದಿನ ಆದೇಶದಲ್ಲಿ ಹೊರಡಿಸಲಾಗುವುದೆಂದು ತಿಳಿಸಲಾಗಿದೆ. ಶೀಘ್ರವೇ ವಿಶೇಷಾಧಿಕಾರಿಗಳನ್ನು ನೇಮಿಸಿ ಪ್ರಸಕ್ತ ಸಾಲಿನಲ್ಲಿಯೇ ವಿ.ವಿ ಕಾರ್ಯಾರಂಭ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ತಿಳಿಸಿದ್ದಾರೆ.

Whats_app_banner