Karnataka Budget Session: ಇಂದಿನಿಂದ ಬಜೆಟ್ ಅಧಿವೇಶನ; ಗೋಹತ್ಯೆ ನಿಷೇಧ ಕಾಯ್ದೆ, ಕಾಂಗ್ರೆಸ್ ಗ್ಯಾರಂಟಿಗಳ ಬಿಸಿಬಿಸಿ ಚರ್ಚೆ ಸಾಧ್ಯತೆ
Karnataka legislature session: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಕುರಿತು ವಾಗ್ದಾಳಿ ನಡೆಸಲು ವಿರೋಧ ಪಕ್ಷವಾದ ಬಿಜೆಪಿ ತುದಿಗಾಲಲ್ಲಿ ನಿಂತಿದೆ, ಆದರೆ ಇನ್ನೂ ವಿರೋಧ ಪಕ್ಷದ ನಾಯಕರನ್ನೂ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿಲ್ಲ.
ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಇಂದಿನಿಂದ ಆರಂಭವಾಗಲಿರುವ ವಿಧಾನಮಂಡಲ/ಬಜೆಟ್ ಅಧಿವೇಶನ (Karnataka Budget Session) ಬಹುಮುಖ್ಯದ್ದಾಗಿದೆ. ಏಕೆಂದರೆ ಚುನಾವಣೆ ಗೆದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಸಿಎಂ ಸಿದ್ದರಾಮಯ್ಯರ ಬಜೆಟ್ ಬಗ್ಗೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಜುಲೈ 7 ರಂದು ಬಜೆಟ್ ಮಂಡನೆಯಾಗಲಿದೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಕುರಿತು ವಾಗ್ದಾಳಿ ನಡೆಸಲು ವಿರೋಧ ಪಕ್ಷವಾದ ಬಿಜೆಪಿ ತುದಿಗಾಲಲ್ಲಿ ನಿಂತಿದೆ, ಆದರೆ ಇನ್ನೂ ವಿರೋಧ ಪಕ್ಷದ ನಾಯಕರನ್ನೂ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿಲ್ಲ.
ಈಗಾಗಲೇ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಗೆ ಬಂದಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆಯಾಗುತ್ತಿವೆ. ಜುಲೈ 1 ರಿಂದ ಜಾರಿಯಾಗಬೇಕಿದ್ದ ಅನ್ನಭಾಗ್ಯ ಯೋಜನೆ ಅಕ್ಕಿ ಯೋಜನೆಯಿಂದ ಮುಂದೂಡಲ್ಪಟ್ಟಿದ್ದು, ಜುಲೈ 10 ರಿಂದ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಾಗಿ ನಗದು ನೀಡುವುದಾಗಿ ಹೇಳಿದ್ದಾರೆ.
ಇನ್ನು ಮನೆ ಒಡತಿಗೆ ತಿಂಗಳಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಸ್ಟ್ 15 ರಂದು ಇದರ ಜಾರಿಗೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಇತ್ತ ನಿರೋದ್ಯೋಗಿ ಯುವಕರೊಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆ ಜಾರಿಗೆ ಬಂದಿಲ್ಲ. ಇವನ್ನೆಲ್ಲ ಇಟ್ಟುಕೊಂಡು ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರುವ ಸಾಧ್ಯತೆಯಿದೆ.
ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ್ದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸುವ ಮಸೂದೆಯನ್ನು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನೂ ರದ್ದುಗೊಳಿಸುವ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಸರ್ಕಾರವು ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆಯನ್ನು ರದ್ದುಗೊಳಿಸುವ ಮಸೂದೆಯನ್ನು ಸಹ ಮಂಡಿಸಬಹುದು. ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಕಾಯಿದೆ, 2020 ಗೆ ಸಂಬಂಧಿಸಿ ತಿದ್ದುಪಡಿ ಮಾಡುವ ಸಾಧ್ಯತೆಯೂ ಇದೆ.
ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕಾಂಗ್ರೆಸ್ ಮಂಡಿಸಿದಾಗ ಸದನದಲ್ಲಿ ಬಿಜೆಪಿ ಇದನ್ನು ತೀವ್ರವಾಗಿ ಪ್ರತಿಭಟಿಸುವ ಸಾಧ್ಯತೆಯಿದೆ. ಪಠ್ಯಪುಸ್ತಕಗಳನ್ನು ಕೇಸರಿಕರಣಗಳಿಂದ ಮುಕ್ತಿಗೊಳಿಸುವ ಕಸರತ್ತು ಕೂಡ ಅಧಿವೇಶನದಲ್ಲಿ ಬಿಜೆಪಿಯನ್ನು ಪ್ರತಿಭಟಿಸುವಂತೆ ಮಾಡಬಹುದು.
ಜುಲೈ 7 ರಂದು ಬಜೆಟ್ ಮಂಡನೆಯಾಗಲಿದ್ದು, 3.35 ಲಕ್ಷ ಕೋಟಿಗೂ ಅಧಿಕ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು 5 ಗ್ಯಾರಂಟಿಗಳಿಗೆ 60,000 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಿದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂದಾಜು. ತನ್ನ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ವಿಧಾನಸಭೆಯ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಭಟನೆಗೆ ಕರೆ ನೀಡಿದ್ದು, ಪಕ್ಷದ ಸಾವಿರಾರು ಕಾರ್ಯಕರ್ತರು ಸೇರುವ ಸಾಧ್ಯತೆಯಿದೆ. ಆದರೆ ಬಿಜೆಪಿ ಇನ್ನೂ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಿಸಿಲ್ಲ.