ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ
Budget Session 2025: ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ ನಡೆಯಲಿದೆ. ಈ ಕುರಿತು ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಮಾರ್ಚ್ 7 ರಂದು ಬಜೆಟ್ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.

Budget Session 2025: ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3ಕ್ಕೆ ಶುರುವಾಗಲಿದ್ದು, ಮಾರ್ಚ್ 21ಕ್ಕೆ ಕೊನೆಗೊಳ್ಳಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ, ಮಾರ್ಚ್ 7 ರಂದು 2025-26ರ ಕರ್ನಾಟಕ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ (ಫೆ 17) ಘೋಷಿಸಿದ್ದಾರೆ.
ಮಾರ್ಚ್ 3 ರಿಂದ 21ರ ತನಕ ಕರ್ನಾಟಕ ಬಜೆಟ್ ಅಧಿವೇಶನ
ಕರ್ನಾಟಕದ ವಿಧಾನ ಮಂಡಲದಲ್ಲಿ ಮಾರ್ಚ್ 3 ರಿಂದ 21ರ ತನಕ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ಮಾರ್ಚ್ 3 ರಂದು ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲಿದ್ದಾರೆ. ಶನಿವಾರ ಹಾಗೂ ಭಾನುವಾರ ಹೊರತು ಪಡಿಸಿ 14 ದಿನ ಬಜೆಟ್ ಅಧಿವೇಶನದ ಕಲಾಪಗಳು ನಡೆಯಲಿವೆ. ಈ ಸಂಬಂಧ ಸರ್ಕಾರ ಪ್ರಕಟಿಸಿರುವ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯಲ್ಲೂ ಇದು ಉಲ್ಲೇಖವಾಗಿದೆ.
ಮಾರ್ಚ್ 7 ರಂದು ಬಜೆಟ್ ಮಂಡನೆ; ಸಿಎಂ ಸಿದ್ದರಾಮಯ್ಯ
ವಿಧಾನಮಂಡಲ ಜಂಟಿ ಅಧಿವೇಶನ ಮಾ.3 ರಿಂದ ಶುರುವಾಗಲಿದ್ದು, ಮಾ.7 ರಂದು 2025-26ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಲಿದ್ದೇನೆ. ಮಾರ್ಚ್ ತಿಂಗಳ ಕೊನೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ (ಫೆ 17) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಮೊದಲ ವಿಧಾನ ಮಂಡಲ ಅಧಿವೇಶನ ಮಾ.3 ರಂದು ಶುರುವಾಗಲಿದೆ. ಮಾ.3ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಬಳಿಕ ಮಾ.4 ರಿಂದ 6ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾ.7ಕ್ಕೆ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳಿದರು.
ಎಷ್ಟು ದಿನ ಕಲಾಪ ನಡೆಯಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧರಿಸಲಾಗುತ್ತದೆ. ಕಳೆದ ಹಲವು ದಿನಗಳಿ೦ದ ಬೇರೆ ಬೇರೆ ಇಲಾಖೆಗಳ ಕುರಿತು ಸಭೆ ಮಾಡಿರುವುದಾಗಿ ಕರ್ನಾಟಕ ಬಜೆಟ್‌ಗೆ ಅಗತ್ಯ ಮಾಹಿತಿ ಕಲೆಹಾಕಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
