Karnataka Budget: ಬೊಮ್ಮಾಯಿ ಬಜೆಟಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆ; ಸಿದ್ದರಾಮಯ್ಯ ಬಜೆಟಲ್ಲಿ ಮುಂದುವರಿಯುತ್ತಾಅಥವಾ ಹೊಸ ರೂಪ ಪಡೆಯುತ್ತಾ
Karnataka Budget: ಬೊಮ್ಮಾಯಿ ಬಜೆಟಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆ ಸಿದ್ದರಾಮಯ್ಯ ಬಜೆಟಲ್ಲಿ ಮುಂದುವರಿಯಲಿದೆಯಾ ಅಥವಾ ಹೊಸ ರೂಪ ಪಡೆಯಲಿದೆಯಾ ಎಂಬುದು ಸದ್ಯದ ಕುತೂಹಲ. ಆದ್ದರಿಂದ ಬೊಮ್ಮಾಯಿ ನೀಡಿದ ಕೊಡುಗೆಗಳೇನು? ಅನುದಾನ ಎಷ್ಟು ? ತಿಳಿಯೋಣ.
ಬೆಂಗಳೂರು: ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ವರ್ಷದ ಮಾರ್ಚ್ 4ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದರು. ಬೆಂಗಳೂರು ವ್ಯಾಪ್ತಿಗೆ 28 ಕ್ಷೇತ್ರಗಳು ಒಳಪಡುವುದನ್ನು ಗಮನದಲ್ಲಿಟ್ಟುಕೊಂಡು ಭರಪೂರ ಕೊಡುಗೆಗಳನ್ನು ನೀಡಿದ್ದರು.
ಈ ಯೋಜನೆಗಳಿಗೆ ಅವರ ಉಳಿದ ಅವಧಿಯಲ್ಲಿ ಚಾಲನೆ ದೊರಕಲಿಲ್ಲ. ನಂತರ ರಚನೆಯಾದ ಸಿದ್ದರಾಮಯ್ಯ ಸರಕಾರ ನಾಳೆ ಹೊಸ ಬಜೆಟ್ ಮಂಡಿಸಲಿದ್ದಾರೆ. ಬೊಮ್ಮಾಯಿ ಸರಕಾರ ಬೆಂಗಳೂರಿಗೆ ಪ್ರಕಟಿಸಿದ್ದ ಯೋಜನೆಗಳನ್ನು ಉಳಿಸಿಕೊಳ್ಳಲಿದ್ದಾರೆಯೇ ಅಥವಾ ಮತ್ತೊಂದು ರೂಪದಲ್ಲಿ ಜಾರಿಗೊಳಿಸಲಿದ್ದಾರೆಯೇ ತಿಳಿದಿಲ್ಲ. ಆದರೆ ಮುಂಬರುವ ಬಿಬಿಎಂಪಿ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಅನ್ಯಾಯ ಆಗಲಿಕ್ಕಿಲ್ಲ ಎಂಬ ನಿರೀಕ್ಷೆ ಇದೆ. ಅವರು ರಾಜಧಾನಿ ಬೆಂಗಳೂರಿಗೆ ಏನು ಕೊಡುಗೆ ನೀಡಲಿದ್ದಾರೆ ಎಂದು ನಾಳೆ ತಿಳಿಯಲಿದೆ. ಬೊಮ್ಮಾಯಿ ನೀಡಿದ ಕೊಡುಗೆಗಳೇನು ಎಂದು ಒಮ್ಮೆ ಮೆಲುಕು ಹಾಕೋಣ.
ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್‌ನಲ್ಲಿ ಬೆಂಗಳೂರಿಗೆ ಏನು ಕೊಡುಗೆ
ತಮ್ಮ ಕೊನೆಯ ಬಜೆಟ್‌ನಲ್ಲಿ ಬೊಮ್ಮಾಯಿ, ಬೆಂಗಳೂರಿಗೆ 8,409 ಕೋಟಿ ರೂಪಾಯಿ ಅನುದಾನ ಒದಗಿಸಿದ್ದರು. 2021-22ರ ಬಜೆಟ್ ಗೆ ಹೋಲಿಸಿದರೆ ಅವರು 614 ಕೋಟಿ ರೂಪಾಯಿಗಳ ಅನುದಾನ ಹೆಚ್ಚಳ ಮಾಡಿದ್ದಾರೆ.
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ತಗಿಸಲು ಬೊಮ್ಮಾಯಿ ಅವರು, ಕ್ಷಿಪ್ರ ಸಾರಿಗೆ ಜಾಲವನ್ನು ಬಲಪಡಿಸಲು ಸರ್ಜಾಪುರ-ಹೆಬ್ಬಾಳ ನಡುವೆ 37 ಕಿ.ಮೀ ಮತ್ತು ಹೊಸಹಳ್ಳಿ-ಕಡಬಗೆರೆ ನಡುವೆ 13 ಕಿ.ಮೀ ಉದ್ದದ ಮೆಟ್ರೊ ಮಾರ್ಗಗಳನ್ನು ನಿರ್ಮಿಸುವ ಭರವಸೆ ನೀಡಿದ್ದರು. ಮೆಟ್ರೊ ಮೂರನೇ ಹಂತಕ್ಕೆ 11,250 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು.
- 105 ಎಕರೆಯ ಎನ್ ಜಿ ಇಎಫ್ ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ. ಇಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನ, ಪರಿಸರ ಸ್ನೇಹಿ ಸಾರಿಗೆ, ಹಸಿರು ಮೂಲ ಸೌಕರ್ಯ, ಹಸಿರು ನವೋದ್ಯಮಗಳ ಪ್ರಾತ್ಯಕ್ಷಿಗೆ ಉತ್ತೇಜನ ನೀಡುವ ಭರವಸೆ.
- ಯಲಹಂಕ ಸಮೀಪದ ಜಾರಕಬಂಡೆ ಕಾವಲ್ ಪ್ರದೇಶದ 105 ಎಕರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ನಿರ್ಮಾಣ
- ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ 500 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
- ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆ
- ಎಲ್ಲ 198 ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಕ್’ ಸ್ಥಾಪನೆ
- ಬಿ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ನೀಡುವ ಭರವಸೆ
- ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಆಧುನಿಕ ಸ್ಪರ್ಷ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಅಭಿವೃದ್ಧಿಪಡಿಸುವ ಘೋಷಣೆ
- ಬೆಂಗಳೂರಿಗೆ ಪ್ರತಿನಿತ್ಯ 77.50 ಕೋಟಿ ಲೀಟರ್ ನೀರು ತರುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ಪೂರ್ಣಗೊಳಿಸುವ ಗುರಿ. ಬಾಕಿ 4000 ಕೋಟಿ ರೂಪಾಯಿ ಬಿಡುಗಡೆಗೊಳಿಸಿ 2024-25ರೊಳಗೆ ಪೂರ್ಣಗೊಳಿಸುವ ಭರವಸೆ
- ರಾಜಾಕಾಲುವೆ ಅಭಿವೃದ್ಧಿಗೆ 1500 ಕೋಟಿ ರೂ ಅನುದಾನ
- ಮಡಿವಾಳ ಮತ್ತು ಮಲ್ಲಪ್ಪಶೆಟ್ಟಿ ಕೆರೆಗಳ ಅಭಿವೃದ್ದಿ
- ಕಟ್ಟಡ ಕಾರ್ಮಿಕರಿಗೆ 100 ಹೈಟೆಕ್ ಸಂಚಾರ ಕ್ಲಿನಕ್ ಗಳ ಸ್ಥಾಪನೆ
- ಜಲ ಮಾಲಿನ್ಯ ನಿಯಂತ್ರಣಕ್ಕೆ 1500 ಕೋಟಿ ರೂ.ಗಳ ವೆಚ್ಚದಲ್ಲಿ ಹಳೆಯ 20 ಕೊಳಚೆ ನೀರು ಶುದ್ಧೀಕರಣ ಘಟಕಗಳ ಪುನರುಜ್ಜೀವನ
- 20 ಬೆಂಗಳೂರು ಪಬ್ಲಿಕ್ ಶಾಲೆಗಳ ಅಭಿವೃದ್ಧಿ. 89 ಕೋಟಿ ರೂ ಅನುದಾನ ಮೀಸಲು
- ಜಕ್ಕೂರು ವಿಮಾನ ತರಬೇತಿ ಶಾಲೆ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ
- ಕೆ.ಆರ್.ಪುರ, ಯಶವಂತಪುರ, ವೈಟ್ ಫೀಲ್ಡ್, ಜ್ಞಾನಭಾರತಿ ಮತ್ತು ಯಲಹಂಕದಲ್ಲಿ ರೈಲ್ವೆ-ಮೆಟ್ರೊ ಸಂಪರ್ಕ 55 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ
ಬಜೆಟ್‌ನಿಂದ ಬೆಂಗಳೂರಿಗರ ನಿರೀಕ್ಷೆ
ಬೆಂಗಳೂರಿನ ಬೇಡಿಕೆ ಮತ್ತು ಅಗತ್ಯ ಇಷ್ಟೇ ಎಂದರೆ ತಪ್ಪಾಗುತ್ತದೆ. ಅಭಿವೃದ್ಧಿ ಎನ್ನುವುದು ನಿರಂತರ. ನಿಂತ ನೀರಲ್ಲ. ಮೆಟ್ರೊ, ಉಪ ನಗರ ರೈಲು ಯೋಜನೆ, ಫೆರಿಫೆರಲ್ ರಿಂಗ್ ರಸ್ತೆ, ಬಡಾವಣೆಗಳ ಅಭಿವೃದ್ಧಿ … ಇವೆಲ್ಲವೂ ಹಳೆಯ ಘೋಷಣೆಗಳು. ಕಾರ್ಯರೂಪಕ್ಕೆ ತಂದು ಕಾಲಮಿತಿಯೊಳಗೆ ಮುಗಿಸುವ ಬದ್ಧತೆಯನ್ನು ಯಾವ ಸರಕಾರವೂ ತೋರುತ್ತಿಲ್ಲ. ಉದಾಹರಣೆಗೆ ೭೩ ಕಿ.ಮೀ ಉದ್ದದ ೧೦೦ ಅಡಿ ಅಗಲದ ಫೆರಿಫೆರಲ್ ರಿಂಗ್ ರಸ್ತೆ ಭರವಸೆ ೨೦೦೬ರಷ್ಟು ಹಳೆಯದು. ಈಗ ಈ ಯೋಜನಾ ವೆಚ್ಚ ನಾಲ್ಕು ಪಟ್ಟು ಹೆಚ್ಚಳವಾಗಿದೆ.
ಈ ಯೋಜನೆಗಳೆಲ್ಲವೂ ಬೆಂಗಳೂರಿನ ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ಅನಿವಾರ್ಯ. ಹಿಂದಿನ ಸರಕಾರದ ಈ ಯೋಜನೆಗಳನ್ನು ಯಥಾವತ್ ಜಾರಿಗೆ ಬರುವುದು ಅಸಂಭವ. ಹಾಗಾಗಿ ಮತ್ತೊಂದು ರೂಪ ಮತ್ತು ಹೆಸರಿನಲ್ಲಿ ಸಿದ್ದರಾಮಯ್ಯ ಸರಕಾರ ಜಾರಿಗೊಳಿಸಲಿದೆಯೇ ? ೨೪ ಗಂಟೆಗಳಲ್ಲಿ ಈ ಕುತೂಹಲಕ್ಕೆ ತೆರಬೀಳಲಿದೆ.
ವಿಶೇಷ ವರದಿ - ಮಾರುತಿ ಎಚ್