ಬೆಂಗಳೂರು ನಮ್ಮ ಮೆಟ್ರೋ 3ಎ ಹಂತಕ್ಕೆ ಸಚಿವ ಸಂಪುಟ ಒಪ್ಪಿಗೆ; ಸರ್ಜಾಪುರದಿಂದ ಹೆಬ್ಬಾಳದವರೆಗಿನ ಮಾರ್ಗ 5 ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆ
ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುದು ಮತ್ತಷ್ಟು ಸುಲಭವಾಗಲಿದೆ. ಡಿಸೆಂಬರ್ 6ರ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೆಟ್ರೋ 3ಎ ಹಂತಕ್ಕೆ ಒಪ್ಪಿಗೆ ನೀಡಲಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಆಗ್ನೇಯ ಭಾಗದ ಸರ್ಜಾಪುರದಿಂದ ಉತ್ತರ ಭಾಗದ ಹೆಬ್ಬಾಳದವರೆಗಿನ ನಮ್ಮ ಮೆಟ್ರೋದ 3ಎ ಹಂತಕ್ಕೆ ಶುಕ್ರವಾರ (ಡಿಸೆಂಬರ್ 6) ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.ಈ ಮಾರ್ಗವನ್ನು ಕೆಂಪು ಮಾರ್ಗ ಎಂದೂ ಕರೆಯಲಾಗುತ್ತದೆ. 36.59 ಕಿಮೀ ಉದ್ದದ ಈ ಮಾರ್ಗದ ಯೋಜನೆ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಬಂಡವಾಳ ಹೂಡಲಿವೆ. ಕೇಂದ್ರ ಸರ್ಕಾರ ಸಾಮಾನ್ಯವಾಗಿ ಇಂತಹ ಯೋಜನೆಗಳಿಗೆ ಅನುಮೋದನೆ ನೀಡಲು ವರ್ಷಗಟ್ಟಲೆ ತೆಗೆದುಕೊಳ್ಳುತ್ತದೆ. ಮೆಟ್ರೋ ಮಾರ್ಗ ಬದಲಾವಣೆ ಅಥವಾ ದರವನ್ನು ಕಡಿಮೆ ಮಾಡಲು ಸಲಹೆ ನೀಡುತ್ತದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿ.ನ (ಬಿಎಂಆರ್ ಸಿಎಲ್) ಅಧಿಕಾರಿಯೊಬ್ಬರ ಪ್ರಕಾರ ಬಹುಶಃ 2025ರ ಡಿಸೆಂಬರ್ ವೇಳೆಗೆ ಅಥವಾ ಅದಕ್ಕೂ ಮುನ್ನವೇ ದೊರಕಿದರೂ ದೊರಕಬಹುದು. ಅನುಮೋದನೆ ನೀಡಿದ ನಂತರ ಐದೂವರೆ ವರ್ಷದೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳುತ್ತಾರೆ. ಈ ಕೆಂಪು ಮಾರ್ಗ 2031 ರೊಳಗೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಒಮ್ಮೆ 3ಎ ಹಂತದ ಮಾರ್ಗವೂ ಆರಂಭವಾದರೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ 258.79 ಕಿಮೀಗೆ ವಿಸ್ತರಣೆಯಾಗಲಿದೆ.
ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವುದಕ್ಕೂ ಮುನ್ನ ಬಿಎಂಆರ್ ಸಿ ಎಲ್ ಪೂರ್ವಭಾವಿ ಪ್ರಕ್ರಿಯೆಗಳನ್ನು ಬಹುತೇಕ ಮುಗಿಸಿದೆ. ಈ ಮೆಟ್ರೋ ಯೋಜನೆಗೆ ಸಾಲ ನೀಡುವ ಕಂಪನಿ ಅಥವಾ ಬ್ಯಾಂಕ್ ಗಳೊಂದಿಗೆ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಮಾತುಕತೆ ನಡೆಸಲಾಗಿದೆ. ಸಾಲ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಮೂಲಕವೂ ಪ್ರಯತ್ನ ನಡೆಸಲಾಗಿದೆ. ಭೂ ಸ್ವಾಧೀನ, ವಿಸ್ತೃತ ವರದಿ ಮತ್ತಿತರ ಯೋಜನಾ ಪೂರ್ವ ಚಟುವಟಿಕೆಗಳನ್ನು ಬಿಎಂಆರ್ ಸಿಎಲ್ ನಡೆಸಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದ ನಂತರವೇ ಭೂಮಿ ಅಗೆಯುವ ಕಾರ್ಯ ಆರಂಭವಾಗಲಿದೆ. ಅಲ್ಲಿಯವರೆಗೂ ಯಾವುದೇ ಕೆಲಸ ಆರಂಭವಾಗುವುದಿಲ್ಲ.
ಈ ಕೆಂಪು ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿರುವುದು ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರದ ಈ ತೀರ್ಮಾನದಿಂದ ಕಾಮಗಾರಿಗೂ ಮುನ್ನ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಕೈಗೊಳ್ಳಲು ದಾರಿ ಮಾಡಿಕೊಟ್ಟಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ತಿಳಿಸಿದ್ದಾರೆ. 3ಎ ಯೋಜನೆಯನ್ನು ಪ್ರಕಟಿಸಿದಾಗ ಯೋಜನಾ ವೆಚ್ಚ 15 ಸಾವಿರ ಕೋಟಿಗಳಷ್ಟಿತ್ತು. ಅಂದರೆ ಈಗಿನ ಯೋಜನಾ ವೆಚ್ಚದ ಅರ್ಧದಷ್ಟು ಎಂದು ಹೇಳಬಹುದು. ಈಗಿನ 36.59 ಕಿಮೀ ಮಾರ್ಗದ ಯೋಜನಾ ವೆಚ್ಚ 28,045 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಪ್ರತಿ ಕಿಲೋ ಮೀಗೆ 776 ಕೋಟಿ ರೂ,ಗಳಷ್ಟಿದೆ. ನಮ್ಮ ಮೆಟ್ರೋ ಇತಿಹಾಸಕ್ಕೆ ಹೋಲಿಸಿದರೆ ಈ ಹಿಂದಿನ ಪ್ರತಿ ಕಿಮೀ ಗೆ ತಗುಲಿದ ವೆಚ್ಚಕ್ಕೆ ಹೋಲಿಸಿದರೆ ಇದು ಅತಿ ದೊಡ್ಡ ವೆಚ್ಚವಾಗಿದೆ.
ಈ ಯೋಜನಾ ವೆಚ್ಚದ ಭಾಗದಲ್ಲಿ ಶೇ.35 ರಷ್ಟು ಅಂದರೆ 10,458 ಕೋಟಿ ರೂ.ಗಳಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. ಉಳಿದ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುತ್ತವೆ. ಭೂಸ್ವಾಧೀನಕ್ಕೆ ಅಂದಾಜು 5000 ಕೋಟಿ ರೂ ತಗುಲಲಿದ್ದು, ಇದನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಲಿದೆ. ಮೆಟ್ರೋದ ಈ 3ಎ ಮಾರ್ಗದ ಯೋಜನೆಯ ಪಕ್ಷಿ ನೋಟವನ್ನು ಅವಲೋಕಿಸುವುದಾದರೆ
3ಎ ಮಾರ್ಗದ ಯೋಜನೆಯ ಪಕ್ಷಿ ನೋಟ
- ಯೋಜನೆಯ ಒಟ್ಟು ಉದ್ದ 35.59 ಕಿಮೀ
- ಸರ್ಜಾಪುರದಿಂದ ಹೆಬ್ಬಾಳವರೆಗೆ ಸಂಪರ್ಕ
- ಎತ್ತರಿಸಿದ ಮಾರ್ಗ 22.14 ಕಿಮೀ, ಭೂಗತ ಮಾರ್ಗ 14.45 ಕಿಮೀ
- ನಿಲ್ದಾಣಗಳು 17 ಎತ್ತರಿಸಿದ, 11 ಭೂಗತ ನಿಲ್ದಾಣಗಳಿರಲಿವೆ
- ಇಬ್ಲೂರು ಅಗರ, ಡೈರಿ ವೃತ್ತ, ಕೆ. ಆರ್. ಸರ್ಕಲ್, ಹೆಬ್ಬಾಳ ಸೇರಿ ಒಟ್ಟು 5 ಇಂಟರ್ ಚೇಂಜ್ ನಿಲ್ದಾಣಗಳಿರಲಿವೆ