ಕನ್ನಡ ಸುದ್ದಿ  /  Karnataka  /  Karnataka Cabinet Siddramaiah Cabinet Expansion Congress Leaders Who Missed Ministership Dk Shivakumar Politics Uks

Karnataka Cabinet: ಸಚಿವ ಸ್ಥಾನ ಮಿಸ್‌ ಮಾಡಿಕೊಂಡವರು, ಅವರ ಬೆಂಬಲಿಗರ ಅಸಮಾಧಾನ; ಇಲ್ಲಿದೆ ಒಂದು ವರದಿ

Karnataka Cabinet: ಕರ್ನಾಟಕದಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟ (Siddaramaiah Cabinet) ಎರಡನೆ ಹಂತದ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದೆ. ಈ ಹಂತದಲ್ಲಿ ಸಚಿವ ಸ್ಥಾನ ಮಿಸ್‌ ಆದ ಪ್ರಮುಖರ ಬೆಂಬಲಿಗರ ಅಸಮಾಧಾನ ವ್ಯಕ್ತವಾಗಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (ಕಡತ ಚಿತ್ರ)
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (ಕಡತ ಚಿತ್ರ)

ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್‌ (DK Shivakumar) ಹಾಗೂ ಎಂಟು ಸಚಿವರ ಸಂಪುಟ ರಚನೆಯಾಗಿ ಒಂದು ವಾರದ ಬಳಿಕ, ಸಂಪುಟ ವಿಸ್ತರಣೆ (Cabinet Expansion) ಇಂದು ನಡೆಯುತ್ತಿದೆ. ಸಚಿವರಾಗಿ ಪ್ರಮಾಣ ಸ್ವೀಕರಿಸುವ 24 ಶಾಸಕರ ಪಟ್ಟಿ ಕೂಡ ಸಿದ್ಧವಾಗಿದೆ.

ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯ ಅನುಸರಿಸಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಕಾರ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಸಚಿವ ಸ್ಥಾನ ಆಕಾಂಕ್ಷಿಗಳು ಈಗ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ.

ಈ ರೀತಿ ಅಸಮಾಧಾನಗೊಂಡವರ ಪೈಕಿ ಲಕ್ಷ್ಮಣ ಸವದಿ, ಬಸವರಾಜ ರಾಯರೆಡ್ಡಿ, ಪುಟ್ಟರಂಗ ಶೆಟ್ಟಿ ಪ್ರಮುಖರು. ಇಂದಿನ ವಿದ್ಯಮಾನವನ್ನು ಗಮನಿಸುವುದಾದರೆ, ಇವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

ಸಿದ್ದರಾಮಯ್ಯ ಸಂಪುಟದ 34 ಸದಸ್ಯರ ಸಚಿವ ಸಂಪುಟದಲ್ಲಿ ಈಶ್ವರ ಖಂಡ್ರೆ (ಬಣಜಿಗ), ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಶಿವಾನಂದ ಪಾಟೀಲ್‌ (ಪಂಚಮಸಾಲಿ), ಎಂ.ಬಿ.ಪಾಟೀಲ್‌ (ಕುರು ಒಕ್ಕಲಿಗ), ಎಸ್‌ಎಸ್‌ ಮಲ್ಲಿಕಾರ್ಜುನ (ಸಾದರ ಲಿಂಗಾಯತ), ಶರಣ ಪ್ರಕಾಶ್‌ ಪಾಟೀಲ್‌ (ಆದಿ ಬಣಜಿಗ), ದರ್ಶನಾಪುರ (ರೆಡ್ಡಿಲಿಂಗಾಯತ), ಎಚ್‌.ಕೆ.ಪಾಟೀಲ್‌ (ವೈಷ್ಣವ ರೆಡ್ಡಿ) ಅವರಿಗೆ ಸ್ಥಾನ ಲಭಿಸಿದೆ. ಲಿಂಗಾಯತ ಸಮುದಾಯದ ಬಹುತೇಕ ಒಳಪಂಗಡಗಳನ್ನು ಕಾಂಗ್ರೆಸ್‌ ವರಿಷ್ಠರು ಪರಿಗಣಿಸಿದ್ದಾರೆ ಎಂಬ ವಾದವಿದೆ.

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಮಿಸ್‌

ಇತ್ತೀಚೆಗೆ ಮುಗಿದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನಿರಾಕರಿಸಿದ ಕಾರಣ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರಿದ್ದರು. ಅಲ್ಲಿಂದ ಟಿಕೆಟ್‌ ಪಡೆದು ಅಥಣಿಯಲ್ಲೇ ಸ್ಪರ್ಧಿಸಿ ದೊಡ್ಡಮಟ್ಟದ ಗೆಲುವು ಕಂಡಿದ್ದರು. ಹೀಗಾಗಿ ಸಹಜವಾಗಿಯೇ ಸಚಿವ ಸ್ಥಾನವನ್ನು ಅವರು ನಿರೀಕ್ಷಿಸುತ್ತಿದ್ದರು. ಆದರೆ ನೂತನ ಸಚಿವರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರಿಲ್ಲ. ಜಾತಿ ಆಧಾರದಲ್ಲಿ ಸಿಗಬಹುದೆಂಬ ಆಸೆ ಅವರ ಬೆಂಬಲಿಗರಲ್ಲಿ ಇತ್ತು.

ಆದರೆ ಅದು ಈಡೇರದ ಕಾರಣ ಲಕ್ಷ್ಮಣ ಸವದಿ ಅವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಸ್ಟರ್‌ಗಳನ್ನು ಹಾಕಿ ಅಸಮಾಧಾನ ತೋಡಿಕೊಂಡಿದ್ದಾರೆ.

ಬಸವರಾಜ ರಾಯರೆಡ್ಡಿಗೆ ಸಚಿವ ಸ್ಥಾನ ಸಿಗಲಿಲ್ಲ

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಲ್ಲೊಬ್ಬರಾದ ಬಸವರಾಜ ರಾಯರೆಡ್ಡಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ಬಸವರಾಜ ರಾಯರೆಡ್ಡಿ ಹೆಸರು ಸೇರ್ಪಡೆ ಆಗಿಲ್ಲ.

ಬಸವರಾಜ ರಾಯರೆಡ್ಡಿ ಕೊಪ್ಪಳದ ಯಲಬುರ್ಗಾ ಕ್ಷೇತ್ರದ ಶಾಸಕರು. 6 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಲಿಂಗಾಯತ ರೆಡ್ಡಿ ಸಮುದಾಯದವರಾದ ಕಾರಣ ಜಾತಿ ಆಧಾರದಲ್ಲಿ ಸಚಿವರಾಗಬಹುದೆಂಬ ಆಸೆ ಅವರ ಬೆಂಬಲಿಗರಲ್ಲಿ ಇತ್ತು. ಆದರೆ ಸಚಿವ ಸ್ಥಾನ ಕೈತಪ್ಪಿದೆ. ಈ ಬಗ್ಗೆ ಈಗ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪುಟ್ಟರಂಗ ಶೆಟ್ಟಿ ಬೆಂಬಲಿಗನ ಬೆದರಿಕೆ

ಶಾಸಕ ಪುಟ್ಟರಂಗ ಶೆಟ್ಟಿ ಉಪ್ಪಾರ ಸಮುದಾಯದವರು. ಸಚಿವ ಸಂಪುಟದಲ್ಲಿ ಉಪ್ಪಾರ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂಬ ಆಗ್ರಹ ಆರಂಭದಿಂದಲೇ ಇತ್ತು. ಈಗ ಪುಟ್ಟರಂಗ ಶೆಟ್ಟಿಗೆ ಸಚಿವ ಸ್ಥಾನ ಕೈತಪ್ಪಿದ ಕಾರಣ ಕಾಂಗ್ರೆಸ್‌ ಕಾರ್ಯಕರ್ತ ಚಂದ್ರಶೇಖರ್‌ ಆತ್ಮಹತ್ಯೆ ಮಾಡುವುದಾಗಿ ಪತ್ರಬರೆದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವುದು ಗಮನಸೆಳೆದಿದೆ. ಚಾಮರಾಜನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಆತ್ಮಹತ್ಯೆ ಮಾಡುವುದಾಗಿ ಚಂದ್ರಶೇಖರ್‌ ಬೆದರಿಕೆ ಒಡ್ಡಿದ್ದಾನೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾರಣ ಎಂದೂ ಹೇಳಿಕೊಂಡಿದ್ದಾಗಿ ಟಿವಿ 9 ಕನ್ನಡ ವರದಿ ಮಾಡಿದೆ.

ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಸಚಿವರಾಗಲಿಲ್ಲ..

ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಬಿ.ಕೆ.ಹರಿಪ್ರಸಾದ್‌ ಸೇರ್ಪಡೆಗೆ ಸಿದ್ದರಾಮಯ್ಯ ಅವರಿಂದಲೇ ತಡೆಬಿದ್ದಿದೆ. ಡಿಕೆ ಶಿವಕುಮಾರ್‌ ಅವರು ವಿಧಾನಪರಿಷತ್‌ ಸದಸ್ಯರಾಗಿರುವ ಬಿ.ಕೆ. ಹರಿಪ್ರಸಾದ್‌ ಅವರನ್ನು ಸಚಿವರನ್ನಾಗಿ ಮಾಡಲು ಪ್ರಯತ್ನಿಸಿದರಾದೂ ಅದು ಈಡೇರಲಿಲ್ಲ. ಈಡಿಗ ಸಮುದಾಯದ ಪ್ರತಿನಿಧಿಯಾಗಿ ಅವರನ್ನು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ, ಸಿದ್ದರಾಮಯ್ಯ ಪಟ್ಟುಬಿಡದ ಕಾರಣ ಕೊನೆಗೆ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಒಲಿದಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.