ಕರ್ನಾಟಕ ಜಾತಿ ಗಣತಿ ವರದಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ, ನಿನ್ನೆ ಗೈರಾದವರು ಇದಕ್ಕೂ ಗೈರಾಗ್ತಾರಾ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಜಾತಿ ಗಣತಿ ವರದಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ, ನಿನ್ನೆ ಗೈರಾದವರು ಇದಕ್ಕೂ ಗೈರಾಗ್ತಾರಾ

ಕರ್ನಾಟಕ ಜಾತಿ ಗಣತಿ ವರದಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ, ನಿನ್ನೆ ಗೈರಾದವರು ಇದಕ್ಕೂ ಗೈರಾಗ್ತಾರಾ

Caste Census Report: ಜಾತಿ ಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದು, ಏಪ್ರಿಲ್ 17ಕ್ಕೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಇದರ ಭವಿಷ್ಯ ನಿರ್ಧಾರವಾಗಲಿದೆ. ನಿನ್ನೆ ಗೈರಾದವರು ನಾಡಿದ್ದು ಏನ್ ಮಾಡ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಕರ್ನಾಟಕ ಜಾತಿ ಗಣತಿ ವರದಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ವರದಿಯ ಭವಿಷ್ಯ ನಿರ್ಧಾರವಾಗಲಿದೆ. (ಸಾಂಕೇತಿಕವಾಗಿ ಕಡತ ಚಿತ್ರ ಬಳಸಲಾಗಿದೆ)
ಕರ್ನಾಟಕ ಜಾತಿ ಗಣತಿ ವರದಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ವರದಿಯ ಭವಿಷ್ಯ ನಿರ್ಧಾರವಾಗಲಿದೆ. (ಸಾಂಕೇತಿಕವಾಗಿ ಕಡತ ಚಿತ್ರ ಬಳಸಲಾಗಿದೆ)

Caste Census Report: ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ಅಸಮಾಧಾನ, ಆಕ್ಷೇಪಣೆಗಳು ತೀವ್ರಗೊಂಡಿರುವಾಗಲೇ ನಿನ್ನೆ (ಏಪ್ರಿಲ್ 11) ಸಚಿವ ಸಂಪುಟ ಸಭೆಯಲ್ಲಿ ಸಚಿವರ ಕೈ ಸೇರಿದೆ. ಈ ಸಚಿವ ಸಂಪುಟ ಸಭೆಗೆ 6 ಸಚಿವರು ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ, ಜಾತಿ ಗಣತಿ ವರದಿ ಕುರಿತಾಗಿ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಜಾತಿ ಗಣತಿ ವರದಿಯನ್ನು ಸರ್ಕಾರ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ವರದಿ ಎಂದು ಹೇಳಿದ್ದು, ಏಪ್ರಿಲ್ 17ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅದರ ಭವಿಷ್ಯ ನಿರ್ಧರಿಸುವ ಸಾಧ್ಯತೆ ಇದೆ.

ಕರ್ನಾಟಕ ಜಾತಿ ಗಣತಿ - ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ ವರದಿ

ಸಿದ್ದರಾಮಯ್ಯನವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಮೀಕ್ಷೆಯ ಹೊಣೆಯನ್ನು ವಹಿಸಿದ್ದರು. ನಂತರ ಇದನ್ನು ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಮುಂದುವರಿಸಿದ್ದು, ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿಯನ್ನು 2024ರ ಫೆಬ್ರವರಿಯಲ್ಲಿ ಈಗಿನ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿ ಹಾಗೂ ಸಮೀಕ್ಷೆಯ ಮುಖ್ಯ ಮಾಹಿತಿಗಳನ್ನು ಒಳಗೊಂಡ ಸಮಗ್ರ ದಾಖಲೆಗಳನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಇದರ ಪ್ರತಿಗಳನ್ನು ಸಚಿವರಿಗೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ವರದಿಯ ಮುಖ್ಯಾಂಶ ಹಾಗೂ ಶಿಫಾರಸುಗಳಿರುವ ಮುಚ್ಚಿದ ಲಕೋಟೆಯನ್ನು ತೆರೆದು, ವಿವರಿಸುವ ಪ್ರಕ್ರಿಯೆ ನಡೆಯಿತು. ಬಳಿಕ, ವರದಿಯನ್ನು ಅಂಗೀಕರಿಸುವ ನಿರ್ಣಯವನ್ನು ಸಂಪುಟ ಸಭೆ ಕೈಗೊಂಡಿತು. ವರದಿಯನ್ನು ಸಚಿವರು ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಐದು ದಿನಗಳ ಕಾಲಾವಕಾಶ ನೀಡಿದ್ದು, ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯ ಬಳಿಕ ಸಚಿವ ಶಿವರಾಜ ತಂಗಡಗಿ ಹೇಳಿದ್ದೇನು

ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೂ ಜಾತಿ ಗಣತಿ ಸಾಮಾಜಿಲ ಶೈಕ್ಷಣಿಕ ಸಮೀಕ್ಷೆ ವರದಿಯ ಮುಖ್ಯಾಂಶಗಳನ್ನು ಒಳಗೊಂಡ ಮಾಹಿತಿಯ ಪ್ರತಿ ನೀಡಲಾಗಿದೆ. ವಿಶೇಷ ಸಂಪುಟ ಸಭೆಗೆ ಬರುವ ಮುನ್ನ ಅಧ್ಯಯನ ಮಾಡಿಕೊಂಡು ಬಂದು ಚರ್ಚೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದರು‌ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಯಾವ ಸಚಿವರೂ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಹಿಂದೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಸಮುದಾಯಗಳ ಸಚಿವರು ಕೂಡ ತುಟಿಪಿಟಿಕೆನ್ನಲಿಲ್ಲ. ರಾಹುಲ್ ಗಾಂಧಿ ಸೂಚನೆ ಇದ್ದ ಕಾರಣ ಯಾವುದೇ ಅಡ್ಡಿ, ಆಕ್ಷೇಪಣೆಗಳಿಲ್ಲದೇ ನಿನ್ನೆ ಯಾವ ಸಚಿವರೂ ಏನೂ ಹೇಳಿಲ್ಲ ಎಂದು ಮೂಲಗಳು ಹೇಳಿವೆ.

ಸಚಿವ ಸಂಪುಟ ಸಭೆಗೆ ಗೈರಾದವರು ನಾಡಿದ್ದು ಏನ್ ಮಾಡ್ತಾರೆ

ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಆರು ಸಚಿವರು ಗೈರಾಗಿದ್ದರು. ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್‌, ಎಂಸಿ ಸುಧಾಕರ್‌, ಕೆ ವೆಂಕಟೇಶ್, ಆರ್‌ ಬಿ ತಿಮ್ಮಾಪುರ ಗೈರಾದವರು. ಜಾತಿ ಗಣತಿ ವರದಿ ಮಂಡನೆಯಾಗುವ ಸಂದರ್ಭದಲ್ಲಿ ಇವರ ಗೈರು ಎದ್ದು ಗೋಚರಿಸಿತು. ಹೀಗಾಗಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಆರು ಸಚಿವರ ಪಾಲ್ಗೊಳ್ಳುವಿಕೆ ಕುರಿತೂ ಈಗ ಚರ್ಚೆಗಳು ನಡೆಯುತ್ತಿವೆ.

ಜಾತಿ ಜನಗಣತಿ ವರದಿಯ ಮೇಲ್ನೋಟದ ಚಿತ್ರಣ ಹೀಗಿದೆ

ಕರ್ನಾಟಕದ 6.35 ಕೋಟಿ ಜನಸಂಖ್ಯೆಯ ಪೈಕಿ 5.98 ಕೋಟಿ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. 1.35 ಕೋಟಿ ಕುಟುಂಬಗಳು ಅಂದರೆ, ಶೇ 94.17ರಷ್ಟು ಮಾಹಿತಿ ಸಂಗ್ರಹಣೆ ಯಲ್ಲಿ ಪಾಲ್ಗೊಂಡಿವೆ. 37 ಲಕ್ಷ ಜನರನ್ನು ಸಮೀಕ್ಷೆಯ ಭಾಗವನ್ನಾಗಿ ಮಾಡುವುದು ಸಾಧ್ಯವಾಗಿಲ್ಲ. ಎಚ್‌.ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015 ನೇ ಏ.11ರಿಂದ ಸಮೀಕ್ಷೆ ಆರಂಭಿಸಿ 2015 ರ ಮೇ 30ರಂದು ಪೂರ್ಣಗೊಳಿಸಿತು. 2015ರ ಇದೇ ದತ್ತಾಂಶವನ್ನು ಬಳಸಿಕೊಂಡು ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಿ, 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ಸಲ್ಲಿಸಿತು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗಳ ಬಗ್ಗೆ 54 ಮಾನದಂಡಗಳನ್ನು ಒಳಗೊಂಡ ಕುಟುಂಬದ ಅನುಸೂಚಿ–3ರಲ್ಲಿ ಮಾಹಿತಿಯನ್ನು ಈ ಸಮೀಕ್ಷಾ ವರದಿ ಸಿದ್ಧಪಡಿಸುವುದಕ್ಕಾಗಿ ಸಂಗ್ರಹಿಸಲಾಯಿತು. ಲಭ್ಯ ದತ್ತಾಂಶವನ್ನು ಆಯಾ ಜಿಲ್ಲೆಯಲ್ಲಿಯೇ ಗಣಕೀಕರಣಗೊಳಿಸಲಾಗಿದೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಸಂಸ್ಥೆಯ ಮೂಲಕ ಗಣಕೀಕರಣಕ್ಕಾಗಿ 43.09 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಮೀಕ್ಷೆಗಾಗಿ 192.79 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, 165.51 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಭಾರತ ಸರ್ಕಾರ 7 ಕೋಟಿ ರೂಪಾಯಿ ಕೊಟ್ಟಿದೆ ಎಂದು ತಂಗಡಗಿ ಹೇಳಿದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner