ಸಚಿವ ಸಂಪುಟ ಸಭೆಯಲ್ಲಿ ಮಂಡನೆಗೂ ಮೊದಲೇ ಜಾತಿಗಣತಿ ಮಾಹಿತಿ ಸೋರಿಕೆ ಶಂಕೆ, ಕರ್ನಾಟಕ ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ, ಅಸಮಾಧಾನ
Karnataka Caste Census: ಕರ್ನಾಟಕ ಜಾತಿ ಗಣತಿ ವರದಿ ಇಂದು (ಏಪ್ರಿಲ್ 11) ಸಚಿವ ಸಂಪುಟದಲ್ಲಿ ಮಂಡನೆಯಾಗುತ್ತಿದೆ. ಅದಕ್ಕೂ ಮೊದಲ ವರದಿಯ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕ ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ. ಸೋರಿಕೆಯಾದ ಮಾಹಿತಿಯಲ್ಲೇನಿದೆ ಇಲ್ಲಿದೆ ವಿವರ

Karnataka Caste Census: ಕರ್ನಾಟಕ ಜಾತಿ ಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವ ಮೊದಲೇ, ಅದರಲ್ಲಿದ್ದ ಕೆಲವು ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಟಿವಿ9 ಕನ್ನಡ ಈ ಕುರಿತು ವರದಿ ಬಿತ್ತರಿಸಿದೆ. ಇದರಂತೆ, ಸೋರಿಕೆಯಾದ ಮಾಹಿತಿಯಲ್ಲಿ ಕೆಲವು ಸಮುದಾಯಗಳ ಜನಸಂಖ್ಯೆ ವಿವರ ಇದೆ ಎಂದು ಅದು ಹೇಳಿದೆ. ಇದಲ್ಲದೇ, ಕೆಲವು ಸಚಿವರ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರನ್ನೂ ಅದು ಮಾತನಾಡಿಸಿದ್ದು, ಅದರ ವಿವರವನ್ನೂ ಬಿತ್ತರಿಸಿದೆ.
ಜಾತಿ ಗಣತಿ ವರದಿಯಿಂದ ಸೋರಿಕೆಯಾದದ್ದು ಎನ್ನಲಾದ ಮಾಹಿತಿ ಇದು
ಟಿವಿ9 ಕನ್ನಡ ಬಿತ್ತರಿಸಿದ ವರದಿಯಲ್ಲಿರುವ ಕರ್ನಾಟಕ ಜಾತಿ ಗಣತಿ ವರದಿಯಿಂದ ಸೋರಿಕೆಯಾಗಿದೆ ಎಂದು ಹೇಳಲಾದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ - 1.08 ಕೋಟಿ, ಮುಸಲ್ಮಾನರು - 75 ಲಕ್ಷ, ಲಿಂಗಾಯಿತರು - 73 ಲಕ್ಷ, ಒಕ್ಕಲಿಗರು - 70 ಲಕ್ಷ, ಕುರುಬರು - 45 ಲಕ್ಷ, ಕುರುಬರು- 45 ಲಕ್ಷ, ಪರಿಶಿಷ್ಟ ಪಂಗಡ - 42 ಲಕ್ಷ, ಮರಾಠ - 16 ಲಕ್ಷ, ವಿಶ್ವಕರ್ಮ- 15 ಲಕ್ಷ, ಬ್ರಾಹ್ಮಣರು - 15 ಲಕ್ಷ, ಬೆಸ್ತರು - 14.5 ಲಕ್ಷ, ಈಡಿಗರು - 14 ಲಕ್ಷ, ಕ್ರೈಸ್ತರು - 12 ಲಕ್ಷ, ಗೊಲ್ಲ (ಯಾದವ) 10.5 ಲಕ್ಷ, ಉಪ್ಪಾರ - 7 ಲಕ್ಷ, ಮಡಿವಾಳ - 7 ಲಕ್ಷ, ಅರೆ ಅಲೆಮಾರಿ - 7 ಲಕ್ಷ, ಕುಂಬಾರರು - 5 ಲಕ್ಷ, ತಿಗಳರು - 5 ಲಕ್ಷ, ಸವಿತಾ ಸಮಾಜ- 4.5 ಲಕ್ಷ, ಜೈನರು - 3 ಲಕ್ಷ ಎಂದು ಉಲ್ಲೇಖಿಸಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಏನು ಹೇಳಿದ್ರು
ಕರ್ನಾಟಕ ಜಾತಿ ಗಣತಿ ವರದಿ ಎಂದು ಹೇಳಲಾಗುತ್ತಿದ್ದರೂ ಸಚಿವ ಸಂಪುಟದ ಕೆಲವು ಸಚಿವರು ಅದು ಜಾತಿ ಗಣತಿ ವರದಿ ಅಲ್ಲ, ಸಾಮಾಜಿಕ - ಆರ್ಥಿಕ ಸಮೀಕ್ಷೆ ಎಂದು ಸಮಜಾಯಿಷಿ ನೀಡಿದ್ದಾರೆ. ಅದೂ ಅಲ್ಲದೆ, ಜಾತಿ ಗಣತಿ ವರದಿಗೆ ಸಂಬಂಧಿಸಿ ವ್ಯಾಪಕ ಅಸಮಾಧಾನ, ಆಕ್ಷೇಪಣೆಗಳು ವ್ಯಕ್ತವಾಗಿದೆ. ಈ ನಡುವೆ, ಟಿವಿ9 ಕನ್ನಡದ ಜತೆಗೆ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರು ತಾವು ಸಿದ್ಧಪಡಿಸಿದ ಮೂಲ ವರದಿ ಕುರಿತು ಮಾತನಾಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಿರ್ದೇಶನಕ್ಕೆ ಅನುಗುಣವಾಗಿಯೇ ಕರ್ನಾಟಕದ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲಾಗಿತ್ತು. ಜಾತಿ, ಸಾಮಾಜಿಕ, ರಾಜಕೀಯ ಹಾಗೂ ಅರ್ಥಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಿ ವರದಿ ರಚಿಸಲಾಗಿದೆ. ಈ ಅಂಶಗಳು ಕುಟುಂಬಗಳ ಒಟ್ಟಾರೆ ಬದುಕಿನ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನೆರವಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಜಾತಿ ಕೂಡ ಅವರ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ ಅರಿತು ಅವರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ. ಹಾಗಾಗಿ ಇದು ವೈಜ್ಞಾನಿಕವಾದ ವರದಿ ಮತ್ತು ಸಾಮಾಜಿಕ, ಅರ್ಥಿಕ ಸ್ಥಿತಿಗತಿ ವಿವರಿಸುವ ವರದಿ ಎಂದು ಕಾಂತರಾಜು ಅವರು ಹೇಳಿದರು.
ವರದಿ ಸಿದ್ಧಪಡಿಸಬೇಕಾದರೂ ಸಾಕಷ್ಟು ಸಿದ್ಧತೆ ಮಾಡಿಕೊಂಡು, ಕಾಲಮಿತಿಯಲ್ಲಿ ಮಾಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಮೊದಲು ಕರ್ನಾಟಕದಲ್ಲಿ ಒಟ್ಟು ಎಷ್ಟು ಮನೆಗಳಿವೆ ಎಂಬ ಲೆಕ್ಕ ಗಮನಿಸಿದ್ದೇವೆ. ನಂತರ ಗಣತಿದಾರರಿಗೆ ಆ ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಕಾಲಮಿತಿಯಲ್ಲಿ ಗಣತಿ ಮುಗಿಸಿದ್ದೇವೆ. ಅಕಸ್ಮಾತ್ ಯಾವುದಾದರೂ ಮನೆ ಬಿಟ್ಟು ಹೋಗಿದ್ದರೆ ಅಂತಹ ಮನೆಯವರು ಅಧಿಕಾರಿಗಳನ್ನು, ಗಣತಿದಾರರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಜಾಹೀರಾತು ನೀಡಿ, ಜಾಗೃತಿ ಮೂಡಿಸಲಾಗಿತ್ತು. ಎಲ್ಲ ಮಾಹಿತಿಗಳಿಗೂ ಅಗತ್ಯ ದಾಖಲೆಗಳೂ ಆಯಾ ಗಣತಿದಾರರು ಮತ್ತು ಅಧಿಕಾರಿಗಳ ಕಚೇರಿಯಲ್ಲಿವೆ ಎಂದು ಕಾಂತರಾಜು ಹೇಳಿದರು.
