ಕರ್ನಾಟಕ ಸಿಇಟಿ 2025: ನೋಂದಣಿ ಸಂಖ್ಯೆ ನಮೂದಿಸುವಲ್ಲಿ ದೋಷವಿದ್ದರೆ ಅಂಕ ದಾಖಲಿಸಲು ಮೇ 26ರಿಂದ ಅವಕಾಶ
ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಸರಿಯಾದ ನೋಂದಣಿ ಮಾಡದೇ ಫಲಿತಾಂಶ ಪಡೆಯದವರು ತಮ್ಮ ಅಂಕಗಳನ್ನು ನೋಂದಾಯಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅವಕಾಶ ಮಾಡಿಕೊಟ್ಟಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರು: ಸರಿಯಾಗಿ ನೋಂದಣಿ ಸಂಖ್ಯೆಯನ್ನು ನಮೂದಿಸದ ಕಾರಣದಿಂದ ಸಿಇಟಿ-2025ರ ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ದಾಖಲಿಸಲು ಅವಕಾಶ ನೀಡುವ ಸಲುವಾಗಿ ಮೇ 26ರಿಂದ ಆನ್ ಲೈನ್ ಲಿಂಕ್ ತೆರೆಯಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.ಸಿಇಟಿ-2025ರ ಫಲಿತಾಂಶವನ್ನು ಕೆಇಎ ಶನಿವಾರ ಪ್ರಕಟಿಸಿದ್ದು, ಕೆಲವು ಅಭ್ಯರ್ಥಿಗಳು ಹಿಂದಿನ ವರ್ಷದಲ್ಲಿ 2ನೇ ಪಿಯು / 12ನೇ ತರಗತಿ ಪರೀಕ್ಷೆಗಳಲ್ಲಿ ತಾವು ತೇರ್ಗಡೆಯಾಗಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಮನವಿಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಶನಿವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಸಿಇಟಿ-2025ರ ಫಲಿತಾಂಶವನ್ನು ಪ್ರಕಟಿಸುವ ಮೊದಲು 2ನೇ ಪಿಯು / 12ನೇ ತರಗತಿ ಅಂಕಗಳನ್ನು ಆಯಾ ಮಂಡಳಿಗಳಿಂದಲೇ ಪಡೆಯಲಾಗುವುದು ಎಂದು ಸೂಚಿಸಲಾಗಿತ್ತು ಮತ್ತು ಅಭ್ಯರ್ಥಿಗಳು ಸರಿಯಾದ ನೋಂದಣಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳು ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಲಿಲ್ಲ. ಹೀಗಾಗಿ, ಅಂತಹ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಪ್ರಸನ್ನ ವಿವರಿಸಿದ್ದಾರೆ.
ಮೇ 26ರಿಂದ ತೆರೆಯಲಾಗುವ ಲಿಂಕ್ ನಲ್ಲಿ ಅಭ್ಯರ್ಥಿಗಳು 2ನೇ ಪಿಯು / 12ನೇ ತರಗತಿ ಅಂಕಗಳನ್ನು ನೋಂದಣಿ ಸಂಖ್ಯೆಯೊಂದಿಗೆ ದಾಖಲಿಸಬೇಕು ಮತ್ತು ಅಂಕಪಟ್ಟಿಯನ್ನು ಅಪ್ ಲೋಡ್ ಮಾಡಬೇಕು. ಅಭ್ಯರ್ಥಿಗಳು ದಾಖಲಿಸುವ ಅಂಕಗಳನ್ನು ಆಯಾ ಪರೀಕ್ಷಾ ಮಂಡಳಿಯಿಂದ ಪರಿಶೀಲಿಸಿ ಧೃಡೀಕರಿಸಿದ ನಂತರವೇ ಸ್ಪಾಟ್ ರ‍್ಯಾಂಕ್ (Rank) ಅನ್ನು ಮೇ 29ರಿಂದ ನೀಡಲು ಕ್ರಮವಹಿಸಲಾಗುವುದು. ಸ್ಪಾಟ್ ರಾಂಕ್ ಪಡೆಯಲು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಕೆಇಎ ನಕಲಿ ವೆಬ್‌ಸೈಟ್: ಸೈಬರ್ ಠಾಣೆಗೆ ದೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಕಲಿ ವೆಬ್‌ಸೈಟ್ ಗೂಗಲ್‌ನಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಅದನ್ನು ನಿಷ್ಕ್ರಿಯಗೊಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಬೆಂಗಳೂರು ಉತ್ತರ ವಲಯದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೂಗಲ್‌ನಲ್ಲಿ ಕೆಇಎ ಹೋಮ್ (KEA HOME) ಎಂದು ಹುಡುಕಿದಾಗ http://k̲-cet̤̤.org ಎನ್ನುವ ನಕಲಿ ಲಿಂಕ್ ಪತ್ತೆಯಾಗಿದ್ದು, ಇದರ ಮೂಲಕ ಅಭ್ಯರ್ಥಿಗಳ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ರಾಜ್ಯ ಮತ್ತು ಕೋರ್ಸ್ ವಿವರಗಳನ್ನು ಸಂಗ್ರಹಿಸುತ್ತಿರುವುದು ಗೊತ್ತಾಗಿದೆ ಎಂದು ಅವರು ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಧಿಕಾರದ ವೆಬ್‌ಸೈಟ್ ವಿನ್ಯಾಸದ ಹಾಗೆಯೇ ನಕಲಿ ವೆಬ್‌ಸೈಟ್ ರೂಪಿಸಿದ್ದು, ಇದರಿಂದ ಸಾರ್ವಜನಿಕರು ಮೋಸ ಹೋಗುವ ಸಾಧ್ಯತೆ ಇದೆ. ಹೀಗಾಗಿ ಐಪಿ ವಿಳಾಸದ ಮೂಲಕ ಕಿಡಿಗೇಡಿಗಳನ್ನು ಪತ್ತೆಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ವಾಸ್ತವವಾಗಿ ಕೆಇಎ ವೆಬ್‌ಸೈಟ್ ವಿಂಡೊ ಮೂಲಕ ಯಾವ ಅಭ್ಯರ್ಥಿಗಳ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ. ಬದಲಿಗೆ, ವೆಬ್‌ಸೈಟ್‌ನಲ್ಲಿ ಅಪ್ಲಿಕೇಷನ್ ಮಾಡ್ಯೂಲ್ ಅಭಿವೃದ್ಧಿಪಡಿಸಿ, ಆ ಮೂಲಕವೇ ಅರ್ಜಿ ಹಾಕಲು ಅವಕಾಶ ನೀಡುತ್ತದೆ ಎಂದು ಗದ್ಯಾಳ ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಈ ರೀತಿಯ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಬೇಕು. ಅಸಲಿ ವೆಬ್ ಸೈಟ್ ಯಾವುದು ಎಂಬುದನ್ನು ತಿಳಿದು, ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಯುಜಿಸಿಇಟಿ: ಮೇ 28ರಿಂದ ವಿಕಲಚೇತನರ ವೈದ್ಯಕೀಯ ತಪಾಸಣೆ
ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಲ್ಲಿಸಿದ ಸಿಇಟಿ ಅರ್ಜಿಯಲ್ಲಿ ವಿಕಲಚೇತನರ ಕೋಟಾ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಇದೇ 28ರಿಂದ ಮೂರು ದಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.
ಮೇ 28ರಿಂದ 30ರವರೆಗೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಇದಕ್ಕೆ ಸೂಕ್ತ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಲು ಮೇ 26ರಂದು ಕೆಇಎ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯರ ಸಮಿತಿ ವತಿಯಿಂದ ವೈದ್ಯಕೀಯ ತಪಾಸಣೆ ಮಾಡಿ, ಕ್ಲೇಮ್ ಪ್ರಕಾರ ಅರ್ಹರಾಗಿದ್ದಾರೆಯೇ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತ ತಪಾಸಣೆಗೆ ಬರಬೇಕು ಎಂದು ಅವರು ಕೋರಿದ್ದಾರೆ.