Karnataka CET 2025: ಸಿಇಟಿ ಪರೀಕ್ಷೆಗೆ 45 ಸಾವಿರ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿಲ್ಲ; ಕೆಇಎ ಸೂಚನೆ
Karnataka CET 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದೇ ಏಪ್ರಿಲ್ 15ರಂದು ಕನ್ನಡ ಹಾಗೂ 16 ಮತ್ತು 17ರಂದು ವಿಜ್ಞಾನ ವಿಷಯಗಳಿಗೆ ಸಿಇಟಿ ಪರೀಕ್ಷೆ ನಡೆಸಲಿದ್ದು, ಎಲ್ಲ ವಿದ್ಯಾರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ತಿಳಿಸಲಾಗಿದೆ.

Karnataka CET 2025: ದ್ವಿತೀಯ ಪಿಯುಸಿಯ ಮೊದಲನೇ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಗಳಿಸದ ಅಥವಾ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು 2 ಮತ್ತು 3ನೇ ಪರೀಕ್ಷೆಯಲ್ಲಿ ಆರ್ಹತೆ ಪಡೆಯಲು ಅವಕಾಶ ಇರುವ ಕಾರಣ, ಯಾರೆಲ್ಲ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿದ್ದೀರೊ ಅವರೆಲ್ಲರೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಹಾಜರಾಗಿ ಪರೀಕ್ಷೆ ಬರೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸಲಹೆ ನೀಡಿದ್ದಾರೆ. ಹೊರನಾಡು ಕನ್ನಡಿಗರಿಗೆ ಇದೇ ಏಪ್ರಿಲ್ 15ರಂದು ಕನ್ನಡ ಹಾಗೂ 16 ಮತ್ತು 17ರಂದು ವಿಜ್ಞಾನ ವಿಷಯಗಳಿಗೆ ಸಿಇಟಿ ನಡೆಯುಲಿದ್ದು, ಪ್ರಾಧಿಕಾರ ಸಕಲ ರೀತಿಯಲ್ಲಿ ಈಗಾಗಲೇ ತಯಾರಿ ನಡೆಸಿದೆ.
ದ್ವಿತೀಯ ಪಿಯುಸಿಯ ಮೊದಲನೇ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ ಎಂದು ಸಿಇಟಿ ಪರೀಕ್ಷೆ ಬರೆಯದೆ ಕೈಚೆಲ್ಲವುದು ಸರಿಯಲ್ಲ. ದ್ವಿತೀಯ ಪಿಯುಸಿಯ ಎರಡನೇ ಮತ್ತು ಮೂರನೇ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಇದ್ದು, ಅಲ್ಲಿ ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಬಹುದು. ಸಿಇಟಿ ಬರೆದಿದ್ದರೆ ಮಾತ್ರ ಪಿಯುಸಿಯ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೂ ಸಿಇಟಿ ರಾಂಕ್ (Rank) ಕೊಟ್ಟು, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಮಾಡಬಹುದು. ಆದರೆ ಸಿಇಟಿಯೇ ಬರೆಯದಿದ್ದರೆ ರಾಂಕ್ ಗೆ ಪರಿಗಣಿಸಲು ಆ ಸಂದರ್ಭದಲ್ಲಿ ಸಾಧ್ಯ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಕಳೆದ ವರ್ಷ ಕೂಡ 3ನೇ ಪರೀಕ್ಷೆಯಲ್ಲಿ ಅರ್ಹತೆಯಾದ ಆನೇಕರಿಗೆ ರಾಂಕ್ ಕೊಟ್ಟು, ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಸಿಇಟಿ ಪರೀಕ್ಷೆ ಒಮ್ಮೆ ಮಾತ್ರ ನಡೆಸುವುದರಿಂದ ಅದನ್ನು ತಪ್ಪದೇ ಬರೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ವರ್ಷ 3.3 ಲಕ್ಷ ಅಭ್ಯರ್ಥಿಗಳು ಸಿಇಟಿ ಬರೆಯಲು ಶುಲ್ಕ ಪಾವತಿಸಿದ್ದು, ಅವರಲ್ಲಿ ಇದುವರೆಗೂ 2.85 ಲಕ್ಷ ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇನ್ನೂ ಸುಮಾರು 45 ಸಾವಿರ ಮಂದಿ ಡೌನ್ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಪೋಷಕರು ಕೂಡ ಎಚ್ಚರವಹಿಸಬೇಕು. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಸರ್ಕಾರ ಇನ್ನೂ ಎರಡು ಅವಕಾಶ ನೀಡುತ್ತಿದೆ. ಹೀಗಾಗಿ ಒಮ್ಮೆ ಮಾತ್ರ ನಡೆಯುವ ಸಿಇಟಿ ಪರೀಕ್ಷೆಯಿಂದ ಯಾರೂ ವಿಮುಖರಾಗುವುದು ಬೇಡ ಎಂದೂ ಪ್ರಸನ್ನ ಹಿತವಚನ ನೀಡಿದ್ದಾರೆ.
ಏಪ್ರಿಲ್ 16ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಹಾಗೂ ಏಪ್ರಿಲ್ 17ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.
ಏಕಲವ್ಯ ವಸತಿ ಶಾಲೆ: ಸೀಟು ಹಂಚಿಕೆ ಫಲಿತಾಂಶ ಪ್ರಕಟ
ಕರ್ನಾಟಕ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳ ಮೆರಿಟ್ ಮತ್ತು ಅಭ್ಯರ್ಥಿಗಳು ದಾಖಲಿಸಿರುವ ಇಚ್ಛೆ / ಆಯ್ಕೆಗಳ ಆಧಾರದ ಮೇಲೆ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಸೀಟು ಹಂಚಿಕೆಯ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಏ.16ರೊಳಗೆ ಸಂಬಂಧಿಸಿದ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
