ಸಿಎಂ ಬದಲಾವಣೆ ವಿಚಾರ ನನಗೆ ಪದೇ ಪದೇ ಕೇಳಬೇಡಿ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ: ಸಿದ್ದರಾಮಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಂ ಬದಲಾವಣೆ ವಿಚಾರ ನನಗೆ ಪದೇ ಪದೇ ಕೇಳಬೇಡಿ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ: ಸಿದ್ದರಾಮಯ್ಯ

ಸಿಎಂ ಬದಲಾವಣೆ ವಿಚಾರ ನನಗೆ ಪದೇ ಪದೇ ಕೇಳಬೇಡಿ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ನಡೆದಿರುವ ರಾಜಕೀಯ ಬೆಳವಣಿಗೆಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಮಾತನಾಡಿದ್ದಾರೆ.

ಮೈಸೂರು ಜಿಲ್ಲೆ ಸುತ್ತೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲಾಯಿತು.
ಮೈಸೂರು ಜಿಲ್ಲೆ ಸುತ್ತೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲಾಯಿತು.

ಮೈಸೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನನಗೆ ಪದೇ ಪದೇ ಪ್ರಶ್ನೆಯನ್ನು ಕೇಳಬೇಡಿ. ಏಕೆಂದರೆ ಕಾಂಗ್ರೆಸ್‌ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ.ಎಲ್ಲದನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಈ ವಿಚಾರದ ಬಗ್ಗೆ ನಾನು ಎಷ್ಟು ಬಾರಿ ಸ್ಪಷ್ಟೀಕರಣ ಕೊಡಲಿ ಹೇಳಿ. ಇಬ್ಬರು ಮೂವರು ಸಚಿವರು ಜೊತೆಯಲ್ಲಿ ಕುಳಿತು ಮಾತನಾಡಿದ ತಕ್ಷಣ ಅದನ್ನೇ ಇದೇ ವಿಚಾರ ಎಂದು ಏಕೆ ಗ್ರಹಿಸುತ್ತೀರಾ. ಮೂರ್ನಾಲ್ಕು ಜನ ಸೇರಿದಾಗ ರಾಜಕೀಯ ಚರ್ಚೆ ಮಾಡುತ್ತೇವೆ. ನನ್ನ ಪ್ರಕಾರ ಡಿನ್ನರ್ ಮೀಟಿಂಗ್ ಹಾಗೂ ಸಭೆ ಮಾಡುವುದರಲ್ಲಿ ತಪ್ಪೇ ಇಲ್ಲ. ನೀವು ಅದರಲ್ಲಿ ಹುಡುಕುವ ಗ್ರಹಿಕೆ ಸರಿ ಇಲ್ಲ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಚ ಖಡಕ್‌ ಆಗಿಯೇ ಹೇಳಿದರು.

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಶುಕ್ರವಾರ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ನಾನು ಏನನ್ನು ಹೇಳಲಿ. ಈಗಾಗಲೇ ಈ ಕುರಿತು ಉತ್ತರ ನೀಡಿದ್ದೇನೆ. ಈ ವಿಚಾರದಲ್ಲಿ ನನ್ನ ತೀರ್ಮಾನವೇನೂ ಇಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ. ಹೈಕಮಾಂಡ್‌ ಮಾಡುವ ತೀರ್ಮಾನ ಏನಿರಲಿದೆಯೋ ಅದೇ ಅಂತಿಮವಾಗಿರಲಿದೆ. ಈ ಬಗ್ಗೆ ನನಗೆ ಮತ್ತೆ ಮತ್ತೆ ಕೇಳಬೇಡಿ ಎಂದು ಹೇಳಿದರು.

ಶನಿವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಬಜೆಟ್ ಬಗ್ಗೆ ನಾನು ಏನು ನಿರೀಕ್ಷೆ ಮಾಡೋದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡುತ್ತೇನೆಂದು ಬಜೆಟ್ ನಲ್ಲಿ ಘೋಷಣೆ ಮಾಡಿದ್ರು. ಒಂದು ರೂಪಾಯಿ ಹಣ ಕೊಟ್ಟಿಲ್ಲ. ಹೀಗಾಗಿ ನಾನು ಏನನ್ನೂ ನಿರೀಕ್ಷೆ ಮಾಡಲ್ಲ. ಹಿಂದಿನ ಬಜೆಟ್‌ಗಳಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ‌. ನಾಲ್ಕು ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಕೇವಲ 68 ಸಾವಿರ ಕೋಟಿ ನಮಗೆ ವಾಪಾಸ್ ಕೊಡುತ್ತಾರೆ. ನಬಾರ್ಡ್ ನಲ್ಲಿ ಶೇ.58 ಹಣ ಕಡಿತ ಮಾಡಿದ್ದಾರೆ. ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ‌ ಎನ್ನುವುದು ಸಿದ್ದರಾಮಯ್ಯ ಅವರ ಬೇಸರದ ನುಡಿ.

ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವೂ ಸಾಕಷ್ಟು ಚರ್ಚೆಗಳಾಗುತ್ತಿಎ. ಜನ ಎಲ್ಲಿ ಸಾಲ ಸಿಗುತ್ತೋ ಅಲ್ಲಿಗೆ ಹೋಗುತ್ತಿದ್ದಾರೆ. ಅಲ್ಲಿ ಹೆಚ್ಚು ಬಡ್ಡಿ ಹಾಕುತ್ತಿದ್ದಾರೆ. ಗೂಂಡಾಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಗಳು ಆರ್‌ಬಿಐನ ನಿಯಮದಡಿ ಬರುತ್ತವೆ. ಇನ್ನೂ ಸುಗ್ರೀವಾಜ್ನೆ ಹೊರಡಿಸಿಲ್ಲ‌.ಸುಗ್ರೀವಾಜ್ಞೆ ಹೊರಡಿಸಿದ ನಂತರ ಇದಕ್ಕೆ ಕಡಿವಾಣ ಬೀಳಲಿದೆ ಎನ್ನುವುದು ಸಿದ್ದರಾಮಯ್ಯ ಅವರ ವಿವರಣೆ.

ಮೈಸೂರು ಮುಡಾ ನಿವೇಶನಗಳ ಹಂಚಿಕೆಗೆ ಇಡಿ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಅವರು. ಮನಿ ಲ್ಯಾಂಡರಿಂಗ್ ಪ್ರಶ್ನೆ ಇದರಲ್ಲಿ ಎಲ್ಲಿ ಬರುತ್ತೇ ಹೇಳಿ. ಮುಡಾ ಮಾಜಿ ಆಯುಕ್ತ ನಟೇಶ್ ಗೆ ಈ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದರ ಅರ್ಥ ಮನಿ ಲ್ಯಾಂಡರಿಂಗ್ ಈ ಜಪ್ತಿ ವಿಚಾರ ಎಲ್ಲವೂ ಕೂಡ ಕಾನೂನು ಪ್ರಕಾರ ಇಲ್ಲ ಎಂಬುದು ಅರ್ಥ ತಾನೇ. ಇಡಿ ಬಳಸುವ ಮನಿ ಲ್ಯಾಂಡರಿಂಗ್ ನಡೆದಿದ್ದರೇ ಕೋರ್ಟ್ ಏಕೆ ತಡೆಯಾಜ್ಞೆ ಕೊಡುತ್ತಿತ್ತು. ನನ್ನ ಹೆಸರು ಕೆಡಿಸಲು ಇಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಇಡಿ ನಿನ್ನೆ ಬಿಡುಗಡೆ ಮಾಡಿರುವುದು ತನಿಖಾ ವರದಿಯಲ್ಲ, ಅದು ಕೇವಲ ಜಪ್ತಿ ವರದಿ. ಇಡಿಯ ತನಿಖೆ ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ವಿಚಾರದಲ್ಲಿ ಮಾತನಾಡಲು ಏನು ಇವರಿಗೆ ಸಿಕ್ಕಿಲ್ಲ. ಹೀಗಾಗಿ ಈ ವಿಚಾರ ಇಟ್ಟುಕೊಂಡು ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಯಶಸ್ವಿಯಾಗುವುದಿಲ್ಲ.

ಮುಡಾ ವಿಚಾರದಲ್ಲಿ ನಾನು ನಮ್ಮ ಕುಟುಂಬದವರು ಯಾವ ತಪ್ಪು ಮಾಡಿಲ್ಲ ಎಂದು ನುಡಿದರು.

Whats_app_banner