Siddaramaiah Hassan Convention: ಹಾಸನದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್ ಶಕ್ತಿ ಪ್ರದರ್ಶನ, ದೇವೇಗೌಡ, ಕುಮಾರಸ್ವಾಮಿ ವಿರುದ್ದ ವಾಗ್ದಾಳಿ
Siddaramaiah Hassan Convention: ಹಾಸನದಲ್ಲಿ ಕಾಂಗ್ರೆಸ್ ಹಾಗೂ ಸ್ವಾಭಿಮಾನಿ ಸಮಾವೇಶ ನಡೆದು ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವೂ ಆಯಿತು. ಹೇಗಿತ್ತು ಸಮಾವೇಶ.
ಹಾಸನ: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಬೃಹತ್ ಜನ ವಿಕಾಸ ಸಮಾವೇಶ ನಡಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಸಮಿತಿಯ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ಕೈ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಮೈಸೂರು ಭಾಗದ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಅತ್ಯುತ್ಸಾಹದಿಂದ ಭಾಗಿಯಾದರು. ಸಿಎಂ ಸಿದ್ದರಾಮಯ್ಯ ಸಹಿತ ಸಮಾವೇಶದಲ್ಲಿ ಮಾತನಾಡಿದ ಬಹುತೇಕ ನಾಯಕರು ತಮ್ಮ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬಿಜೆಪಿ ಹಾಗೂ ಆ ಪಕ್ಷದ ನೀತಿ, ಕೇಂದ್ರ ಸರ್ಕಾರದ ನಡೆಗಳ ವಿರುದ್ದ ಹರಿ ಹಾಯ್ದರು.
ಸಿದ್ದರಾಮಯ್ಯ ಹೇಳಿದ್ದೇನು
ಮೈಸೂರಿನಲ್ಲಿ ಹಿಂದೆ ಹಲವು ಬಾರಿ ಸಮಾವೇಶ ಮಾಡಿದ್ದೇವೆ. ಈ ಬಾರಿ ಹಾಸನದಲ್ಲಿ ಸಮಾವೇಶ ಮಾಡಬೇಕು. ಈವರೆಗೂ ಇಲ್ಲಿ ಸಮಾವೇಶ ಆಗಿಲ್ಲ ಎನ್ನುವ ಅಭಿಪ್ರಾಯವನ್ನು ಹೇಳಿದರು. ಇದು ಸ್ವಾಭಿಮಾನಿ ಸಮಾವೇಶ ಎನ್ನುವ ಹೆಸರಿನೊಂದಿಗೆ ಮಾಡಲು ಯೋಜಿಸಲಾಯಿತು. ಕೆಪಿಸಿಸಿ ಕೂಡ ಇದಕ್ಕೆ ಬೆಂಬಲ ನೀಡಿದೆ. ಇಂತಹ ಸಮಾವೇಶ ನನ್ನ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಹಾಸನ ಸಮಾವೇಶಕ್ಕೆ ಬರೀ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಬಂದಿಲ್ಲ. ಇಲ್ಲಿಗೆ ಕಾಂಗ್ರೆಸ್ ಬಗ್ಗೆ ಅನುಕಂಪ ಇರುವ ಹಲವರು ಬಂದಿದ್ದಾರೆ. ಸ್ವಾಭಿಮಾನಿಗಳು ನಮ್ಮೊಂದಿಗೆ ಇದ್ದಾರೆ. ಉಪ ಚುನಾವಣೆಯಲ್ಲಿ ನಮಗೆ ಬೆಂಬಲ ಸೂಚಿಸಿದವರಿಗೆ ಅಭಿನಂದನೆ ಸಲ್ಲಿಸಲು ಸ್ವಾಭಿಮಾನಿಗಳು ಬಂದಿದ್ದಾರೆ. ಆದರೆ ನಮಗೆಲ್ಲ ಧನ್ಯವಾದ ಸಲ್ಲಿಸುವ ಬದಲು ಮತದಾರರಿಗೆ ಧನ್ಯವಾದ ತಿಳಿಸುತ್ತೇವೆ ಎಂದರು ಸಿದ್ದರಾಮಯ್ಯ.
ಗೌಡರ ವಿರುದ್ದ ವಾಗ್ದಾಳಿ
ಸಮಾವೇಶದಲ್ಲಿ ದೇವೇಗೌಡರು, ಎಚ್‌ಡಿಕುಮಾರಸ್ವಾಮಿ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಗೌಡರು ಹಾಗು ಅವರ ಕುಟುಂಬದವರು ಚನ್ನಪಟ್ಟಣದಲ್ಲಿ ಬಂದು ಕಣ್ಣೀರು ಹಾಕಿದರು. ಆದೆ ಜನ ಅವರನ್ನು ಸೋಲಿಸಿದರು. ಹಾಸನದಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಹೆಣ್ಣು ಮಕ್ಕಳೂ ಆತಂಕದಲ್ಲಿದ್ದಾರೆ. ಅವರ ಪರವಾಗಿ ದೇವೇಗೌಡರು ಬಂದು ಇಲ್ಲಿ ಮಾತನಾಡಲಿಲ್ಲ. ನಿಮ್ಮ ಕುಟುಂಬದ ಕಣ್ಣೀರನ್ನು ಜನ ನಂಬುವುದಿಲ್ಲ ಎಂದು ಟೀಕಿಸಿದರು.
ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ದೇವೇಗೌಡರು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ನೀವು ಅಲ್ಲಿ ಏಕೆ ಕೇಳೋಲ್ಲ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಯಾಕೆ ಈ ವಿಚಾರ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನನ್ನನ್ನು ಉಚ್ಚಾಟಿಸಿದರು
ನಾನು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಿದರು. ನಾನು ಪಕ್ಷವನ್ನು ಬಿಟ್ಟು ಬರಲಿಲ್ಲ. ಪಕ್ಷವನ್ನು ಅವರು ಎಂದೂ ಕಟ್ಟಲಿಲ್ಲ.ನಾವೇ ಜನತಾದಳ ಕಟ್ಟಿದೆವು. ಹಲವು ನಾಯಕರು ಇದ್ದೆವು. ನಮ್ಮ ಜತೆಗೆ ಒಕ್ಕಲಿಗ ನಾಯಕರನ್ನು ದೇವೇಗೌಡರು ತುಳಿದರು. ಇದನ್ನು ಹಿರಿಯ ಮುಖಂಡ ಎಚ್.ಟಿ.ಕೃಷ್ಣಪ್ಪ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಈಗ ನಾವು ಅರಸಿಕೆರೆಯಲ್ಲಿ ಗೆದ್ದಿದ್ದೇನೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಕೋಮುವಾದಿಗಳ ಜತೆಗೆ ಹೋಗಿರುವ ದೇವೇಗೌಡರು ಹಾಗು ಜೆಡಿಎಸ್‌ಗೆ ಜನತೆ ತಕ್ಕ ಪಾಠ ಕಲಿಸುವರು ಎಂದು ಹೇಳಿದರು.
ಸಿದ್ದರಾಮಯ್ಯ ಜತೆ ಬಂಡೆ
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದೆ ಮೈಸೂರಿನಲ್ಲಿಯೇ ಸಿದ್ದರಾಮಯ್ಯ ಅವರ ಪರ ಬಂಡೆಯಾಗಿ ನಿಲ್ಲುತ್ತೇನೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಬಂಡೆ ಸದಾ ಸಿಎಂ ಪರವಾಗಿಯೇ ಇರ್ತೇನೆ. ಹಾಸನದಲ್ಲಿ ಜನ ಈ ಬಾರಿ ನಮಗೆ ಶಕ್ತಿ ತುಂಬಿದರು. ಈ ಕಾರಣದಿಂದ ಸ್ವಾಭಿಮಾನಿ ಸಮಾವೇಶ ಹಾಗೂ ಕಾಂಗ್ರೆಸ್ ಅಭಿಮಾನಿಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸಚಿವರು, ಶಾಸಕರು ಹಾಗೂ ಹಿರಿಯ ನಾಯಕರು ಈ ವೇಳೆ ಮಾತನಾಡಿದರು.