Border Dispute: ಗಡಿ ವಿವಾದ: ಕರ್ನಾಟಕಕ್ಕೆ 'ಮಹಾ' ಡಿಸಿಎಂ ಫಡ್ನವೀಸ್‌ ಸವಾಲು: ಸಿಎಂ ಬೊಮ್ಮಾಯಿ ಪ್ರತಿ ಸವಾಲು!
ಕನ್ನಡ ಸುದ್ದಿ  /  ಕರ್ನಾಟಕ  /  Border Dispute: ಗಡಿ ವಿವಾದ: ಕರ್ನಾಟಕಕ್ಕೆ 'ಮಹಾ' ಡಿಸಿಎಂ ಫಡ್ನವೀಸ್‌ ಸವಾಲು: ಸಿಎಂ ಬೊಮ್ಮಾಯಿ ಪ್ರತಿ ಸವಾಲು!

Border Dispute: ಗಡಿ ವಿವಾದ: ಕರ್ನಾಟಕಕ್ಕೆ 'ಮಹಾ' ಡಿಸಿಎಂ ಫಡ್ನವೀಸ್‌ ಸವಾಲು: ಸಿಎಂ ಬೊಮ್ಮಾಯಿ ಪ್ರತಿ ಸವಾಲು!

ಕರ್ನಾಟಕ - ಮಹಾರಾಷ್ಟ್ರದ ಗಡಿಯಲ್ಲಿನ ಗ್ರಾಮಗಳನ್ನು ನಮ್ಮ ವಶಕ್ಕೆ ಪಡೆಯುತ್ತೇವೆ. ಮಹಾರಾಷ್ಟ್ರಕ್ಕೆ ಸೇರಬೇಕಾದ ಒಂದೇ ಒಂದು ಗ್ರಾಮವನ್ನೂ ನಾವು ಕರ್ನಾಟಕಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಗುಡುಗಿದ್ದಾರೆ. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡದ ನೆಲ ಕಬಳಿಸುವ ಮಹಾರಾಷ್ಟ್ರ ನಾಯಕರ ಕನಸು ನನಸಾಗದು ಎಂದು ಗುಡುಗಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

ಮುಂಬಯಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ನಾಯಕರು, ಇದೀಗ ಕರ್ನಾಟಕವನ್ನು ಕೆಣಕುವ ಭಂಡತನ ಪ್ರದರ್ಶಿಸುತ್ತಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಬೆಳಗಾವಿ ಹಾಗೂ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ಸಿದ್ಧ ಎಂದು ಹೇಳಿದ್ದಾರೆ.

ಕರ್ನಾಟಕ - ಮಹಾರಾಷ್ಟ್ರದ ಗಡಿಯಲ್ಲಿನ ಗ್ರಾಮಗಳನ್ನು ನಮ್ಮ ವಶಕ್ಕೆ ಪಡೆಯುತ್ತೇವೆ. ಮಹಾರಾಷ್ಟ್ರಕ್ಕೆ ಸೇರಬೇಕಾದ ಒಂದೇ ಒಂದು ಗ್ರಾಮವನ್ನೂ ನಾವು ಕರ್ನಾಟಕಕ್ಕೆ ಬಿಟ್ಟುಕೊಡುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್‌ ಗುಡುಗಿದ್ದಾರೆ. ಮರಾಠಿ ಬುಹುಸಂಖ್ಯಾತರಿರುವ ಬೆಳಗಾವಿ-ಕಾರವಾರ-ನಿಪ್ಪಾಣಿಯ ಗ್ರಾಮಗಳನ್ನು, ಮಹಾರಾಷ್ಟ್ರಕ್ಕೆ ಸೇರ್ಪಡೆಯೇ ಮಾಡಿಯೇ ಸಿದ್ಧ ಎಂಬ ಫಟ್ನವೀಸ್‌ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ.

ದಶಕಗಳಿಂದ ಗಡಿ ಗ್ರಾಮಗಳ ಜನರು ಮಹಾರಾಷ್ಟ್ರದ ಜೊತೆಗೆ ಗುರುತಿಸಿಕೊಳ್ಳಲು ತವಕಿಸುತ್ತಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಗಡಿ ವಿವಾದ ಇತ್ಯರ್ಥಗೊಳ್ಳಲಿದ್ದು, ಕರ್ನಾಟಕದ ಮುಖ್ಯಮಂತ್ರಿಯೂ ಸೇರಿದಂತೆ ನಾಯಕರ ಹೇಳಿಕೆಗಳಿಗೆ ತಲೆ ಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ತಿರುಗೇಟು:

ಇನ್ನು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಅವರಿಗೆ ತಿರುಗೇಟು ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡದ ನೆಲ ಕಬಳಿಸುವ ಮಹಾರಾಷ್ಟ್ರ ನಾಯಕರ ಕನಸು ನನಸಾಗದು ಎಂದು ಗುಡುಗಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬೊಮ್ಮಾಯಿ, ''ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದೂ ನನಸಾಗುವುದಿಲ್ಲ. ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಕಟಿ ಬದ್ಧವಾಗಿದೆ..'' ಎಂದು ಸ್ಪಷ್ಟಪಡಿಸಿದ್ದಾರೆ.

''ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ‌ ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹವಿದೆ. ಮಹಾರಾಷ್ಟ್ರ ಸರ್ಕಾರ 2004ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದೆ. ಇದುವರೆಗೂ ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ದರಾಗಿದ್ದೇವೆ..'' ಎಂದು ಸಿಎಂ ಭರವಸೆ ನೀಡಿದ್ದಾರೆ.

ಮೋದಿ ಭೇಟಿಗ ಮಾಡಲಿದೆ 'ಮಹಾ' ಸಚಿವರ ನಿಯೋಗ!

ಗಡಿ ವಿವಾದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿರುವ ಮಹಾರಾಷ್ಟ್ರ ನಾಯಕರು, ಸಚಿವರ ನಿಯೋಗದೊಂದಿಗೆ ಶೀಘ್ರವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಅಬಕಾರಿ ಸಚಿವ ಶಂಭುರಾಜ್‌ ದೇಸಾಯಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಭಾಳ್‌ ಸಾಹೇಬ್‌ ಠಾಕ್ರೆ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಪ್ರತಿಪಕ್ಷ ನಾಯಕ ಅಜಿತ್‌ ಪವಾರ್‌, ಜತ್‌ ತಾಲೂಕಿನ ವಿಧಾನಸಭೆ ಕ್ಷೇತ್ರವನ್ನು ಮಹಾರಾಷ್ಟ್ರ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಜತ್‌ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದ್ದು, ಕರ್ನಾಟಕ ಸಿಎಂ ನೀಡಿರುವ ಹೇಳಿಕೆ ಅರ್ಥಹೀನ ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಗಡಿ ವಿವಾದವನ್ನು ಕೆದಕುವ ಮೂಲಕ ಮಹಾರಾಷ್ಟ್ರ ನಾಯಕರು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ಕನ್ನಡದ ನೆಲದ ರಕ್ಷಣೆಗೆ ನಾವು ಬದ್ಧ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್‌ ಸಂದೇಶ ರವಾನಿಸಿದ್ದಾರೆ.

Whats_app_banner