Karnataka News: ಕಮಿಷನ್ ದಂಧೆಗೆ ಬ್ರೇಕ್, ಬಜೆಟ್ ನಂತರ ಗುತ್ತಿಗೆದಾರರ ಬಾಕಿ ಬಿಡುಗಡೆ: ಸಿದ್ದರಾಮಯ್ಯ ಭರವಸೆ
ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಭೇಟಿ ಮಾಡಿತು. ಈ ವೇಳೆ ಗುತ್ತಿಗೆದಾರರ ಬಾಕಿ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಕಮಿಷನ್ ಹಾವಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗುವುದು. ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿಯನ್ನು ಬಜೆಟ್ ಮಂಡಿಸಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನೇತೃತ್ವದ ನಿಯೋಗವು ಶುಕ್ರವಾರ ತಮ್ಮನ್ನು ಭೇಟಿ ಮಾಡಿ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಗುತ್ತಿಗೆದಾರರಿಗೆ ಸಮಸ್ಯೆ ಆಗಿದೆ. ಬಿಜೆಪಿ ಹಳಿ ತಪ್ಪಿಸಿರುವ ಆರ್ಥಿಕತೆಯನ್ನು ಸರಿಯಾಗಿಸಲು ಸ್ವಲ್ಪ ಸಮಯಾವಕಾಶ ಬೇಕು ರಾಜ್ಯದಲ್ಲಿ ಕಮಿಷನ್ ಹಾವಳಿಗೆ ಕಡಿವಾಣ ಹಾಕಿ, ಸ್ಥಳೀಯ ಗುತ್ತಿಗೆದಾರರ ಹಿತಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂದಿನ ತಿಂಗಳು ಹೊಸ ಬಜೆಟ್ ಮಂಡನೆಯಾಗಬೇಕಿದೆ. ಬಜೆಟ್ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಬಿಎಂಪಿಯಲ್ಲಿ 2000 ಕೋಟಿ ರೂ.ಗಳು ಹಾಗೂ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ.ಗಳು ಬಾಕಿ ಇರುವುದಾಗಿ ತಿಳಿಸಿದ ಕೆಂಪಣ್ಣ ಅವರು ತಡೆಹಿಡಿದಿರುವ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡಬೇಕು. ರಾಜ್ಯದ ಗುತ್ತಿಗೆದಾರರಿಗೆ ಪ್ರಥಮ ಮತ್ತು ಹೆಚ್ಚಿನ ಆದ್ಯತೆ ನೀಡಬೇಕು. 2013 ರಿಂದ 2018ರ ವರೆಗೆ ಇದ್ದ ಎಲ್‌ಒಸಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಬೇಕು. ಬೇಗನೇ ನಿರಾಕ್ಷೇಪಣಾ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಕೆಂಪಣ್ಣ ಮನವಿ ಮಾಡಿದರು.
ಪದಾಧಿಕಾರಿಗಳಾದ ಆರ್.ಅಂಬಿಕಾಪತಿ, ಜಿ.ಎಂ ರವೀಂದ್ರ, ಸಂಕಾಗೌಡ ಶಾನಿ, ನಾಗರಾಜ್, ಆರ್.ಮಂಜುನಾಥ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿರಿ..
ವಿಭಾಗ