ಸಿಎಂ ಸಿದ್ದರಾಮಯ್ಯ ಅವರ ಕನಸಿನ ಜಾತಿಗಣತಿ ಯೋಜನೆ ಕಮರಿ ಹೋಗಿದ್ದಾದರೂ ಹೇಗೆ; ಅಹಿಂದ ಚಾಂಪಿಯನ್ ಆಗಬೇಕೆಂಬ ಅವರ ಆಸೆ ಕೈಗೂಡದಿರಲು ಕಾರಣ ಏನು
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಜಾತಿಗಣತಿ ಯೋಜನೆ ಕಮರಿ ಹೋಗಿದ್ದಾದರೂ ಹೇಗೆ, ಅಹಿಂದ ವರ್ಗಗಳ ಚಾಂಪಿಯನ್ ಆಗುವ ಅವರ ಆಸೆ ಭಗ್ನವಾಗಲು ಕಾರಣಗಳಾದರೂ ಯಾವುವು? ಎಂಬಿತ್ಯಾದಿ ವಿವರ ಇಲ್ಲಿದೆ. (ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಜಾತಿ ಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಈ ಯೋಜನೆ ಜಾರಿ ಮೂಲಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ವೇಗ ಹೆಚ್ಚಿಸಬೇಕು ಎನ್ನುವ ಅವರ ಆಸೆ ಕಮರಿ ಹೋಗಿದೆ. 2015ರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ) ನಡೆಸಿದ್ದರು. ಕಾಕತಾಳಿಯ ಎಂಬಂತೆ ಈ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸುವ ಅವಕಾಶವೂ ಅವರ ಪಾಲಿಗೆ ಒದಗಿ ಬಂದಿತ್ತು. ಆದರೆ ನಾಲ್ಕು ದಿನಗಳ ಹಿಂದೆಯಷ್ಟೇ ಅವರ ಕನಸಿನ ಬೆಲೂನ್ ಗೆ ಸೂಜಿ ಚುಚ್ಚಿದ ಅನುಭವವಾಗಿದೆ.
2015 ರಲ್ಲಿ ಸಿದ್ದರಾಮಯ್ಯ ಅವರು 165 ಕೋಟಿ ರೂ.ಗಳ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಆಯೋದಗದ ಮೂಲಕ ಈ ಸಮೀಕ್ಷೆಯನ್ನು ನಡೆಸಿದ್ದರು.ಕಳೆದ ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿರುವುದಾಗಿಯೂ ಅವರು ಘೋಷಿಸಿ ಹಿಂದುಳಿದ ವರ್ಗಗಳ ಮೀಲಾತಿಯನ್ನು ಶೇ.32 ರಿಂದ ಶೇ.51ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನೂ ಕೈಗೊಂಡಿದ್ದರು. ಆದರೆ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಹೊಸ ಸಮೀಕ್ಷೆ ನಡೆಸುವ ಅನಿವಾರ್ಯ ಪರಿಸ್ಥಿತಿ ಅವರಿಗೆ ಎದುರಾಗಿದೆ.
ಜೂನ್ 6 ರಂದು ಸಚಿವ ಸಂಪುಟ ಕಾರ್ಯಾಲಯವು ಜಾತಿಗಣತಿ ಕುರಿತು ಚರ್ಚೆ ನಡೆಸಲೆಂದೇ ಜೂನ್ 12 ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿತ್ತು. ಅದುವರೆಗೂ ನಾಲ್ಕು ಬಾರಿ ನಡೆದ ಸಂಪುಟ ಸಭೆಗಳಲ್ಲಿ ಜಾತಿಗಣತಿ ಕುರಿತು ಚರ್ಚೆ ನಡೆಸದೆ ಮುಂದಕ್ಕೆ ಹಾಕಲಾಗಿತ್ತು. ಪ್ರಮುಖವಾಗಿ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರ ಪ್ರಬಲ ಪ್ರತಿರೋಧ ವ್ಯಕ್ತವಾಗಿತ್ತು. ನಂತರ ಬ್ರಾಹ್ಮಣ, ಜೈನ ಸೇರಿದಂತೆ ಅನೇಕ ಸಮುದಾಯಗಳು ತಮ್ಮ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದವು. ಆದರೂ ಈ ವರದಿ ಅನುಷ್ಠಾನಕ್ಕೆ ಸಿಎಂ ಸಿದ್ದರಾಮಯ್ಯ ದೃಢ ನಿಲುವು ತಾಳಿದ್ದರು.
ವಿಶೇಷ ಸಚಿವ ಸಂಪುಟ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ಅನುಷ್ಠಾನದ ಅನಿವಾರ್ಯತೆಯನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟಿದ್ದರು. ಚುನಾವಣಾ ಸಂದರ್ಭದಲ್ಲಿ ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದನ್ನೂ ಅವರು ನೆನಪಿಸಿದ್ದರು. ಈ ಮಧ್ಯೆ ಅಹಿಂದ ವರ್ಗಗಳಾದ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಜಾತಿಗಣತಿ ವರದಿ ಜಾರಿಗೆ ಒತ್ತಡ ಹೇರುತ್ತಲೇ ಬಂದಿದ್ದವು. ಈ ಸಮುದಾಯಗಳ ಬೆಂಬಲವನ್ನು ದಶಕಗಳಿಂದ ಅನುಭವಿಸುತ್ತಾ ಬಂದಿದ್ದ ಸಿದ್ದರಾಮಯ್ಯ ಅವರಿಗೂ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂತಹುದೇ ಪರಿಸ್ಥಿತಿ 2020 ರ ನವಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಎದುರಾಗಿತ್ತು. ಆ ಸಂದರ್ಭದಲ್ಲಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಯಲು ಹೈಕಮಾಂಡ್ ಸೂಚನೆ ನೀಡಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆಗ ಬಿ.ಎಸ್.ಯಡಿಯೂರಪ್ಪ ಅವರು, ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಿದ್ದತೆ ನಡೆಸಿದ್ದರು. ಈ ವಿಷಯ ಅರಿತ ಗೃಹ ಸಚಿವ ಅಮಿತ್ ಶಾ ಅವರು, ಯಡಿಯೂರಪ್ಪ ಅವರಿಗೆ ಕರೆ ಮಾಡಿ ಆ ಪ್ರಸ್ತಾವನೆಯನ್ನು ಕೈಬಿಡುವಂತೆ ತಾಕೀತು ಮಾಡಿದ್ದರು.
ಈ ಜಾತಿಗಣತಿ ಪ್ರಕರಣದಲ್ಲೂ ಇದೇ ಆಗಿದೆ. ಈ ವರದಿ ಜಾರಿಯಿಂದ ಪಕ್ಷಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಹೈಕಮಾಂಡ್ ಗೆ ಚೆನ್ನಾಗಿಯೇ ಮನವರಿಕೆ ಮಾಡಿಕೊಡಲಾಗಿದೆ. ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಹೊಸ ಸಮೀಕ್ಷೆ ನಡೆಸಲು ಒತ್ತಡ ಹೇರಿದ್ದವು.
ಮೂಲಗಳ ಪ್ರಕಾರ ಈ ಎರಡೂ ಸಮುದಾಯಗಳ ಮುಖಂಡರು ಹೈಕಮಾಂಡ್ ಗೆ ವರದಿ ಜಾರಿಯಿಂದ ಆಗುವ ಅನಾಹುತ ಕುರಿತು ಮಾಹಿತಿ ರವಾನಿಸಿದ್ದರು. ಈ ಕಾರಣಕ್ಕಾಗಿಯೇ ವರಿಷ್ಠರು ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ 10ರಂದು ಜೂನ್ ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೇ ಸಿಎಂ ಡಿಸಿಎಂ ಸಮ್ಮುಖದಲ್ಲಿ ಈ ವರದಿ ಹತ್ತು ವರ್ಷಗಳಷ್ಟು ಹಳೆಯದಾಗಿದ್ದು ಕರ್ನಾಟಕ ಸರ್ಕಾರ ಹೊಸ ಜಾತಿಗಣತಿ ನಡೆಸಲಿದೆ ಎಂದು ಘೋಷಿಸಿದ್ದರು. ಈ ಮೂಲಕ ಅಹಿಂದ ವರ್ಗಗಳ ಶಾಶ್ವತ ಚಾಂಪಿಯನ್ ಆಗುವ ಸಿದ್ದರಾಮಯ್ಯ ಅವರ ಕನಸು ಕಮರಿಹೋಗಿತ್ತು.
(ವರದಿ- ಎಚ್ ಮಾರುತಿ, ಬೆಂಗಳೂರು)