Robbery: ಕರ್ನಾಟಕ ಕರಾವಳಿ ಆಯಿತೇ ದರೋಡೆಕೋರರ ಟಾರ್ಗೆಟ್? ಇವರಿಗೆ ಮಾಹಿತಿ ನೀಡಿದ ಸ್ಥಳೀಯರು ಯಾರು?
ಕರ್ನಾಟಕ ಕರಾವಳಿ ಭಾಗದಲ್ಲಿ ದರೋಡೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನ ಏರಿಕೆ ಕಾಣುತ್ತಿವೆ. ಅದಕ್ಕೆ ನಿಖರವಾದ ಕಾರಣವೇನು? ದರೋಡೆಕಾರರಿಗೆ ಮಾಹಿತಿ ನೀಡುತ್ತಿರುವ ಸ್ಥಳೀಯರು ಯಾರು? ಇಲ್ಲಿದೆ ಸಂಪೂರ್ಣ ವಿವರ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

ದಕ್ಷಿಣ ಕನ್ನಡ ಸಹಿತ ಕರ್ನಾಟಕ ಕರಾವಳಿ ಜಿಲ್ಲೆಗಳು ಅತಿಯಾದ ಕೋಮುವಾದ ವಿಷಯದಲ್ಲಿ ಸುದ್ದಿಮಾಧ್ಯಮಗಳಿಗೆ ಆಹಾರವಾಗಿದ್ದವು. ಮುಂಬೈ, ಬೆಂಗಳೂರು ಸಹಿತ ಹೊರರಾಜ್ಯ, ಹೊರದೇಶಗಳಲ್ಲಿ ಭೂಗತ ಜಗತ್ತಿನಲ್ಲಿ ‘ಹೆಸರು ಮಾಡಿದವರಲ್ಲಿ’ ಕರಾವಳಿಯವರೂ ಇದ್ದ ಕಾರಣ ಅಂಡರ್ ವರ್ಲ್ಡ್ ಚಟುವಟಿಕೆಗಳು ನಡೆಯುತ್ತಿರುವ ವಿಚಾರಗಳು ಆಶ್ಚರ್ಯ ತರುವಂಥದ್ದಲ್ಲ. ಆದರೆ, ಮನೆಗೆ ನುಗ್ಗಿ ದರೋಡೆ ಮಾಡುವ ಕೃತ್ಯಗಳು, ಬಂದೂಕು ತೋರಿಸಿ ಬ್ಯಾಂಕ್ ರಾಬರಿ ಮಾಡುವ ವಿಚಾರಗಳು ಕರಾವಳಿ ಮಟ್ಟಿಗೆ ಹೊಸದು. ಇತ್ತೀಚೆಗೆ ನಡೆದ ಕೆಲ ಘಟನೆಗಳು ಒಂಟಿ ಮನೆಗಳಲ್ಲಿ ವಾಸಿಸುವ ಸಿರಿವಂತರು ಹಾಗೂ ಕೋಪರೇಟಿವ್ ಬ್ಯಾಂಕುಗಳು ಸಣ್ಣ ಪಟ್ಟಣದಲ್ಲೂ 10ರಷ್ಟು ಇರುವ ಕಾರಣ ಅವುಗಳ ಆಡಳಿತ ಮಂಡಳಿಗಳು ತಲೆಕೆಡಿಸುವಂಥಾಗಿದೆ. ಸದ್ಯ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆಯ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದರೆ, ವಿಟ್ಲ ಸಮೀಪ ಉದ್ಯಮಿ ಮನೆಗೆ ಬಂದಿದ್ದ ನಕಲಿ ಇಡಿ ಅಧಿಕಾರಿಗಳು ಇನ್ನೂ ಪತ್ತೆಯಾಗಿಲ್ಲ.
ತಮಿಳುನಾಡು, ಕೇರಳ, ಮುಂಬೈ ಸಂಪರ್ಕ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರ ಮಂಗಳೂರಿಗೆ ಕೇರಳ ನೇರ ಸಂಪರ್ಕವಿದೆ. ಮಂಗಳೂರು ಹೊರವಲಯದ ಆಸ್ಪತ್ರೆಗೆ ಆಗಮಿಸುವವರ ಪೈಕಿ ಹೆಚ್ಚಿನವರು ಕೇರಳದವರು. ಶಿಕ್ಷಣ, ಆರೋಗ್ಯ, ವ್ಯವಹಾರ ವಿಷಯಗಳಿಗಷ್ಟೇ ಈ ಸಂಪರ್ಕಗಳು ಬಳಕೆಯಾಗುತ್ತಿಲ್ಲ. ಅದಕ್ಕೂ ಮೀರಿ ಅಪರಾಧ ಕೃತ್ಯಗಳಿಗೂ ಈ ಭಾಗ ಅನುಕೂಲವಾಗುವಂತಿದೆ. ಮಂಗಳೂರು, ಪುತ್ತೂರು, ಬಂಟ್ವಾಳ, ಉಳ್ಳಾಲ, ವಿಟ್ಲ ಕಡೆಗಳಲ್ಲಿ ಕ್ರೈಮ್ ನಡೆಸಿ ಸುಲಭವಾಗಿ ಕೇರಳಕ್ಕೆ ತಪ್ಪಿಸಿಕೊಂಡು ಹೋಗಬಹುದು ಎಂಬ ಲೆಕ್ಕಾಚಾರ ಅಪರಾಧಿಗಳಿಗಿದೆ. ಮುಂಬೈ ಹಾಗೂ ಕರ್ನಾಟಕ ಕರಾವಳಿಗಂತೂ ಹಳೇ ನಂಟು. ಈ ಸಖ್ಯವೀಗ ಕರಾವಳಿಯನ್ನು ದರೋಡೆಕೋರರು ಟಾರ್ಗೆಟ್ ಮಾಡುವಂತಾಗಿದೆ.
ಇನ್ನೂ ಪತ್ತೆಯಾಗದ ನಕಲಿ ಇಡಿ ದಾಳಿ ಕೇಸ್
ಕೋಟೆಕಾರು ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣವನ್ನು ಪೊಲೀಸರು ನಾಲ್ಕೇ ದಿನದಲ್ಲಿ ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರೆ, ಇಡಿ ಅಧಿಕಾರಿಗಳ ಹೆಸರಿನಲ್ಲಿ ವಿಟ್ಲ ಸಮೀಪ ಬೋಳಂತೂರಿನ ನಾರ್ಶದ ಉದ್ಯಮಿಯ ಮನೆ ದರೋಡೆ ಪ್ರಕರಣ ಇನ್ನೂ ಬಗೆಹರಿದಿಲ್ಲ. ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳ ಬಳಿ ಕೇಳಿದರೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ನಿಜವಾಗಿಯೂ ಸುಳಿವು ಸಿಕ್ಕಿಲ್ಲವೇ ಅಥವಾ ತನಿಖೆಯ ಕಾರಣಕ್ಕೆ ಪೊಲೀಸರು ಸಿಕ್ಕಿರುವ ಸುಳಿವಿನ ಕುರಿತು ಗೌಪ್ಯತೆಯನ್ನು ಕಾಪಾಡುತ್ತಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿದೆ. ಇಡಿ ಅಧಿಕಾರಿಗಳ ನೆಪದಲ್ಲಿ ಈ ದರೋಡೆ ನಡೆದಿರುವುದರಿಂದ ಇದೊಂದು ವಿಶೇಷ ಪ್ರಕರಣವಾಗಿದ್ದು, ಸಾಕಷ್ಟು ಕುತೂಹಲವನ್ನೂ ಸೃಷ್ಟಿಸಿದೆ.
ತಮಿಳುನಾಡು ಲಿಂಕ್
ಕೋಟೆಕಾರು ಸಹಕಾರಿ ಬ್ಯಾಂಕಿನ ದರೋಡೆಕೋರರು ತಮಿಳುನಾಡು ಮೂಲದವರು ಎಂಬುದು ಈಗ ಗೊತ್ತಾಗಿದೆ. ಬೋಳಂತೂರಿನ ದರೋಡೆಕೋರರು ಬಂದ ಕಾರು ತಮಿಳುನಾಡು ನೋಂದಣಿ ಹೊಂದಿದ್ದು, ಒಂದಕ್ಕೊಂದು ಸಾಮ್ಯತೆ ಕಂಡುಬಂದಿದೆ. ಹೀಗಿರುವಾಗ ಎರಡೂ ತಂಡಗಳಿಗೆ ಏನಾದರೂ ಸಂಪರ್ಕ ಇತ್ತೇ, ಬೋಳಂತೂರಿನ ಪ್ರಕರಣ ನಡೆಸಿ ಇಲ್ಲೇ ಎಲ್ಲಾದರೂ ತಲೆಮರೆಸಿಕೊಂಡು ಕೋಟೆಕಾರಿನ ಸಹಕಾರಿ ಬ್ಯಾಂಕಿನ ದರೋಡೆಗೆ ಸ್ಕೆಚ್ ಹಾಕಿತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಕೋಟೆಕಾರಿನ ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿಚಾರಣೆ ವೇಳೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಅಥವಾ ಬಂಧಿತರ ವಿಚಾರಣೆಯಿಂದ ಬೋಳಂತೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಮಾಹಿತಿ ಸಿಗಬಹುದೇ ಎಂದು ಕಾದು ನೋಡಬೇಕಿದೆ.
ಎಸ್ಪಿ ನೇತೃತ್ವದಲ್ಲಿ ಸಭೆ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರ ಸೋಮವಾರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ಈ ವೇಳೆ ತನಿಖೆಯಲ್ಲಿರುವ ಪ್ರಕರಣಗಳ ಚರ್ಚೆ ನಡೆದಿದೆ. ಈ ವೇಳೆ ಬೋಳಂತೂರಿನ ಪ್ರಕರಣಕ್ಕೂ ಸಂಬಂಧಿಸಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ಪೊಲೀಸ್ ತನಿಖೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕಣ್ಣನ್ ಕಹಾನಿ
ಪೊಲೀಸರ ಗುಂಡೇಟಿಗೆ ಗಾಯಗೊಂಡಿದ್ದ ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಕಣ್ಣನ್ ಮಣಿ ಟ್ರಾವೆಲ್ ಹಿಸ್ಟರಿಯೇ ಕುತೂಹಲಕಾರಿ. ಈತ ಮಂಗಳೂರಿನಿಂದ ರೈಲಿನ ಮೂಲಕ ಮುಂಬಯಿಗೆ ಹೋಗಿ, ಅಲ್ಲಿಂದ ರೈಲಿನಲ್ಲಿ ತಮಿಳುನಾಡಿಗೆ ಹೋಗಿದ್ದ ಎಂಬ ಮಾಹಿತಿ ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ. ಈತನ ಬಳಿಯಿಂದ ವಶಪಡಿಸಿಕೊಳ್ಳಲು ಯಾವುದೇ ಸೊತ್ತುಗಳು ಇರದಿದ್ದ ಕಾರಣ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ವಶಕ್ಕೆ ಪಡೆದು, ಮಂಗಳೂರಿಗೆ ಕರೆತರಲಾಯಿತು.
ಮುಂಬೈ ನಂತರ ಮಂಗಳೂರಿಗೆ ಕಣ್ಣನ್ ಮಣಿ, ಕಾರಿನಲ್ಲಿ ಬಂದಿರಲಿಲ್ಲ. ಕೃತ್ಯ ನಡೆದ ನಂತರ ತಲಪಾಡಿಯಿಂದ ಬೈಕ್ನಲ್ಲಿ ಲಿಫ್ಟ್ ತೆಗೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದ. ಮಹಜರು ನಡೆಸುವ ವೇಳೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವ ದುಸ್ಸಾಹಸ ಮಾಡಿದ್ದೇಕೆ ಎಂಬುದು ಕುತೂಹಲಕಾರಿ.
ಎರಡೂ ಪ್ರಕರಣಗಳಲ್ಲಿ ಸ್ಥಳೀಯರ ಲಿಂಕ್
ಕೋಟೆಕಾರು ಬ್ಯಾಂಕ್ ದರೋಡೆಯನ್ನು ಮುಂಬೈನಲ್ಲಿ ಕುಳಿತುಕೊಂಡು ತಮಿಳುನಾಡು ಮೂಲದ ಆರೋಪಿಗಳ ಗ್ಯಾಂಗ್ ಮಾಡಿರುವ ಕುರಿತು ಮಾಹಿತಿಗಳು ಹರಿದಾಡುತ್ತಿವೆ. ಇದು ಖಚಿತವಾಗಿದ್ದರೆ, ಕೋಟೆಕಾರು ಸಹಕಾರಿ ಬ್ಯಾಂಕ್ ಅನ್ನೇ ಯಾಕೆ ಆಯ್ಕೆ ಮಾಡಿದರು ಎಂಬುದು ತನಿಖೆ ದೃಷ್ಟಿಯಷ್ಟೇ ಅಲ್ಲ, ಸಾರ್ವಜನಿಕವಾಗಿಯೂ ಕುತೂಹಲ ಮೂಡಿಸುವ ಪ್ರಶ್ನೆ. ಬ್ಯಾಂಕಿನಲ್ಲಿ ಆ ಹೊತ್ತಿನಲ್ಲಿ ಕಳವು ಮಾಡಬಹುದು ಎಂಬ ಸುಳಿವನ್ನು ಯಾರಾದರೂ ಸ್ಥಳೀಯರೇ ನೀಡಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ. ಖುದ್ದು ಕಮೀಷನರ್ ಅನುಪಮ್ ಅಗರವಾಲ್ ಅವರೇ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದ್ದರು. ಹೀಗಾಗಿ ಬಂಧಿತ ಮೂವರ ತೀವ್ರ ವಿಚಾರಣೆ ನಡೆಯುತ್ತಿದ್ದು, ಸ್ಥಳೀಯರು ಯಾರು ಎಂಬ ಕುರಿತು ತನಿಖೆ ಮಾಡಲಾಗುತ್ತಿದೆ. ಇನ್ನು, ಉದ್ಯಮಿ ಸಿಂಗಾರಿ ಬೀಡಿ ಮಾಲೀಕ ಸುಲೈಮಾನ ಹಾಜಿ ಮನೆಯಲ್ಲಿ ಅಷ್ಟೊಂದು ದುಡ್ಡಿರುವ ವಿಚಾರವನ್ನು ತಮಿಳುನಾಡು ನಕಲಿ ರಿಜಿಸ್ಟರ್ ಆಗಿರುವ ನಕಲಿ ಇ.ಡಿ. ಅಧಿಕಾರಿಗಳಿಗೆ ಹೇಳಿದವರು ಯಾರು, ಸುಲೇಮಾನ್ ಬಳಿ ಕನ್ನಡದಲ್ಲಿ ಮಾತನಾಡಿದ ಇನ್ನೋವ ಕಾರಿನ ಚಾಲಕ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇವೆರಡೂ ದರೋಡೆ ಪ್ರಕರಣಗಳಲ್ಲಿ ಸ್ಥಳೀಯರ ಸಹಕಾರ ಇರುವುದಂತೂ ಖಚಿತ.
