Congress CM Issue:ಕಾಂಗ್ರೆಸ್ 'ಸಿಎಂ' ರೇಸಿಗೆ ಖರ್ಗೆ ಹೆಸರು ತಂದ ಡಿಕೆಶಿ; ದಲಿತ ಸಿಎಂ ಹೆಸರಲ್ಲಿ ಸಿದ್ದರಾಮಯ್ಯಗೆ ಚೆಕ್ ಮೆಟ್!
ಖರ್ಗೆ ಅವರಿಗೆ ನನ್ನ ಅವಕಾಶ ಬಿಟ್ಟು ಕೊಡುತ್ತೇನೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ದಲಿತ ಸಿಎಂ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಚೆಕ್ ಮೆಟ್ ಅಂತ ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಕಾಂಗ್ರೆಸ್ (Congress) ಜಯಭೇರಿ ಬಾರಿಸಿದರೆ ಮುಂದಿನ ಮುಖ್ಯಮಂತ್ರಿ ಹುದ್ದೆಗಾಗಿ (Chief Minister Post) ಯಾರಿಗೆ ಎಂಬ ಬಿಸಿ ಬಿಸಿ ಚರ್ಚೆಗಳು ಆರಂಭವಾಗಿವೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Sivakumar) ಹಾಗೂ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಡುವಿನ ತೀವ್ರ ಪೈಪೋಟಿ ನಡೆಯುತ್ತಿದೆ. ಇದರ ನಡುವೆಯೇ ಡಿಕೆಶಿ ಹೊಸ ಅಸ್ತ್ರವೊಂದನ್ನು ಪ್ರಯೋಗಿಸಿದ್ದಾರೆ. ಅದುವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge).
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಖರ್ಗೆ ಅವರು ಸಿಎಂ ಸ್ಥಾನಕ್ಕೆ ಬಯಸಿದರೆ ನನ್ನ ಅವಕಾಶವನ್ನು ಬಿಟ್ಟು ಕೊಡುತ್ತೇನೆ ಎಂದು ಹೇಳುವ ಮೂಲಕ ಡಿಕೆಶಿ ಖರ್ಗೆ ಅವರ ಹೆಸರನ್ನು ಸಿಎಂ ರೇಸಿಗೆ ತರುವ ಪ್ರಯತ್ನ ಮಾಡಿದ್ದಾರೆ. ಇದು ದಲಿತ ಸಿಎಂ ಚರ್ಚೆಗೂ ಅವಕಾಶ ಮಾಡಿಕೊಟ್ಟಿದೆ.
ಖರ್ಗೆ ಅವರನ್ನು ಅನುಮೋದಿಸುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಕ್ರಮವು ಪಕ್ಷದೊಳಗೆ 'ದಲಿತ ಸಿಎಂ' ಮತ್ತು 'ಸ್ಥಳೀಯ ವರ್ಸಸ್ ವಲಸಿಗರು' ಎಂಬ ಚರ್ಚೆಗೆ ಮತ್ತೆ ಜೀವ ನೀಡುವ ಮೂಲಕ ಸಿದ್ದರಾಮಯ್ಯ ಅವರ ಭವಿಷ್ಯವನ್ನು ಚೆಕ್‌ಮೇಟ್ ಮಾಡುವ ಪ್ರಯತ್ನವೆಂದು ಕೆಲವರು ಹೇಳುತ್ತಿದ್ದಾರೆ.
ಖರ್ಗೆ ಅವರು ಮುಖ್ಯಮಂತ್ರಿಯಾದರೆ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಹಿರಿಯ ನಾಯಕರಿಗೆ ಈ ಹಿಂದೆಯೂ ಅನ್ಯಾಯವಾಗಿದೆ ಎಂಬ ಧ್ವನಿ ಪಕ್ಷದೊಳಗೆ ಕೇಳಿಬರುತ್ತಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಹಲವರು ಚರ್ಚೆಗಳು ಶುರುವಾಗಿವೆ.
ಆದರೆ ಪಕ್ಷದ ತೀರ್ಮಾನವೇ ಅಂತಿಮ ಎಂದು ಡಿ ಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಖರ್ಗೆ ಅವರು ನಮ್ಮ ಹಿರಿಯ ನಾಯಕರು ಮತ್ತು ಎಐಸಿಸಿ ಅಧ್ಯಕ್ಷರು. ಅವರು ಅದನ್ನು (ಸಿಎಂ ಸ್ಥಾನ) ಕೇಳಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಅವರ ಏಕೈಕ ಆಸೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ನಾಯಕರಾಗಿದ್ದು, ಈ ಹಿಂದೆಯೂ ಅವರಿಗೆ ಅನ್ಯಾಯವಾಗಿದೆ ಎಂಬ ಧ್ವನಿಗಳು ಕೇಳಿ ಬರುತ್ತಿವೆ ಎಂದು ಖರ್ಗೆ ಅವರ ಹೆಸರನ್ನು ಮುನ್ನೆಲೆಗೆ ತರುವ ಪ್ರಶ್ನೆಗೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಶೃಂಗೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಹೇಳಿದಂತೆ ನಡೆದುಕೊಳ್ಳಬೇಕು, ಖರ್ಗೆ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ನಾನು ಅದನ್ನು ಪಕ್ಷಕ್ಕೆ ಬಿಡುತ್ತೇನೆ. ಸಿದ್ದರಾಮಯ್ಯ ಮತ್ತು ಇತರರೂ ಪಕ್ಷಕ್ಕೆ ಬದ್ಧರಾಗುತ್ತಾರೆ. ಪಕ್ಷ ಮುಖ್ಯ ಎಂದು ಹೇಳಿದ್ದಾರೆ.
ಖರ್ಗೆ ಅವರು ಸಿಎಂ ಆಗಬೇಕಾದರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೀರಾ ಎಂಬ ಪ್ರಶ್ನೆಗೆ, ಖರ್ಗೆಯವರು ನನ್ನ ನಾಯಕರು, ಎಐಸಿಸಿ ಅಧ್ಯಕ್ಷರೂ ಆಗಿದ್ದಾರೆ. ಅವರ ಮುಂದಾಳತ್ವದಲ್ಲಿ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ. ಅವರು ರಾಜ್ಯ ಮತ್ತು ದೇಶಕ್ಕೆ ಆಸ್ತಿ. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ, ಅವರು ನನಗಿಂತ 20 ವರ್ಷ ಹಿರಿಯರು. ಅವರ ಆಶಯಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಖರ್ಗೆಯವರು ಹಿರಿಯರು, ಅವರೇ ನಮ್ಮ ಎಐಸಿಸಿ ಅಧ್ಯಕ್ಷರು, ಅವರ ನಾಯಕತ್ವವನ್ನು ಬೆಂಬಲಿಸದಿದ್ದರೆ ನಾವು ಮನುಷ್ಯರೇ? ನಮಗೆಲ್ಲಾ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ ಅಂತ ಹೇಳಿದ್ದಾರೆ.
ಇನ್ನು ಶಿವಕುಮಾರ್ ಹೇಳಿಕೆ ಕುರಿತು ನಿನ್ನೆ (ಏ.9 ಭಾನುವಾರ) ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ ಎಂದಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಖರ್ಗೆ ಅವರು ಮೂರು ಬಾರಿ ಮುಖ್ಯಮಂತ್ರಿಯಾಗುವ ಸ್ಪರ್ಧೆಯಲ್ಲಿ ಸೋತಿದ್ದಾರೆ. 1999 ರಲ್ಲಿ ಎಸ್ ಎಂ ಕೃಷ್ಣ, 2004 ರಲ್ಲಿ ಎನ್ ಧರಂ ಸಿಂಗ್ ಹಾಗೂ 2013 ರಲ್ಲಿ ಸಿದ್ದರಾಮಯ್ಯ ವಿರುದ್ಧ ಅವರ ಸಿಎಂ ಆಗುವ ಅವಕಾಶದಿಂದ ವಂಚಿತರಾಗಿದ್ದಾರೆ.
ಪಕ್ಷದ ಕೆಲವು ಪದಾಧಿಕಾರಿಗಳು ಖರ್ಗೆ ಅವರು ಹೊಂದಿರುವ ಸ್ಥಾನಗಳು ಮತ್ತು ಜವಾಬ್ದಾರಿಗಳನ್ನು ಗಮನಿಸಿದರೆ ರಾಜ್ಯ ರಾಜಕೀಯಕ್ಕೆ ಮರಳುವ ಸಾಧ್ಯತೆಗಳು ಬಹಳ ಕಡಿಮೆ ಅಂತ ಹೇಳಿದ್ದಾರೆ. ಹೀಗಾಗಿ ದಲಿತ ಸಿಎಂ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಅಂತ ಪಕ್ಷದ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.